ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, June 20, 2011

ಅಂತಹ ಅಣ್ಣ.....

(ಹಾವೇರಿ ಲೈಬ್ರರಿಯ ಪುಸ್ತಕಗಳ ಮಧ್ಯೆ ನನಗೆ ಸಿಕ್ಕಿದ ಪುಸ್ತಕ "ಚಿಕನ್ ಸೂಪ್ ಫಾರ್ ದಿ ಸೌಲ್". ಈ ಪುಸ್ತಕದ ಒಂದು ಕಥೆ ನೆನಪಾಗ್ತಿದೆ. ಹಾಗೇ ಸುಮ್ನೆ ನಿಮ್ ಮುಂದೆ....)

ಪಾಲ್ ನಿಗೆ ಅವನ ಅಣ್ಣ ಕ್ರಿಸ್ಮಸ್ ಕೊಡುಗೆಯಾಗಿ  ಹೊಚ್ಚ ಹೊಸ ಕಾರೊಂದನ್ನು ನಿಡಿದ.ಕ್ರಿಸ್ಮಸ್ ನ ಹಿಂದಿನ ದಿನ ಪಾಲ್ ಮನೆಗೆ ಹೋಗಲು ತನ್ನ ಆಫೀಸಿನಲ್ಲಿ  ಕೆಲಸ ಮುಗಿಸಿಕೊಂಡು ಹೊರಬಂದಾಗ ತನ್ನ ಹೊಚ್ಚ ಹೊಸ ಕಾರನ್ನು ಆಸೆಯ ಕಣ್ಣುಗಳಿಂದ ನೋಡುತ್ತಿದ್ದ ಬೀದಿ ಹುಡುಗನೊಬ್ಬನನ್ನು ಕಂಡ.

 ಆ ಹುಡುಗ  "ಮಿಸ್ಟರ್ ಈ ಕಾರು ನಿಮ್ದಾ ?" ಎಂದು ಪ್ರಶ್ನಿಸಿದ

"ಹೌದು" ನುಡಿದ ಪಾಲ್. "ನನ್ನ ಅಣ್ಣ ನನಗೆ ಅದನ್ನು ಕ್ರಿಸ್ಮಸ್  ಗಿಪ್ಟಾಗಿ ಕೊಟ್ಟಿದ್ದಾನೆ"

ಪಾಲ್ ನ ಮಾತು ಕೇಳಿ ಹುಡುಗ ದಿಗ್ಭ್ರಮೆಯಿಂದ ಕೇಳಿದ " ನಿಮ್ಮ ಅಣ್ಣ ನಿಮಗೆ ಕೊಟ್ಟರೆಂದರೆ ನೀವು ಅದಕ್ಕೆ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ..! ಅಂತಹ ಅಣ್ಣ......." ಹುಡುಗ ತಡವರಿಸಿದ.

ಹುಡುಗ ಏನು ಹೇಳಲು ಹೊರಟಿದ್ದಾನೆ ಎಂದು ತನಗೆ ಗೊತ್ತು ಅಂದುಕೊಂಡ ಪಾಲ್.  ತನಗೂ ಅಂತ ಅಣ್ಣ ಇದ್ದಿದ್ದರೆ ಅಂತ ಹೇಳ ಹೊರಟಿದ್ದಾನೆ ಹುಡುಗ ಎಂದುಕೊಂಡ. ಆದರೆ ಆ ಹುಡುಗನ ಮುಂದಿನ ಮಾತುಗಳಿಂದ ಪಾಲ್ ಗೆ ತಾನು ಭೂಮಿಯಲ್ಲಿ ಹೂತು ಹೋಗಬಾರದೇ ಎನಿಸಿತು.

"ಅಂತಹ ಅಣ್ಣ "... ಮುಂದುವರೆದ ಆ ಪುಟ್ಟ ಹುಡುಗ "ನಾನೂ ಆಗಬಲ್ಲೆನಾದರೆ......"

ದಿಗ್ಭ್ರಮೆಯಿಂದ ಪಾಲ್ ಆ ಹುಡುಗನತ್ತ ನೋಡಿದ. ನಂತರ ಏನೋ ಹೊಳೆದು ಆ ಹುಡುಗನನ್ನು ಕೇಳಿದ " ನನ್ನ ಕಾರಿನಲ್ಲಿ ಒಂದು ರೌಂಡ್ ಹೋಗಬಯಸುತ್ತೀಯಾ?"

"ಓಹೋ..! ನನಗೆ ಕಾರಿನಲ್ಲಿ ಹೋಗುವುದೆಂದರೆ ಬಲು ಖುಷಿ"

ಒಂದು ಚಿಕ್ಕ ರೌಂಡ್ ಹೊಡೆದ ನಂತರ ಆ ಹುಡುಗ ಉತ್ಸಾಹ ತುಂಬಿದ ಕಣ್ಣುಗಳಿಂದ  ಪಾಲ್ ನತ್ತ ತಿರುಗಿ ಕೇಳಿದ "ಕಾರನ್ನು ನನ್ನ ಮನೆಯ ಎದುರಿಗೆ ತೆಗೆದುಕೊಂಡು ಹೋಗುತ್ತೀರಾ?"

ಪಾಲ್ ಮುಗುಳುನಕ್ಕ. ಈ ಹುಡುಗ ಏತಕ್ಕಾಗಿ ತನ್ನ ಮನೆಯ ಎದುರಿಗೆ ಕಾರನ್ನು ತೆಗೆದುಕೊಂಡು ಹೋಗೆಂದು ಹೇಳುತ್ತಿದ್ದಾನೆ ಎಂಬುದನ್ನು ಬಲ್ಲೆ ಎಂದುಕೊಂಡ. ಹುಡುಗ ತನ್ನ ನೆರೆಹೊರೆಯವರಿಗೆಲ್ಲಾ ತಾನು ಎಂತಹ ಕಾರಿನಲ್ಲಿ ಸವಾರಿ ಮಾಡಿದೆ ಎಂಬುದನ್ನು ತೋರಿಸಿಕೊಳ್ಳಲು ಬಯಸುತ್ತಿದ್ದಾನೆ ಕಿಲಾಡಿ. ಆದರೆ ಪಾಲ್ ನ ಎಣಿಕೆ ಮತ್ತೊಮ್ಮೆಯೂ ತಪ್ಪಾಗಿತ್ತು.

" ಇನ್ನೂ ಸ್ವಲ್ಪ ಮುಂದೆ ಆ ಮೆಟ್ಟಿಲು ಇದೆಯಲ್ಲಾ  ಅದರ ಮುಂದೆ ಸ್ವಲ್ಪ ನಿಲ್ಲಿಸುತ್ತೀರಾ?" ಕೇಳಿಕೊಂಡ ಹುಡುಗ.

ಕಾರಿನಿಂದಿ ಇಳಿದು ದುಡು ದುಡು ಓಡಿದ ಹುಡುಗ. ಒಂದೆರಡು ಕ್ಷಣಗಳಲ್ಲೇ ಆತ ಹಿಂತಿರುಗುವುದನ್ನು ಪಾಲ್ ಕಂಡ.ಹುಡುಗ ತನ್ನ ಅಂಗವಿಕಲ ತಮ್ಮನನ್ನು ಹೊತ್ತು ತಂದ. ತಮ್ಮನನ್ನು ಮನೆಯ ಕೊನೆಯ ಮೆಟ್ಟಿಲ ಮೇಲೆ ಕುಳ್ಳಿರಿಸಿ ತಾನೂ ಅವನಿಗೆ ತಾನೂ ಅವನಿಗೆ ಒತ್ತಿ ಕುಳಿತು, ಕಾರಿನತ್ತ ಬೆರಳು ಮಾಡಿ ತೋರಿಸುತ್ತಾ ಹೇಳಿದ-

"ತಮ್ಮಾ ಇಲ್ಲಿ ನೋಡು ಮೆಟ್ಟಿಲು ಇಳಿಯುವಾಗ ನಾನು ಹೇಳಿದೀನಲ್ಲಾ ಅದೇ ಕಾರು. ಆ ಕಾರಿನಲ್ಲಿ ಕುಳಿತಿದ್ದಾರಲ್ಲಾ ಅವರ ಅಣ್ಣ ಅವರಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಕೊಟ್ಟರಂತೆ. ಅದೇ ರೀತಿ ಮುಂದೆ ಒಂದು ದಿನ ನಾನೂ ನಿನಗೆ ಒಂದು ಕಾರನ್ನು ಕೊಡುತ್ತೇನೆ. ಆಗ ನೀನೇ ಹೋಗಿ.. ನಾನು ಹೇಳ್ತಾ ಇರ್ತೀನಲ್ಲಾ... ಕ್ರಿಸ್ಮಸ್ ಹಬ್ಬದ ಸಂಭ್ರಮಗಳು, ಅಂಗಡಿಗಳನ್ನು ಸುಂದರವಾಗಿ ಸಿಂಗರಿಸಿರುತ್ತಾರೆ ಅಂತೆಲ್ಲಾ.... ಅದನ್ನೆಲ್ಲವನ್ನೂ ನೀನೇ ಸ್ವಂತ ಹೋಗಿ ನೋಡಬಹುದು"

ಪಾಲ್ ಕಾರಿನಿಂದಿಳಿದು ಆ ಅಂಗವಿಕಲ ತಮ್ಮನನ್ನು ತಂದು ತನ್ನ ಕಾರಿನ ಮುಂದಿನ ಸೀಟಿನಲ್ಲಿ ಕುಳ್ಳಿರಿಸಿದ.ಹೊಳೆಯುವ ಆ ಪುಟ್ಟ ಎರಡು ಜೋಡಿ ಆ ಕಣ್ಣುಗಳಲ್ಲಿನ ಸಂತಸ ಪಾಲ್ ನಲ್ಲಿಯೂ ಪ್ರತಿಫಲಿಸಿತು.

ತನ್ನ ತಪ್ಪು ನಿರೀಕ್ಷೆಯಿಂದ ಎರಡು ಬಾರಿ ಹೊಡೆತ ತಿಂದ ಮೇಲೆ ಅವನಿಗೆ ಅರಿವಾದದ್ದು " ನೀಡುವವರೇ ಆಶೀರ್ವದಿತರು " ಎಂಬ ಧರ್ಮ ಗೃಂಥದ ಮಾತು.

ಚಿಕ್ಕ ಮಕ್ಕಳೇ ಹಾಗೆ... ಅರ್ಥಕ್ಕೆ ನಿಲುಕದ ಪುಟ್ಟ ದೇವರ ತುಂಡುಗಳು... ಅವರ ವಿಚಾರಗಳು ಬರೀ ಮುಗ್ಧ ಮುಗ್ಧ... ಸ್ವಾರ್ಥವಿಲ್ಲದ.... ಸ್ವಾರ್ಥವೊಂದೇ ಅಲ್ಲದ ಬೇಡಿಕೆಗಳು.... ಕಣ್ಣ ತುಂಬೆಲ್ಲ ಪುಟ್ಟ ಪುಟ್ಟ ಕನಸುಗಳು... ನಮ್ಮನ್ನೇ ವಿಚಾರಕ್ಕಿಳಿಸುವಂತಹ ಮಾತುಗಳು..ಪ್ರಶ್ನೆಗಳು.... ಕಲಿತುಕೊಳ್ಳುವವರಾದರೆ ಅವರಿಂದ ನೂರು ಕಲಿತುಕೊಳ್ಳಬಹುದು. ನಮ್ಮ ಅಹಂನಿಂದ ಸ್ವಲ್ಪ ಹೊರಗೆ ಬರಬೇಕಷ್ಟೇ....

ಚಿಕ್ಕ ಮಕ್ಕಳು ಹೀಗೇ ಅನ್ನೋದಕ್ಕಿಂತ ದೊಡ್ಡವರು ಅನ್ನಿಸಿಕೊಂಡವರ ಆಲೋಚನೆಗಳು ಎಷ್ಟು ಸೀಮಿತ ನೋಡಿ...
ನಾನೂ ದೊಡ್ಡವನಾಗುತ್ತಿದ್ದೇನೆ...... ಭಯವಾಗುತ್ತಿದೆ.....
ಮುಗ್ಧ ಮನಸಿನೆಡೆಗೆ ಹೊರಳಬೇಕೆನಿಸುತ್ತಿದೆ.
ಚಿಕ್ಕವನಾಗುವ ಮನಸ್ಸಾಗುತ್ತಿದೆ....

******** @ರಾ***********

10 comments:

 1. ಚ೦ದ ಆಯ್ದು ಬರೆದಿದ್ದು.. ತಮ್ಮಯ್ಯ..

  ReplyDelete
 2. ಆ ಕನಸು ಕಾಣುತ್ತಿರುವ ನಮ್ಮ ಸುತ್ತಮತ್ತಲಿನ ಮುಗ್ದ ಮನಸ್ಸಿನ ಕಂದಮ್ಮಗಳನ್ನ ನೀವು ನಂಗೆ ನೆನಪಿಸಿ ಕೋಟ್ರಿ.. ಚೆನ್ನಾಗಿದೆ

  ReplyDelete
 3. ಧನ್ಯವಾದ ಅಕ್ಕಾ.....
  ಸಲಹೆಗಳಿದ್ರೆ ಹೇಳು....
  ನಾನಿನ್ನೂ ಬಚ್ಚಾ.....

  ********

  ಜ್ಯೋತಿ ಬೆಳಗುತ್ತಲೇ ಇರುತ್ತದೆ. ಆದರೂ ನೆನಪಿಸುವ ಪ್ರಯತ್ನ ಹ್ಹ ಹ್ಹಾ...
  ಹೀಗೇ ನನ್ನ blog ಗ ಭೆಟ್ಟಿ ಕೊಡುತ್ತಲೇ ಇರಿ...

  ********

  ReplyDelete
 4. ನಿಜ ರಾಘವ.. ಚಿಕ್ಕ ವಯಸ್ಸಿನ ಮುಗ್ಧತೆಯೇ ಚಂದ... ಅವರ ವಿಕರವಿಲ್ಲದೆ ಮನಸ್ಸು ಸುಂದರ.. ಮನುಷ್ಯ ದೊಡ್ಡವನಾಗುತ್ತ ತನ್ನತನವನ್ನು ಕಳೆದುಕೊಂಡು ಸ್ವಾರ್ಥಿಯಾಗುತ್ತಾನೆ...! ಕೊಡುವುದರಲ್ಲಿನ ಸಂತಸವೇ ಬೇರೆ.. ನಾವು ಕೊಟ್ಟಾಗ ಅವರ ಕಣ್ಣಿನ ಹೊಳಪು ನೋಡುವುದೇ ಒಂದು ಖುಷಿ... :)
  ಒಳ್ಳೆಯ ಬರಹ.. theme ಚೆನ್ನಾಗಿದೆ...

  ReplyDelete
 5. ಹೂಂ. ಮನುಷ್ಯ ಎಷ್ಟೊಂದು ಬಾರಿ ತನ್ನತನವನ್ನು ಕಳೆದುಕೊಳ್ಳುತ್ತಾನೆ.
  ಹೆಜ್ಜೆ ಹೆಜ್ಜೆಗೂ.......
  ಧನ್ಯವಾದ ಕಾವ್ಯಾ.......
  ಹೀಗೇ ಓದ್ತಾ ಇರಿ....

  ReplyDelete
 6. ಅಬ್ಬಾ! ಅದ್ಭುತ ಕಥೆ ರಾಘವ್! ನಮಗೆಲ್ಲ ಇಂಥ ಒಳ್ಳೆ ನೀತಿ ಕಥೆಯನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು! ಮನದ ಎಲ್ಲಾ ಕೋಣೆಗಳ ಕದಗಳನ್ನು ತಟ್ಟಿ ಮಲಗಿರುವವರನ್ನು ಎಬ್ಬಿಸುವಂತಿದೆ ಈ ಕಥೆಯ ನೀತಿ!

  ReplyDelete
 7. ಪ್ರದೀಪ್......
  ಧನ್ಯವಾದಗಳು......
  ಕಲತುಕೊಂಡರೆ ಎಲ್ಲದರಲ್ಲಿಯೂ ಒಂದೊಂದು ನೀತಿಯಿದೆ.
  ನಂಗೊತ್ತಿರೋದನ್ನ ತಿಳ್ಸಿದೀನಿ... ನೀತಿ ನೀವು ಕಂಡ್ಕೊಂಡ್ರಲ್ಲಾ....
  ಆ ಖುಷಿ ನಂಗೂ ಇದೆ.....
  ಧನ್ಯವಾದ....
  ಹೀಗೇ ಓದ್ತಾ ಇರಿ....

  ReplyDelete
 8. ಚೊಲೊ ಬರೀತಾ ಇದ್ದೆ... ಬರಿ ಬರಿ

  ReplyDelete