ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, December 17, 2010

ವಾಸ್ತವ...

ಏನನ್ನೋ ಬಯಸಿ ಏನನ್ನೋ ಪಡೆಯುವುದು
ಬದುಕಿನಾ ಬ್ಯಾಸರಾ ನೋಡು
ಅದೇನೇನೋ ಆಸೆ ಎಲ್ಲಾ ನಿರಾಸೆ
ಮನಸು ಗೊಂದಲದಾ ಗೂಡು ||

ಹ್ರದಯ ಬೇಡುವುದೊಂದು
ಬದುಕು ನೀಡುವುದೊಂದು
ಜೀವನದ ಬ್ಯಾಸರಾ ನೋಡು
ಏನೇನೋ ಕನಸು ಅದಿನ್ನೇನೋ ನನಸು
ಮನಸು ಬೇಸರದ ಬೀಡು ||

ಎದೆಯು ಭೈರವಿಯಲ್ಲಿ
ಜೀವ ಮೋಹನದಲ್ಲಿ
ಹಳಿತಪ್ಪಿದಾ ಗೀತ ನೋಡು
ಮನಸು ಮಂದ್ರದಲಿರಲು
ತನುವು ತಾರಕದಲ್ಲಿ
ಗಲಿಬಿಲಿಯೇ ಜೀವನದ ಹಾಡು ||
*********************ರಾಘವ್

Saturday, November 20, 2010

ಅಮ್ಮನ ಕಾಡುವುದು ತರವೇ?

ಗೋಗರೆಯುತಿಹಳಮ್ಮ
ಬಿಡದವಳ ಕಂದಮ್ಮ
ಎಷ್ಟು ಕಾಡುವ ನೋಡು
ನಿದ್ದೆ ಹೋಗುವ ಮುನ್ನ ||
ನಿದ್ದೆ ಮಾಡುವ ಮಗುವೆ
ಏಕೆ ಕಣ್ಣನು ತೆರೆವೆ
ನಾನಿರುವೆ ಪಕ್ಕದಲೆ
ನಿದ್ರಿಸೋ  ನನ್ನಕ್ಕರೆಯೆ||
ಸಾಕು ನಿನ್ನಯ ಆಟ
ಈಗ ಮಲಗೂ ಮಗುವೆ
ಅಮ್ಮನನೂ ನಿದ್ರೆಗೆ
ಬಿಡದಿರುವೆ ಸರಿಯೇ?||
ಕೇಳೋ ಕಂದನೆ ಅಮ್ಮ
ಹೇಳುರಿರೊ ಕಥೆಯನ್ನ
ನಿದ್ದೆಯಲಿ ಕನಸಮ್ಮ
ಆಡುವಳೋ ಕಂದಮ್ಮ||
ಹೋಗೋ ಕನಸಿಗೆ ಕಂದ
ನನ್ನ ಮುದ್ದಿನ ಮಗುವೆ
ಹಗಲೆಲ್ಲ ನಿದ್ರಿಸಿ
ಈಗ ಕಾಡುವೆ ತರವೆ?

Tuesday, September 28, 2010

ಪ್ರೀತಿಸಿ.... ಎಲ್ಲವನ್ನೂ ಪ್ರೀತಿಸಿ..... ಎಲ್ಲರನ್ನೂ ಪ್ರೀತಿಸಿ.... ಆದರೆ ಏನನ್ನೂ ನಿರೀಕ್ಷಿಸಬೇಡಿ......

  ಗೆಳೆಯಾ ನೀನಂದ ಮಾತು ಈಗ ನೆನಪಾಗುತ್ತಿದೆ. ಪ್ರೀತಿ ಮಾಡುವಾಗ ಎಲ್ಲರೂ ಕೂಡಾ ತಮ್ಮದು ನಿಷ್ಕಲ್ಮಷ ಪ್ರೀತಿ ಅಂತಲೇ ಅಂದುಕೊಂಡಿರುತ್ತಾರೆ.... ಆದರೆ ಪ್ರೀತಿ ಹಳಸುವುದೆಲ್ಲಿ ಅಂತಲೇ ಗೊತ್ತಾಗುವುದಿಲ್ಲ. ನೀನೊಂದು ದಿನ ಬೇಸರದಲ್ಲಿ ಅಂದಿದ್ದೆಯಲ್ಲಾ.... ಒಂದು ವರ್ಷದ ಹಿಂದಿನ ಯಾವ feeling ಕೂಡಾ ಈಗ ನನ್ನಲ್ಲಿ ಬರ್ತಾ ಇಲ್ಲಾ ಅಂತಾ.... ಮೊದಲೆಲ್ಲಾ ಈ love ಅಂದರೆ ಎಷ್ಟು craze ಇತ್ತು ಆದರೆ ಈಗ ಅದಸೆಲ್ಲಾ ಡೊಂಬರಾಟ ಅನ್ನಿಸ್ತಾ ಇದೆ ಅಂತಾ.... ಯಾಕೆ ಹೀಗೆ ಅಂತಾ ನನ್ನಲ್ಲೂ ಉತ್ತರ ಇರಲಿಲ್ಲ... ಯಾಕೆಂದರೆ ಒಬ್ಬರನ್ನು ಅಲ್ಲಾ ಎಲ್ಲರನ್ನೂ ಪ್ರೀತಿಸಿದವ ನಾನು... ನನ್ನ ಹ್ರದಯದಲ್ಲಿ ಪ್ರೀತಿಗೆ ನಾನು ನನ್ನದೇ ಆದ ಕೊಟೇಶನ್ನುಗಳನ್ನು ಡೆಫಿನೇಶನ್ನುಗಳನ್ನು ಕೊಟ್ಟುಕೊಂಡವನು ನಾನು..
ಆಕಾಶದ ಯಾವುದೋ ಕರಿಮುಗಿಲ ಒಡಲಲ್ಲಿರೋ ಮಳೆ ಹನಿ, ಇನ್ನು ನಾನು ತಡೆದುಕೊಳ್ಳಲಾರೆ ಪ್ರಾಣ ಹೋದರೂ ಚಿಂತೆಯಿಲ್ಲ ಎಂಬಂತೆ ಹಾರಿ ಭುಮಿಯ ಮೇಲೆ ಬಿದ್ದು ಖುಷಿಯಿಂದ ಭೂಮಿಯ ಮೇಲೆ ಹರಿಯುತ್ತದಲ್ಲಾ.... ಅದು ಪ್ರೀತಿ......
         ಯಾವುದೋ ವಸಂತದಲ್ಲಿ ಮಾವು ತನ್ನ ಒಡಲಲ್ಲಿ ಕೋಗಿಲೆ ಒಂದು ಗೂಡು ಕಟ್ಟಿ  ಮರಿ ಇಟ್ಟು ತನ್ನ ಚಿಗುರುಗಳನ್ನು ತಿಂದು ಖುಷಿಯಿಂದ ಹಾಡಿ... ಯಾವಾಗಲೋ ಹಾರಿ ಹೋದರೂ, ಮತ್ತೆ ಅದು ಬಂದೀತೆಂಬ ಭಾವದಿಂದ ಪ್ರತೀ ವಸಂತದಲ್ಲೂ ಚಿಗುರು ಬಿಟ್ಟು ಎದುರು ನೋಡುತ್ತದಲ್ಲಾ..... ಅದು ಪ್ರೀತಿ ಎಂದರೆ...
         ಯಾರದೋ ಮದುವೆಯಲ್ಲಿ ಕೊಟ್ಟ ಸಿಹಿಯನ್ನು ಮುಷ್ಟಿಯಲ್ಲಿ ಹಿಡಿದು ಮನೆಗೆ ತಂದು ಮನೆಯೆದುರಿನ ಜಾಜಿಯ ಗಿಡಕ್ಕೆ ಬರುವ ಪುಟ್ಟ ಗುಬ್ಬಿಯ ಮರಿಗೆ ಕೊಟ್ಟು ಆನಂದದಿಂದ ಕೇಕೆ ಹಾಕುತ್ತದಲ್ಲಾ ಆ ಮುಗ್ಧ ಮಗು.... ಅದು ಪ್ರೀತಿ ಎಂದರೆ......
          ತನ್ನ ನೋಡಲಿಕ್ಕೆಂದೇ ಸೂರ್ಯ ಪ್ರತಿದಿನ ಉದಯಿಸುತ್ತಾನೆಂದು, ಸೂರ್ಯಕಾಂತಿ ಬೆಳಗಿನಿಂದ ಅವನೆಡೆಗೆ ಮುಖಮಾಡಿ, ಅವನು ಯಾವ ಕಡೆಗೆ ಹೋದರೂ ಅವನನ್ನು ಮಾತ್ರ ನೋಡಿ, ಸಂಜೆ ಅವನು ಮುಳುಗಿದ ಮೇಲೆ ಅವನನ್ನು ನೋಡುವ ಈ ಕಣ್ಣು ಮತ್ಯಾರನ್ನೂ ನೋಡದಿರಲೀ ಅಂತಾ ತಲೆತಗ್ಗಿಸಿ ಮರುದಿನ ಬೆಳಗಿನ ವರೆಗೆ ತಲೆತಗ್ಗಿಸಿ ಮುಖ ಮುಚ್ಚಿ ನಿಂತುಬಿಡುತ್ತದಲ್ಲಾ ... ಅದು ಪ್ರೀತಿ ಎಂದರೆ....
          ಬೆಳ್ಳಂಬೆಳಿಗ್ಗೆಯೇ ಬರುವ ದುಂಬಿಗೋಸ್ಕರ ಮಲ್ಲಿಗೆಯು ನಾಚಿಕೆಯಿಂದ ಅಷ್ಟ  ಅಷ್ಟಷ್ಟಾಗಿ  ಅರಳಿ ಮಕರಂದ ನೀಡಿ  ಅದೇ ನೆನಪಲ್ಲಿ ದಿನಪೂರ್ತಿ  ನಿಂತು ಸಂಜೆಯಾಗುತ್ತಲೇ ಬಾಡಿ ಪರಿಶುಧ್ಧ ಪತಿವ್ರತೆಯಾಗಿ ತನ್ನ ಪ್ರಾಣ ಬಿಡುತ್ತದಲ್ಲಾ..... ಅದು ಪ್ರೀತಿ ಎಂದರೆ.....
            ಹೀಗೇ ಏನೇನೋ ಮಧುರವಾಗಿ ಕಲ್ಪಿಸಿಕೊಂಡಿದ್ದೇನೆ.... ಯಾವುದರಲ್ಲೂ ಕೂಡಾ ನಾನು ಪ್ರೀತಿ ಹಳಸುವುದನ್ನು ಕಲ್ಪಿಸಿಕೊಂಡೇ ಇಲ್ಲಾ.... ಅದಕ್ಕೇ ಅಂದು ನಿನಗೆ ಉತ್ತರ ಹೇಳುವುದು ಕಷ್ಟವಾಯಿತೇನೋ.....
ಆವತ್ತು ನೀನೊಂದು ಮಾತಂದೆ ನೆನಪಿದೆಯಾ? " ಈ ಪ್ರೀತಿಗೂ ಒಂದು ಕಾರಣವಿತ್ತು" ಅಂತಾ.. ಅಸಲಿಗೆ ಈ ಮಾತೇ ನನ್ನಲ್ಲಿ ನಾನು ಕಲ್ಪಿಸಿಕೊಂಡ ಪ್ರೀತಿ ಎನ್ನುವ ಭಾವನೆಗೆ ಅಸಂಬದ್ಧ.... ಯಾಕೆಂದರೆ ಯಾವುದೋ  ಒಂದು ಕಾರಣದಿಂದ ಬರುವ ಪ್ರೀತಿಯನ್ನು ನಾನು ಅಷ್ಟಾಗಿ ನಂಬುವುದಿಲ್ಲ..... ಯಾಕೋ ನಾನು ಹಾಗೇ... ಕಲ್ಪಿಸಿಕೊಂಡಿದ್ದೇನೆ... ಕಾರಣದಿಂದ ಬರುವ ಪ್ರೀತಿ "ಆ ಕಾರಣ" ಎನ್ನುವುದು ಇಲ್ಲವಾದ ಮೇಲೆ ನಮ್ಮನ್ನು ತೊರೆದು ದೂರಾಗಿಬಿಡಬಹುದು...  ದ್ವೇಷಕ್ಕಾದರೆ ಅದು ಒಂದು ಕಾರಣವಿಟ್ಟುಕೊಂಡಿರುತ್ತೆ.... ಆದರೆ ಪ್ರೀತಿಗೆ ನಮಗೆ ಕಾರಣವ್ಯಾಕೆ ಬೇಕು..? ಪ್ರೀತಿ ಎಂದರೆ ಅದು ಗಂಗೆಯಿದ್ದಂತೆ.. ತನ್ನಿಂತಾನೆ ಅದು ನೀರಾಗಿ, ಝರಿಯಾಗಿ,ನದಿಯಾಗಿ ಹರಿಯಬೇಕು.  ಗಂಗೆಯ ಹರಿವಿಗೆ ಕಾರಣ ನೀಡಲಾದೀತೇ? ಅಕಾರಣವಾಗಿ ಹುಟ್ಟಿದ ಪ್ರೀತಿಗೆ ಪ್ರಬಲತೆ ಹೆಚ್ಚು. ಅದು ಹ್ರದಯದಲ್ಲಿ ತನ್ನಿಂತಾನೇ ಹುಟ್ಟಬೇಕು.
ನನ್ನಲ್ಲಿನ ಯಾವ ಪ್ರೀತಿಗೂ ಕಾರಣವಿರಲಿಲ್ಲ.ಕಾರಣಾನ ನಾನು ಹುಡುಕಲೂ ಇಲ್ಲ. ಅದಕ್ಕೇ ಇರಬೇಕು ಪ್ರೀತಿಗೂ ಒಂದು ಕಾರಣವಿತ್ತು ಅಂತ ನಾನು ಕೇಳಿದಾಗಲೆಲ್ಲಾ ತಳಮಳವಾಗ್ತೇನೆ..... 
ಪ್ರೀತಿಸಿ.... ಎಲ್ಲವನ್ನೂ ಪ್ರೀತಿಸಿ..... ಎಲ್ಲರನ್ನೂ ಪ್ರೀತಿಸಿ.... 
ಆದರೆ ಏನನ್ನೂ ನಿರೀಕ್ಷಿಸಬೇಡಿ......

Monday, September 27, 2010

ಒಲ್ಲದ ಅಥಿತಿಯ ಕೊರಳಿಗೆ ದನಿಯಾಗಿ........

ಅಂದು ನಿನ್ನ ಸುಳಿಯಲ್ಲಿ ಬಿದ್ದಾಗ ನನ್ನೊಳಗೆ ನಾನು ಅಂದುಕೊಂಡಿದ್ದೆ. ಓಹ್...!! ಜಾರಿಬಿದ್ದಿರಬೇಕು, ಅದು ಆಕಸ್ಮಿಕ ಎಂದು. ಹೂಂ.. ಆಮೇಲೆ ತಾನೇ ಗೊತ್ತಾಗಿದ್ದು.. ಆಕಸ್ಮಿಕ ಸುಳಿಯಲ್ಲಿ ಉದ್ದೇಶಪೂವಱಕವಾಗಿಯೇ ಕಾಲು ಜಾರಿಸಿಕೊಂಡಿದ್ದೇನೆ ಅಂತ. ಎಷ್ಟು ಕಾಲ ಆ ಸುಳಿಯಲ್ಲಿ ತಿರುಗಿದ್ದೇನೋ.... ಇನ್ನೂ ಕೂಡಾ.. ಆದರೆ ನಿನ್ನ ಸುಳಿಯಲ್ಲಿ ನಾನು ಬಿದ್ದಿದ್ದೇನೆ ಅಂತ ನಿನಗೆ ಗೊತ್ತಾಗಲು ಮೂರು ವರ್ಷ  ಬೇಕಾಯಿತಾ? ಸೆಳೆತದ ಸುಳಿಯಲ್ಲಿ ಬೀಳೋಕೆ ಕಾರಣ ಬೇಕಿಲ್ಲಾ... ಕಾರಣವಿದ್ದೋ ಇಲ್ಲದೆಯೋ.. ಅಕಾರಣವಾಗಿ ಕೂಡಾ ಅದು ತನ್ನೆಡೆಗೆ ಎಳೆದುಕೊಂಡುಬಿಡುತ್ತೆ. ಆದರೆ ಅದರ ಒಲವಲ್ಲಿ ಬೀಳಿಸಿಕೊಳ್ಳೊಕೆ ಅದು ಒಂದು ಕಾರಣ ಹುಡುಕುತ್ತದಂತೆ.... ಆದರೆ ನಮ್ಮೀ ಒಲವಿಗೆ ಕಾರಣವೇನಿತ್ತು ಗೆಳತೀ...?
ಏನೋ ಇದ್ದಿರಬೇಕು... ಅದು ಏನು ಅಂತಾ ನಿನಗೆ ಗೊತ್ತಾಗಿತ್ತಾ? ಒಂದಿಡೀ ವರ್ಷ  ನಾನು ನಿನ್ನೆದುರಿಗೇ ಓಡಾಡಿಕೊಂಡಿದ್ದಾಗ ಸಿಗದಿದ್ದ ಕಾರಣ ಅಖಂಡ ಮೂರು ವರ್ಷ  ದೂರವಾಗಿದ್ದಾಗೆಲ್ಲಿ ಸಿಕ್ಕಿತು ನಿನಗೆ..? ಆ ಒಂದಿಡೀ ವರುಷ ನನ್ನ ನೋಡಿದ್ದೆಯಲ್ಲಾ... nice guy ಅಂತಷ್ಟೇ ಅನಿಸಿದ್ದಾ ನಿನಗೆ..? ಇಲ್ಲಾ ನನ್ನೆದುರಿಗೆ ಮಾತ್ರ ಹಾಗಂದೆಯೋ... ಹೂಂ.. ನಂಗೊತ್ತು.. ಆ ಒಂದು ವರುಷದ ನಂತರವೇ ನೀನು ಜೀವನದ ಎಷ್ಟೋ ಮುಖಗಳನ್ನ ನೋಡಿದ್ದೀಯಾ... ಎಷ್ಟೋ ಸವಾಲುಗಳಿಗೆ ಉತ್ತರವಾಗಿದ್ದೀಯಾ.... ನುಂಗಲಾರದ ವಾಸ್ತವಿಕತೆಯನ್ನು ಒಪ್ಪಿಕೊಂಡಿದ್ದೀಯಾ ಅಂತ... ಆದರೂ ಮೂರು ವರುಷಗಳ ನಂತರದ ಹರಿವಿಗೆ ಕಾರಣವೇನಿತ್ತು...?
ಮೊದಲ ಮಾತೇ ಫೋನಿನಲ್ಲಿ... ನಾನು ಯಾರಂತ ಗೊತ್ತಿಲ್ಲದೇನೇ ನನ್ನೆಡೆಗೆ ಹರಿದ ಜೀವನದಿ ನೀನು.ನಾನು ನಾನೇ ಅಂತಾ ಗೊತ್ತಾಗುವ ಮೊದಲು ಎಂತಹ ಮಜವಾಗಿತ್ತು ನಮ್ಮ ಮಾತುಗಳು ಅಲ್ವಾ?.. ಕೋಪಗಳು,ಸಿಡುಕುಗಳು,ಹಾಗೇ ಸುಮ್ಮನೆ ಆಡಿದ ಮಾತುಗಳು,ಅನವಶ್ಯಕ ಪ್ರಶ್ನೆಗಳು,ಹುಸಿಮುನಿಸು.... ನಿನಗೆ ಮೊದಲ ಮೆಸೇಜನ್ನಿತ್ತು ಅದಕ್ಕೆ ನಾನು ನೀಡಿದ ಕಾರಣವೇ ಹೊಸದಾಗಿತ್ತು ಅಲ್ವಾ?.. ನಿಂಗೂ ಇಷ್ಟವಾಗಿದ್ದು... ಆಡಿದ ನಾಟಕದ ಗಮ್ಮತ್ತು ಗೊತ್ತಾಗಿದ್ದು ಆವಾಗಲೇ ಇರಬೇಕು..
 ನೆನಪಿದೆಯಾ ನೀನೊಂದು ನನಗೆ job offer ನೀಡಿದ್ದು..? ಟೆಲಿಫೋನ್ ಟವರ್ ಮೇಲೆ ಕೂತು ಕಾಗೆ ಓಡಿಸೋದು, monthly 40000/- ರೂಪಾಯಿ salary.. ಅದಕ್ಕೆ ಉತ್ತರವಾಗಿ ನಾನು "ನೀನೂ ಬಂದ್ಬಿಡು share ಮಾಡ್ಕೊಳ್ಳೋಣ ಅದನ್ನ  ಟವರ್ ಮೇಲೆ ಯಾರೂ ಇರಲ್ಲಾ ಇಬ್ರೇ ಆರಾಮಾಗಿ ಓಡಿಸಬಹುದು ಅಂದಿದ್ದು... ಹುಸಿಮುನಿಸಿನಿಂದ ನನ್ ಬೈಕೊಂಡಿದ್ದು... ಆವಾಗ್ಲೇ ನಿಂಗೂ ಅರ್ಥ ಆಗಿತ್ತಲ್ವಾ.. ಒಂದು ಮಾತೂ ಕೂಡಾ ಆಡದೇ ಎಷ್ಟು ಸತಾಯಿಸಿಬಿಟ್ಟೆ.. ನನ್ನೆಡೆಯ ನಿನ್ನ ಸಮ್ಮತಿಯ ಓಂಕಾರವನ್ನು  ಯಾವತ್ತೋ  ನಾನರಿತಿದ್ದೆ ಗೆಳತೀ.. ಆದರೇ ಒಂದೇ ಒಂದು ನಿನ್ನ ಮಾತಿಗೋಸ್ಕರ ನಾನು ಎದುರು ನೋಡಿದ್ದು...
ನಿನಗೆ ನನ್ನ ಮನಸ್ಸು ಎಷ್ಟರ್ಥವಾಗಿತ್ತು ಅಂದರೆ ನಾನು ನೇರವಾಗಿ ನಿನಗೆ I LOVE YOU  ಅಂತ ಅನ್ನಲು ಧೈರ್ಯ ಬರುವಷ್ಟು... ನಿನಗೂ ಮನಸ್ಸಿತ್ತು....ನನಗಿನ್ನು ಕೇಳಬೇಕಾ...? ನಿನಗಾಗಿಯೇ ತುಡಿದ ಹ್ರದಯ ಇದು... ಆದರೂ ನನ್ನನ್ನು ಇಲ್ಲಿಯೇ ಕಾಯಲು ಬಿಟ್ಟು ನಿನಗಿಷ್ಟವಿಲ್ಲದ ಲೋಕಕ್ಕೆ ಅರಗಿನ ಅರಮನೆಯಾಗಿಬಿಟ್ಟೆಯಲ್ಲೇ..... ಯಾಕಾಗಿತ್ತು ಇದೆಲ್ಲಾ?
ನೀನು ಗೆಜ್ಜೆಯಾದರೆ ನಾನು ದನಿಯಾಗ್ತೀನಿ... ನನ್ನ ಸಾಹಿತ್ಯಕ್ಕೆ ನೀನು ಸಂಗೀತವಾಗ್ತೀಯಾ....
ನೀನು ಹ್ರದಯವಾದರೆ ನಾನು ಜೀವವಾಗ್ತೀನಿ..... ನಾನು ಜೀವವಾದರೆ ನೀನು ಭಾವವಾಗ್ತೀಯಾ....
ನೀನು ಹಣತೆಯಾದರೆ ನಾನು ಅದನ್ನ ಬೆಳಗಿಸೋ ಪ್ರಕಾಶವಾಗ್ತೀನಿ... ನನ್ನ ಬೇಸರಕ್ಕೆ ನೀನು ಸಂತೈಸೋ ಅಮ್ಮನಾಗ್ತೀಯಾ....... ಹೆಜ್ಜೆಗೆ ಹೆಜ್ಜೆಯಾಗಿ.. ಉಸಿರಿಗೆ ಉಸಿರಾಗೋ ನಂಬಿಕೆಯಿತ್ತಲ್ಲವೇ ನಿನಗೆ.. ಆದರೂ ಹೊರಟೇ ಹೋದೆಯಲ್ಲಾ ಕಣ್ಣಿನಲ್ಲಿ ಭಾರವಾದ ಕನಸನಿಟ್ಟು... ನೆನಪುಗಳನ್ನು ಮಾತ್ರ ನನಗೆ ಕೊಟ್ಟು....
ಹೋಗುವ ಕಾರಣವನ್ನಾದರೂ ಹೇಳಬಾರದಿತ್ತೇ....?....ನಿನ್ನ ನಲುಮೆಯ ಲೋಕಕ್ಕೆ ನಾನು ಕಾಲಿಟ್ಟಾಗಿನಿಂದ ನಿನ್ನನ್ನು ಯಾವುದಕ್ಕೂ ಕಾರಣ ಕೇಳಲಿಲ್ಲ..... ಎಲ್ಲವನ್ನೂ ನಿನ್ನ ಕಣ್ಣ ಕೊನೆಯ ಹನಿಯೋ.. ಕಾಡಿಗೆಯ ಕಪ್ಪೋ... ರೆಪ್ಪೆಯ ಹಿಂದೆ ಮೌನವಾಗಿ ಅಡಗಿ ಕುಳಿತಿರುವ ಭಾವಗಳೋ.. ಉತ್ತರ ನೀಡುತ್ತಿದ್ದವು.....ಆದರೆ ಇದೊಂದು ವಿಷಯಕ್ಕೆ ಮಾತ್ರ ನನಗೆ ಕಾರಣವೇ ಗೊತ್ತಾಗಿಲ್ಲವಲ್ಲೇ.....ಆ ನಿನ್ನ ಕಪ್ಪು ಕಪ್ಪನೆಯ ಜೋಡಿ ಕಣ್ಣುಗಳ ಆಳದಲ್ಲೆಲ್ಲಾದರೂ ಭಾವನೆಯ ಅಲೆಗಳು ಸುಳಿದು ಕಾರಣ ನೀಡುತ್ತಾವೆಂದುಕೊಂಡರೆ.... ಆ ಅವಕಾಶವನ್ನೂ ಕೊಡದೇ ಹೊರಟು ಬಿಟ್ಟೆಯಲ್ಲಾ......
ಈಗ ನಿನ್ನನ್ನು ಹುಡುಕೋಕೆ ಅಂಜನವನ್ನೇನೂ ಹಾಕಬೇಕಾಗಿಲ್ಲಾ ಗೆಳತೀ...... ಆದರೆ  ಒಲ್ಲದ ಅತಿಥಿಯ ಕೊರಳಿಗೆ ದನಿಯಾಗಿ ಹೋದೆಯಲ್ಲಾ.. ಅದಕ್ಕೆ ಕಾರಣ ಹುಡುಕೋಕೆ ಅಂಜನ ಮುಂದಿಟ್ಟು ಕುಳಿತಿದ್ದೇನೆ. ಬಗ್ಗಿ ನೋಡಿದರೆ ಅಂಜನದ ಪಾತ್ರೆಯ ತುಂಬಾ ನನ್ನ ಮುಖವೇ ತುಂಬಿ ಮತ್ತೆ ಬೇಸರದ ಕುಡಿಕೆಯಾಗಿಬಿಡ್ತೀನಿ... ಅಂಜನದ ಪಾತ್ರೆಯಲ್ಲಿ ಕಾರಣ ಹುಡುಕೋಕೆ ಬಗ್ಗಿದಾಗಲೆಲ್ಲಾ ಹನಿ ಹನಿ ಕಣ್ಣೀರು ಬಿತ್ತಿದೀನಿ... ಬಿತ್ತಿದ ಹನಿಗಳೆಲ್ಲಾ ಬತ್ತಿ ಹೋಗಿದಾವೋ ಏನೋ.. ಕಾರಣ ಸಿಗದೆ... ಇನ್ನೂ ಮರಳಿಲ್ಲ.
ನೆನಪುಗಳ ಜೊತೆಗೂಡಿ...... ಕಾಯುತ್ತಲೇ ಇದ್ದೇನೆ..........

Monday, September 20, 2010

ನಾನೂ ಕೂಡಾ ಕೆಟ್ಟ ಹುಡುಗ...

ಬದುಕು ಎನ್ನುವುದು ಒಂದು ಮಹಾ ಸತ್ಯವನ್ನು ಹುಟ್ಟು ಹಾಕುವ ಕಮಱಗಾರವಂತೆ. ನಿನ್ನೆ ನಿನ್ನೆಯವೆರೆಗೆ ನನ್ನಲ್ಲಿ, ನಾನು ಒಬ್ಬ ಒಳ್ಳೆಯ ಹುಡುಗ ಅನ್ನೋ ಭಾವನೆಯಿತ್ತು. ಅಂದುಕೊಂಡಂತೆ ಯಾವ ತಪ್ಪನ್ನೂ ಮಾಡಿಲ್ಲ. ಆದರೆ ಕಮಱಗಾರದಲ್ಲಿ ಹೊಸ ಸತ್ಯವೊಂದು ನಿನ್ನೆ ತಾನೇ ಜನಿಸಿ ನಿಂತಿದೆ....
ಅದೇ.... ನಾನೊಬ್ಬ ಕೆಟ್ಟ ಹುಡುಗ.
ಬಡವನಿಗೆ ಹತ್ತು ರೂಪಾಯಿಯನ್ನು ಕೊಟ್ಟು ಖುಷಿಯನ್ನನುಭವಿಸುವಾಗ ಅಂದುಕೊಂಡಿದ್ದೆ...  ನಾನೊಬ್ಬ ಒಳ್ಳೆ ಹುಡುಗ.....
ಸ್ವಂತ ತಂಗಿಗೆ ಒಂದು ಅಂಗಿಯನ್ನೂ ತಂದುಕೊಡದೇ hurt ಮಾಡಿದಾಗ ನಾನ್ಯಾಕೊಂದು ಬಾರಿ ಕೂಡಾ ಅಂದುಕೊಂಡಿಲ್ಲ... ನಾನೊಬ್ಬ ಕೆಟ್ಟ ಹುಡುಗ ಎಂದು .......
ಯಾವುದೋ ರಸ್ತೆ ಬದಿಯ ತೊಟ್ಟಿಯ ಕಸ ಆಯ್ದುಕೊಳ್ಳುವ ಹೆಂಗಸಿಗೆ ಹೊರೆಯನ್ನು ಎತ್ತುವಾಗ ನಾನೊಬ್ಬ ಒಳ್ಳೆಯ ಹುಡುಗನೆಂದುಕೊಂಡ ನನಗೆ ಅಮ್ಮ ಒಂದು ಹುಲ್ಲಿನ ಹೊರೆಯನ್ನು ಹೊತ್ತು ತಾ ಅಂದರೂ ಬರಿಗೈಯಲ್ಲಿ ಬರುವಾಗ ನಾನ್ಯಾಕಂದುಕೊಳ್ಳಲಿಲ್ಲ... ನಾನೊಬ್ಬ ಕೆಟ್ಟ ಹುಡುಗ ಎಂದು....
ಬಸ್ಸಿನಲ್ಲಿ ಹೋಗುವಾಗ ಅಳುತ್ತಿದ್ದ ಯಾವುದೋ  ಅಪರಿಚಿತ ಮಗುವಿಗೆ ಚಾಕೋಲೇಟ್ ಕೊಟ್ಟು ಕೆನ್ನೆ ಹಿಂಡಿದಾಗ ನಾನೊಬ್ಬ ಒಳ್ಳೆ ಹುಡುಗನೆಂದು ಅಂದುಕೊಂಡ ನನಗೆ, ನನ್ನದೇ ಅಕ್ಕನ ಪುಟ್ಟ ಮಗಳ ಮನೆಗೆ ಬರಿಗೈಯಲ್ಲಿ ಹೋದಾಗ ಯಾಕನಿಸಲಿಲ್ಲ ನಾನೊಬ್ಬ ಕೆಟ್ಟ ಹುಡುಗನೆಂದು.....
ಗೆಳೆಯನ ಮನೆಯಿಂದ ಹಿಂತಿರುಗಿ ಬರುವಾಗ ಅವನ ತಂದೆಯ ಕಾಲಿಗೆ ನಮಸ್ಕರಿಸಿ... ಅಂದುಕೊಂಡಿದ್ದೆ ನಾನೊಬ್ಬ ೊಳ್ಳೆ ಹುಡುಗನೆಂದು.. ಅದೆಷ್ಟೋ ಬಾರಿ ಮನೆಯಿಂದ ಬಂದಿದ್ದೇನೆ ಒಂದೇ ಒಂದು ಬಾರಿ ಕೂಡಾ ನಮ್ಮ ತಂದೆಯ ಕಾಲಿಗೆ ನಮಸ್ಕರಿಸಲಿಲ್ಲ.... ಆವಾಗಲೆಲ್ಲಾ ಯಾಕಂದುಕೊಳ್ಳಲಿಲ್ಲ ನಾನೊಬ್ಬ ಕೆಟ್ಟ ಹುಡುಗನೆಂದು....
ಯಾರೋ ಅಪರಿಚಿತ ಅನುಬಂಧಿಯಿಂದ ಬರುವ call ಗೋಸ್ಕರ  ಅಷ್ಟು ಮಿಡಿವ ನನ್ನ ಮನ ಅಮ್ಮನಂತಹ ಾತ್ಮಬಂಧುವಿನ call ಗೋಸ್ಕರ ೊಂದು ಬಾರಿಯೂ ಮಿಡಿದಿಲ್ಲವಲ್ಲ.... ಅಲ್ಲವೇ ನಾನೂ ಒಬ್ಬ ಕೆಟ್ಟ ಹುಡುಗ.....
ಹೀಗೆಲ್ಲಾ ಇರುವಾಗ ಎಲ್ಲೋ ದೂರದಲ್ಲಿರುವ ಮುಖಕಾಣದ ಹುಡುಗಿ ನೀನೊಬ್ಬ ಕೆಟ್ಟ ಹುಡುಗ ಎಂದರೆ ಹೇಹೆ ಹೇಳಲಿ ನಾನು ಒಳ್ಳೆಯವನೆಂದು..... ನಾನೂ ಒಬ್ಬ ಕೆಟ್ಟ ಹುಡುಗ...
ಆಕಾಶದ ಅಂತಃಕರಣಚನ್ನು ಕಲಕಿ ಭೂಮಿಗೆ ಧುಮುಕುವ ಮಳೆಹನಿ ಕೂಡಾ ಭೂಮಿಗೆ ಬಿದ್ದ ಮೇಲೆ ಎಷ್ಟೊ ಪಾಠ ಕಲಿಯಿತಂತೆ..ಧುಮುಕಿ ಕಲ್ಲಿನ ಮೇಲೆ ಬಿದ್ದಾಗ ನುಚ್ಚು ನೂರಾಗಿ ಹರಡಿತಂತೆ ಹನಿಯ ಮಾಯೆ, ಅಖಂಡ ಸಾಗರಕ್ಕೆ ತೇಲಿ ಹೋದಾಗ ಇದಕ್ಕೆ ಕ್ಯಾರೇ ಅನ್ನದ ಸಾವಿರ ಹನಿಗಳ ಮುಂದೆ ಮ್ಋದುವಾಯಿತಂತೆ ಇದರ ಹರಹು, ಬೇಸಿಗೆಯ ಬಿಸಿಲ ಝಳಕ್ಕೆ ಬೆವರಿ ಆರಿ ಮತ್ತೆ ಆಕಾಶದ ತೆಕ್ಕೆಗೆ ಹೋಗುವಾಗ ಒಂದು ಜ್ನಾನೋದಯದ ದಿವ್ಯ ಅನುಭೂತಿಯಾಯಿತಂತೆ.. ಬಿಟ್ಟೇ ಹೋಗಲಾರದಂತ ಬಂಧ ಬೆಸೆಯಿತಂತೆ...
ಹಾಗೇ ನಾನೂ ಕೂಡಾ........
ಕಾಲನ ಅಕಾಡಕ್ಕೆ ಸಿಕ್ಕಿ ಏನೇನು ಅನುಭೂತಿಗಳಾಗಬೇಕೋ ... ನಾನು ಕೆಟ್ಟವನೆಂದು ಗೋಚರಿಸಿಸಿದ ಇವುಗಳೆಲ್ಲವುಗಳಿಂದ  ಎಷ್ಟೋ ಪಾಠ ಕಲಿತಿದ್ದೇನೆ. ಹಾಗಿರುವಾಗ ನಾನಂದುಕೊಳ್ಳದಿದ್ದ ಹೊಸತೊಂದು ಆಯಾಮದಲ್ಲಿ ಕೆಟ್ಟ ಹುಡುಗ ಎಂದೆಯಲ್ಲ ನೀನು..... ನೆನೆಸಿಕೊಂಡರೆ ಈಗಲೂ ಎದೆಬಡಿತದ ಸದ್ದು ನನಗೇ ಕೇಳುವಷ್ಟಾಗುತ್ತದೆ.
ಆದರೂ ಒಪ್ಪಿಕೊಳ್ಳುತ್ತೇನೆ ನೀನಂದಿದ್ದನ್ನ.......
ಹೂಂ.... ನಾನೊಬ್ಬ ಕೆಟ್ಟ ಹುಡುಗ......

Wednesday, August 11, 2010

ಯಾಕೆ ಹೀಗಿದು ಗೆಳತಿ....

ಮನದಂಗಳದ ತುಂಬಾ 
               ನೀನೆ ತುಂಬಿ
ಎದೆತುಂಬಿ ಹಾರುತಿದೆ 
             ಪ್ರೇಮ ದುಂಬಿ
ಹೂವು ಹೂವಿಗೂ ಹಾರಿ
                ಜೇನ ಹೀರಿ
ಮನ ಮನದ ತುಂಬೆಲ್ಲ
             ಸವಿಯ ಬೀರಿ ||

ನಿನ್ನೊಂದು ನೋಟ
ಆ ಧ್ವನಿಯ ಮಾಟ
ಹಚ್ಚ ಹಸಿರಾಗಿಹುದು ಎನ್ನೆದೆಯ ಒಳಗೆ
ನೀ ನಕ್ಕರೇ ಚೆನ್ನ
ಮಾತೆಲ್ಲವೂ ಚಿನ್ನ
ಬಾ ಗೆಳತಿ ದನಿಯಾಗು ನನ್ನೊಲುಮೆ ಕರೆಗೆ||


ಯಾಕೆ ಹೀಗಿದು ಗೆಳತಿ
ನನ್ನುಸಿರು ಹಸಿರಾಗಿ
ಹಸಿಯಾಗಿ ಕಸಿಯಾಗಿ ಬೆಳೆಯುತಿಹುದು
ನಿನ್ನ ಮಾತಿನ ಧಾಟಿ
ನನ್ನೆದೆಯ ಸ್ವರ ಮೀಟಿ
ನಿನ್ನುಸಿರ ಸ್ಪರ್ಶದಲಿ ಕಳೆಯುತಿಹುದು ||


-------------------------; ರಾಘವ್

Friday, July 2, 2010

ಒಂದು ಬಾರಿ ಅಂದುಬಿಡು ಗೆಳತಿ.............

ಪ್ರೀತಿಯ Good morning ನೊಂದಿಗೆ,
ನಾನ್ ಕಣೇ ನಿನ್ ಮಾಧವಾ... ಓಹ್ what a surprise 
ಅಂದ್ಕೋತಿದೀಯಾ? ಚನ್ನಾಗಿ ಕಣ್ತೆರೆದು ನೋಡೇ... ಅಯ್ಯೋ ಅಯ್ಯೋ.. ನಾನೆದ್ರಿಗೇ ಇದೀನಿ ಮೈ ಮುರೀತಿಯಲ್ಲೇ.... ಚನ್ನಾಗಿ ಕಾಣ್ತೀಯಾ ಬಿಡು... ಒಳ್ಳೆ beauty ಕಣೇ ನೀನು.. ವಿಷ್ಯಕ್ಕೆ ಬರ್ಲೇನೇ?...........
ನಿನ್ನೆಯನ್ನು ನೆನಪು ಮಾಡಿಕೋ... continuous ಆಗಿ ಮೂರು ತಾಸು ಮಾತಾಡಿದೀವಿ. ಮಾತಲ್ಲೇ ದೇಶ ಸುತ್ತಿದೀವಿ.. ಏನೇನೆಲ್ಲ ಮಾತಾಡಿದೀವಿ ... ಮನೆ, ಅರಮನೆ, ನೆರೆಮನೆ, ಸಮುದ್ರ, ಬ್ರಿಟನ್ನು, ಬ್ರಿಟೀಷು, ಶೇರು, ಪೇಪರು, ಯಾವುದನ್ನು ಬಿಟ್ಟಿದೀವಿ ನಾವು.. ಇಂಡಿಯಾದ ಸಾಲದಿಂದ ಹಿಡಿದು ಜಾಕ್ಸನ್ ಜಡೆಯ ಬಾಲದ ತನಕ... ಅದರ ಮಧ್ಯದಲ್ಲೆಲ್ಲೋ ಪ್ರೀತಿಯ ವಿಷಯಾನೂ ಸುಳಿದಿತ್ತಲ್ವಾ..?
ನಾನು ಗಮನಿಸಿದೀನಿ ಕಣೇ.. ನಿನ್ನೆ ನಾನು ಸುಧಮಾಱ ಗ್ರೌಂಡಿನಲ್ಲಿ ಜೊತೆ ಜೊತೆಯಾಗಿ ಮಾತಾಡ್ತಾ ಹೋಗೋವಾಗ ನೀನು ಕಣ್ಣ ತಪ್ಪಿಸಿ ತಪ್ಪಿಸಿ ನನ್ನ ನೋಡೋದನ್ನ... ಹಾಗಂತ ನೀನು ನನ್ನನ್ನು ಯಾವತ್ತೂ ನೋಡೇ ಇಲ್ಲಾ ಅಂತಲ್ಲಾ.. ಅದೆಷ್ಟು ಬಾರಿ ನಾವು ಕಣ್ಣಲ್ಲಿ ಕಣ್ಣಿಟ್ಟು , ಗಲ್ಲವೂರಿ ಕೂತು ನೋಡಿಕೊಂಡಿಲ್ಲಾ.... but ಯಾವಾಗ್ಲೂ ನೀನು ನೋಡೋ ನೋಟಕ್ಕೂ.. ನಿನ್ನೆಯ ನಿನ್ನ ನೋಟಕ್ಕೂ ಆಕಾಶ ಭೂಮಿಯಷ್ಟು ಭಿನ್ನತೆ ಕಂಡಿದ್ದೇನೆ ಗೆಳತೀ... ನಿಜ ಹೇಳು ನಿನ್ನ ಕಣ್ಣಲ್ಲಿದ್ದ ಾ ಹೊಸ ಭಾವಕ್ಕೆ ಅಥಱವೇನು? ನಿನ್ನೆ ರಾತ್ರಿಯ ಕನಸುಗಳನ್ನು, ನಿದ್ರೆಗಳನ್ನು ಸುಟ್ಟು ಯೋಚ್ಸಿದೀನಿ ಹುಡುಗೀ... ಅದರ ಪರಿಣಾಮಾನೇ ಕಣೇ ಈ ಓಲೆ..... ನಿಜ ಹೇಳಿ ಬಿಡು ಅದು ಪ್ರೀತೀನೇ ಅಲ್ವಾ..?
ಒಂದು ಬಾರಿ ಅಂದುಬಿಡು ಗೆಳತಿ
ಇದು ಪ್ರೀತಿ ಅಂತಾ...
ಹ್ರದಯ ಗೂಡಲ್ಲಿ ಬಚ್ಚಿಟ್ಟ ಪ್ರೀತಿ
ಮೌನದಲಿ ಸುಡುವುದುಂಟಾ..?

ನಾವೆಷ್ಟು ಬಾರಿ ಮಾತಾಡಿಕೊಂಡಿದೀವಲ್ವಾ... ನಾವೊಳ್ಳೆ ಹುಚ್ಚರಲ್ವಾ ಅಂತಾ.. 18 ತುಂಬಿದ ಮೇಲೂ ನಾವು ಅದೆಷ್ಟು ಬಾರಿ ಗುಬ್ಬಚ್ಚಿ ಆಟ ಆಡಿಲ್ಲಾ... ಇದೇ ಸುಧಮಾಱ ಗ್ರೌಂಡಿನಲ್ಲಿ ಹುಚ್ಚರಂತೆ ಕೂಗಿಕೊಂಡು ಓಡಿಲ್ಲಾ... ನನ್ನ ಬೆನ್ನಿನ ಮೇಲೆ ನೀನು ಅದೆಷ್ಟು ಬಾರಿ ಉಪ್ಪಿನ ಮೂಟೆಯಾಗಿಲ್ಲಾ... ಮೊನ್ನೆ ಮೊನ್ನೆ ಕಳೆದು ಹೋದ ಮಳೆಯಲ್ಲಿನ ಆ ಕೆಸರು ನೀರಿನಲ್ಲಿ ಓಡಾಡಿ.. ಸೊಂಟದ ವರೆಗೆ ಮಣ್ನಾಗಿ.., ಅದೆಷ್ಟು ಜನರ ಬಾಯಲ್ಲಿ ಹುಚ್ಚರಾಗಿಲ್ಲಾ... ಅದೇನೇ ಆಗಿದ್ದರೂ ನಮ್ಮ ನಡುವೆ ತಾನೇ?
ನಮ್ಮ ನಡುವೆ ಅದೆಷ್ಟು ಲ್ಕಷ ಮಾತುಗಳು ಸರಾಗ ಸಾಗರವಾಗಿ ಹರಿದು ಮನದ ಸಮುದ್ರ ಸೇರಿಲ್ಲ..ಜೊತೆ ಜೊತೆಯಾಗಿ... ಆದರೆ ಇದೊಂದು ವಿಷ್ಯ ಮಾತ್ರ ಎಂದೂ ಹೇಳೇ ಇಲ್ವಲ್ಲೇ.... ನಾನೇನಂದು ಬಿಡ್ತೀನೋ ಅನ್ನೋ ಭಯಾನಾ?
ನಾವು ಹುಡುಗರು ಕಣೇ.. ಅಂಥಹ ವಿಷಯಗಳು ಗೊತ್ತಾಗೋಕೆ, ಅಥಱವಾಗೋಕೆ ತುಂಬಾ ಸಮಯ ಹಿಡಿಯುತ್ತೆ. ಗೊತ್ತಲ್ವಾ ನಿಂಗೂನೂ.... ಅಷ್ಟಕ್ಕೂ ನಾನಿದನ್ನು ಅಥಱ ಮಾಡಿಕೊಳ್ಳದೇ ಹೋದ್ರೆ ಒಂದೆರಡು ರಾತ್ರಿ ಕಣ್ಣೀರಾಗಿ... ಬಂದವನಿಗೆ , ತಾಳಿಗೆ ಕೊರಳೊಡ್ಡಿ ಬಿಡ್ತಿದ್ಯೇನೋ..... ಅಲ್ವಾ ಮೀರಾ..?
Ofcours ನೀನು ಒಲ್ಲದ ಅತಿಥಿಯಲ್ಲ ನನಗೆ... ಆದರೆ ಇದು ಪ್ರೀತಿ ಅನ್ನೋ ಭಾವನೆ ಬಂದಾಗಿನಿಂದ ಹ್ರದಯವೆಲ್ಲಾ ಹಸಿ ಹಸಿ ಗೊತ್ತಾ? ಮುಟ್ಟಿದರೆಲ್ಲಿ mark ಆಗುತ್ತೋ ಅನ್ನುವ ಹಾಗೆ..... ನುಡಿದರೆ ವೀಣೆಯಂತೆ... ಇದಕ್ಕೆಲ್ಲಾ ಅಥಾಱನಾ ನೀನು ಕಲ್ಪಿಸಿ ಕೊಡಬೇಕು ಕಣೇ... I am helpless.....
ಎಂದಿನಂತೆ ನಾಳೆನೂ ಬತೀಱಯಲ್ಲಾ... ತಪ್ಪಿಸಬೇಡ ಕಣೇ ಹುಡುಗಿ... ಏಕೋ ನಾನು ನಾನಾಗಿಲ್ಲಾ.... ಅದೇ ಗ್ರೌಂಡಿನ ಮೀರಾ ಮಾಧವ ಮೂತಿಱಯ ಪಕ್ಕದಲ್ಲೇ ಕುಳಿತು ಕಾಯ್ತಿತೀಱನಿ.. ಬರುವಾಗ ನನ್ನೆದೆಯ ಎಲ್ಲ ಪ್ರಶ್ನೆಗಳಿಗೊಂದು conclusion ತತೀಱಯಲ್ವಾ..?
ಬಂದು ಬಿಡು ಮೀರಾ.......
ತಳಮಳದೊಂದಿಗೆ
ಕಾಯುತ್ತಿರುತ್ತೇನೆ.

Thursday, July 1, 2010

ಕರೆಯಬೇಕಿನ್ನೆಷ್ಟು ಸಾರಿ ಸಾರಿ

ಇದು ನಿನ್ನದೇ ಕನಸ
ಹೊತ್ತು ತಿರುಗಿದ ದಾರಿ
ಒಂದಲ್ಲ ಎರಡಲ್ಲ ಬಾರಿ ಬಾರಿ
ಎಷ್ಟು ಯೋಜನ ದೂರ
ನಿನ್ನ ಮನಸಿನ ದಾರಿ
ಕರೆಯಬೇಕಿನ್ನೆಷ್ಟು ಸಾರಿ ಸಾರಿ ||

ಒಲ್ಮೆಯಲಿ ಕರೆದಿರುವೆ
ಬಾಳ ಬಳಿ ಬಾರೆಂದು
ಯಾವ ಉಲಿತಕೆ ನೀನು ಕರಗೋ ಹೆಣ್ಣು
ವರುಷವಾಯಿತು ಚಿನ್ನಾ
ಪ್ರೀತಿ ಕನಸನು ಕಂಡು
ನೀ ಬರದಿರೇ ಹ್ರದಯ ಬರಿಯ ಹುಣ್ಣು ||

ಹ್ರದಯ ಮಹಲಲಿ ದಿನವು
ಹಚ್ಚಿ ಕುಳಿತಿಹೆ ದೀಪ
ಬಿಂದು ಬಿಂದುವು ಉರಿದು ಬೆಳಕ ನೀಡಿ
ನನ್ನ ಸ್ಥಿತಿಯನು ನೋಡಿ
ಅನಿಸಲಿಲ್ಲವೇ ಪಾಪ
ಒಲಿಸಿಕೊಳ್ಳಲೇ ನಿನ್ನ ಕಾಡಿ ಬೇಡಿ ||

ಹಸಿಮನಸ ಭೂಮಿಯಲಿ
ಒಂದು ಕಲೆಯೂ ಇಲ್ಲ
ಒಂದೇ ಒಂದು ನಿನ್ನ ಹೆಜ್ಜೆ ಬಿಟ್ಟು
ಈ ಪ್ರೀತಿ ಭಾಷ್ಪದಲಿ
ಒಲುಮೆ ಹನಿಗಳೇ ಎಲ್ಲ
ಬಾ ಉಓಡು ತಳವೂರು ಬೇರನಿಟ್ಟು ||

--------------------> ರಾಘವ್

ಎಲ್ಲಿಂದೆಲ್ಲಿಗೋ.......

ಯಾವ ಕುಂಕುಮ ಬಿಂದು
ಯಾರ ಹಣೆ ಬೆಳಗುವುದೋ
ಯಾವ ವಿಧವೆಯ ಬಾಳ
ಅರಳಿಸುವುದೋ ||

ಯಾವ ನೀರಿನ ಸೆಲೆಯು
ಯಾರ ಬಾಯಾರಿಕೆಗೋ
ಯಾರ ಕಣ್ಣೀರ ಜೊತೆಗೂಡಲೆಂದೋ
ಯಾವನಾಪ್ತ ನೆಲ
ಯಾವ ವ್ರಕ್ಷಕೋ ಏನೋ
ಯಾವ ಚೈತ್ರದ ಚಿಗುರ ಬೆಳೆಸಲೆಂದೋ ||

ಯಾವ ಕೋಗಿಲೆ ಹಾಡು
ಯಾವ ಮಾಮರದಲ್ಲೋ
ಯಾರ ಕಿವಿಗೆ ಇಂಪು ಹರಿಸಲೆಂದೋ
ಯಾವ ನೀರಿನ ಆವಿ
ಯಾವ ಮುಗಿಲಿಗೋ ಏನೋ
ಯಾವ ಒಣಗಿದ ನೆಲಕೆ ಸುರಿಸಲೆಂದೋ ||

ಯಾರ ಒಲವಿನ ಪ್ರೀತಿ
ಯಾರ ಎದೆ ಬೆಳಗುವುದೋ
ಯಾವ ಒಲವಿನ ಜೋಡಿ ಕೂಡಲೆಂದೋ
ಯಾವ ಮರೆಯದ ಘಳಿಗೆ
ಯಾವ ಹ್ರದಯದ ಸುಳಿಗೆ
ಯಾರ ನೆನಪಿನ ಛಾಯೆ ಉಳಿಸಲೆಂದೋ ||

--------------------------> ರಾಘವ್.

Thursday, June 3, 2010

ನೀನೊಂದು ಮುಗ್ಧ ರಾಜಕುಮಾರಿ [ಪಾಪುಮರಿಗೆ]


ನೀನೊಂದು ಗೊಂಬೆ ಕಣೇ....
ನಿನ್ನ
ಮುಖ ನೋಡಿದರೇನೇ ಅನ್ಸಿಬಿಡುತ್ತೆ.. ನೀನೊಂದು ಮುಗ್ಧ ರಾಜಕುಮಾರಿ ಅಂತ. ಎಷ್ಟು ಶಾಂತ..... ಇಷ್ಟವಾಗಿರೋದು ಅದಕ್ಕೇನೇ... ಚಂದ ಚಂದಗೆ ಎಳಸು ಎಳಸಾಗಿ ಬರುವ ಶುದ್ಧ ಮಾತು... ಎಳೆಯ ಮಗುವಿನ ಹಾಗೆ ಗೊಂಬೆಗಳ ಜೊತೆ ಇರುವ ನಿನ್ನ ರೀತಿ... ಎಲ್ಲವೂ ಇಷ್ಟವಾಗಿರೋವಾಗ "ನಾನಂದ್ರೆ ಎಷ್ಟು ಇಷ್ಟ" ಅನ್ನೋ ಪ್ರಶ್ನೆಗೆ ಯಾವ ಪ್ರಮಾಣದಲ್ಲಿ ಇಷ್ಟದ ಅಳತೆಗೋಲನ್ನು ತೋರಿಸಲಿ?
ಹೇಯ್ ಗಿಳಿ,,,
ಆಡಿದ ಮಾತುಗಳು ಕೆಲವೇ ಕ್ಷಣಗಳದ್ದಿರಬಹುದು... ಆದರೆ ಮೌನವಾಗಿ ಪ್ರಹರಿಸುವ ಸ್ನೇಹ ಗಂಗೆಯ ಅಂತರ್ ಹರಿವಿಗೆ,, ಅದರ
ಸ್ಪಂದನೆಗೆ ಅದಾವ ಶಬ್ಧದ ಹಂಗು.. ಹೂಂ?
ಯಾಕೋ ಗೊತ್ತಿಲ್ಲಾ ಚಿನ್ನುಮರಿ... ನಿನ್ನನ್ನು ಮಾತ್ರ ನಾನು ನನ್ನ ಮನಸ್ಸಿನಲ್ಲಿ ಮುಗ್ಧತೆಗಿಂತಲೂ ಮುಗ್ಧವಾಗಿ ಕಲ್ಪಿಸಿಕೊಂಡಿದ್ದೇನೆ. ಅದು ಯಾವತ್ತೂ ಅಳಿಸಲಾಗದ ಛಾಯೆಯಾಗಿ ಹಚ್ಚೆಯಾಗಿ ಕೂತುಬಿಟ್ಟಿದೆ ಎದೆಯಲ್ಲಿ.
ಆವಾಗ್ಲೇ ಹೇಳ್ಬಿಟ್ಟಿದೀನಲ್ಲಾ ನೀನೊಂದು ಮಗು ಅಂತ... ಮಗುವಿನ ಚೈತನ್ಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇರುವುದಿಲ್ಲ ಹಾಗೆ.....
ನೀ
ನೊಂದು ಹೊಚ್ಚ ಹೊಸ ಕನ್ನಡಿಯಿದ್ದಂತೆ... ಒಂದೇ ಒಂದು ಪ್ರತಿಬಿಂಬವೂ ಅದರಲ್ಲಿ ಮೂಡಿಲ್ಲಾ....
ನಿನ್ನ ಪುಟ್ಟ ಕಂಗಳ ಮುಗ್ಧ ನೋಟದಲ್ಲಿ ಹೊಳೆವ ಹೊಳಪಿನ ಕನಸುಗಳೆಲ್ಲಾ ಬಿರಿವ ಮೊಗ್ಗಿನ ಸುವಾಸನೆ ಬೀರುವ ಸುಮಧುರ ಕನಸುಗಳು.
ಕೆಲವು ಸುಂ
ದರ ಅನುಭೂತಿಗಳನ್ನು ಅವರವರ ಮನಸ್ಸಿನಲ್ಲಿಯೇ ಮನನ ಮಾಡಿಕೊಂಡು ಮನಸ್ಸಿನಲ್ಲಿಯೇ ಇರಿಸಿಕೊಂಡರೆ ಒಳ್ಳೆಯದು.

ಕದ್ದ ಸಾಲುಗಳ ಶುದ್ಧ ಭಾವ.....[ಪಾಪುಮರೀ ಇದು ನಿನಗೋಸ್ಕರ]

ಅವನು ಆತ್ಮಬಂಧು......
ಮಾತಿಗೊಮ್ಮೆ ಅವಳ ಮೈ ಕೈ ಮುಟ್ಟುವುದಿಲ್ಲ. ತಾಕಿ ಕೊಳೆ ಮಾಡಲ್ಲ. ಹಸಿದವನಂತೆ ಸದಾ ಆಕೆಯ ಸುತ್ತ ಪಹ
ರೆ ಸುತ್ತಲ್ಲ. ನಂಗೊತ್ತು ಅವಳನ್ನು ತುಂಬಾ ಇಷ್ಟ ಪಡ್ತಾನೆ. ಆದರೆ ಅವಳ ಮೈಯನ್ನಲ್ಲ. ತುಂಬಾ ಪ್ರೀತಿಸ್ತಾನೆ ಆದ್ರೆ ಸಂಬಂಧಕ್ಕೊಂದು ಹೆಸರಿಡಲ್ಲ. ಆಪತ್ತು ಬಂದಾಗ ಸಹಾಯಕ್ಕೆ ನಿಲ್ಲುತ್ತಾನೆ.ಸಂಭ್ರಮದ ಕ್ಷಣಗಳಲ್ಲಿ ತಕ್ಷಣ ನೆನಪಾಗುತ್ತಾನೆ. ಯಾಕೋ ಯಾವುದೂ ಬೇಡವೆನಿಸಿದಾಗ ಒಬ್ಬಳನ್ನೇ ತನ್ನ ಪಾಡಿಗೆ ತಾನು ಇರಲು ಬಿಟ್ಟುಬಿಡುತ್ತಾನೆ. ಆಜೆಯ ಕಷ್ಟ ಸುಖಗಳನ್ನು ಕೇಳುತ್ತಾನೆ. ತನ್ನ ನಲಿವುಗಳನ್ನು ಹಂಚಿಕೊಳ್ಳುತ್ತಾನೆ. ಅವನು ಗಂಡನಲ್ಲ,ಪ್ರಿಯಕರನಲ್ಲ,ಸವಕಲಾಗಿ ಹೋಗಿರುವ ಶಬ್ಧ "Best Friend" ಅಂತೀವಲ್ಲ ಅದೂ ಅಲ್ಲ.
ಅವ
ರಿಬ್ಬರ ಸಂಬಂಧಕ್ಕೆ ಇಂಥವೇ ಅಂಥ ಒಂದು ಹೆಸರಿಲ್ಲ. ಯಾವತ್ತೋ ಒಂದು ದಿನ ಆಕೆಯನ್ನು ಪಡೆದೇ ತೀರಬೇಕು ಅನ್ನೋ ಧಾವಂತವಿಲ್ಲ. ಅವಳು ಸ್ವೀಕರಿಸದಿದ್ದರೆ ಏನಾದೀತು ಅನ್ನೋ ಆತಂಕವಿಲ್ಲ. ಆದರೂ ಸಹ ಯಾವತ್ತೂ ಜೊತೆಯಾಗಿರುವ ಭರವಸೆ ಕೊಡುತ್ತಾನೆ. ನೊಂದ ಜೀವಕ್ಕೆ ಕೊಂಚ ಮಟ್ಟಿಗಾದರೂ ಸಾಂತ್ವನ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡ್ತಾನೆ.....
ಅವನೇ ನಿಜವಾದ ಆತ್ಮಬಂಧು.....

Friday, May 28, 2010

ತಲೆಯೆತ್ತಿ ಆಕಾಶದೆತ್ತರಕ್ಕೆ ಕಣ್ಣು ಹಾಯುವವರೆಗೆ ನೋಡಿದರೂ ಬದುಕಿನ ಅಥಱ ನಿಲುಕುವುದಿಲ್ಲ.
ಬದುಕು ಅಂದರೆ ಇದೇ ಅಂತ ಯಾವುದನ್ನೂ ಹೇಳುವುದಕ್ಕೆ ಬರುವುದಿಲ್ಲ.
because ಪ್ರಪಂಚದ ಪ್ರತಿಯೊಬ್ಬನೂ ಕೂಡಾ
ಅವನ ಅನುಭವದ ಮೇರೆಗೆ ಬದುಕನ್ನು ಸೆರೆಹಿಡಿಯುತ್ತಾನೆ.
ನಮ್ಮ ಬದುಕಿನ ಪದವನ್ನು ಮಾತ್ರ ನಾವೇ ಜೋಡಿಸಬೇಕು......
ಸಂತಸದ ಛಾಯೆ ಬರುವ ಹಾಗೆ.......
ನಮ್ಮ ಬದುಕಿನ ನಡುವೆ ಆಗುಹೋಗುಗಳು ಹೇಗೇ ಬಂದ್ರೂ ನಾವು ಹೇಗೆ ಸ್ವೀಕರಿಸುತ್ತೇವೆಯೋ ಹಾಗೆ ಅದು ನಮ್ಮ ಪಾಲಿಗೆ ಬದಲಾಗುತ್ತವೆ.
ನೋವುಗಳು ದುಃಖಗಳು ಮನುಷ್ಯನಿಗೆ ಶಾಶ್ವತವಲ್ಲ..
ವಿಷಯ ಏನೆಂದರೆ ನೋವುಗಳು ದುಃಖಗಳು ಸಣ್ಣ ಪುಟ್ಟ ಬೇಸರಗಳು ಇಲ್ಲದೇ ಹೋದರೆ ಬದುಕಿನಲ್ಲಿ ಸಂತಸದ ಉನ್ಮಾದ ಹೇಗಿರುತ್ತದೆಯೆಂಬುದನ್ನು ನಾವು ಅರಿಯಲಿಕ್ಕೇ ಸಾಧ್ಯವಾಗುತ್ತಿರಲಿಲ್ಲವೇನೋ....
ಮನುಷ್ಯ ಎಷ್ಟು ಹೆಚ್ಚು ನೋವು ಅನುಭವಿಸುತ್ತಾನೋ ಅಷ್ಟು ಹೆಚ್ಚು ಸುಖವನ್ನು ಕೂಡಾ..... ಅನುಭವಿಸುತ್ತಾನೆ.


Friday, May 21, 2010

ಗೆಳತಿ.... ಇದೊಂದು ಘಳಿಗೆ ಅತ್ತು ಬಿಡುವೆ...... ಕೊನೆಯ ಕಂಬನಿ ಬಿತ್ತಿ ಬಿಡುವೆ......




ಸ್ರಷ್ಟಿಯಲ್ಲಿ ಸಿಹಿಯಾದುದು ಸ್ನೇಹ. ಅಮ್ಮನ ಕೈ ತುತ್ತು ತಿನ್ನದ ಹೊರತು ಮಕ್ಕಳಿಗೆ ಹೊಟ್ಟೆ ತುಂಬುವುದಿಲ್ಲ. ಹಾಗೇ ಪ್ರತಿಯೊಬ್ಬ ಮನುಷ್ಯನಿಗೆ ಒಬ್ಬ ಒಳ್ಳೆ ಸ್ನೇಹಿ ಇರಬೇಕು. ಅಪ್ಯಾಯತೆಯನ್ನೂ, ಪ್ರೀತಿಯನ್ನೂ, ನೋವನ್ನೂ, ಸಂತಸವನ್ನೂ, ಹಂಚಿಕೊಳ್ಳಬೇಕು. ನಿನ್ನ ಸ್ನೆಹದಲ್ಲಿ ಸ್ವಚ್ಛತೆಯಿದೆ.. ನಿಜವಿದೆ.. ಅಮಾಯಕತೆಯಿದೆ..
Love is truth...... Love is eternal

ಉಸಿರು ಒಳಬರುತ್ತಿರುವಾಗ ನೀನು ನನ್ನೊಳಗೇ ಪ್ರವೇಶಿಸುತ್ತಿರುವ ಅನುಭವವಾಗಿ ಉದರ ಉಕ್ಕುತ್ತದೆ. ಶ್ವಾಸ ಹೊರಹೋಗುತ್ತಿದ್ದರೆ ನೀನು ನನ್ನನ್ನೇ ತೊರೆದು ಹೊರಟು ಹೋಗುತ್ತಿದ್ದೀಯಾ ಅನ್ನೋ ನೋವಿನಿಂದ ಹೊಟ್ಟೆ ನುಲಿಯುತ್ತದೆ. ಈ ಉಛ್ವಾಸ ನಿಶ್ವಾಸದಲ್ಲಿ ಕೂಡಾ ನೀನೇ ತುಂಬಿರುವೆ ಎನ್ನೋ ಆನಂದದಿಂದ ಗುಂಡಿಗೆ ತುಂಬಿ ಹೋಗುತ್ತದೆ.

ಇನ್ನು ಮೂರೇ ಮೂರು ದಿನ ಗೆಳತೀ.... ನೀನು ಹೊರಟು ಹೋಗುತ್ತೀಯಾ.....
ಯಾಚಿಸುವ ಹ್ರದಯವ ಬಿಟ್ಟು ದೂರ ದೂರ....
ಕನಸುಗಳ ಮೂಟೆಗಳನ್ನು.. ನೆನಪುಗಳ ಪುಟಗಳನ್ನು ನನ್ನ ಜೊತೆ ಬಿಟ್ಟು...
ಮುದುಡಿಕೊಂಡ ಬಯಕೆಗಳ ಪದರಗಳನ್ನು ಬಿಚ್ಚಿದರೆ.........
ಗುಲಾಬಿ ಕುಸುಮಗಳಂತೆ ಜಾರಿ ಹೋಗುತ್ತಿರುವ ಕನಸುಗಳನ್ನು ಆರಿಸಿಕೊಳ್ಳಲು ಬಾಗುತ್ತಿದ್ದರೆ....
ಸದೂರ ತೀರದಲ್ಲೆಲ್ಲೋ ನೀನು ನಿಂತು ನಕ್ಕ ಹಾಗೆ....
ಜಲತರಂಗಿಣಿ ವಾದ್ಯದಂತೆ ಇದ್ದ ಆ ಮಂದಹಾಸದ ಪ್ರಕಂಪನ ಜೀವನದ ನಿಘಂಟುವಿನಲ್ಲಿ ಪ್ರೀತಿಯ ಪದವನ್ನು ತೋರಿಸಿದ ಹಾಗೆ....

"ನೀನು ಚನ್ನಾಗಿರ್ತೀಯಾ ಬಿಡು" ಅನ್ನೋ ಮಾತು "ಏ ನಿನ್ನನ್ನು ಮರಿತೀನೇನೋ ನಾನು" ಅನ್ನೋ ಮಾತಿನಲ್ಲಿ ಯಾವ ಭಾವವಿತ್ತೋ ನಂಗೊತ್ತಿಲ್ಲ ಕಣೇ.... ಆದರೆ....
ಇಡೀ ಜೀವನದ ಗ್ರಂಥದಲ್ಲಿ ನನಗೆ ಕಾಣದಿದ್ದ ಪದವನ್ನು ನೀನು ಕೊನೆಯ ಪುಟದಲ್ಲಿ ತೋರಿಸಿದೆಯಲ್ಲಾ..... Thanks...

ಎಲ್ಲೋ ಗುರು ಹೇಳಿದ ನೆನಪು....
"ಜೀವನ- ಪ್ರವಾಹದಲ್ಲಿ ತೇಲುತ್ತಾ ಮುಳುಗುತ್ತಾ ಹೋಗುವ ತೆಂಗಿನಕಾಯಿ ಮೂಟೆಯಾಗಿರುವಾಗ...
ಸಂತೋಷ- ಪುಸ್ತಕದಲ್ಲಿ ಬಚ್ಚಿಟ್ಟುಕೊಂಡ ನವಿಲುಗರಿಯಾಗಿರುವಾಗ....
ಆತಱಗೀತಾಲಾಪನೆಯೊಂದಿಗೆ- ಆರು ಋತುಗಳೂ ಗ್ರೀಷ್ಮವಾಗಿರುವಾಗ.....
ಬದುಕುವದಕ್ಕಾಗಿ ನಾವು ಪ್ರತೀ ಕ್ಷಣ ಸಾಯಬೇಕಾಗಿ ಬಂದಾಗ........
ಓ ಗಂಗಾಧರಾ.... ಓ ವಿಶ್ವಂಭರಾ.....!!
ನನ್ನ ಆನಂದದ ಸಾಗರದಲ್ಲಿ ನೀರು ಹೇಗೂ ಇಲ್ಲಾ....
ಅಳುವುದಕ್ಕಾದರೂ ನನ್ನ ಕಣ್ಣುಗಳಲ್ಲಿ ನೀರು ಕೊಡು..

ವಿಷಾದವಾಗುವ ಪ್ರತೀ ಸೂಯಾಱಸ್ಥವೂ ಜೀವನದ ಡೈರಿಯಲ್ಲಿ ಒಂದು ಕೊಟೇಷನ್ನೇ...... ನಿಜ.
ಸಹಿಸಿಕೊಂಡು.. ತಾಳಿಕೊಂಡು.. ಹೊಸ ಬರುವಿಕೆಗೆ ಕಾಯುತ್ತಾ ಸಾಗಬೇಕು.. ಅದೂ ನಿಜ....
ಆದರೆ .. ತಡೆಯಬೇಡ ಗೆಳತಿ ಪ್ಲೀಸ್......
ಇದೊಂದು ಘಳಿಗೆ ಅತ್ತು ಬಿಡುವೆ......
ನನ್ನ ಕೊನೆಯ ಕಂಬನಿ ಇದು..

Sunday, May 16, 2010

ನನ್ನವಳಿಗೆ.....












ಏನೂ ಗೊತ್ತಾಗ್ತಾ ಇಲ್ಲಾ...... ಏನೂಂದ್ರೆ ಏನೂ ಗೊತ್ತಾಗ್ತಾ ಇಲ್ಲಾ .. ನನ್ನ ಕೊನೆಯ exam ನಲ್ಲಾದ್ರೂ ಇಷ್ಟು ಚನ್ನಾಗಿ ಪೇಪರ್ ಹಾಗೂ ಪೆನ್ನನ್ನು ರೆಡಿ ಮಾಡಿಕೊಂಡು ಬಂದು ಬರೆಯಲು ಕುಂತಿಲ್ಲಾ.... ಅಂಥಾದ್ದರಲ್ಲಿ ನಿನಗಾಗಿ.............
ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹ್ರದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ


You are lucky ಕಣೇ.... ಹಾಗಂತ ನೀನು ತಿಳ್ಕೊಂಡ್ರೆ I am very lucky. ನಿಂಗೊತ್ತಾ ಕಾಲೇಜ್ ಗೆ ನೀನು 1'st day ನೀನು enter ಆದ ದಿನ ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ..... ಸುಮಾಳಿದು. She is real beauty ಅಂತ ಅದೆಷ್ಟು ಜನರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ.... ನೀನೇನೂ ನನ್ನನ್ನೇ ಅಂತಾ ನೋಡಿಲ್ಲಾ ನಿಜ... ಸಹಜವಾಗಿ ನೋಡಿದರೂ ನನ್ ಮನಸು ಅದನ್ನ ಒಪ್ಪಿಕೊಳ್ಳೋಕೆ ತಯಾರಿಲ್ಲಾ.. ಇನ್ನೂ ನನಗಥಱವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು ಕುಳಿತುಬಿಟ್ಟೆಯಾ ಅಂತ......?

ಮೊದಲ ದಿನದಿಂದ್ಲೇ ನಿನ್ನನ್ನು ನೋಡ್ತಿದೀನಿ ಕಣೇ... ಗುಂಪಿನಲ್ಲಿ ಗೋವಿಂದ ಆಗ್ಬೇಕು ಅಂದ್ಕೋತೀಯಾ... ಆದರೆ ಕೋಹಿನೋರ್ ವಜ್ರದಂತಹ ಹೊಳೆವ ಕಳ್ಳಿ ನೀನು.. ಹ್ರದಯ ಕದ್ದು ತನಗೆ ಗೊತ್ತೇ ಇಲ್ಲಾ ಅನ್ನೋ ಥರಾ ಹೋಗ್ತಿರ್ತೀಯಾ... ನನ್ ಕಣ್ಣನ್ನು ಮಾತ್ರ ತಪ್ಪಿಸಿಕೊಂಡು ಹೋಗೋಕೆ ಆಗ್ಲೇ ಇಲ್ವಲ್ಲೇ......


ನೀನು ಎದುರಾದಾಗಲಲ್ಲೆಲ್ಲಾ... "ಕಳ್ಳಿ ನೀನು ಹ್ರದಯ ಕದ್ದಿದೀಯಾ" ಅನ್ಬೇಕು ಅಂದ್ಕೋತೀನಿ... ಇನ್ನೂ ವರೆಗೂ ಆಗ್ಲೇ ಇಲ್ಲಾ. ನನ್ನ ಹ್ರದಯವನ್ನು ನನಗೆ ಕೊಡ್ತೀಯೇನೋ ಅಂತಾ ಕಾಯ್ತಾನೇ ಇದೀನಿ.. ಕೊಟ್ಟಿಲ್ಲಾ ನೀನು... ಕೊಡೋಲ್ಲಾ ನೀನು ಪಾಪಿ.. ಕೊನೇ ಪಕ್ಷ "ಮರಳಿ ಕೊಡೋದಿಕ್ಕಾ ಹುಡುಗಾ ಕದ್ದಿದ್ದು" ಅಂತಾದ್ರೂ ಒಂದ್ಮಾತು ಹೇಳ್ಬಹುದಿತ್ತಲ್ಲಾ.... ಯಾಕೇ ಕಾಡಿಸ್ತೀಯಾ?..

ಆವತ್ತೊಂದು ದಿನ ಆ ಪುಡಿ ಬಣ್ಣದ ಪುಟ್ಟ ಚೂಡಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ನಡೆದು ಬಂದು ಅದೆಷ್ಟು ಮಧು ಮಧುರವಾಗಿ ದಿಟ್ಟಿಸಿದ್ದೆ.... ಆ ಚುಡಿಯ ಹೊಳೆವ ಝರಿಯಂಚು ನಿನ್ನ ಗೆಜ್ಜೆಗೆ ಸಿಕ್ಕಿ ನೀನು ಎಡವಿದಂತಾದಾಗ ನನಗೇ ಅರಿವಿಲ್ಲದಂತೆ ಎರಡೆಜ್ಜೆ ಮುಂದೆ ಬಂದು "ಏಯ್" ಅಂದಿದ್ದೆನಲ್ಲಾ.. ನೆನಪಿದ್ಯಾ? ಅದನ್ನು ಎಷ್ಟು ಚುರುಕಾಗಿ ಗಮನಿಸಿ ಮುಗುಳು ನಕ್ಕಿದ್ದೆಯಲ್ಲಾ..... ನನ್ನೆದೆಯನ್ನು ನಗಾರಿ ಮಾಡಿಸಿ.... ಪಾಪಿ... ಯಾಕೇ ಗೊತ್ತಾಗಿಲ್ಲಾ ನಿಂಗೆ ಇದು ಪ್ರೀತಿ ಅಂತಾ...

ಹೀಗೇ ದಿನಂ ಪ್ರತಿ ಏನೇನೋ ತೊಳಲಾಟಗಳ ನಡುವೆಯಲ್ಲೆಲ್ಲೋ ಅಂದ್ಕೊಂಡ್ಬಿಟ್ಟಿದೀನಿ.. ಇದು ಪ್ರೀತಿ ಅಂತಾ.... ಧೈಯಱ ಮಾಡಿ ಚಂದ ಚಂದಾಗಿ ಒಂದು ಪ್ರೇಮ ಪತ್ರ ಬರೆದು ಬಿಟ್ಟೆನಲ್ಲಾ.ಎಷ್ಟು ಕಸರತ್ತಿನಿಂದ.. ಬೆಳೆಗೆರೆ ಸಾಹಿತ್ಯ ಶೈಲಿ... ಭೈರಪ್ಪರ ತುಂಟು ಕಲ್ಪನೆ.... k.s. ರ ಪ್ರೇಮ ಕಾವ್ಯ ಧಾರೆ... ಎಲ್ಲಾ ಸೇರಿಸಿ ನಿನಗಾಗಿ ಒಂದು ಪ್ರೇಮ ಲಕೋಟೆ ಸಿದ್ದಪಡಿಸಿಬಿಟ್ಟೆನಲ್ಲಾ... ತಾಜಮಹಲಿನಷ್ಟು ಪ್ರೀತಿಯಿಂದ....

ಬೆಚ್ಚಗೆ ಪ್ರೀತಿಯಿಂದ ಲಕೋಟೆಯೊಳಗೆ ಮಡಿಸಿಟ್ಟ ಆ ಪತ್ರಾನಾ ನಿನ್ನ ಮಡಿಲಿಗೆ ಹಾಕಬೇಕಂತಾ ಆವತ್ತು exam ನ ಕೊನೆಯ ದಿನ ಎಷ್ಟೊತ್ತಿನಿಂದ ಕಾದು ಕುಳಿತಿದ್ದೆ ಗೊತ್ತಾ... ಕೊನೆಗೂ ನೀ ಒಬ್ಳೇ ಬಂದುಬಿಟ್ಟೆ... ನಿನಗೆ ಕೊಡಬೇಕೂಂತ ಅಂದುಕೊಳ್ಳುವಷ್ಟರಲ್ಲೇ ಕೈ ನಡುಗಿ... ಧೈಯಱ ಉಡುಗಿ... ಮಾತು ತೊದಲಿ... best of luck ಅಂತ ಮಾತ್ರ ಹೇಳಿ ವಾಪಸ್ ಬಂದುಬಿಟ್ಟೆನಲ್ಲಾ....
ಅಂದು ಕೈ ಜಾರಿದವಳು ನೀನು ಇನ್ನೂ ಸಿಕ್ಕೇ ಇಲ್ವಲ್ಲೇ.....
ನನ್ನ ಮನದ ಜಾತ್ರೆಯಲಿ ಸುಳಿದ ಜಾಜಿ ಕಣೇ ನೀನು....
ಒಂದು ಬಾರಿ ಬಂದುಬಿಡು ಚಿನ್ನಾ...
ಓಲೆ ಕೈಲಿಡಿದು ಕಾಯುತ್ತಿದ್ದೇನೆ......
ಹ್ರದಯ ತುಂಬೆಲ್ಲಾ ಕನಸ ಹೊತ್ತು.....
-------> ನಾನು ನಿನ್ನವನು.

Saturday, May 15, 2010

ಆಡಿಸುವಾತ ಬೇಸರ ಮೂಡಿ.....















ಬದುಕಿದರೆ ಬದುಕಬೇಕು ನೋವುಗಳೇ ಇಲ್ಲಾ ಅನ್ನೋ ಹಾಗೇ.......

--------------------------> ನಗೆಯ ಕಣ್ಣೀರಿನಲ್ಲಿ...............
ನಕ್ಕರೆ ನಗಬೇಕು ಹಿಂದೆಂದೂ ನಗಲೇ ಇಲ್ಲಾ ಅನ್ನೋ ಹಾಗೆ.........
--------------------------> ಹೊಟ್ಟೆ ಹುಣ್ಣಾಗುವವರೆಗೆ.........
ಪ್ರೀತಿಸಬೇಕು.....
ಸ್ನೇಹಿಸಬೇಕು....
ನಲಿಯಬೇಕು....
ನಲಿಸಬೇಕು.....
ಹಾಡಬೇಕು....
ಓಡಬೇಕು.....
ನಮಗೆ ನಾಳೆಗಳೇ ಇಲ್ಲಾ ಅನ್ನೋ ಹಾಗೆ....
ನಮ್ಮೋಂದಿಗೆ ಬದುಕಿಗೊಂದು ಬಾಂಧವ್ಯ ಬೆಳೆಯಬೇಕು....
ನಮ್ಮ ನಂತರವೂ ನಮ್ಮದೊಂದು ಛಾಯೆ ಉಳಿಯಬೇಕು...
........................................
................

ಬದುಕಿದರೆ ಬದುಕಬೇಕು ಆಡಿಸುವಾತನಿಗೆ
---------------------> ಬೇಸರ ಮೂಡದ ಹಾಗೆ..
ಆಟ ಮುಗಿಸಿದರೂ ಒಮ್ಮೆ ಮತ್ತೊಮ್ಮೆ.................
---------------------> ನೆನಪು ಕಾಡುವ ಹಾಗೆ...
---------------------> ಕನಸು ಮೂಡುವ ಹಾಗೆ.

********ರಾಘವ್..*******

Saturday, May 8, 2010

ಭಾವನೆಯೊಂದಿಗೆ......ಮುಸ್ಸಂಜೆಯ ಮಾತು....


ಒಂದು ಸುಂದರ ಮುಸ್ಸಂಜೆಯಲ್ಲಿ ನವಿರಾಗಿ ನಮ್ಮ ಮನಸಿನೊಂದಿಗೆ ಕನಸಿನೊಂದಿಗೆ ಭಾವನೆಗಳೊಂದಿಗೆ ನಮ್ಮೊಳಗೆ ನಾವೇ ಮಾತಾಗುವ ಬಯಕೆ..........

ಬಾನಿನ ಕೆಂಪು ಕೆಂಪು ಚಿತ್ತಾರದಲ್ಲಿ ಮಿಂದು ಬಾನೊಂದಿಗಿನ ಒಂದು ತುಂಡಾಗುವ ಬಯಕೆ........

ಬೆಳ್ಳಂಬೆಳಗಿನಿಂದ ಸಂಜೆ ಮುಸ್ಸಂಜೆಯವರೆಗೆ ಮಾಯ ಮಾಂತ್ರಿಕದಲ್ಲಿ ಬೆಂದ ಕೆಂಪು ಕೆಂಪಾದ ರವಿಯನ್ನಾ ಬೆಡ್ ಲ್ಯಾಂಪನ್ನಾಗಿರಿಸಿಕೊಳ್ಳೋ ಬಯಕೆ....
ದಿನದೊಂದಿಗಿನ ತಮ್ಮ ವ್ಯವಹಾರವನ್ನು ಮುಗಿಸಿ ಮನೆ ಮಡಿಲಲ್ಲೊಂದಾಗುವ ತವಕದಲ್ಲಿ ರವಿಯ ಮೂತಿಯ ಮುಂದೆಯೇ ಹಾರಿ ಹೋಗುವ ಹಕ್ಕಿ ಸಾಲುಗಳಲ್ಲಿ ಒಂದಾಗಿ ಕಾಣದ ತೀರಕ್ಕೆ ಹಾರಿ ಹೋಗುವ ಬಯಕೆ......

Wednesday, March 24, 2010

ನಿನ್ನ ನೆನಪಿಲ್ಲದೆಯೇ ಕಳೆಯಲೆಂತು....












ನಿನ್ನ ನೆನಪಿಲ್ಲದೆಯೇ
ಕಳೆಯಲೆಂತು....
ಭಾವನೆಯ ದಾಳಿಗಳ
ತಡೆಯಲೆಂತು.... ||

ಮೊದಲೆಲ್ಲ ನೆನಪಿಲ್ಲ
ಭಾವ ದಾಳಿಯೂ ಇಲ್ಲಾ..
ಹುರುಪು ಮಾಧುರ್ಯಗಳು..
ಇರಲೇ ಇಲ್ಲಾ
ಜೀವನಕುನ್ಮಾದಗತಿ
ಬರಲೇ ಇಲ್ಲಾ.. ||

ಕಾಲ ಸರಿಯಿತು ಮುಂದೆ
ಕಣ್ಮುಂದೆ ನೀ ಬಂದೆ..
ಮಧುರ ಸಂಬಂಧದ ನೆಪವ ಹಿಡಿದು..
ಕಲ್ಪಾಂತ ಮನದ ಪ್ರವಾಹ ತಡೆದು..
ಬಂದಿತ್ತು ಹಸಿ ಮನದ
ಹುಚ್ಚು ಹೊಳೆ ಹರಿದು
ಮನದ ಬೇಗೆಯ ಮೂಲವೆಲ್ಲ ಉರಿದು.. ||

ಈಗ ನೀನಿಲ್ಲ
ಉಳಿದಿರುವೆ ನಾನೊಬ್ಬ
ನಿನ್ನ ನೆನಪಿಲ್ಲದೆಯೇ ಕಳೆಯಲೆಂತು.....
ನಿನ್ನ ನೆನಪೊಂದೆ ನನಗೆಂದೂ ಹಬ್ಬ...
ಭಾವನೆಯ ದಾಳಿಗಳ
ತಡೆಯಲೆಂತು?.. ||
- ರಾಘವ..














ಜೀವನ ಅನುಭವಿಸಬಲ್ಲವರಾದರೆ ಅದೊಂದು ಸಿಹಿಯಾದ ಅನುಭವ.

ಸಮುದ್ರವನ್ನೂ, ಕತ್ತಲನ್ನೂ, ಕಣಿವೆಗಳನ್ನೂ ಮಹಾವಲಯಗಳನ್ನೂ ಭೆಧಿಸಿಕೊಂಡು
ಕ್ಷಿತಿರೆಖೆಯಿಂದ ಹೇಗೆ ಸೂರ್ಯಕಿರಣ ಪ್ರಭವಿಸುತ್ತದೋ ...
ವಿಷಾದಗಳನ್ನು, ವ್ಯಥೆಗಳನ್ನೂ ಸೀಳಿಕೊಂಡು ಕಿರುನಗೆ ಕೂಡಾ ಉದಯಿಸುತ್ತದೆ...
ಒಳ್ಳೆಯ ಗೆಳೆಯನಿದ್ದರೆ........
ಕೆಲವು ಮಧುರ ಸಂಬಂಧಗಳು ನೆನೆದ ಹಾಗೆಲ್ಲಾ ಖುಷಿ ಕೊಡುತ್ತವೆ.
ಸ್ವೀಟ್ ಮೇಮೊರೀಸ್ ಎನ್ನುತ್ತಾರಲ್ಲಾ ಹಾಗೆ.. ಅದರಲ್ಲೇ ಖಾಯಂ ಉಳಿದಿರುತ್ವೆ.
ಎಲ್ಲಾ ಸಂಬಂಧಗಳಿಗೂ ನಾವು ಆತ್ಮೀಯ ಸಂಬಂಧ ಎನ್ನಲಾಗುವುದಿಲ್ಲ. ಆತ್ಮೀಯ ಸಂಬಂಧ
ಎಂಬುದೊಂದಿದ್ದರೆ ಅದು ಒಬ್ಬರನ್ನೊಬ್ಬರು ಗೌರವಿಸುತ್ತದೆ, ಇಷ್ಟಪಡುತ್ತದೆ, ಜಗಳ ಕಾಯುತ್ತದೆ,
ಮುನಿಸಿಕೊಳ್ಳುತ್ತದೆ, ಹರಟೆ ಕೊಚ್ಚುತ್ತದೆ, ನಗಿಸುತ್ತದೆ, ನಲಿಸುತ್ತದೆ, ಏನನ್ನು ಬೇಕಾದರೂ ನಿಸ್ಸಂಕೋಚವಾಗಿ ನುಡಿಸುತ್ತದೆ... ಅಥವಾ ಇದ್ಯಾವುದನ್ನೂ ಮಾಡುವುದಿಲ್ಲ.. ಅದೊಂದು ಮಲ್ಲಿಗೆಯ ಸುವಾಸನೆಯಂತೆ ಬದುಕಿದ್ದಷ್ಟೂ ಕಾಲ ಪರಿಮಳ ಬೀರುತ್ತಲೇ ಇರುತ್ತದೆ..... ನೀವೇನಂತೀರಿ?














ಒಂದೊಂದು ಭಾವವನ್ನು ಮನಸ್ಸಿನಿಂದ ಕಾಗದದ ಮೇಲೆ ಇಳಿಸಲು ಕೆಲವೊಮ್ಮೆ ಎಷ್ಟು ಕಷ್ಟ ಅನುಭವಿಸಿ ಬಿಡ್ತೇವೆ...
ಹೌದು ನನ್ನ ಕುಂಚವನ್ನು -ಸಪ್ತ ವರ್ಣಗಳನ್ನು ಸ್ನೇಹದಿಂದ ಮಾತಾಡಿಸುವ ನನ್ನ ಕುಂಚವನ್ನು..,
ಮೇಘಗಳ ಅಡಿ ಹೊಟ್ಟೆಯಲ್ಲಿ ಮಲಗಿರುವ ಚಂದಮಾಮನ ಕೆನ್ನೆಗಳ ಮೇಲಿಂದ ಗುಲಾಬಿ ಬಣ್ಣವನ್ನು..,
ಕೆರೆಗಳಲ್ಲಿಯೂ, ತೊರೆಗಳಲ್ಲಿಯೂ, ನದಿಗಳಲ್ಲಿಯೂ ನೀರಿನ ಕೆನ್ನೆಗಳನ್ನು ತಾಕುತ್ತಾ ವಯ್ಯಾರದಿಂದ ಸಾಗಿ ಹೋಗುವ, ಮೀನಿನ ಮರಿಗಳ ಕಣ್ಣಿನಿಂದ ನೀಲಿ ಬಣ್ಣವನ್ನೂ ..,
ಬೆರಳ ತುದಿಗಳ ಮೇಲೆ ನಿಂತು ಎರಡು ನಕ್ಷತ್ರಗಳು ಮುತ್ತಿಡುವ ವೇಳೆಯಲ್ಲಿ ಚೆದುರಿದ ಕತ್ತಲಿನ ಕಪ್ಪನ್ನೂ ...,
ರಂಗೋಲಿಗೆ ಅರಿಶಿನ ಕುಂಕುಮವನ್ನದ್ದಿದ ಸೇವಂತಿಗೆಯ ಕೆನ್ನೆಗಳ ಕೆಂಪನ್ನು ಸೂರ್ಯನಿಗಿಂತ ಮುಂಚೆಯೇ ನೋಡಿ ಹಿಡಿದುಕೊಂಡು, ಅದರಿಂದ ಕೆಂಪು ಹಳದಿಯನ್ನೂ ತೆಗೆದುಕೊಳ್ಳುವ ನನ್ನ ಕಾವ್ಯ ಕುಸುಮದ ಮಂಜರಿ..... ನನ್ನ ಹ್ರದಯದಲ್ಲಿ ನನಗೇ ಗೋಚರಿಸುವ ಮಿಂಚು...
ಆದರೂ ಕೂಡ ಇಡೀ ರಾತ್ರಿಯಲ್ಲ ಜಾರಿಬಿದ್ದ ಮಲ್ಲಿಗೆಯ ಹೂಗಳನ್ನು ಅದರ ಗಂಧವನ್ನು ಬೆಳಗ್ಗಿನ ಜಾವ ಒಂದೇ ಬಾರಿ ಆಸ್ವಾದಿಸಬೇಕೆಂದರೆ ಕಷ್ಟ ತಾನೇ? ....
- ರಾಘವ