ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, November 17, 2011

ಕಾಡು ಹೂ.....










ಕಾಡು ಪುಷ್ಪವಾದರೇನು
ಬೀರಿತದರ ಪ್ರೀತಿ
ಕಣ್ಣ ತುಂಬ ಕನಸ ಹೊತ್ತು
ಅರಳಿ ನಿಂತ ರೀತಿ ||

ಕಾಡು ಪುಷ್ಪವಾದರೇನು
ಹಾಸಿ ತನ್ನ ಸೆರಗು
ಕೊಡಲಿಲ್ಲವೇನು ತಾನು
ಅರಳಿ ನಿಂತು ಮೆರಗು||

ಕಾಡು ಪುಷ್ಪವಾದರೂನು
ಅರಳಿ ತನ್ನ ಆಸೆಗೆ
ಸೋಗು ಹಾಕಿ ಮೆರೆದಿಲ್ಲವೇ
ಪ್ರಕೃತಿಯೊಡಲ ಭಾಶೆಗೆ||

ಕಾಡು ಪುಷ್ಪವಾದರೇನು
ಇರಲಾರದೇ ಕನಸು
ಹತ್ತು ಕನಸ ಹೊತ್ತು ನಿಂತು
ನನಸಾಗಿಸೋ ಮನಸು ||

----------- ರಾಘವ್.



Monday, August 1, 2011

ನೀನೆನ್ನ ಜೀವಜಲ........


ನಿನ್ನೊಲುಮೆ ಹೇಗಿದೆಯೋ  ಹಾಗೇ ನನ್ನ ಮನಸ್ಸೂ ಕೂಡಾ ಇರಲಿ ಎಂದು ಬೇಡಿಕೊಳ್ಳುವಂತಹ ಪುಟ್ಟ ನಿಸ್ವಾರ್ಥ ಸ್ವಾರ್ಥಿ ನಾನು...

ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ನಿಂತು ಕೈ ಮುಗಿಯುವಾಗ ಆ ದೇವರ  ಶಿರದಿಂದ ಒಂದು ಹೂವಿನ ಎಸಳು ಬಿದ್ದರೂ ಸಾಕು.. ಅದು ದೇವರು ನೀ ನನಗೆ ಸಿಗುವಂತೆ ಕೊಟ್ಟ ಪ್ರಸಾದ ಎಂದು ಜತನದಿಂದ ಎತ್ತಿಟ್ಟುಕೊಳ್ಳುವಂತಹ ಮುಗ್ಧ ನಾನು.....

ನೀನು ಹಾಡುವಾಗ ನಾನು ನುಡಿಸಬೇಕೆಂಬಾಸೆ.. ನಮ್ಮಿಬ್ಬರ ನಡುವೆ ಹಾಡು ಝರಿಯಾಗಿ ಹರಿದು ಪುಟಿದು ಚಿಮ್ಮುವ ಕಾರಂಜಿಯನ್ನ ನಿನಗೆ ಕಣ್ತುಂಬ ತೋರಿಸುವಾಸೆ.. ಆಗ ನಿನ್ನ ಕಣ್ಣಲ್ಲಿ ಚಿಮ್ಮುತ್ತದಲ್ಲಾ ಆ ಸಂತಸದ ಕಾರಂಜಿಯನ್ನು ನೋಡಿ ನಲಿಯುವಾಸೆ ನನಗೆ...

ಕೈ ಕೈ ಹಿಡಿದು ಹಸಿರು ಗುಡ್ಡದ ಮೇಲೆ ಸುತ್ತುತ್ತಾ ಮನಸ್ಸಿನ ಭಾವನೆಗಳನ್ನೆಲ್ಲಾ ನಮ್ಮ ಮಧ್ಯೆ ಹರವಿಕೊಂಡು ಮಾತಾಡುತ್ತಾ ಮಾತಾಡುತ್ತಾ Û ಮಾತಿನಲ್ಲೇ ಕಳೆದು ಹೋಗುವಾಸೆ...

ಹೀಗೆ ನೀನು ದಿನವೆಲ್ಲ  ನಾನು ಸುತ್ತಿಸಿದ ಆಶ್ಚರ್ಯದ ಸಂತೆಯನ್ನು ಸುತ್ತಿ ಸುತ್ತಿ ಸುಸ್ತಾಗಿ ಬಂದು ಸುಸ್ತಾಯಿತೆಂದು ಮಲಗುತ್ತೀಯಲ್ಲಾ.. ಆಗ ಮೆಲುದನಿಯಲ್ಲಿ ಜೋಗುಳವನ್ನು ಹಾಡಿ  ಮಲಗಿಸುವಾಸೆ.. ಆ ಸುಖ ನಿದ್ದೆಯ ಕನಸಿನಲ್ಲೆಲ್ಲಾ ನಾನೇ ಓಡಾಡಬೇಕೆಂಬ ಸ್ವಾರ್ಥ ಕೂಡಾ.

ಸಮುದ್ರದ ದಂಡೆಯ ಮೇಲೆ ಆಕಾಶಕ್ಕೆ ಮುಖ ಮಾಡಿ ಮಲಗಿ ಹೊಂಚು ಹಾಕಿ ನಾವು ನಮ್ಮ ನಮ್ಮಲ್ಲೇ ಕಸಿದುಕೊಂಡ ಸ್ನೇಹದ ಪರಮಾಪ್ತತೆಯ ಕಳ್ಳತನವನ್ನು ಮತ್ತೆ ಮತ್ತೆ ಹೇಳಿಕೊಂಡು ನಗುವಾಸೆ.......

ಚಳಿಗಾಲದ  ಮಧ್ಯರಾತ್ರಿಯ ದಟ್ಟ ಚಳಿಯಲ್ಲಿ  ನಿನಗೊಂದು Ice-cream ತಿನ್ನಿಸಿ  ನೀನು ಚಳಿಯಿಂದ ನಡುಗುತ್ತಿದ್ದಾಗ ಗಟ್ಟಿಯಾಗಿ ನಿನ್ನ ಬೆಚ್ಚಗೆ ತಬ್ಬಿಕೊಳ್ಳಬೇಕಿದೆ ನನಗೆ....

ಇದೆಂತಹ ಆಸೆ ನಿನ್ನದು ಅನ್ನಬೇಡ.... ನನ್ನ ಬೆನ್ನ ಮೇಲೆ ಹತ್ತಿ ಕುಳಿತು ಹತ್ತು ಡಿಪ್ಸ್ ಹೊಡೆಸಬೇಕೆಂಬ ನಿನ್ನ ಆಸೆಗಿಂತ ಇದೇನು ದೊಡ್ಡದಲ್ಲ ....

ನೀನು ನನ್ನ ಕನವರಿಸಿದಾಗಲೆಲ್ಲಾ ಬಣ್ಣದ ದುಂಬಿಯಾಗಿ ಬಂದು ನೆನಪುಗಳ ಮೂಟೆ ಬೆನ್ನ ಮೇಲೆ ಹೊತ್ತು ತಂದು ನಿನ್ನ ಕಣ್ಣ ಕೊನೆಯಂಚಿನಲ್ಲಿ ನನ್ನ ಪ್ರತೀ ನೆನಪನ್ನೂ ಕೂಡಾ ನಿನ್ನ ಕನಸಿನ ಜೀವಂತಿಕೆಯನ್ನಾಗಿಸಬೇಕೆಂಬಾಸೆ......

ನಿನಗೆ ನಾನೇನೇನು ಆಗಬಲ್ಲೆನೋ ಅದೆಲ್ಲವೂ ನಾನಾಗುವೆ.... ಆಸೆ ಇದೆ ನನಗೆ...
ನೀನು ನನಗೇನೂ ಆಗಬೇಕೆಂಬುದಿಲ್ಲ.....
ನೀನು ನನ್ನೆದೆಯ ಜೀವ ಜಲ... ಅಷ್ಟು ಸಾಕು ನನಗೆ...

ನನ್ನವಳು ನೀ ನನ್ನಾಕೆ
ಹರಿಯುವ ನದಿಯಲ್ಲಾ....
ಸರಿವ ಸರಿತೆಯಲ್ಲಾ....
ನೀನೊಂದು ಪುಟ್ಟ ಕೊಳ...
ನನ್ನ ಬಾಳಿನ ಜೀವ ಜಲ....

********************ರಾಘವ್.
(ಫೋಟೋ ನೀಡಿದವರು.... ಸೌಮ್ಯಾ ಭಾಗ್ವತ್)

Wednesday, July 13, 2011

ಅಂದು-ಇಂದು....


ಅಂದು-
ಪುಟ್ಟ ಹೊಳೆವ ಕಣ್ಣುಗಳಲ್ಲಿ
ಚಂದ ಚಂದನೆಯ
ಕನಸಿತ್ತು
ಮನಸಿನಲಿ ಕನಸ
ನನಸಾಗಿಸುವ ಛಲವಿತ್ತು..


ಅಂದು-
ನಿನ್ನ ಗೆಜ್ಜೆ ಕಟ್ಟಿದ ಕಾಲ್ಗಳಲ್ಲಿ
ಛಂಗನೆ ಹಾರುವ
ಜಿಂಕೆಯ ನೆಗೆತವಿತ್ತು..
ಮಗ್ಧ ಮನಸ ತುಂಬೆಲ್ಲಾ
ಸುಮ್ ಸುಮ್ನೆ ಚಿಮ್ಮುವ
ಪ್ರೀತಿ ಚಿಲುಮೆಯಿತ್ತು...


ಇಂದು-
ಆ ಕಾಲವೆಲ್ಲಾ ತುತ್ತಾದಂತಿದೆ
ಅಕಾಲ ಮರಣದ
ಸೂತಕದಂತೆ
ಭಾಸವಾಗುತಿದೆ, ಕನಸುಗಳೆಲ್ಲಾ
ಕುರುಡು ಕಾಂಚಣದ
ಕಾಲಡಿಗೆ ಸಿಕ್ಕಂತೆ.......


ಬದುಕಿನಾ ಗಾಲಿಗಳ
ತಿರುಗಿಸುವ ಭರದಲ್ಲಿ
ಹೂತು ಹೋಗುವ ಮಣ್ಣು
ಕಾಣಲಿಲ್ಲ..
ಸಂಸಾರ ಸಾಗರದ
ನಿಸ್ಸಾರ ಸಾರದಲಿ
ಸಿಲುಕಿ ಬರಡಾಗಿವೆ
ನಗೆಗಳೆಲ್ಲಾ......

****** ರಾಘವ್.


Monday, June 20, 2011

ಅಂತಹ ಅಣ್ಣ.....

(ಹಾವೇರಿ ಲೈಬ್ರರಿಯ ಪುಸ್ತಕಗಳ ಮಧ್ಯೆ ನನಗೆ ಸಿಕ್ಕಿದ ಪುಸ್ತಕ "ಚಿಕನ್ ಸೂಪ್ ಫಾರ್ ದಿ ಸೌಲ್". ಈ ಪುಸ್ತಕದ ಒಂದು ಕಥೆ ನೆನಪಾಗ್ತಿದೆ. ಹಾಗೇ ಸುಮ್ನೆ ನಿಮ್ ಮುಂದೆ....)

ಪಾಲ್ ನಿಗೆ ಅವನ ಅಣ್ಣ ಕ್ರಿಸ್ಮಸ್ ಕೊಡುಗೆಯಾಗಿ  ಹೊಚ್ಚ ಹೊಸ ಕಾರೊಂದನ್ನು ನಿಡಿದ.ಕ್ರಿಸ್ಮಸ್ ನ ಹಿಂದಿನ ದಿನ ಪಾಲ್ ಮನೆಗೆ ಹೋಗಲು ತನ್ನ ಆಫೀಸಿನಲ್ಲಿ  ಕೆಲಸ ಮುಗಿಸಿಕೊಂಡು ಹೊರಬಂದಾಗ ತನ್ನ ಹೊಚ್ಚ ಹೊಸ ಕಾರನ್ನು ಆಸೆಯ ಕಣ್ಣುಗಳಿಂದ ನೋಡುತ್ತಿದ್ದ ಬೀದಿ ಹುಡುಗನೊಬ್ಬನನ್ನು ಕಂಡ.

 ಆ ಹುಡುಗ  "ಮಿಸ್ಟರ್ ಈ ಕಾರು ನಿಮ್ದಾ ?" ಎಂದು ಪ್ರಶ್ನಿಸಿದ

"ಹೌದು" ನುಡಿದ ಪಾಲ್. "ನನ್ನ ಅಣ್ಣ ನನಗೆ ಅದನ್ನು ಕ್ರಿಸ್ಮಸ್  ಗಿಪ್ಟಾಗಿ ಕೊಟ್ಟಿದ್ದಾನೆ"

ಪಾಲ್ ನ ಮಾತು ಕೇಳಿ ಹುಡುಗ ದಿಗ್ಭ್ರಮೆಯಿಂದ ಕೇಳಿದ " ನಿಮ್ಮ ಅಣ್ಣ ನಿಮಗೆ ಕೊಟ್ಟರೆಂದರೆ ನೀವು ಅದಕ್ಕೆ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ..! ಅಂತಹ ಅಣ್ಣ......." ಹುಡುಗ ತಡವರಿಸಿದ.

ಹುಡುಗ ಏನು ಹೇಳಲು ಹೊರಟಿದ್ದಾನೆ ಎಂದು ತನಗೆ ಗೊತ್ತು ಅಂದುಕೊಂಡ ಪಾಲ್.  ತನಗೂ ಅಂತ ಅಣ್ಣ ಇದ್ದಿದ್ದರೆ ಅಂತ ಹೇಳ ಹೊರಟಿದ್ದಾನೆ ಹುಡುಗ ಎಂದುಕೊಂಡ. ಆದರೆ ಆ ಹುಡುಗನ ಮುಂದಿನ ಮಾತುಗಳಿಂದ ಪಾಲ್ ಗೆ ತಾನು ಭೂಮಿಯಲ್ಲಿ ಹೂತು ಹೋಗಬಾರದೇ ಎನಿಸಿತು.

"ಅಂತಹ ಅಣ್ಣ "... ಮುಂದುವರೆದ ಆ ಪುಟ್ಟ ಹುಡುಗ "ನಾನೂ ಆಗಬಲ್ಲೆನಾದರೆ......"

ದಿಗ್ಭ್ರಮೆಯಿಂದ ಪಾಲ್ ಆ ಹುಡುಗನತ್ತ ನೋಡಿದ. ನಂತರ ಏನೋ ಹೊಳೆದು ಆ ಹುಡುಗನನ್ನು ಕೇಳಿದ " ನನ್ನ ಕಾರಿನಲ್ಲಿ ಒಂದು ರೌಂಡ್ ಹೋಗಬಯಸುತ್ತೀಯಾ?"

"ಓಹೋ..! ನನಗೆ ಕಾರಿನಲ್ಲಿ ಹೋಗುವುದೆಂದರೆ ಬಲು ಖುಷಿ"

ಒಂದು ಚಿಕ್ಕ ರೌಂಡ್ ಹೊಡೆದ ನಂತರ ಆ ಹುಡುಗ ಉತ್ಸಾಹ ತುಂಬಿದ ಕಣ್ಣುಗಳಿಂದ  ಪಾಲ್ ನತ್ತ ತಿರುಗಿ ಕೇಳಿದ "ಕಾರನ್ನು ನನ್ನ ಮನೆಯ ಎದುರಿಗೆ ತೆಗೆದುಕೊಂಡು ಹೋಗುತ್ತೀರಾ?"

ಪಾಲ್ ಮುಗುಳುನಕ್ಕ. ಈ ಹುಡುಗ ಏತಕ್ಕಾಗಿ ತನ್ನ ಮನೆಯ ಎದುರಿಗೆ ಕಾರನ್ನು ತೆಗೆದುಕೊಂಡು ಹೋಗೆಂದು ಹೇಳುತ್ತಿದ್ದಾನೆ ಎಂಬುದನ್ನು ಬಲ್ಲೆ ಎಂದುಕೊಂಡ. ಹುಡುಗ ತನ್ನ ನೆರೆಹೊರೆಯವರಿಗೆಲ್ಲಾ ತಾನು ಎಂತಹ ಕಾರಿನಲ್ಲಿ ಸವಾರಿ ಮಾಡಿದೆ ಎಂಬುದನ್ನು ತೋರಿಸಿಕೊಳ್ಳಲು ಬಯಸುತ್ತಿದ್ದಾನೆ ಕಿಲಾಡಿ. ಆದರೆ ಪಾಲ್ ನ ಎಣಿಕೆ ಮತ್ತೊಮ್ಮೆಯೂ ತಪ್ಪಾಗಿತ್ತು.

" ಇನ್ನೂ ಸ್ವಲ್ಪ ಮುಂದೆ ಆ ಮೆಟ್ಟಿಲು ಇದೆಯಲ್ಲಾ  ಅದರ ಮುಂದೆ ಸ್ವಲ್ಪ ನಿಲ್ಲಿಸುತ್ತೀರಾ?" ಕೇಳಿಕೊಂಡ ಹುಡುಗ.

ಕಾರಿನಿಂದಿ ಇಳಿದು ದುಡು ದುಡು ಓಡಿದ ಹುಡುಗ. ಒಂದೆರಡು ಕ್ಷಣಗಳಲ್ಲೇ ಆತ ಹಿಂತಿರುಗುವುದನ್ನು ಪಾಲ್ ಕಂಡ.ಹುಡುಗ ತನ್ನ ಅಂಗವಿಕಲ ತಮ್ಮನನ್ನು ಹೊತ್ತು ತಂದ. ತಮ್ಮನನ್ನು ಮನೆಯ ಕೊನೆಯ ಮೆಟ್ಟಿಲ ಮೇಲೆ ಕುಳ್ಳಿರಿಸಿ ತಾನೂ ಅವನಿಗೆ ತಾನೂ ಅವನಿಗೆ ಒತ್ತಿ ಕುಳಿತು, ಕಾರಿನತ್ತ ಬೆರಳು ಮಾಡಿ ತೋರಿಸುತ್ತಾ ಹೇಳಿದ-

"ತಮ್ಮಾ ಇಲ್ಲಿ ನೋಡು ಮೆಟ್ಟಿಲು ಇಳಿಯುವಾಗ ನಾನು ಹೇಳಿದೀನಲ್ಲಾ ಅದೇ ಕಾರು. ಆ ಕಾರಿನಲ್ಲಿ ಕುಳಿತಿದ್ದಾರಲ್ಲಾ ಅವರ ಅಣ್ಣ ಅವರಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಕೊಟ್ಟರಂತೆ. ಅದೇ ರೀತಿ ಮುಂದೆ ಒಂದು ದಿನ ನಾನೂ ನಿನಗೆ ಒಂದು ಕಾರನ್ನು ಕೊಡುತ್ತೇನೆ. ಆಗ ನೀನೇ ಹೋಗಿ.. ನಾನು ಹೇಳ್ತಾ ಇರ್ತೀನಲ್ಲಾ... ಕ್ರಿಸ್ಮಸ್ ಹಬ್ಬದ ಸಂಭ್ರಮಗಳು, ಅಂಗಡಿಗಳನ್ನು ಸುಂದರವಾಗಿ ಸಿಂಗರಿಸಿರುತ್ತಾರೆ ಅಂತೆಲ್ಲಾ.... ಅದನ್ನೆಲ್ಲವನ್ನೂ ನೀನೇ ಸ್ವಂತ ಹೋಗಿ ನೋಡಬಹುದು"

ಪಾಲ್ ಕಾರಿನಿಂದಿಳಿದು ಆ ಅಂಗವಿಕಲ ತಮ್ಮನನ್ನು ತಂದು ತನ್ನ ಕಾರಿನ ಮುಂದಿನ ಸೀಟಿನಲ್ಲಿ ಕುಳ್ಳಿರಿಸಿದ.ಹೊಳೆಯುವ ಆ ಪುಟ್ಟ ಎರಡು ಜೋಡಿ ಆ ಕಣ್ಣುಗಳಲ್ಲಿನ ಸಂತಸ ಪಾಲ್ ನಲ್ಲಿಯೂ ಪ್ರತಿಫಲಿಸಿತು.

ತನ್ನ ತಪ್ಪು ನಿರೀಕ್ಷೆಯಿಂದ ಎರಡು ಬಾರಿ ಹೊಡೆತ ತಿಂದ ಮೇಲೆ ಅವನಿಗೆ ಅರಿವಾದದ್ದು " ನೀಡುವವರೇ ಆಶೀರ್ವದಿತರು " ಎಂಬ ಧರ್ಮ ಗೃಂಥದ ಮಾತು.

ಚಿಕ್ಕ ಮಕ್ಕಳೇ ಹಾಗೆ... ಅರ್ಥಕ್ಕೆ ನಿಲುಕದ ಪುಟ್ಟ ದೇವರ ತುಂಡುಗಳು... ಅವರ ವಿಚಾರಗಳು ಬರೀ ಮುಗ್ಧ ಮುಗ್ಧ... ಸ್ವಾರ್ಥವಿಲ್ಲದ.... ಸ್ವಾರ್ಥವೊಂದೇ ಅಲ್ಲದ ಬೇಡಿಕೆಗಳು.... ಕಣ್ಣ ತುಂಬೆಲ್ಲ ಪುಟ್ಟ ಪುಟ್ಟ ಕನಸುಗಳು... ನಮ್ಮನ್ನೇ ವಿಚಾರಕ್ಕಿಳಿಸುವಂತಹ ಮಾತುಗಳು..ಪ್ರಶ್ನೆಗಳು.... ಕಲಿತುಕೊಳ್ಳುವವರಾದರೆ ಅವರಿಂದ ನೂರು ಕಲಿತುಕೊಳ್ಳಬಹುದು. ನಮ್ಮ ಅಹಂನಿಂದ ಸ್ವಲ್ಪ ಹೊರಗೆ ಬರಬೇಕಷ್ಟೇ....

ಚಿಕ್ಕ ಮಕ್ಕಳು ಹೀಗೇ ಅನ್ನೋದಕ್ಕಿಂತ ದೊಡ್ಡವರು ಅನ್ನಿಸಿಕೊಂಡವರ ಆಲೋಚನೆಗಳು ಎಷ್ಟು ಸೀಮಿತ ನೋಡಿ...
ನಾನೂ ದೊಡ್ಡವನಾಗುತ್ತಿದ್ದೇನೆ...... ಭಯವಾಗುತ್ತಿದೆ.....
ಮುಗ್ಧ ಮನಸಿನೆಡೆಗೆ ಹೊರಳಬೇಕೆನಿಸುತ್ತಿದೆ.
ಚಿಕ್ಕವನಾಗುವ ಮನಸ್ಸಾಗುತ್ತಿದೆ....

******** @ರಾ***********

Thursday, June 16, 2011

ತೃಪ್ತ ಬಾಳು......




 ಎಷ್ಟು ಪ್ರೀತಿ ಕೃಷ್ಣನಲ್ಲಿ
ಎಂಥ ಭರವಸೆ |
ರಾಧೆ ಜೀವ ಮುರುಳಿಯಲ್ಲೆ
ಮೋಹದ ಮನಸೆ || 



ಎಷ್ಟು ಭಕ್ತಿ ರಾಮನಲ್ಲಿ
ಎಂಥ ಕಾಯ್ವಿಕೆ |
 ರಾಮ ಕಂಡ ಶಬರಿ ಭಕ್ತಿ
ಮುಕ್ತಿ  ಜೀವಕೆ ||





ಎಂಥ ಮೋಹ ದುಂಬಿಯಲ್ಲಿ
ಅರಳೋ ಹೂವಿಗೆ |
ಒಂದೇ ದಿನದ ತೃಪ್ತ ಬಾಳು
ಅಕಲ್ಪ ಸಾವಿಗೆ ||





ಎಂಥ ಮೋಹದುರಿಯ ಆಟ
ಈ  ಪತಂಗಕೆ |
ಬೇಕೇ ನಿನಗೆ ಬೆಂಕಿಯೂಟ
ಸಾವ ಸಂಗಕೆ ||


********** ರಾಘವ್.

Monday, May 30, 2011

ನಿನ್ನ ಪ್ರೇಮದ ಪರಿಯ...ನಾನರಿಯೆ ಕನಕಾಂಗಿ

ನಿನ್ನ ಪ್ರೇಮದ ಪರಿಯ...
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.........


ಹಾಡುತ್ತಿದ್ದರೆ ಯಾವುದೋ ಕಳೆದುಹೋದ ಸ್ವಪ್ನ ಕೈಗೆಟುಕಿದಂತೆ. ಎಂದೂ ಈ ಹಾಡು ಕೇಳದೇ ಇದ್ದವರೆಲ್ಲ ಬಂದು ಬೆನ್ನು ತಟ್ಟಿದಂತೆ.... ನನ್ನ ಹೃದಯ ಯಾಕೆ ಹಾಡುಗಳಿಗಾಗಿ ಇಷ್ಟು ತುಡಿಯುತ್ತದೋ.... ಬೇಕಿದ್ದರೆ ನಾನಿಲ್ಲದೇ ಇರುವಾಗ ನಾನು ಕಳೆದು ಹೋದ ಮನೆಯಲ್ಲೊಮ್ಮೆ ಹುಡುಕಿ ನೋಡಿ... ಚಂದವಾಗಿ ಹರವಿಟ್ಟ ಸೀರೆಯ ನೆರಿಗೆಯಲ್ಲೋ...... ಗ್ಲಾಸಿನ ಟಬ್ ನೊಳಗಿಟ್ಟ ಕಿವಿಯ ಓಲೆಯಲ್ಲೋ....ನನ್ನ ಫೋಟೋದ ಪಕ್ಕದಲ್ಲೇ ಯಾವತ್ತೂ ಇರುವ ಗೆಜ್ಜೆಯ ದನಿಯಲ್ಲೋ... ಬೀರುವಿನಲ್ಲಿಟ್ಟ ಕೈ ಬಳೆಯ ಸದ್ದಿನಲ್ಲೋ.... ಎಲ್ಲಾದರೊಂದು ಕಡೆ ಹಾಡುಗಳ ಮರ್ಮರ ಧ್ವನಿಸುತ್ತಿರುತ್ತದೆ. ಯಾಕೆಂದರೆ ಅವುಗಳೆಲ್ಲವುಗಳಲ್ಲಿ ನೀನು ನೆಲೆಸಿರ್ತೀಯ ಮತ್ತೆ ನಿನಗೆ ಹಾಡುವುದೆಂದರೆ ಇಷ್ಟ.... ನನಗೆ ಹಾಡುಗಳೆಂದರೆ ಇಷ್ಟ....


ನಿನಗೆ ನಾನಿಷ್ಟವಾದದ್ದು ಯಾವ ಕಾರಣಕ್ಕೆ ಹುಡುಗೀ.... ನಾನಾಗೇ ನಿನ್ನ ಕಡೆಗೆ ಮನಸ್ಸು ಜಾರಿಸಿಕೊಂಡವನಲ್ಲ....ನನ್ನ ಆಮಂತ್ರಣವಿಲ್ಲದೇ ನನ್ನ ಒಪ್ಪಿಗೆಯಿಲ್ಲದೇ..... ನನ್ನ ಒಂದೇ ಒಂದು ಮಾತು ಕೇಳದೇ ಹೃದಯದೊಳಗೆ ಲಗ್ಗೆ ಇಟ್ಟು ಇದು ತನಗೇ ಸೇರಿದ್ದು ಅಂತ ಘೋಷಿಸಿಬಿಟ್ಟೆಯಲ್ಲಾ.... ಕೋಪ ಬರದೇ ಇರುತ್ತದೆಯೇ..? ಆದರೆ ಬರಲೇ ಇಲ್ಲಾ... ಬರಬೇಕೆಂದಿದ್ದ ಕೋಪಗಳೆಲ್ಲಾ ನಿನ್ನ ಅಲೆ ಅಲೆಯ ನಗುವಿನ ಬಲೆಗೆ ಸಿಕ್ಕಿ ಉಸಿರುಗಟ್ಟಿ ತಣ್ಣಗಾಗಿ ಬಿಟ್ಟವಲ್ಲಾ... ನಿನಗೆ ಅದು ಮೊದಲೇ ಗೊತ್ತಿತ್ತಾ...

ನನಗೆ ಅರಿವಿಲ್ಲದೆಯೇ ನನ್ನ ಬದುಕ ದಾರಿಯಲ್ಲಿ ನಿಂತು lift ಕೇಳಿದವಳು ನೀನು.. ನನ್ನ ಬದುಕ ಜೊತೆ ಜೊತೆಗೇ ಎಷ್ಟು ದೂರ ಬಂದೆ.. ನಿನ್ನ ನೋಡಿದಾಗಲೆಲ್ಲ ಉಕ್ಕಿದ ಹಾಡುಗಳು ಅವು ನೂರು ನೂರು ಸಾಲುಗಳಾಗಿವೆ.... ಈ ಸಾಲುಗಳಿಗೆಲ್ಲ ಸಂಗೀತವಾದವಳು ನೀನು... ನನ್ನ ಮನಸ್ಸಿನಲ್ಲಿ ಹಾಗೇ ಸುಮ್ಮನೆ ಹುಟ್ಟಿದ ಪ್ರಶ್ನೆಗಳಿಗೆಲ್ಲ ಮಾತಿಲ್ಲದೇ ಮಾರುದ್ದದ ಉತ್ತರವಾದವಳು ನೀನು.... ಎಷ್ಟೊಂದು ಬದಲಾಯಿಸಿಬಿಟ್ಟೆ ನೀ ನನ್ನ... ನೀ ನನ್ನ ಬದುಕ ಜೊತೆ ಬರುವ ಮೊದಲು ನನ್ನ ಹೃದಯದ ಸಂತೆಯಲ್ಲಿ ಮಾರಿಗೊಂದರಂತೆ ಬೇಸರದ ಅಂಗಡಿಗಳಿದ್ದವು... ನೀನು ಬಂದ ಮೇಲೆ ಬೇಸರವೆನ್ನುವುದು ಎಷ್ಟು ತುಟ್ಟಿಯಾಗಿಬಿಡ್ತು ಗೊತ್ತಾ. thanks ಕಣೇ ಒಲವೇ....

ಆದರೆ ಹುಡುಗೀ... ನೀ ಅಷ್ಟೆಲ್ಲ ಪ್ರೀತಿ ನೀಡಬೇಕಿತ್ತಾ... ನೀನು ನನ್ನ ಬದುಕಿನಲ್ಲಿ ಸ್ವಲ್ಪವೇ ಸ್ವಲ್ಪ lift ಕೇಳಿದವಳು ಮಾತ್ರ.. ಶಾಶ್ವತವಾಗಿ ಇರುವವಳಲ್ಲ ಎಂದು ಹೇಳಿದ್ದರ ಅರ್ಥ ನನಗಾಗುವಷ್ಟರಲ್ಲಿ ಕಾಲವೇ ಮಿಂಚಿ ಹೋಗಿತ್ತಲ್ಲೇ.......

ಅದೊಂದು ದಿನ ನೀನು "ನನ್ನ ಹೃದಯ ಬಡಿತ ಜೋರಾಗಿಬಿಟ್ಟಿದೆ ಅಂದೆಯಲ್ಲಾ"... ಹುಚ್ಚ ಕಣೇ ನಾನು... ನನ್ನ ಮೇಲೆ ನಿನಗೆ ಒಲವು ಶುರುವಾಗಿಬಿಟ್ಟಿದೆ ಅಂದುಕೊಂಡೆ..... ನಂಗ್ಯಾಕೇ ಗೊತ್ತಾಗಿಲ್ಲ ಆವಾಗ ದೀಪ ಆರುವ ಮೊದಲು ದೊಡ್ಡದಾಗಿ ಉರಿಯುತ್ತದೆ ಅಂತಾ.... ನನ್ನ ಬಿಟ್ಟು ಹೋಗಲು ನೀನು ಬೇರೆ ದಾರಿ ಹುಕುತ್ತಿರುವ ಸಂಚಿನ ಸುಳಿವೇ ನೀಡಲಿಲ್ಲವಲ್ಲೇ....

ನನ್ನ ಬೇಸರವೇ ದೊಡ್ಡದೆಂದುಕೊಂಡಿದ್ದ ನನ್ನಲ್ಲಿ ಸಂತಸದ ದೀಪ ಹಚ್ಚಿದ ನಿನಗೆ ನಿನ್ನದು ಸದ್ಯವೇ ಆರುವ ಬದುಕೆಂದು ತಿಳಿದಿತ್ತಾ...... ತಿಳಿದೂ ತಿಳಿದೂ ಅಷ್ಟೊಂದು ಸಂತಸದ ಮೂಟೆಯನ್ನು ಹೊತ್ತು ನನ್ನ ಜೊತೆಗೊಂದು lift ಕೇಳಿದ್ದೆಯಾ?.....
ಎಷ್ಟು ಶಾಂತ, ಪ್ರಶಾಂತ ಮೌನ ಮುಗ್ಧ ಸುಂದರ ಹುಡುಗಿ ನೀನು... ಎಷ್ಟೊಂದು ಭಾವನೆಗಳನ್ನು ಹೃದಯದಲ್ಲಿ ತುಂಬಿಕೊಂಡಿದ್ದೆಯೋ ಏನೋ... ಏನೇನನ್ನೂ ಹೇಳಿಕೊಂಡಿಲ್ಲವಲ್ಲೇ..... ಆದರೆ ನನಗೆ ಮಾತ್ರ ನಿನ್ನಲ್ಲಿದ್ದ ಸಂತಸವನ್ನೆಲ್ಲ ನೀಡಿಬಿಟ್ಟೆ...

ಕಣ್ಣು ಮುಚ್ಚಿದರೆ ಅದೇ ಬೇಸರದ ಬೇಡವಾದ ಚಿತ್ರಗಳೇ ಕಣ್ಣೆದುರಿಗೆ ಬಂದು ಕಾಡುತ್ತವೆ ಎಂದಾಗ...ಇನ್ನು ಮುಂದೆ Dream Boy ಕಣ್ಮೇಲೆ ನೀನು ಬಂದು ಕಾಡಿದರೆ ನನ್ನಾಣೆ ಎಂದು ಕೊಟ್ಟ ಹೂ ಮುತ್ತು ಇನ್ನೂ ಕಣ್ರೆಪ್ಪೆಯಲ್ಲೇ ಬೆಚ್ಚಗೆ ಮುದುರಿಕೊಂಡಿದೆ... ಆವತ್ತಿನಿಂದ ಈವತ್ತಿನ ವೆರೆಗೆ ನಾನು ಕೆಟ್ಟ ಕನಸು ಕಂಡಿಲ್ಲ ಕಣೇ........

ನನಗೆ ಕರ್ಕಶ ಕೇಳದಿರಲೆಂದು ಬಲಗಾಲಿನ ಗೆಜ್ಜೆ ಕೊಟ್ಟೆ.. ಅದರ ಘಲ್ ಘಲ್ ಸದ್ದು ಕೊಟ್ಟೆ.... ಕೈ ಬಳೆಯ ಇಂಪು ಕೊಟ್ಟೆ...... ನಾನು ಯಾವಾಗಲೂ ಇಷ್ಟ ಪಡುತ್ತಿದ್ದ ಕಿವಿಯ ಓಲೆ ಕೊಟ್ಟೆ..... ಹೃದಯಕ್ಕೆ ಬೋರಾಗದಿರಲೆಂದು ಸಂಗೀತದ ಕಾರಂಜಿ ಕೊಟ್ಟೆ..... ನನ್ನ ಸಂತೋಷಕ್ಕೆನೇನು ಬೇಕೋ ಅವೆಲ್ಲವನ್ನೂ ಕೊಟ್ಟು ಇದರಲ್ಲೆಲ್ಲಾ ನಾನೇ ಇದ್ದೇನೆ ಎಂದು ಮುಷ್ಟಿಯಲ್ಲಿರಿಸಿ ಮುಚ್ಚಿದ ಕಣ್ಣುಗಳ ಹಿಂದೆ ಮತ್ತದೇ ಸುಂದರ ಕನಸುಗಳನ್ನಿರಿಸಿ ಹೋದವಳು ನೀನು.....

ಸಣ್ಣ ಮಕ್ಕಳಿಗೆ ಆಟಾಟಿಕೆ ಕೊಡೋ ಥರಾ ನನಗೆ ಕೈ ಬಳೆಯ ಸದ್ದು, ಕಾಲ್ಗೆಜ್ಜೆ ಇಂಪು, ಕಿವಿಯೋಲೆಯ ಜೋಕಾಲಿ ನೆನಪು, ಮತ್ತೆ ಮತ್ತೆ ಜೋಡಿ ಕಣ್ಗಳ ಹಿಂದೆ ನೆನಪಾಗುವ ಕಣ್ರೆಪ್ಪೆ ಮೇಲಿನ ಮುತ್ತಿನ ಮೃದುವನ್ನು ಕೊಟ್ಟು ಜೀವಮಾನ ಪೂರ್ತಿ ಅದರ ಜೊತೆಗೇ ಆಡಿಕೋ ಎಂದು ಹೇಳಿ ನನ್ನನ್ನು ಒಂಟಿಯಾಗಿ ಕಾಯಲು ಕೂರಿಸಿ ಬಿಟ್ಟು ನೀನೆಲ್ಲಿ ಹೋದೆ ಗೆಳತಿ......
ನನ್ನ ಸಹನೆಯ ಪರೀಕ್ಷೆಯಾ......
ನೀನಿದ್ದರೆ ಮಾತ್ರ ಈ ಚೈತನ್ಯ ನಳನಳಿಸೋದು....
ನಾನಿನ್ನೂ ಕಾಯುತ್ತಲೇ ಇದ್ದೇನೆ..... ಜೀವಕ್ಕೆ ಕೊನೆಯುಸಿರಿರೋ ವರೆಗೂ.....
ತಿರುಗಿ ಬರಲು ಮಾತ್ರ ಮರೆಯದಿರು.....

Tuesday, April 12, 2011

ನಾನರಿಯದ ನೀನು...


ಹೇಗಿರಬೇಕು ನನ್ನೀ ಮನವು
ನೀನೆ ತೀಡಿಬಿಟ್ಟೆ
ಬಣ್ಣದ ಭಾವವು ಸೋಕುವ ಪ್ರೀತಿಯ
ಬಾಣ ಹೂಡಿಬಿಟ್ಟೆ..

ನನ್ನದು ಪ್ರೀತಿಯೋ ನಿನ್ನೆಡೆ ಸೆಳೆತವೋ
ನಾನೇನನು ಬಲ್ಲೆ..
ನೀನುಣಿಸಿದ್ದನು ಉಣ್ಣುವ ನನಗೆ
ನೀನೆಲ್ಲವು ನಲ್ಲೆ..

ನನ್ನಯ ಪ್ರೀತಿಯ ನದಿಯದು ಹರಿಯುವ
ದಿಕ್ಕು ನೋಡಲಿಲ್ಲ..
ಹರಿಯುವ ಸೊಬಗನು ಕಲಿಸಿದ ನಿನಗೇ
ಅದರ ಪ್ರೀತಿಯೆಲ್ಲಾ...

ತಿದ್ದಿದೆ ತೀಡಿದೆ ಮನ ಹದಗೊಳಿಸಿದೆ
ಏನದು ನನ್ನಲ್ಲಿ...
ಪ್ರೀತಿಯ ಮಾಡಲು ಕಲಿಸಿ ಹೋದವಳೆ
ನಿನ್ನೊಲವ್ಯಾರಲ್ಲಿ?

ನನ್ನೆದೆ ಮಹಲಲಿ ಹಚ್ಚಿಹ ದೀಪ
ನಿನ್ನೊಲವಿನ ಪ್ರತಿರೂಪ..
ಹೃದಯವೇ ಉರಿದರೂ ಬೆಳಕನು ನೀಡುತ
ಸಾಯುವ ತ್ಯಾಗದ ಶಾಪ..
-----ರಾಘವ್ ಲಾಲಗುಳಿ.

Tuesday, April 5, 2011

ನಿನ್ನ ನೆನಪಿನಲ್ಲಿ ಹ್ರದಯ ಪಲ್ಲವಿಸಿಕೊಂಡ ಕ್ಷಣ..............

   
         
ಹೇಯ್ ... ದೇವತೆ ಕಣೇ ನೀನು.... ಒಂದು ಕ್ಷಣ ಎಂತಹ ದಿಗಿಲು ಕೊಟ್ಟುಬಿಟ್ಟೆ..
ಸುಂದರವಾದ ಜಲಪಾತ, ಆಗತಾನೇ ಅರಳಿದ ಹೂವು, ಸದ್ದಿಲ್ಲದೇ ಇಳಿಯುವ ಮಂಜು,ಹಸಿರೆಲೆಯ ಮೇಲೆ ಕಣ್ಣರಳಿಸಿ ಕುಳಿತ ಇಬ್ಬನಿ, ಹರಿಯುವ ನೀರು, ಹಾರುವ ಹಕ್ಕಿ, ಅಮ್ಮನ ಪ್ರೀತಿ ತುಂಬಿದ ಕಣ್ಣು ಹೀಗೆ ಸುಂದರವಾದುದೆಲ್ಲಾ ದಿಗಿಲೇ..... ನಿನ್ನಂತೆ.
ಅದಕ್ಕೇ ಅಲ್ಲವಾ ವಿಜಯದ ನಂತರವೂ ಕೂಡಾ ಕಣ್ಣೀರು ಬರುವುದು......

ಸಂಜೆಯ ಶಾಂತ ತಂಗಾಳಿಯು ಹೂವಿನ ಪರಿಮಳವನ್ನು ನವಿರಾಗಿ ತೇಲಿಸಿ ನಡು ನಡುವೆ ಇಳಿಸಿದಂತೆ....
ಮತ್ತೆ ಮತ್ತೆ ಹೃದಯವನ್ನು ಮತ್ತಾಗಿಸುತ್ತೀಯಲ್ಲೇ....
ನಿನ್ನ ಹುಣ್ಣಿಮೆಯ ಮುಖಕ್ಕೆ ಸೋತೆನೋ.......
ನಿನ್ನ ಮುಂಗುರುಳ ಮಾಲೆಗೆ ಸೋತೆನೋ.....
ನಿಷ್ಕಲ್ಮಶ ಹೃದಯದ ಭಾವಕ್ಕೆ ಸೋತೆನೋ...
ಬೆಳ್ಳಂಬೆಳಗಿನ ಹೋಸದಂತಿರುವ ನಗುವಿಗೆ ಸೋತೆನೋ........
ಯಾವ ಭಾವದ ಬಂಧದಲ್ಲಿ ನನ್ನ ಹೃದಯವನ್ನು ಪಲ್ಲವಿಸಿಕೊಂಡಿದ್ದೇನೆಂದು ಹೇಳಲಿ ಗೆಳತಿ.......

ನಿನ್ನ ಒಲುಮೆಯ ಸೆಳೆತಕ್ಕೆ ಸಿಕ್ಕುವಾಗ ರಾಹುಕಾಲ, ಗುಳಿಕಾಲ, ಯಮಗಂಡಕಾಲ .....
ಊಹೂಂ..... ಯಾವುದೂ ಯಾವ ಲೆಕ್ಕಕ್ಕೂ ಬರಲಿಲ್ಲವಲ್ಲೇ......
ನಿನ್ನ ಕಂಡ ಕ್ಷಣ ಗ್ರಹ ಗತಿಗಳೇ ಬದಲಾದವೇನೋ......
ಅದು ನನ್ನ ಪಾಲಿಗೆ ಎಂತಹ ಅದ್ಭುತ ಕ್ಷಣವಿರಬೇಕು ನೋಡು.....
ಒಂದು ಕ್ಷಣದ ನಂತರ ಎಂತಹ ಬದಲಾವಣೆಗಗಳು ಗೊತ್ತಾ ನನ್ನ ಹೃದಯದ ಪ್ರಪಂಚದಲ್ಲಿ.....

ನನಗೆ ನಾನೇ ಹೇಳಿಕೊಂಡ ಮಾತುಗಳೆಷ್ಟೋ.........
ಕಣ್ಣೊಳಗೆ ಕಟ್ಟಿಕೊಂಡ ಕನಸುಗಳೆಷ್ಟೋ........
ನಿನ್ನ ನೆನಪಿನೊಂದಿಗೆ ಹೃದಯ ಪಲ್ಲವಿಸಿಕೊಂಡ ಕ್ಷಣಗಳೆಷ್ಟೋ......
ನೀ ಕಂಡಾಗಿನಿಂದ ನಿನಗಾಗಿ ಹೆಕ್ಕಿ ತಂದ ಕಪ್ಪೆ ಚಿಪ್ಪುಗಳಳೆಷ್ಟೋ......
ನನ್ನೊಳಗೆ ನಾನೇ ಹಾಡಿಕೊಂಡ ಹಾಡುಗಳು, ನಿನಗಾಗಿ ನಾನು ಬರೆದ ಓಲೆಗಳು,
ನಿನ್ನ ನೆನಪಾದಾಗಲೆಲ್ಲ ಉದ್ಭವಿಸಿದ ಕವನಗಳು, ಹುಣ್ಣಿಮೆಯ ಚಂದ್ರನ ಗೋಲದಲ್ಲಿ
ಕಾಣುವ ನಿನ್ನ ಮುಖ, ಹೊತ್ತಲ್ಲದ ಹೊತ್ತಿನಲ್ಲಿ ಹೃದಯಕ್ಕೆ ಬಂದು ಲಗ್ಗೆ ಇಡುವ ನಿನ್ನ ನೆನಪ ಸುಖ,
ನಿನ್ನ ಪ್ರೇಮದ  ಓಂಕಾರದಲ್ಲಿ ತೇಲಿ ಹೋಗಬೇಕೆಂಬ ತವಕ.....
ಗೆಳತೀ ಇವುಗಳನ್ನೆಲ್ಲವನ್ನೂ ನೀ ನನ್ನೆಡೆಗೆ ನೋಡಿ ನಕ್ಕ ಕ್ಷಣ ನಿನ್ನ ಮಡಿಲಿಗೆ ಸುರಿದು
"ಒಪ್ಪಿಸಿಕೋ" ಎಂದು ಹೃದಯ ಹಗುರಾಗಿಸಿಕೋಬೇಕೆಂದು ಕೊಂಡಿದ್ದೇನೆ........
ಕ್ಷಣಕ್ಕಾಗಿ ಕಾಯುತ್ತಾ ಕುಳಿತಿರುವ ಹಂಸವಾಗಿದ್ದೇನೆ........
ಬರುತ್ತೀಯಲ್ಲವಾ?

                        - ರಾಘವ್ ಲಾಲಗುಳಿ.

Tuesday, March 15, 2011

ಕಲೆ ಕೊಟ್ಟ ಶಿಲ್ಪಿಗೆ....


ಶಿಲ್ಪಿ ನಿನ್ನಾಟ
ರಸಿಕಮನಕೂಟ
ಶಿಲೆಯಲ್ಲ ಕಲೆಯಾಗಿ
ಹಬ್ಬುತಿಹುದು |


 

ಕೈ ಕುಣಿತದೊಂದಿಗೆ
ಕಲ್ಲಿಗಿಡೊ ಚಾಣ
ಶಿಲೆಯೊಳಗೆ ರಸಿಕತೆಯ
ತೆರೆದಿಡುವ ಜಾಣ |



ಎಷ್ಟು ಜ್ಞಾತರು
ನಶಿಸಿದರು ಇಲ್ಲಿ
ಕೊಟ್ಟ ಕಲೆಮಾತ್ರ
ಉಳಿದಿಹುದು ಶಿಲೆಯಲ್ಲಿ |

ಶಿಲೆಯೆಲ್ಲ ಶಿಲೆಯಾಗಿ
ಉಳಿದಿಲ್ಲ ನೋಡು
ಶಿಲೆಯರಳಿ ಕಲೆಯಾಗಿ
ಹಂಪೆ ಹಳೆಬೀಡು |



ಮತ್ತೊಮ್ಮೆ ಬಾ ಜಗಕೆ
ಕಲೆಯ ಒಡಲೊಳಗಿಟ್ಟು
ಕರೆಯುತಿರುವೆನು ಶಿಲ್ಪಿ
ಕುಂಭ ಸ್ವಾಗತ ಕೊಟ್ಟು |

******************** ರಾಘವ್.
[ಈಗರು ವರ್ಷಗಳ ಹಿಂಹೆ ಹಂಪೆ ಹಳೆಬೀಡಿಗೆ ಹೋದಾಗ ಏನೋ ನ್ಸಿದ್ದನ್ನ ಬರ್ದುಬಿಟ್ಟಿದ್ದೆ. ಒಂದಕ್ಷರಾನೂ ಹಿಂದೆ ಮುಂದೆ ಮಾಡದೇ ಈಗ ನಿಮ್ ಮುಂದೆ ಇಟ್ಟಿದೀನಿ..
(ಹೊಸ ಸೀಸೆ ಹಳೆ ಮದ್ಯ)]




Friday, March 11, 2011

ನಿರ್ದಯಿ ಸಾಗರದ ಸ್ವಾರ್ಥ ಬಯಕೆ...


ಸಮುದ್ರದ ಪ್ರೀತಿ ಉಕ್ಕಿಬಿಟ್ಟಿದೆ ಇಂದು…

ಈ ಸಮುದ್ರಕ್ಯಾಕೋ ಚಂದ್ರನ ಮೇಲೆ ಈ ಪರಿ ವ್ಯಾಮೋಹ? ಅದೆಷ್ಟು ಕಾಲ ಈ ಸಮುದ್ರವು ಉಕ್ಕಿ ಬರುವ ಪ್ರೀತಿಗೆ ಹೋಲಿಕೆಯಾಗಿತ್ತೋ… ಹುಣ್ಣಿಮೆಯ ಚಂದ್ರನ ನೋಡಿ ಉಕ್ಕಿ ಬರುವ ಸಾಗರದಂತೆ ಎಂದು ಅದೆಷ್ಟು ಕವಿಗಳು ವಣಿðಸಿದ್ದರೋ…?  ಅವುಗಳನ್ನೆಲ್ಲವನ್ನೂ ನಿಜ ಮಾಡಲೆಂಬಂತೆ ಉಕ್ಕಿಬಿಟ್ಟಿದೆ ಇಂದು….

       ಈ ಸಾಗರದ ದಡದಲ್ಲಿ ಕನಸು ಕಟ್ಟಿದವರೆಷ್ಟು ಮಂದಿಯೋ…. ಸಾಗರದ ದಡದಲ್ಲೊಂದು ಮನೆ ಮಾಡಬೇಕು… ಏರೇರಿ ಬರುವ ತೆರೆಗಳನ್ನು ನೋಡ್ತಾ ಇರಬೇಕು…. ಸಮುದ್ರದ ಮೊರೆತ ಕಿವಿಯ ಮೇಲೆ ಯಾವಾಗಲೂ ಕೇಳ್ತಿರಬೇಕು…… ಕಣ್ಣ ತುಂಬೆಲ್ಲಾ ಸಮುದ್ರವೇ ಹರಡಿರಬೇಕು…. ಹುಣ್ಣಿಮೆಯ ರಾತ್ರಿ ಮರಳ ದಡದ ಮೇಲೆ ಕುಳಿತು ಚಂದ್ರನಿಗಾಗಿ ಉಕ್ಕುಕ್ಕಿ ಬರುವ ಸಮುದ್ರವನ್ನು ನೋಡ್ತಾ ಆನಂದ ಪಡಬೇಕು ಅಂದುಕೊಂಡು ಸಾಗರದ ದಡದ ಮೇಲೆ ಅದೆಷ್ಟು ಸಾವಿರ ಸಾವಿರ ಮಂದಿ ಬೀಡು ಬಿಟ್ಟಿದ್ದರೋ……..  ಕೊನೆಗೂ ಸಮುದ್ರವು ತನ್ನ ಪ್ರೀತಿಯ ಕಟ್ಟೆ ಒಡೆದೇ ಬಿಟ್ಟಿತಲ್ಲಾ….

        ಇಷ್ಟು ವಷðಗಳ ಕಾಲ ಕೈಗೆ ಸಿಗದ ಚಂದಿರನಿಗಾಗಿ ಉಕ್ಕಿ ಉಕ್ಕಿ ಸುಸ್ತಾಗಿ ಬೇಸತ್ತು ಬಿಟ್ಟಿತ್ತೇನೋ….. ಭೂಮಿಗೆ ಚಂದ್ರ ಹತ್ತಿರವಾಗೋ ದಿನಕ್ಕಾಗಿ ಆ ಸಾಗರವೂ ಕಾಯುತ್ತಿದ್ದಿರಬೇಕು…. ಹತ್ತಿರವಾಗಿಯೇ ಬಿಟ್ಟಿತಲ್ಲಾ…. ಕೊನೆಯ ಬಾರಿಯ ಪ್ರಯತ್ನಕ್ಕೊಂದು ಮುನ್ನಾ ತಯಾರಿಯ ರೀತಿಯಲ್ಲಿ… ಚಂದಿರನ ಹೆಗಲೇರಿ  ಕುಂತುಬಿಡುವ ಆಸೆಯಲ್ಲಿ ಉಕ್ಕಿ ಬಿಟ್ಟಿತಲ್ಲಾ… ಎರಡು ಕೋಟಿ ಜೀವಗಳನ್ನು ತೆಕ್ಕೆಯಲ್ಲಿ ಉಸಿರುಗಟ್ಟಿಸಿಯಾದರೂ ಸರಿ ಚಂದ್ರನ ಸೇರಲೇ ಬೇಕೆಂಬ ಸಾಗರದ ನಿದðಯೀ ಸ್ವಾಥð ಪ್ರೀತಿಯಾ ಇದು?

        ಹೌದು ಇದೇ ಬರುವ ಹುಣ್ಣಿಮೆಗೆ ತಾನೇ ಭೂಮಿಗೆ ಚಂದ್ರನು ಅತೀ ಸಮೀಪದಲ್ಲಿ ಬರೋದು… ಹದಿನೆಂಟಕ್ಕೆ ಹುಣ್ಣಿಮೆ ಈವತ್ತಿನ್ನೂ ಹನ್ನೊಂದು….. ಮುನ್ನಾ ತಯಾರಿಯಾಗಿಯೇ ಲಕ್ಷಾಂತರ  ಜನರನ್ನು ಒಂದಿಡೀ ದೇಶವನ್ನು ಬಲಿತೆಗೆದುಕೊಂಡ  ಮೇಲಾದರೂ ಹಸಿದ ಬಿಸಿ ತಣಿದಿದೆಯೋ ಏನೋ…. ಸಾಗರದ ಒಡಲಿನ ಹಸಿವಿನ ಬಿಸಿ ಇಷ್ಟಾಗಿಯೂ ಆರದಿದ್ದರೆ ಹದಿನೆಂಟರೊಳಗೆ ಇನ್ನೆಷ್ಟು ಜೀವಗಳ ಬಲಿಯಿದೆಯೋ… ಹಾಗಾಗದಿರಲಿ….

             ಭೂಮಿ ನುಂಗುವ ಬಯಕೆ ನಿನಗೂ ಶುರುವಾಯಿತಾ?...
              ಪದೇ ಪದೇ ಜಪಾನಿನ ಮೇಲೇ ಕಣ್ಣು...

  ಮನೆಗಳೆಂದರೆ ಜನಗಳೆಂದರೆ ಜೀವವಿಲ್ಲದ ಕಲ್ಲಿದ್ದಲ್ಲಿನಂತೆ ಸುಟ್ಟು ಕರಕಲಾಗಿಬಿಟ್ಟವು.
   ಅಣು ಬಾಂಬ್ ನ ಮೊದಲ ಅನುಭವದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆಘಾತ.
                           ನಗರದ ತುಂಬೆಲ್ಲಾ ಕರಾಳ ಮೌನ.
ಅಣು ಅಣುವಿನಲ್ಲೂ ಅಪಾಯ ತುಂಬಿರುವ ಅಣು ಸ್ಥಾವರಕ್ಕೇ ಬೆಂಕಿ
ಜಪಾನ್  ಶ್ರಮಜೀವಿಗಳ ದೇಶ. ಹಿಂದೊಂದು ಯುದ್ಧದ ಸಮಯದಲ್ಲಿ ಪೂರ್ತಿ ನೆಲಸಮವಾದ ದೇಶ ಎಷ್ಟು ಬೇಗ ಎದ್ದು  ನಿಂತಿತ್ತು... ಏಳುವಷ್ಟರಲ್ಲಿ ಬೀಳಲಿಕ್ಕಾಯಿತು. ಮತ್ತಂತಹುದೇ ದುರಂತ...
ನಿರುಪದ್ರವೀ ದೇಶಕ್ಕೆ ಪ್ರಪಂಚದ ಎರಡನೇ ಬಲಿಷ್ಟ ದೇಶಕ್ಕೆ  ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ  ಈ ದೇಶಕ್ಕೆ  ಒದಗಿದ ಈ ಆಘಾತ ನಿಜಕ್ಕೂ ವಿಷಾದನೀಯ.
                     ದೇಶವೆಲ್ಲಾ ಕಸದ ತೊಟ್ಟಿಯಾಯಿತಲ್ಲಾ...
                                ನೆಲವೆಲ್ಲ ಮುಳುಗಿ ನೆನಪೊಂದುಳಿಯಿತಾ?


                ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ.

                    ಎಷ್ಟು ಭಯಂಕರ ಇರಬೇಕಲ್ವಾ.....
          
   ಪ್ರಳಯದ ಕಲ್ಪನೆ ನಿಜವಾಗುತ್ತಿದೆಯಾ........ ಕಣ್ಣಾರೆ ಕಂಡ ಮೇಲೆ ಏನನ್ನೋಣ....