ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, September 28, 2010

ಪ್ರೀತಿಸಿ.... ಎಲ್ಲವನ್ನೂ ಪ್ರೀತಿಸಿ..... ಎಲ್ಲರನ್ನೂ ಪ್ರೀತಿಸಿ.... ಆದರೆ ಏನನ್ನೂ ನಿರೀಕ್ಷಿಸಬೇಡಿ......

  ಗೆಳೆಯಾ ನೀನಂದ ಮಾತು ಈಗ ನೆನಪಾಗುತ್ತಿದೆ. ಪ್ರೀತಿ ಮಾಡುವಾಗ ಎಲ್ಲರೂ ಕೂಡಾ ತಮ್ಮದು ನಿಷ್ಕಲ್ಮಷ ಪ್ರೀತಿ ಅಂತಲೇ ಅಂದುಕೊಂಡಿರುತ್ತಾರೆ.... ಆದರೆ ಪ್ರೀತಿ ಹಳಸುವುದೆಲ್ಲಿ ಅಂತಲೇ ಗೊತ್ತಾಗುವುದಿಲ್ಲ. ನೀನೊಂದು ದಿನ ಬೇಸರದಲ್ಲಿ ಅಂದಿದ್ದೆಯಲ್ಲಾ.... ಒಂದು ವರ್ಷದ ಹಿಂದಿನ ಯಾವ feeling ಕೂಡಾ ಈಗ ನನ್ನಲ್ಲಿ ಬರ್ತಾ ಇಲ್ಲಾ ಅಂತಾ.... ಮೊದಲೆಲ್ಲಾ ಈ love ಅಂದರೆ ಎಷ್ಟು craze ಇತ್ತು ಆದರೆ ಈಗ ಅದಸೆಲ್ಲಾ ಡೊಂಬರಾಟ ಅನ್ನಿಸ್ತಾ ಇದೆ ಅಂತಾ.... ಯಾಕೆ ಹೀಗೆ ಅಂತಾ ನನ್ನಲ್ಲೂ ಉತ್ತರ ಇರಲಿಲ್ಲ... ಯಾಕೆಂದರೆ ಒಬ್ಬರನ್ನು ಅಲ್ಲಾ ಎಲ್ಲರನ್ನೂ ಪ್ರೀತಿಸಿದವ ನಾನು... ನನ್ನ ಹ್ರದಯದಲ್ಲಿ ಪ್ರೀತಿಗೆ ನಾನು ನನ್ನದೇ ಆದ ಕೊಟೇಶನ್ನುಗಳನ್ನು ಡೆಫಿನೇಶನ್ನುಗಳನ್ನು ಕೊಟ್ಟುಕೊಂಡವನು ನಾನು..
ಆಕಾಶದ ಯಾವುದೋ ಕರಿಮುಗಿಲ ಒಡಲಲ್ಲಿರೋ ಮಳೆ ಹನಿ, ಇನ್ನು ನಾನು ತಡೆದುಕೊಳ್ಳಲಾರೆ ಪ್ರಾಣ ಹೋದರೂ ಚಿಂತೆಯಿಲ್ಲ ಎಂಬಂತೆ ಹಾರಿ ಭುಮಿಯ ಮೇಲೆ ಬಿದ್ದು ಖುಷಿಯಿಂದ ಭೂಮಿಯ ಮೇಲೆ ಹರಿಯುತ್ತದಲ್ಲಾ.... ಅದು ಪ್ರೀತಿ......
         ಯಾವುದೋ ವಸಂತದಲ್ಲಿ ಮಾವು ತನ್ನ ಒಡಲಲ್ಲಿ ಕೋಗಿಲೆ ಒಂದು ಗೂಡು ಕಟ್ಟಿ  ಮರಿ ಇಟ್ಟು ತನ್ನ ಚಿಗುರುಗಳನ್ನು ತಿಂದು ಖುಷಿಯಿಂದ ಹಾಡಿ... ಯಾವಾಗಲೋ ಹಾರಿ ಹೋದರೂ, ಮತ್ತೆ ಅದು ಬಂದೀತೆಂಬ ಭಾವದಿಂದ ಪ್ರತೀ ವಸಂತದಲ್ಲೂ ಚಿಗುರು ಬಿಟ್ಟು ಎದುರು ನೋಡುತ್ತದಲ್ಲಾ..... ಅದು ಪ್ರೀತಿ ಎಂದರೆ...
         ಯಾರದೋ ಮದುವೆಯಲ್ಲಿ ಕೊಟ್ಟ ಸಿಹಿಯನ್ನು ಮುಷ್ಟಿಯಲ್ಲಿ ಹಿಡಿದು ಮನೆಗೆ ತಂದು ಮನೆಯೆದುರಿನ ಜಾಜಿಯ ಗಿಡಕ್ಕೆ ಬರುವ ಪುಟ್ಟ ಗುಬ್ಬಿಯ ಮರಿಗೆ ಕೊಟ್ಟು ಆನಂದದಿಂದ ಕೇಕೆ ಹಾಕುತ್ತದಲ್ಲಾ ಆ ಮುಗ್ಧ ಮಗು.... ಅದು ಪ್ರೀತಿ ಎಂದರೆ......
          ತನ್ನ ನೋಡಲಿಕ್ಕೆಂದೇ ಸೂರ್ಯ ಪ್ರತಿದಿನ ಉದಯಿಸುತ್ತಾನೆಂದು, ಸೂರ್ಯಕಾಂತಿ ಬೆಳಗಿನಿಂದ ಅವನೆಡೆಗೆ ಮುಖಮಾಡಿ, ಅವನು ಯಾವ ಕಡೆಗೆ ಹೋದರೂ ಅವನನ್ನು ಮಾತ್ರ ನೋಡಿ, ಸಂಜೆ ಅವನು ಮುಳುಗಿದ ಮೇಲೆ ಅವನನ್ನು ನೋಡುವ ಈ ಕಣ್ಣು ಮತ್ಯಾರನ್ನೂ ನೋಡದಿರಲೀ ಅಂತಾ ತಲೆತಗ್ಗಿಸಿ ಮರುದಿನ ಬೆಳಗಿನ ವರೆಗೆ ತಲೆತಗ್ಗಿಸಿ ಮುಖ ಮುಚ್ಚಿ ನಿಂತುಬಿಡುತ್ತದಲ್ಲಾ ... ಅದು ಪ್ರೀತಿ ಎಂದರೆ....
          ಬೆಳ್ಳಂಬೆಳಿಗ್ಗೆಯೇ ಬರುವ ದುಂಬಿಗೋಸ್ಕರ ಮಲ್ಲಿಗೆಯು ನಾಚಿಕೆಯಿಂದ ಅಷ್ಟ  ಅಷ್ಟಷ್ಟಾಗಿ  ಅರಳಿ ಮಕರಂದ ನೀಡಿ  ಅದೇ ನೆನಪಲ್ಲಿ ದಿನಪೂರ್ತಿ  ನಿಂತು ಸಂಜೆಯಾಗುತ್ತಲೇ ಬಾಡಿ ಪರಿಶುಧ್ಧ ಪತಿವ್ರತೆಯಾಗಿ ತನ್ನ ಪ್ರಾಣ ಬಿಡುತ್ತದಲ್ಲಾ..... ಅದು ಪ್ರೀತಿ ಎಂದರೆ.....
            ಹೀಗೇ ಏನೇನೋ ಮಧುರವಾಗಿ ಕಲ್ಪಿಸಿಕೊಂಡಿದ್ದೇನೆ.... ಯಾವುದರಲ್ಲೂ ಕೂಡಾ ನಾನು ಪ್ರೀತಿ ಹಳಸುವುದನ್ನು ಕಲ್ಪಿಸಿಕೊಂಡೇ ಇಲ್ಲಾ.... ಅದಕ್ಕೇ ಅಂದು ನಿನಗೆ ಉತ್ತರ ಹೇಳುವುದು ಕಷ್ಟವಾಯಿತೇನೋ.....
ಆವತ್ತು ನೀನೊಂದು ಮಾತಂದೆ ನೆನಪಿದೆಯಾ? " ಈ ಪ್ರೀತಿಗೂ ಒಂದು ಕಾರಣವಿತ್ತು" ಅಂತಾ.. ಅಸಲಿಗೆ ಈ ಮಾತೇ ನನ್ನಲ್ಲಿ ನಾನು ಕಲ್ಪಿಸಿಕೊಂಡ ಪ್ರೀತಿ ಎನ್ನುವ ಭಾವನೆಗೆ ಅಸಂಬದ್ಧ.... ಯಾಕೆಂದರೆ ಯಾವುದೋ  ಒಂದು ಕಾರಣದಿಂದ ಬರುವ ಪ್ರೀತಿಯನ್ನು ನಾನು ಅಷ್ಟಾಗಿ ನಂಬುವುದಿಲ್ಲ..... ಯಾಕೋ ನಾನು ಹಾಗೇ... ಕಲ್ಪಿಸಿಕೊಂಡಿದ್ದೇನೆ... ಕಾರಣದಿಂದ ಬರುವ ಪ್ರೀತಿ "ಆ ಕಾರಣ" ಎನ್ನುವುದು ಇಲ್ಲವಾದ ಮೇಲೆ ನಮ್ಮನ್ನು ತೊರೆದು ದೂರಾಗಿಬಿಡಬಹುದು...  ದ್ವೇಷಕ್ಕಾದರೆ ಅದು ಒಂದು ಕಾರಣವಿಟ್ಟುಕೊಂಡಿರುತ್ತೆ.... ಆದರೆ ಪ್ರೀತಿಗೆ ನಮಗೆ ಕಾರಣವ್ಯಾಕೆ ಬೇಕು..? ಪ್ರೀತಿ ಎಂದರೆ ಅದು ಗಂಗೆಯಿದ್ದಂತೆ.. ತನ್ನಿಂತಾನೆ ಅದು ನೀರಾಗಿ, ಝರಿಯಾಗಿ,ನದಿಯಾಗಿ ಹರಿಯಬೇಕು.  ಗಂಗೆಯ ಹರಿವಿಗೆ ಕಾರಣ ನೀಡಲಾದೀತೇ? ಅಕಾರಣವಾಗಿ ಹುಟ್ಟಿದ ಪ್ರೀತಿಗೆ ಪ್ರಬಲತೆ ಹೆಚ್ಚು. ಅದು ಹ್ರದಯದಲ್ಲಿ ತನ್ನಿಂತಾನೇ ಹುಟ್ಟಬೇಕು.
ನನ್ನಲ್ಲಿನ ಯಾವ ಪ್ರೀತಿಗೂ ಕಾರಣವಿರಲಿಲ್ಲ.ಕಾರಣಾನ ನಾನು ಹುಡುಕಲೂ ಇಲ್ಲ. ಅದಕ್ಕೇ ಇರಬೇಕು ಪ್ರೀತಿಗೂ ಒಂದು ಕಾರಣವಿತ್ತು ಅಂತ ನಾನು ಕೇಳಿದಾಗಲೆಲ್ಲಾ ತಳಮಳವಾಗ್ತೇನೆ..... 
ಪ್ರೀತಿಸಿ.... ಎಲ್ಲವನ್ನೂ ಪ್ರೀತಿಸಿ..... ಎಲ್ಲರನ್ನೂ ಪ್ರೀತಿಸಿ.... 
ಆದರೆ ಏನನ್ನೂ ನಿರೀಕ್ಷಿಸಬೇಡಿ......

Monday, September 27, 2010

ಒಲ್ಲದ ಅಥಿತಿಯ ಕೊರಳಿಗೆ ದನಿಯಾಗಿ........

ಅಂದು ನಿನ್ನ ಸುಳಿಯಲ್ಲಿ ಬಿದ್ದಾಗ ನನ್ನೊಳಗೆ ನಾನು ಅಂದುಕೊಂಡಿದ್ದೆ. ಓಹ್...!! ಜಾರಿಬಿದ್ದಿರಬೇಕು, ಅದು ಆಕಸ್ಮಿಕ ಎಂದು. ಹೂಂ.. ಆಮೇಲೆ ತಾನೇ ಗೊತ್ತಾಗಿದ್ದು.. ಆಕಸ್ಮಿಕ ಸುಳಿಯಲ್ಲಿ ಉದ್ದೇಶಪೂವಱಕವಾಗಿಯೇ ಕಾಲು ಜಾರಿಸಿಕೊಂಡಿದ್ದೇನೆ ಅಂತ. ಎಷ್ಟು ಕಾಲ ಆ ಸುಳಿಯಲ್ಲಿ ತಿರುಗಿದ್ದೇನೋ.... ಇನ್ನೂ ಕೂಡಾ.. ಆದರೆ ನಿನ್ನ ಸುಳಿಯಲ್ಲಿ ನಾನು ಬಿದ್ದಿದ್ದೇನೆ ಅಂತ ನಿನಗೆ ಗೊತ್ತಾಗಲು ಮೂರು ವರ್ಷ  ಬೇಕಾಯಿತಾ? ಸೆಳೆತದ ಸುಳಿಯಲ್ಲಿ ಬೀಳೋಕೆ ಕಾರಣ ಬೇಕಿಲ್ಲಾ... ಕಾರಣವಿದ್ದೋ ಇಲ್ಲದೆಯೋ.. ಅಕಾರಣವಾಗಿ ಕೂಡಾ ಅದು ತನ್ನೆಡೆಗೆ ಎಳೆದುಕೊಂಡುಬಿಡುತ್ತೆ. ಆದರೆ ಅದರ ಒಲವಲ್ಲಿ ಬೀಳಿಸಿಕೊಳ್ಳೊಕೆ ಅದು ಒಂದು ಕಾರಣ ಹುಡುಕುತ್ತದಂತೆ.... ಆದರೆ ನಮ್ಮೀ ಒಲವಿಗೆ ಕಾರಣವೇನಿತ್ತು ಗೆಳತೀ...?
ಏನೋ ಇದ್ದಿರಬೇಕು... ಅದು ಏನು ಅಂತಾ ನಿನಗೆ ಗೊತ್ತಾಗಿತ್ತಾ? ಒಂದಿಡೀ ವರ್ಷ  ನಾನು ನಿನ್ನೆದುರಿಗೇ ಓಡಾಡಿಕೊಂಡಿದ್ದಾಗ ಸಿಗದಿದ್ದ ಕಾರಣ ಅಖಂಡ ಮೂರು ವರ್ಷ  ದೂರವಾಗಿದ್ದಾಗೆಲ್ಲಿ ಸಿಕ್ಕಿತು ನಿನಗೆ..? ಆ ಒಂದಿಡೀ ವರುಷ ನನ್ನ ನೋಡಿದ್ದೆಯಲ್ಲಾ... nice guy ಅಂತಷ್ಟೇ ಅನಿಸಿದ್ದಾ ನಿನಗೆ..? ಇಲ್ಲಾ ನನ್ನೆದುರಿಗೆ ಮಾತ್ರ ಹಾಗಂದೆಯೋ... ಹೂಂ.. ನಂಗೊತ್ತು.. ಆ ಒಂದು ವರುಷದ ನಂತರವೇ ನೀನು ಜೀವನದ ಎಷ್ಟೋ ಮುಖಗಳನ್ನ ನೋಡಿದ್ದೀಯಾ... ಎಷ್ಟೋ ಸವಾಲುಗಳಿಗೆ ಉತ್ತರವಾಗಿದ್ದೀಯಾ.... ನುಂಗಲಾರದ ವಾಸ್ತವಿಕತೆಯನ್ನು ಒಪ್ಪಿಕೊಂಡಿದ್ದೀಯಾ ಅಂತ... ಆದರೂ ಮೂರು ವರುಷಗಳ ನಂತರದ ಹರಿವಿಗೆ ಕಾರಣವೇನಿತ್ತು...?
ಮೊದಲ ಮಾತೇ ಫೋನಿನಲ್ಲಿ... ನಾನು ಯಾರಂತ ಗೊತ್ತಿಲ್ಲದೇನೇ ನನ್ನೆಡೆಗೆ ಹರಿದ ಜೀವನದಿ ನೀನು.ನಾನು ನಾನೇ ಅಂತಾ ಗೊತ್ತಾಗುವ ಮೊದಲು ಎಂತಹ ಮಜವಾಗಿತ್ತು ನಮ್ಮ ಮಾತುಗಳು ಅಲ್ವಾ?.. ಕೋಪಗಳು,ಸಿಡುಕುಗಳು,ಹಾಗೇ ಸುಮ್ಮನೆ ಆಡಿದ ಮಾತುಗಳು,ಅನವಶ್ಯಕ ಪ್ರಶ್ನೆಗಳು,ಹುಸಿಮುನಿಸು.... ನಿನಗೆ ಮೊದಲ ಮೆಸೇಜನ್ನಿತ್ತು ಅದಕ್ಕೆ ನಾನು ನೀಡಿದ ಕಾರಣವೇ ಹೊಸದಾಗಿತ್ತು ಅಲ್ವಾ?.. ನಿಂಗೂ ಇಷ್ಟವಾಗಿದ್ದು... ಆಡಿದ ನಾಟಕದ ಗಮ್ಮತ್ತು ಗೊತ್ತಾಗಿದ್ದು ಆವಾಗಲೇ ಇರಬೇಕು..
 ನೆನಪಿದೆಯಾ ನೀನೊಂದು ನನಗೆ job offer ನೀಡಿದ್ದು..? ಟೆಲಿಫೋನ್ ಟವರ್ ಮೇಲೆ ಕೂತು ಕಾಗೆ ಓಡಿಸೋದು, monthly 40000/- ರೂಪಾಯಿ salary.. ಅದಕ್ಕೆ ಉತ್ತರವಾಗಿ ನಾನು "ನೀನೂ ಬಂದ್ಬಿಡು share ಮಾಡ್ಕೊಳ್ಳೋಣ ಅದನ್ನ  ಟವರ್ ಮೇಲೆ ಯಾರೂ ಇರಲ್ಲಾ ಇಬ್ರೇ ಆರಾಮಾಗಿ ಓಡಿಸಬಹುದು ಅಂದಿದ್ದು... ಹುಸಿಮುನಿಸಿನಿಂದ ನನ್ ಬೈಕೊಂಡಿದ್ದು... ಆವಾಗ್ಲೇ ನಿಂಗೂ ಅರ್ಥ ಆಗಿತ್ತಲ್ವಾ.. ಒಂದು ಮಾತೂ ಕೂಡಾ ಆಡದೇ ಎಷ್ಟು ಸತಾಯಿಸಿಬಿಟ್ಟೆ.. ನನ್ನೆಡೆಯ ನಿನ್ನ ಸಮ್ಮತಿಯ ಓಂಕಾರವನ್ನು  ಯಾವತ್ತೋ  ನಾನರಿತಿದ್ದೆ ಗೆಳತೀ.. ಆದರೇ ಒಂದೇ ಒಂದು ನಿನ್ನ ಮಾತಿಗೋಸ್ಕರ ನಾನು ಎದುರು ನೋಡಿದ್ದು...
ನಿನಗೆ ನನ್ನ ಮನಸ್ಸು ಎಷ್ಟರ್ಥವಾಗಿತ್ತು ಅಂದರೆ ನಾನು ನೇರವಾಗಿ ನಿನಗೆ I LOVE YOU  ಅಂತ ಅನ್ನಲು ಧೈರ್ಯ ಬರುವಷ್ಟು... ನಿನಗೂ ಮನಸ್ಸಿತ್ತು....ನನಗಿನ್ನು ಕೇಳಬೇಕಾ...? ನಿನಗಾಗಿಯೇ ತುಡಿದ ಹ್ರದಯ ಇದು... ಆದರೂ ನನ್ನನ್ನು ಇಲ್ಲಿಯೇ ಕಾಯಲು ಬಿಟ್ಟು ನಿನಗಿಷ್ಟವಿಲ್ಲದ ಲೋಕಕ್ಕೆ ಅರಗಿನ ಅರಮನೆಯಾಗಿಬಿಟ್ಟೆಯಲ್ಲೇ..... ಯಾಕಾಗಿತ್ತು ಇದೆಲ್ಲಾ?
ನೀನು ಗೆಜ್ಜೆಯಾದರೆ ನಾನು ದನಿಯಾಗ್ತೀನಿ... ನನ್ನ ಸಾಹಿತ್ಯಕ್ಕೆ ನೀನು ಸಂಗೀತವಾಗ್ತೀಯಾ....
ನೀನು ಹ್ರದಯವಾದರೆ ನಾನು ಜೀವವಾಗ್ತೀನಿ..... ನಾನು ಜೀವವಾದರೆ ನೀನು ಭಾವವಾಗ್ತೀಯಾ....
ನೀನು ಹಣತೆಯಾದರೆ ನಾನು ಅದನ್ನ ಬೆಳಗಿಸೋ ಪ್ರಕಾಶವಾಗ್ತೀನಿ... ನನ್ನ ಬೇಸರಕ್ಕೆ ನೀನು ಸಂತೈಸೋ ಅಮ್ಮನಾಗ್ತೀಯಾ....... ಹೆಜ್ಜೆಗೆ ಹೆಜ್ಜೆಯಾಗಿ.. ಉಸಿರಿಗೆ ಉಸಿರಾಗೋ ನಂಬಿಕೆಯಿತ್ತಲ್ಲವೇ ನಿನಗೆ.. ಆದರೂ ಹೊರಟೇ ಹೋದೆಯಲ್ಲಾ ಕಣ್ಣಿನಲ್ಲಿ ಭಾರವಾದ ಕನಸನಿಟ್ಟು... ನೆನಪುಗಳನ್ನು ಮಾತ್ರ ನನಗೆ ಕೊಟ್ಟು....
ಹೋಗುವ ಕಾರಣವನ್ನಾದರೂ ಹೇಳಬಾರದಿತ್ತೇ....?....ನಿನ್ನ ನಲುಮೆಯ ಲೋಕಕ್ಕೆ ನಾನು ಕಾಲಿಟ್ಟಾಗಿನಿಂದ ನಿನ್ನನ್ನು ಯಾವುದಕ್ಕೂ ಕಾರಣ ಕೇಳಲಿಲ್ಲ..... ಎಲ್ಲವನ್ನೂ ನಿನ್ನ ಕಣ್ಣ ಕೊನೆಯ ಹನಿಯೋ.. ಕಾಡಿಗೆಯ ಕಪ್ಪೋ... ರೆಪ್ಪೆಯ ಹಿಂದೆ ಮೌನವಾಗಿ ಅಡಗಿ ಕುಳಿತಿರುವ ಭಾವಗಳೋ.. ಉತ್ತರ ನೀಡುತ್ತಿದ್ದವು.....ಆದರೆ ಇದೊಂದು ವಿಷಯಕ್ಕೆ ಮಾತ್ರ ನನಗೆ ಕಾರಣವೇ ಗೊತ್ತಾಗಿಲ್ಲವಲ್ಲೇ.....ಆ ನಿನ್ನ ಕಪ್ಪು ಕಪ್ಪನೆಯ ಜೋಡಿ ಕಣ್ಣುಗಳ ಆಳದಲ್ಲೆಲ್ಲಾದರೂ ಭಾವನೆಯ ಅಲೆಗಳು ಸುಳಿದು ಕಾರಣ ನೀಡುತ್ತಾವೆಂದುಕೊಂಡರೆ.... ಆ ಅವಕಾಶವನ್ನೂ ಕೊಡದೇ ಹೊರಟು ಬಿಟ್ಟೆಯಲ್ಲಾ......
ಈಗ ನಿನ್ನನ್ನು ಹುಡುಕೋಕೆ ಅಂಜನವನ್ನೇನೂ ಹಾಕಬೇಕಾಗಿಲ್ಲಾ ಗೆಳತೀ...... ಆದರೆ  ಒಲ್ಲದ ಅತಿಥಿಯ ಕೊರಳಿಗೆ ದನಿಯಾಗಿ ಹೋದೆಯಲ್ಲಾ.. ಅದಕ್ಕೆ ಕಾರಣ ಹುಡುಕೋಕೆ ಅಂಜನ ಮುಂದಿಟ್ಟು ಕುಳಿತಿದ್ದೇನೆ. ಬಗ್ಗಿ ನೋಡಿದರೆ ಅಂಜನದ ಪಾತ್ರೆಯ ತುಂಬಾ ನನ್ನ ಮುಖವೇ ತುಂಬಿ ಮತ್ತೆ ಬೇಸರದ ಕುಡಿಕೆಯಾಗಿಬಿಡ್ತೀನಿ... ಅಂಜನದ ಪಾತ್ರೆಯಲ್ಲಿ ಕಾರಣ ಹುಡುಕೋಕೆ ಬಗ್ಗಿದಾಗಲೆಲ್ಲಾ ಹನಿ ಹನಿ ಕಣ್ಣೀರು ಬಿತ್ತಿದೀನಿ... ಬಿತ್ತಿದ ಹನಿಗಳೆಲ್ಲಾ ಬತ್ತಿ ಹೋಗಿದಾವೋ ಏನೋ.. ಕಾರಣ ಸಿಗದೆ... ಇನ್ನೂ ಮರಳಿಲ್ಲ.
ನೆನಪುಗಳ ಜೊತೆಗೂಡಿ...... ಕಾಯುತ್ತಲೇ ಇದ್ದೇನೆ..........

Monday, September 20, 2010

ನಾನೂ ಕೂಡಾ ಕೆಟ್ಟ ಹುಡುಗ...

ಬದುಕು ಎನ್ನುವುದು ಒಂದು ಮಹಾ ಸತ್ಯವನ್ನು ಹುಟ್ಟು ಹಾಕುವ ಕಮಱಗಾರವಂತೆ. ನಿನ್ನೆ ನಿನ್ನೆಯವೆರೆಗೆ ನನ್ನಲ್ಲಿ, ನಾನು ಒಬ್ಬ ಒಳ್ಳೆಯ ಹುಡುಗ ಅನ್ನೋ ಭಾವನೆಯಿತ್ತು. ಅಂದುಕೊಂಡಂತೆ ಯಾವ ತಪ್ಪನ್ನೂ ಮಾಡಿಲ್ಲ. ಆದರೆ ಕಮಱಗಾರದಲ್ಲಿ ಹೊಸ ಸತ್ಯವೊಂದು ನಿನ್ನೆ ತಾನೇ ಜನಿಸಿ ನಿಂತಿದೆ....
ಅದೇ.... ನಾನೊಬ್ಬ ಕೆಟ್ಟ ಹುಡುಗ.
ಬಡವನಿಗೆ ಹತ್ತು ರೂಪಾಯಿಯನ್ನು ಕೊಟ್ಟು ಖುಷಿಯನ್ನನುಭವಿಸುವಾಗ ಅಂದುಕೊಂಡಿದ್ದೆ...  ನಾನೊಬ್ಬ ಒಳ್ಳೆ ಹುಡುಗ.....
ಸ್ವಂತ ತಂಗಿಗೆ ಒಂದು ಅಂಗಿಯನ್ನೂ ತಂದುಕೊಡದೇ hurt ಮಾಡಿದಾಗ ನಾನ್ಯಾಕೊಂದು ಬಾರಿ ಕೂಡಾ ಅಂದುಕೊಂಡಿಲ್ಲ... ನಾನೊಬ್ಬ ಕೆಟ್ಟ ಹುಡುಗ ಎಂದು .......
ಯಾವುದೋ ರಸ್ತೆ ಬದಿಯ ತೊಟ್ಟಿಯ ಕಸ ಆಯ್ದುಕೊಳ್ಳುವ ಹೆಂಗಸಿಗೆ ಹೊರೆಯನ್ನು ಎತ್ತುವಾಗ ನಾನೊಬ್ಬ ಒಳ್ಳೆಯ ಹುಡುಗನೆಂದುಕೊಂಡ ನನಗೆ ಅಮ್ಮ ಒಂದು ಹುಲ್ಲಿನ ಹೊರೆಯನ್ನು ಹೊತ್ತು ತಾ ಅಂದರೂ ಬರಿಗೈಯಲ್ಲಿ ಬರುವಾಗ ನಾನ್ಯಾಕಂದುಕೊಳ್ಳಲಿಲ್ಲ... ನಾನೊಬ್ಬ ಕೆಟ್ಟ ಹುಡುಗ ಎಂದು....
ಬಸ್ಸಿನಲ್ಲಿ ಹೋಗುವಾಗ ಅಳುತ್ತಿದ್ದ ಯಾವುದೋ  ಅಪರಿಚಿತ ಮಗುವಿಗೆ ಚಾಕೋಲೇಟ್ ಕೊಟ್ಟು ಕೆನ್ನೆ ಹಿಂಡಿದಾಗ ನಾನೊಬ್ಬ ಒಳ್ಳೆ ಹುಡುಗನೆಂದು ಅಂದುಕೊಂಡ ನನಗೆ, ನನ್ನದೇ ಅಕ್ಕನ ಪುಟ್ಟ ಮಗಳ ಮನೆಗೆ ಬರಿಗೈಯಲ್ಲಿ ಹೋದಾಗ ಯಾಕನಿಸಲಿಲ್ಲ ನಾನೊಬ್ಬ ಕೆಟ್ಟ ಹುಡುಗನೆಂದು.....
ಗೆಳೆಯನ ಮನೆಯಿಂದ ಹಿಂತಿರುಗಿ ಬರುವಾಗ ಅವನ ತಂದೆಯ ಕಾಲಿಗೆ ನಮಸ್ಕರಿಸಿ... ಅಂದುಕೊಂಡಿದ್ದೆ ನಾನೊಬ್ಬ ೊಳ್ಳೆ ಹುಡುಗನೆಂದು.. ಅದೆಷ್ಟೋ ಬಾರಿ ಮನೆಯಿಂದ ಬಂದಿದ್ದೇನೆ ಒಂದೇ ಒಂದು ಬಾರಿ ಕೂಡಾ ನಮ್ಮ ತಂದೆಯ ಕಾಲಿಗೆ ನಮಸ್ಕರಿಸಲಿಲ್ಲ.... ಆವಾಗಲೆಲ್ಲಾ ಯಾಕಂದುಕೊಳ್ಳಲಿಲ್ಲ ನಾನೊಬ್ಬ ಕೆಟ್ಟ ಹುಡುಗನೆಂದು....
ಯಾರೋ ಅಪರಿಚಿತ ಅನುಬಂಧಿಯಿಂದ ಬರುವ call ಗೋಸ್ಕರ  ಅಷ್ಟು ಮಿಡಿವ ನನ್ನ ಮನ ಅಮ್ಮನಂತಹ ಾತ್ಮಬಂಧುವಿನ call ಗೋಸ್ಕರ ೊಂದು ಬಾರಿಯೂ ಮಿಡಿದಿಲ್ಲವಲ್ಲ.... ಅಲ್ಲವೇ ನಾನೂ ಒಬ್ಬ ಕೆಟ್ಟ ಹುಡುಗ.....
ಹೀಗೆಲ್ಲಾ ಇರುವಾಗ ಎಲ್ಲೋ ದೂರದಲ್ಲಿರುವ ಮುಖಕಾಣದ ಹುಡುಗಿ ನೀನೊಬ್ಬ ಕೆಟ್ಟ ಹುಡುಗ ಎಂದರೆ ಹೇಹೆ ಹೇಳಲಿ ನಾನು ಒಳ್ಳೆಯವನೆಂದು..... ನಾನೂ ಒಬ್ಬ ಕೆಟ್ಟ ಹುಡುಗ...
ಆಕಾಶದ ಅಂತಃಕರಣಚನ್ನು ಕಲಕಿ ಭೂಮಿಗೆ ಧುಮುಕುವ ಮಳೆಹನಿ ಕೂಡಾ ಭೂಮಿಗೆ ಬಿದ್ದ ಮೇಲೆ ಎಷ್ಟೊ ಪಾಠ ಕಲಿಯಿತಂತೆ..ಧುಮುಕಿ ಕಲ್ಲಿನ ಮೇಲೆ ಬಿದ್ದಾಗ ನುಚ್ಚು ನೂರಾಗಿ ಹರಡಿತಂತೆ ಹನಿಯ ಮಾಯೆ, ಅಖಂಡ ಸಾಗರಕ್ಕೆ ತೇಲಿ ಹೋದಾಗ ಇದಕ್ಕೆ ಕ್ಯಾರೇ ಅನ್ನದ ಸಾವಿರ ಹನಿಗಳ ಮುಂದೆ ಮ್ಋದುವಾಯಿತಂತೆ ಇದರ ಹರಹು, ಬೇಸಿಗೆಯ ಬಿಸಿಲ ಝಳಕ್ಕೆ ಬೆವರಿ ಆರಿ ಮತ್ತೆ ಆಕಾಶದ ತೆಕ್ಕೆಗೆ ಹೋಗುವಾಗ ಒಂದು ಜ್ನಾನೋದಯದ ದಿವ್ಯ ಅನುಭೂತಿಯಾಯಿತಂತೆ.. ಬಿಟ್ಟೇ ಹೋಗಲಾರದಂತ ಬಂಧ ಬೆಸೆಯಿತಂತೆ...
ಹಾಗೇ ನಾನೂ ಕೂಡಾ........
ಕಾಲನ ಅಕಾಡಕ್ಕೆ ಸಿಕ್ಕಿ ಏನೇನು ಅನುಭೂತಿಗಳಾಗಬೇಕೋ ... ನಾನು ಕೆಟ್ಟವನೆಂದು ಗೋಚರಿಸಿಸಿದ ಇವುಗಳೆಲ್ಲವುಗಳಿಂದ  ಎಷ್ಟೋ ಪಾಠ ಕಲಿತಿದ್ದೇನೆ. ಹಾಗಿರುವಾಗ ನಾನಂದುಕೊಳ್ಳದಿದ್ದ ಹೊಸತೊಂದು ಆಯಾಮದಲ್ಲಿ ಕೆಟ್ಟ ಹುಡುಗ ಎಂದೆಯಲ್ಲ ನೀನು..... ನೆನೆಸಿಕೊಂಡರೆ ಈಗಲೂ ಎದೆಬಡಿತದ ಸದ್ದು ನನಗೇ ಕೇಳುವಷ್ಟಾಗುತ್ತದೆ.
ಆದರೂ ಒಪ್ಪಿಕೊಳ್ಳುತ್ತೇನೆ ನೀನಂದಿದ್ದನ್ನ.......
ಹೂಂ.... ನಾನೊಬ್ಬ ಕೆಟ್ಟ ಹುಡುಗ......