ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, April 12, 2011

ನಾನರಿಯದ ನೀನು...


ಹೇಗಿರಬೇಕು ನನ್ನೀ ಮನವು
ನೀನೆ ತೀಡಿಬಿಟ್ಟೆ
ಬಣ್ಣದ ಭಾವವು ಸೋಕುವ ಪ್ರೀತಿಯ
ಬಾಣ ಹೂಡಿಬಿಟ್ಟೆ..

ನನ್ನದು ಪ್ರೀತಿಯೋ ನಿನ್ನೆಡೆ ಸೆಳೆತವೋ
ನಾನೇನನು ಬಲ್ಲೆ..
ನೀನುಣಿಸಿದ್ದನು ಉಣ್ಣುವ ನನಗೆ
ನೀನೆಲ್ಲವು ನಲ್ಲೆ..

ನನ್ನಯ ಪ್ರೀತಿಯ ನದಿಯದು ಹರಿಯುವ
ದಿಕ್ಕು ನೋಡಲಿಲ್ಲ..
ಹರಿಯುವ ಸೊಬಗನು ಕಲಿಸಿದ ನಿನಗೇ
ಅದರ ಪ್ರೀತಿಯೆಲ್ಲಾ...

ತಿದ್ದಿದೆ ತೀಡಿದೆ ಮನ ಹದಗೊಳಿಸಿದೆ
ಏನದು ನನ್ನಲ್ಲಿ...
ಪ್ರೀತಿಯ ಮಾಡಲು ಕಲಿಸಿ ಹೋದವಳೆ
ನಿನ್ನೊಲವ್ಯಾರಲ್ಲಿ?

ನನ್ನೆದೆ ಮಹಲಲಿ ಹಚ್ಚಿಹ ದೀಪ
ನಿನ್ನೊಲವಿನ ಪ್ರತಿರೂಪ..
ಹೃದಯವೇ ಉರಿದರೂ ಬೆಳಕನು ನೀಡುತ
ಸಾಯುವ ತ್ಯಾಗದ ಶಾಪ..
-----ರಾಘವ್ ಲಾಲಗುಳಿ.

Tuesday, April 5, 2011

ನಿನ್ನ ನೆನಪಿನಲ್ಲಿ ಹ್ರದಯ ಪಲ್ಲವಿಸಿಕೊಂಡ ಕ್ಷಣ..............

   
         
ಹೇಯ್ ... ದೇವತೆ ಕಣೇ ನೀನು.... ಒಂದು ಕ್ಷಣ ಎಂತಹ ದಿಗಿಲು ಕೊಟ್ಟುಬಿಟ್ಟೆ..
ಸುಂದರವಾದ ಜಲಪಾತ, ಆಗತಾನೇ ಅರಳಿದ ಹೂವು, ಸದ್ದಿಲ್ಲದೇ ಇಳಿಯುವ ಮಂಜು,ಹಸಿರೆಲೆಯ ಮೇಲೆ ಕಣ್ಣರಳಿಸಿ ಕುಳಿತ ಇಬ್ಬನಿ, ಹರಿಯುವ ನೀರು, ಹಾರುವ ಹಕ್ಕಿ, ಅಮ್ಮನ ಪ್ರೀತಿ ತುಂಬಿದ ಕಣ್ಣು ಹೀಗೆ ಸುಂದರವಾದುದೆಲ್ಲಾ ದಿಗಿಲೇ..... ನಿನ್ನಂತೆ.
ಅದಕ್ಕೇ ಅಲ್ಲವಾ ವಿಜಯದ ನಂತರವೂ ಕೂಡಾ ಕಣ್ಣೀರು ಬರುವುದು......

ಸಂಜೆಯ ಶಾಂತ ತಂಗಾಳಿಯು ಹೂವಿನ ಪರಿಮಳವನ್ನು ನವಿರಾಗಿ ತೇಲಿಸಿ ನಡು ನಡುವೆ ಇಳಿಸಿದಂತೆ....
ಮತ್ತೆ ಮತ್ತೆ ಹೃದಯವನ್ನು ಮತ್ತಾಗಿಸುತ್ತೀಯಲ್ಲೇ....
ನಿನ್ನ ಹುಣ್ಣಿಮೆಯ ಮುಖಕ್ಕೆ ಸೋತೆನೋ.......
ನಿನ್ನ ಮುಂಗುರುಳ ಮಾಲೆಗೆ ಸೋತೆನೋ.....
ನಿಷ್ಕಲ್ಮಶ ಹೃದಯದ ಭಾವಕ್ಕೆ ಸೋತೆನೋ...
ಬೆಳ್ಳಂಬೆಳಗಿನ ಹೋಸದಂತಿರುವ ನಗುವಿಗೆ ಸೋತೆನೋ........
ಯಾವ ಭಾವದ ಬಂಧದಲ್ಲಿ ನನ್ನ ಹೃದಯವನ್ನು ಪಲ್ಲವಿಸಿಕೊಂಡಿದ್ದೇನೆಂದು ಹೇಳಲಿ ಗೆಳತಿ.......

ನಿನ್ನ ಒಲುಮೆಯ ಸೆಳೆತಕ್ಕೆ ಸಿಕ್ಕುವಾಗ ರಾಹುಕಾಲ, ಗುಳಿಕಾಲ, ಯಮಗಂಡಕಾಲ .....
ಊಹೂಂ..... ಯಾವುದೂ ಯಾವ ಲೆಕ್ಕಕ್ಕೂ ಬರಲಿಲ್ಲವಲ್ಲೇ......
ನಿನ್ನ ಕಂಡ ಕ್ಷಣ ಗ್ರಹ ಗತಿಗಳೇ ಬದಲಾದವೇನೋ......
ಅದು ನನ್ನ ಪಾಲಿಗೆ ಎಂತಹ ಅದ್ಭುತ ಕ್ಷಣವಿರಬೇಕು ನೋಡು.....
ಒಂದು ಕ್ಷಣದ ನಂತರ ಎಂತಹ ಬದಲಾವಣೆಗಗಳು ಗೊತ್ತಾ ನನ್ನ ಹೃದಯದ ಪ್ರಪಂಚದಲ್ಲಿ.....

ನನಗೆ ನಾನೇ ಹೇಳಿಕೊಂಡ ಮಾತುಗಳೆಷ್ಟೋ.........
ಕಣ್ಣೊಳಗೆ ಕಟ್ಟಿಕೊಂಡ ಕನಸುಗಳೆಷ್ಟೋ........
ನಿನ್ನ ನೆನಪಿನೊಂದಿಗೆ ಹೃದಯ ಪಲ್ಲವಿಸಿಕೊಂಡ ಕ್ಷಣಗಳೆಷ್ಟೋ......
ನೀ ಕಂಡಾಗಿನಿಂದ ನಿನಗಾಗಿ ಹೆಕ್ಕಿ ತಂದ ಕಪ್ಪೆ ಚಿಪ್ಪುಗಳಳೆಷ್ಟೋ......
ನನ್ನೊಳಗೆ ನಾನೇ ಹಾಡಿಕೊಂಡ ಹಾಡುಗಳು, ನಿನಗಾಗಿ ನಾನು ಬರೆದ ಓಲೆಗಳು,
ನಿನ್ನ ನೆನಪಾದಾಗಲೆಲ್ಲ ಉದ್ಭವಿಸಿದ ಕವನಗಳು, ಹುಣ್ಣಿಮೆಯ ಚಂದ್ರನ ಗೋಲದಲ್ಲಿ
ಕಾಣುವ ನಿನ್ನ ಮುಖ, ಹೊತ್ತಲ್ಲದ ಹೊತ್ತಿನಲ್ಲಿ ಹೃದಯಕ್ಕೆ ಬಂದು ಲಗ್ಗೆ ಇಡುವ ನಿನ್ನ ನೆನಪ ಸುಖ,
ನಿನ್ನ ಪ್ರೇಮದ  ಓಂಕಾರದಲ್ಲಿ ತೇಲಿ ಹೋಗಬೇಕೆಂಬ ತವಕ.....
ಗೆಳತೀ ಇವುಗಳನ್ನೆಲ್ಲವನ್ನೂ ನೀ ನನ್ನೆಡೆಗೆ ನೋಡಿ ನಕ್ಕ ಕ್ಷಣ ನಿನ್ನ ಮಡಿಲಿಗೆ ಸುರಿದು
"ಒಪ್ಪಿಸಿಕೋ" ಎಂದು ಹೃದಯ ಹಗುರಾಗಿಸಿಕೋಬೇಕೆಂದು ಕೊಂಡಿದ್ದೇನೆ........
ಕ್ಷಣಕ್ಕಾಗಿ ಕಾಯುತ್ತಾ ಕುಳಿತಿರುವ ಹಂಸವಾಗಿದ್ದೇನೆ........
ಬರುತ್ತೀಯಲ್ಲವಾ?

                        - ರಾಘವ್ ಲಾಲಗುಳಿ.