ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, December 27, 2013

ನಮ್ಮ ಕೆಲಸವನ್ನು ನಮ್ಮ ಮನಸ್ಸೆಷ್ಟು ಸಮರ್ಥಿಸುತ್ತೆ..


ಆತ್ಮಾಪಮ್ಯೇನ ಸರ್ವತ್ರ ಸಮರ ಪಶ್ಯತಿಯೋರ್ಜುನ  |
ಸುಖಂ ವಾ ಯದಿ ವಾ ದುಃಖಂ ಸಯೋಗೀ ಪರಮೋ ಮತಃ ||

ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ  ಬೇರೆಯವರನ್ನೂ ಸಹ ಹಾಗೆಯೇ ಪ್ರೀತಿಸು..

ಇದು ಸಾಧ್ಯವಾದರೆ ನಮ್ಮ ಮನಸ್ಸೆಷ್ಟೋ ಶಾಂತವಾಗಿರಬಹುದು... ನಾನೂ ಇದನ್ನು ಪ್ರಯತ್ನಿಸಿದ್ದೇನೆ..... ಸಾಧ್ಯವಾದಾಗಲೆಲ್ಲ ಪ್ರಯತ್ನಿಸುವ ಮನಸ್ಸು ಮಾಡುತ್ತೇನೆ...... ಆದರೆ ಗೆದ್ದಿದ್ದೆಷ್ಟು ಬಾರಿ...???
ನೂರಕ್ಕೆ ಮೂರು ಬಾರಿ ಮಾತ್ರ.....
ವಿಷಯವನ್ನು ನಾವು ಅರಿಯುವುದು ಬೇರೆ.... ಅರಿತಂತೆ ನಡೆಯುವುದು ಬೇರೆ.... ನಮ್ಮ ಪ್ರೀತಿಸಿಕೊಂಡಷ್ಟು ನಾವು ಇತರರನ್ನೂ ಪ್ರೀತಿಸಿದರೆ ಮನಸ್ಸು ಹರ್ಷಿಸುತ್ತದೆ.... ನನಗೂ ಗೊತ್ತಿದೆ... ಆದರೆ ಆಗ್ತಾ ಇಲ್ವೇ...

ತಪ್ಪು ನಮ್ಮದಲ್ಲವೆಂದು ತಿಳಿದರೂ ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗಿ ಬರುತ್ತದೆ. ಇಲ್ಲಾ ತಪ್ಪು ನಮ್ಮದೇ ಆಗಿದ್ದರೆ ನಿರ್ಭಯವಾಗಿ ಒಪ್ಪಿಕೊಳ್ಳಬೇಕಲ್ಲಾ... ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುವುದರಿಂದ ಎದುರು ವ್ಯಕ್ತಿಗಳು ಎರಡು ಮೆಟ್ಟಿಲು ಇಳಿದು ಬರುತ್ತಾರೆ. ಗೊತ್ತಿದೆ ನಮಗೆ.. ಆದರೆ ನಾವೆಷ್ಟು ಬಾರಿ ಒಪ್ಪಿಕೊಳ್ತೀವಿ....? ನಮಗೆ ವಾದವೇ ವೇದ....... ವಾದದಲ್ಲಿ ಗೆದ್ದರೂ ಇನ್ಯಾವುದರಲ್ಲೋ ಸೋತಿರುತ್ತೇವೆ...

ವಾದಿಸಬಾರದು. ವಾದಿಸಿದರೆ ವಾದದಲ್ಲಿ ಗೆಲ್ಲುತ್ತೀವೇನೋ.. ಆದರೆ ಎದುರು ವ್ಯಕ್ತಿಯ ಅಭಿಪ್ರಾಯವನ್ನು  ಬದಲಾಯಿಸೇವಾ?.. ನಾವು ಹೆಚ್ಚು ವಾದಿಸಿದಂತೆಲ್ಲಾ ಎದುರು ವ್ಯಕ್ತಿಯು ಸೋತು ಹೋಗುತ್ತಿದ್ದಾನೆ ಎಂದಾಯಿತು. ಒಮ್ಮೆ ನಮ್ಮನ್ನು ಆ ಪರಿಸ್ಥಿತಿಯಲ್ಲಿ ಊಹಿಸಿಕೊಂಡರೆ.....  ವಾದದಲ್ಲಿ ಸಂಪೂರ್ಣ ಸೋತು ಹೋದೆ... ಆಗ ನಮ್ಮ ಪರಿಸ್ಥಿತಿ ಏನು? ಎದುರು ವ್ಯಕ್ತಿಯ ಗೆಲೆವು ಒಪ್ಪಿಕೊಳ್ತೀವಾ...?
ನಾನೂ ವಾದಿಸುತ್ತೇನೆ.... ನೂರಕ್ಕೈವತ್ತು  ಬಾರಿ...  ನಲವತ್ತು ಬಾರಿ ನನ್ನದು ಸರಿ ಇದ್ದಾಗ... ಹತ್ತು ಬಾರಿ ಹಾಗೇ...

ಯಂಡಮೂರಿಯವರ ಒಂದು ಮಾತು ಆಗಾಗ ನೆನಪಾಗುತ್ತೆ.... " ನಾವು ಬಹಳ ಸಾರಿ ಒಂದು ಸ್ಪರ್ಶವನ್ನು, ಒಂದು ನಗುವನ್ನು, ದಯೆಯಿಂದ ಹೇಳುವ  ಒಂದು ಪದವನ್ನು, ಕೇಳುವ ಒಂದು ಕಿವಿಯನ್ನು, ಕೊಡಬಹುದಾದ ಒಂದು ಪುಟ್ಟ ಅಪ್ಯಾಯತೆಯನ್ನೂ ಸಹ ಅವುಗಳ ಬೆಲೆ ತಿಳಿಯದೇ ನಿರ್ಲಕ್ಷ್ಯ ಮಾಡುತ್ತಿರುತ್ತೇವೆ.... ಅದನ್ನು ತಿಳಿದುಕೊಂಡರೆ ದೇವರಾಗುತ್ತೇವೆ.."
    ಎಷ್ಟು ನಿಜ ಅಲ್ವಾ...? ಎಲ್ಲ ಸಣ್ಣ ಸಣ್ಣ ವಿಷಯಗಳು... ನಮ್ಮ ಬಿಗುಮಾನವನ್ನು ಬಿಟ್ಟು ಮಾಡುವಂತಹ ಸಣ್ಣ ಸಣ್ಣ ನಮ್ಮ ವರ್ತನೆಗಳು... ನಾವು ಕಳೆದುಕೊಳ್ಳುವಂಥದ್ದೇನೂ ಇರುವುದಿಲ್ಲ....  ಯಾರೋ ಏನೋ ಅಂದಾಗ ತಿರುಗಿ ಬೀಳುವ ಬದಲು ಒಂದು ಮುಗುಳುನಗು...  ವಾದಿಸುವವರೆದುರಿಗೆ ಪ್ರತಿ ವಾದದ ಬದಲು  ಮೌನ..... ಯಾರದೋ ನೆರವಿಗೆ ಹಣ ಕೊಡಲಾಗದಿದ್ದರೂ  ಸಹಾಯ ಬೇಕಿದ್ರೆ ಖಂಡಿತಾ ಕೇಳಿ ಅನ್ನೋವಷ್ಟು ಸಹಜ ಸೌಜನ್ಯ......ಇದರಲ್ಲೆಲ್ಲಾ ಏನಿದೆ ನಾವು ಕಳೆದುಕೊಳ್ಳುವಂಥಾದ್ದು....... ಆದರೆ ನಾವೆಷ್ಟು ಸಾರಿ ಹೀಗಿದ್ದೀವಿ.......

ವ್ಯಕ್ತಿತ್ವ ಎನ್ನುವುದು ದೊಡ್ಡ ಪದ. ಕೇವಲ ನಮ್ಮ ಮಾನಸಿಕ ಸ್ಥಿತಿ ಲಯಗಳಲ್ಲದೇ, ನಾವು ಬೆಳೆದು ಬಂದ ರೀತಿ, ನಂಬಿರುವ ಸಿದ್ದಾಂತಗಳು, ಮಾಡುತ್ತಿರುವ ಕೆಲಸ, ಅದರಲ್ಲಿನ ದಕ್ಷತೆ, ಮಾತನಾಡುವ ರೀತಿ  ಪ್ರತಿಯೊಂದು ಕೃತ್ಯಕ್ಕೂ ಸ್ಪಂದಿಸುವ ಗುಣ, ಮಾನಸಿಕ ದೃಢತೆ, ಹವ್ಯಾಸ ಅಭ್ಯಾಸಗಳು, ನಮ್ಮನ್ನು ನಾವೇ ಪ್ರೊಜೆಕ್ಟ್ ಮಾಡಿಕೊಳ್ಳುವ ರೀತಿ ಹೀಗೆ ಪ್ರತಿಯೊಂದು ಅಣುವಿನಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
                 ನಮ್ಮ ನಡೆ ನುಡಿ.. ಮಾಡುವ ಕೆಲಸ ಕಾರ್ಯಗಳು ಪ್ರತಿಕ್ರಿಯೆಗಳು- ಎಲ್ಲವೂ ನಮ್ಮ ಬಗ್ಗೆ ಹೇಳುತ್ತವೆ. ಈ ಗ್ರಹಿಕೆ ಸದಾ ಇತರರಿಗೆ ನಮ್ಮ ಬಗ್ಗೆ ಇರುತ್ತದೆ ಎಂಬ ಸೂಕ್ಷ್ಮ ವಿಷಯ ನಮಗೆ ತಿಳಿದಿದ್ದರೆ ಸಾಕು. ಚಿಕ್ಕ ವಿಷಯಗಳಲ್ಲಿಯೂ ನಮ್ಮ ನಂಬಿಕೆ-ನಿಶ್ಚಯಗಳು ಅಳುಕದೇ ನಮ್ಮ ತತ್ವಗಳಿಗೆ ಅಂಟಿಕೊಳ್ಳುವ ರೀತಿ, ಜೀವನ ಮೌಲ್ಯಗಳನ್ನು ನಾವು ಆಧರಿಸುವ ರೀತಿ- ಇವುಗಳಿಂದಲೇ ಇತರರು ನಮ್ಮನ್ನು ಅಂಕಿತ ರೂಪದಿಂದ ಅಂಗೀಕರಿಸುತ್ತಾರೆ. ಈ ಅನನ್ಯತೆ ಕೊಡುವ ಮನ್ನಣೆ ಗೌರವಾರ್ಹವಾದುದು. ಚಿರಕಾಲ ಬಾಳುವಂಥದ್ದು. 
   ಆದ್ದರಿಂದ ಅತೀ ಚಿಕ್ಕ  ವಿಷಯದಲ್ಲೂ ನಮ್ಮ ಮೆದುಳು ಮತ್ತು ಕೈ  ಕ್ರಿಯೆಗೆ ಮುಂದಾಗುವ ಮುನ್ನ ನಮ್ಮ ವ್ಯಕ್ತಿತ್ವ ನಮ್ಮ ಮುಂದೆ ಬಂದು ನಿಲ್ಲುವಂತಾಗಬೇಕು. ನಂತರ ಮುನ್ನಡೆಯುವ ಬಗೆ ಚನ್ನ.
                        ನಾವು ಬದುಕಿದ ರೀತಿ, ನಾವು ಮಾಡಿದ ಕೆಲಸ ಕೊನೇ ಪಕ್ಷ ನಮ್ಮ ಮನಸ್ಸಿಗೆ ಖುಷಿ ಕೊಡುವಂತಿರಬೇಕು..  ನಮ್ಮ ಲಾಭಕ್ಕಾಗಿ ನಾವು ಮಾಡುವ ಕೆಲಸಕ್ಕಿಂತ ಏನೂ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ಕೆಲಸ ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತದೆ. ಆದರೆ ಅ ಖುಷಿಯನ್ನು ನಮ್ಮದನ್ನಾಗಿ ಮಾಡಿಕೊಳ್ಳುವ ಮನಸ್ಸು ನಮಗಿರಬೇಕಷ್ಟೇ...

ಕಾಯೇನ ಮನಸಾ ಬುದ್ಧ್ಯಾ ಕೈವಲೈರಿಂದ್ರಿಯೈರಪಿ|
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮ ಶುದ್ಧಯೇ...||
     
                             ....................................................... ರಾಘವ್ ಲಾಲಗುಳಿ.

Thursday, November 28, 2013

ಪ್ರೀತಿಯ ಸಾಗರವಿದು ನನ್ನ ಹೃದಯ.... ನದಿಯಾಗಿ ನೀ ಬಂದು ಸೇರೆಯಾ....


ನಿನ್ನ  ಇರುವಿಕೆಯನ್ನು, ನಿನ್ನ ಪ್ರೀತಿಯನ್ನು, ನಿನ್ನ ನೆನಪನ್ನು ಅಲ್ಲಗಳೆದು ಬದುಕಿಬಿಡಬೇಕೆಂದುಕೊಂಡು ಏನೇನೆಲ್ಲ ಪ್ರಯತ್ನ ಮಾಡಿಬಿಟ್ಟೆ.. ಈವತ್ತಿಗೂ ಈ ಒಂದು ವಿಷಯದಲ್ಲಿ ನನಗೆ ಸೋಲೇ....

ಸೋತು ಸೋತು ಸಾಕಾಗಿ ಹೋಗಿದೆ ನನಗೆ.ಹಾಗಾದರೆ ನಿನ್ನನ್ನು ಒಪ್ಪಿಕೊಂಡು ನಿನ್ನೆಡೆಗೆ ಪ್ರೀತಿ ಬೆಳೆಸಿಕೊಳ್ಳಲಾ.... ಅಸಲು ನನ್ನಲ್ಲಿ ನಿನ್ನ ಮೇಲೆ ಸಾಗರದಷ್ಟು ಪ್ರೀತಿಯಿದೆ. ಆದರೆ ಹುಡುಗೀ ನೀನು ನಿನ್ನ ಹೃದಯವನ್ನು ಕಲ್ಲಾಗಿಸಿಕೊಂಡು ಕುಳಿತಿದ್ದೀಯಲ್ಲೇ.....

ನನ್ನ ಹಾಡಿಗೆ ಹೂವು ಅರಳುತ್ತದೆ.. ಆದರೆ ನೀನು ಆಲಿಸುವುದೇ ಇಲ್ಲಾ.... ನನ್ನ ಸ್ಪರ್ಶಕ್ಕೆ ಹಿಮ ಕರಗೀತು.... ಕರಗಿದ ಹಿಮ ಪ್ರೀತಿಯಾಗಿ ಹರಿದೀತು... ನೀನು ಕರಗುವುದಿಲ್ಲ.... ನನ್ನ ಪ್ರೀತಿಗೆ ಸಾಗರ  ಉಕ್ಕುತ್ತದೆ.. ಆದರೆ ನೀನೆಂಬ ಪ್ರೀತಿಯ ಮಂಜು ಕರಗುವುದೇ ಇಲ್ಲ..... ಎಂದಿಗೂ ಯಾವುದಕ್ಕೂ ಕರಗದ ಶಿಲಾಬಾಲಿಕೆ ನೀನು... ಗೊತ್ತಿದೆ ನನಗೆ ಅದು... ಆದರೂ ನಿನಗಾಗಿಯೇ ನನ್ನ ಪದೇ ಪದೇ ಪ್ರಯತ್ನಗಳು....

ಮೊದಲೆಲ್ಲಾ ಎಷ್ಟು ಚನ್ನಾಗಿತ್ತು... ಬೆಳ್ಳಂಬೆಳಗ್ಗೆ ಸೂರ್ಯನ ಜೊತೆ ನೀನೂ ಎದ್ದೇಳುತ್ತಿದ್ದೆ... ಹಾಗೇ ನಾನೂ.....  ಅಂಗಳದಲ್ಲಿನ ನಿನ್ನ ರಂಗವಲ್ಲಿಗೆ ಇಲ್ಲಿ ನನ್ನ ಮನಸ್ಸು ಬಣ್ಣ ತುಂಬುತ್ತಿತ್ತು. ನಿನ್ನನ್ನು ದೂರ ನಿಂತು ನೋಡುತ್ತಿದ್ದೆ. ಮಂತ್ರ ಗೊತ್ತಿಲ್ಲದ ಹುಡುಗ ಭಗವಂತನನ್ನು ನೋಡುವಂತೆ.  ನಾನು ನೋಡುತ್ತಿದ್ದುದು ನಿನಗೂ ಗೊತ್ತಾಗುತ್ತಿತ್ತು ಮತ್ತು ನೀನೂ ಗೊತ್ತಾಗದವಳಂತಿರುತ್ತಿದ್ದೆ.  ಮತ್ತೆ ನಿನಗೆ ಗೊತ್ತಾದರೂ ನೀನು ಗೊತ್ತಾಗದವಳಂತಿರುತ್ತೀಯೆಂಬುದು ನನಗೂ  ಗೊತ್ತಾಗುತ್ತಿತ್ತು. ಒಂದು ಎಡೆಬಿಡದ ದಿನಚರಿ ನನ್ನೊಳಗೆ ನಿನ್ನೊಳಗೆ ಗಡಿಯಾರದ ಮುಳ್ಳಿನ ಜೊತೆ ಜೊತೆಗೇ ತಿರುಗುತ್ತಿರುವಂತಿತ್ತು. ಇಲ್ಲಿಯವರೆಗೆ ಎಲ್ಲವೂ ಚಂದವೇ.... ಮೊತ್ತ ಮೊದಲ ಸಲ ನಿನ್ನೆದುರಿಗೆ ನಿಂತು "ಹಾಯ್" ಅನ್ನುವವರೆಗೆ...

ನೀವು ಹುಡುಗಿಯರನ್ನು ಹುಡುಗ ಮೊತ್ತ ಮೊದಲ ಬಾರಿಗೆ ಕೈ ಹಿಡಿದಾಗ... ಮೊಟ್ಟ ಮೊದಲ ಬಾರಿಗೆ ತುಟಿಗೆ ತುಟಿ ಅಂಟಿಸಿದಾಗ ಹೇಗೆ ಕಂಪಿಸುತ್ತೀರೋ,.. ನನ್ನಂತಹ ತೀರಾ ಸೆಂಟಿಮೆಂಟಲ್ ಯಡವಟ್ಟುಗಳಿಗೆ ಮೊಟ್ಟ ಮೊದಲ ಬಾರಿಗೆ ಹುಡುಗಿಯರೆದುರು ನಿಂತು ನಿನ್ನ ಹೃದಯದಲ್ಲೊಂದಿಷ್ಟು ಜಾಗ ನನಗಾಗಿ ಕೊಡ್ತೀಯಾ ಅಂತ ಕೇಳುವಾಗ ಅಂಥದ್ದೇ ಕಂಪನ ಕಾಡುತ್ತದೆ ಗೊತ್ತಾ?

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದು ಸಾರಿ ಕೇಳೆಯಾ ಈ ಸ್ವರ.
ಮನಸಲ್ಲಿ ಚೂರು ಜಾಗ ಬೇಕಿದೆ...
ಕೇಳಲಿ ಹೇಗೆ ತಿಳಿಯದಾಗಿದೆ..

ಅದರಲ್ಲೂ ನಾನು ಕೇಳಿದ್ದು ಕಲ್ಲು ಗೊಂಬೆಯಂತಹ ನಿನ್ನೆದುರು.... ಹೇಗೆ ದಿಟ್ಟಿಸಿದ್ದೆ ನನ್ನ...  ಮೊತ್ತ ಮೊದಲ ಬಾರಿಗೆ ಬಂಗಾರದ ಹಾರವನ್ನು ಹಾಕಿ ಕನ್ನಡಿಯೆದುರಿಗೆ ಬಾಯಿ ಕಳೆದು ನಿಂತು ದಿಟ್ಟಿಸುವಂತೆ...... ಆವತ್ತು ನೀನು ಉತ್ತರಿಸಲಿಲ್ಲ...ಉತ್ತರಿಸಿದ್ದರೆ ಒಂದು ಅಧ್ಯಾಯ ಪ್ರಾರಂಭವಾಗುವುದರೊಳಗೇ ಮುಗಿದು ಹೋಗಿರುತ್ತಿತ್ತೇನೋ....  ಇಲ್ಲಾ ಹೊಸದಾಗಿ ಪ್ರಾರಂಭವಾಗುವ ಕಥೆಗೆ ಮುನ್ನುಡಿಯಾಗುತ್ತಿತ್ತು.  ನೀನು ಅದ್ಯಾವುದನ್ನೂ ಆಗಗೊಡಲಿಲ್ಲ.  ನಿನ್ನ ಕಣ್ಣಿನಲ್ಲಿ ಅಂದು ನನಗೆ ಅಸಮ್ಮತಿಯೇನೂ ಕಾಣಲಿಲ್ಲ... ಆದರೆ ಮುಂದೆ ನಿನ್ನ ಸಮ್ಮತಿಗಾಗಿ ನಾನು ಮಾಡದ ಕಸರತ್ತುಗಳಿಲ್ಲ....

ನಿನಗೆ ತುಂಬಾ ತೊಂದರೆ ಕೊಡಲು ಮನಸ್ಸಿಲ್ಲದೆಯೂ ಕೂಡಾ ನಿನ್ನೆಲ್ಲ ತಿರುವಿನಲ್ಲಿ ಎದುರಾದೆ....  ಕಾಲೇಜಿನ ಗೇಟಿನ ಬಳಿ... ಬಸ್ ಸ್ಟ್ಯಾಂಡಿನ ಬೆಂಚುಗಳ ಪಕ್ಕ ಬಳೆಯಂಗಡಿಯ ಸಾಲುಗಳಲ್ಲಿ, ಸಂಗೀತ ಶಾಲೆಗೆ ಹೋಗುವ ಮೂರನೇ ತಿರುವಿನಲ್ಲಿ,... ಎಲ್ಲೆಲ್ಲಿ ತಡೆದೆನೋ ನಿನ್ನ...ಎಲ್ಲೆಲ್ಲಿ ಮಾತಿಗೆಳೆದೆನೋ....

ಪ್ರೀತಿಸಿಯಾಯಿತು.... ನೀನು ಒಪ್ಪಿಗೆ ಕೊಡದೇ ಇದ್ದರೂ ಮತ್ತೆ ಮತ್ತೆ ನಿನ್ನ ನೆರಳಿನಂತೆ ಅಲೆದದ್ದಾಯಿತು.... ಸೋತು ಹೋದೆನೇನೋ ನಾನು ಎಂದು ಅಂದುಕೊಂಡು ಕುಳಿತರೆ ನಿನ್ನ ಚಿತ್ರವೃ ಕಣ್ಮುಂದೆ ಬಂದಂತಾಗಿ ಯೋಚನೆಯಾಗಿಬಿಡ್ತೀನಿ.... ನಾನೆಂಬ ನಾನೇ ಇಲ್ಲದೇ ಹೋಗಿದ್ದರೆ ನಿನ್ನ ಶೃಂಗಾರಕ್ಕೇನು ಬೆಲೆ ಹುಡುಗೀ.... ನನ್ನನ್ನ ನೀನು ಒಪ್ಪಿಕೊಳ್ಳಲಿಲ್ಲ ನಿಜ...ಆದರೆ ಹೊಸ ಚೂಡಿದಾರ ಹಾಕಿ ಯಾರಿಗೆ ಕಾಣಿಸುತ್ತಿದ್ದಿಯೋ ಇಲ್ಲವೋ.....  ಟೆರೇಸಿನಿಂದ ಇಣುಕಿ ಇಣುಕಿ ನನ್ನ ಮನೆಯ ಕಿಟಕಿಯ ಕಡೆ ನೋಡುತ್ತಿದ್ದೆಯಲ್ಲಾ... ಒಮ್ಮೆ ನಾನು ನಿನ್ನ ಜಡೆಯನ್ನು ಮೆಚ್ಚಿಕೊಂಡು ಜಡೆಯೆಂದರೆ ಹೀಗಿರಬೇಕು ಎಂದು  ನಿನ್ನ ಗೆಳತಿಯರಿಗೆ ಹೇಳಿದಾಗಿನಿಂದ ಜಡೆಯ ಮೇಲೆ ನಿನ್ನ ಮುತುವರ್ಜಿ ಹೆಚ್ಚಾಗಿದ್ದನ್ನು  ನಾನು ಗಮನಿಸಲಿಲ್ಲವೆಂದುಕೊಂಡೆಯಾ..... ನಿನ್ನಲ್ಲೇನೇ ಬದಲಾವಣೆಯಾದರೂ ನನಗೆ ದರ್ಶಿತವಾಗುತ್ತಿತ್ತು ಅಂತಾದರೆ ನಾನೇ ಇಲ್ಲದೇ ನಿನ್ನ ಸಿಂಗಾರಕ್ಕೆಲ್ಲಿ ಅರ್ಥ ಬಂದೀತು ಹುಡುಗೀ.... ನಿನ್ನ ಸೊಗಸೆಲ್ಲ ನನಗೇ ಎಂದು ನಾನು ಹೇಗೆ ಹೇಳಿಕೊಳ್ಳದಿರಲಿ....

ಹೊಸ ಲಂಗ ದಾವಣಿಯಲ್ಲಿನ ನಿನ್ನ ಸೌಂದರ್ಯ ಮೆಚ್ಚುವಾಗ ನಾನಿದ್ದೆ ಬಂಗಾರದ ಹೊಸಬಳೆಯನ್ನು ಗಂಗಣಿಸುತ್ತಾ ನೀನು ಗೇಟಿನಿಂದ ಹೊರಬೀಳುವಾಗ ಮೆಚ್ಚಿಕೊಳ್ಳಲಿಕ್ಕೆ ನಾನಿದ್ದೆ..... ಸಂಗೀತ ಕ್ಲಾಸಿನಲ್ಲಿನ ನಿನ್ನ ಸನ್ಮಾನವನ್ನು ಅಭಿನಂದಿಸಲಿಕ್ಕೆ ನಾನಿದ್ದೆ....  ಮನೆಯಲ್ಲಿ ಯಾರಿಗೂ ನೆನಪಿಲ್ಲದ ನಿನ್ನ ಬರ್ತಡೇಯನ್ನು ನೆನಪಿರಿಸಿಕೊಂಡು ಹಾರೈಸೋಕೆ ನಾನಿದ್ದೆ.... ನಿನ್ನ ಎಲ್ಲ ದಿನಚರಿಗಳಲ್ಲೊಂದಾಗಿ ಇದ್ದ ನಾನು....  ನಾಳೆ ನೀನು ನನ್ನನ್ನು ಬಿಟ್ಟು ಯಾರದೋ ತಾಳಿಗೆ ಕೊರಳೊಡ್ಡಿದರೆ ನಿನ್ನೆಲ್ಲ ಇರುವಿಕೆಗಳ ಜೊತೆ ನಾನು ನೆನಪಾಗುವುದಿಲ್ಲವೇ ಹುಡುಗೀ........

ನಿನ್ನ ಮನಸ್ಸನ್ನೇ ಕೇಳಿಕೋ ಹುಡುಗೀ. ಯಾವ ಸೋಗನ್ನು ಹಾಕಿ ನೀ ನಡೆದರೂ ನನ್ನೆಡೆಗೆ ಒಂದು ಪೂರ್ಣವಿರಾಮ ಹಾಕಿ ನಡೆಯಲಾಗಲಿಲ್ಲ ನಿನಗೆ.... ಇನ್ನು ಮುಂದೆಯೂ ಇದು ಆಗುವ ಹಾಗಿಲ್ಲ....


ಪ್ರೀತಿಯ ಸಾಗರವಿದು ನನ್ನ ಹೃದಯ....
ನದಿಯಾಗಿ ನೀ ಬಂದು ಸೇರೆಯಾ....

---------------- ರಾಘವ್ ಲಾಲಗುಳಿ.

Monday, October 21, 2013

ಭೂಮಿಯ ಬಳಿಗೊಂದು.....


ಅವಳ ಹೆಸರು ಭೂಮಿಯಂತೆ. (ಭೂಮಿಕಾ).
ಮುತ್ತಿನಂತೆ ನಗುವ ಹಸನ್ಮುಖಿಯಂತೆ ಆಕೆ.... ಬೆಳ್ಳಂಬೆಳ್ಳಗಿನ ಹಂಸವಂತೆ ಆಕೆ...
ನಕ್ಕು ಸುಮ್ಮನಾಗೋ ವಿಷಯಕ್ಕೆ ಕೆಂಡಾಮಂಡಲವಾಗಿ.... ಸಿಟ್ಟಾಗೋ ವಿಷಯಕ್ಕೆ ಸುಮ್ಮನೆ ನಕ್ಕು ಸುಮ್ಮನಾಗುವಳಂತೆ...
ಅಯ್ಯೋ ಶುದ್ಧ ಉಲ್ಟಾ ಪಲ್ಟಾ ಹುಡುಗಿ ಅಂತಿದ್ದ.
ಯಾವುದೋ  ಸಹಜವಾದ ಮಾತಿಗೆ ಅಪಾರ್ಥ  (ಹೇಳುವಾಗೇನೋ ಅಪರಾ ತಪರಾ ಆಗಿರದಬೇಕು) ಮಾಡಿಕೊಂಡು ಏನೇನೋ ಬಯ್ದು ಹೋದಳಂತೆ..
ಪ್ರೀತಿಯ ಸ್ನೇಹಿತೆ ಆಕೆ... ಮತ್ತೆ ಬರುವಳೋ ಏನೋ ಗೊತ್ತಿಲ್ಲ.. ನಾನು ಪತ್ರ ಬರೆದವನಲ್ಲ.. ಮೊದಲನೆಯದಾಗಿ ಕೊನೆಯದಾಗಿ ಚಂದಗೆ ನನಗೊಂದು ವಿದಾಯದ ಪತ್ರ ಬರೆದು ಕೊಡು ಎಂದವನಿಗೆ ತಿರಸ್ಕರಿಸಿ ತಿರಸ್ಕರಿಸಿ ಕೊನೆಗೆ ಬರೆದದ್ದು...

ವಿದಾಯದ ಪತ್ರವನ್ನು ಚಂದವಾಗಿ ಬರೆಯೋದು ಹೇಗೇ ರೀ......................

                                                    *********************
ಭೂಮಿಯ ಬಳಿಗೊಂದು,


ಹೇಯ್....
ನಾಳೆ address ಕೇಳಿಟ್ಟಿರ್ತೇನೆ.. ಸಿಗದೇ ಹೋಗಬೇಡ... online ಗಾದ್ರೂ ಬಾ  address ಕೊಡ್ತೀನಿ..ಇಲ್ಲಾ.. ಏನಾದ್ರೂ problem ಅನ್ಸಿದ್ರೆ call ಮಾಡು ಅಂತ ನಾ ಹೇಳಿದ್ರೆ ಅಷ್ಟಕ್ಕೇ ಏನೇನಾದ್ರು ಅಂದ್ಕೊಂಡು ನಂಗೆ ಏನೇನೋ ಅಂದ್ಬಿಟ್ಯಲ್ಲಾ...
ನೀನಂದಿದ್ದು ಸರೀನಾ...... ನೀನೇ ವಿಚಾರ ಮಾಡು......
call ಮಾಡು ಅಂದೆ ನಿಜ.... ನನ್ ನಂಬರ್ ನಿಂಗ್ ಕೊಟ್ಟಿದೀನಾ? ಇಲ್ಲಾ ನಿನ್ ನಂಬರ್ ನ್ನ ನಾನು ಕೇಳಿದೀನಾ? ಯಾವುದೋ ಕೆಂಪು ದೀಪದ ಕೆಳಗೆ ನಿಂತಿರೋ ಹುಡುಗೀನ ಕರೆದಿರೋ ಥರಾ..., ಏನೋ ದೊಡ್ಡದಾಗಿ ಪೀಡಿಸ್ತಿರೋನ ಥರಾ..., ಎಲ್ಲೋ ನಿನ್ನನ್ನ park ಗೆ ಕರೆದಿರೋನಿಗೆ ಹೇಳೋ ರೀತಿ ನನಗೂ ಅಂದ್ಬಿಟ್ಯಲ್ಲಾ...... ನವಿಲು ಬಣ್ಣಗಳ ಹುಡುಗಿ ಇಷ್ಟೇನಾ ನನ್ನ ಅರ್ಥ  ಮಾಡಿಕೊಂಡಿರೋದು..... ನಂಗೂ ಒಂದು ಮನಸಿದೆ ಅದಕ್ಕೂ ನೋವಾಗುತ್ತೆ ಅಂತ ಅನಿಸಲೇ ಇಲ್ವಾ?...
ನನ್ನಿಡೀ life ನಲ್ಲಿ ಖಂಡಿತಾ ನಾನು ನಿನ್ನನ್ನ ಒಂದೇ ಒಂದು ಬಾರಿ ಕೂಡಾ ಭೆಟಿ ಆಗೊಲ್ಲಾ..... ಅದು ನಿನಗೂ ಗೊತ್ತಿದೆ..... ಆದರೂ ಎಲ್ಲರನ್ನೂ ಒಂದೆ ದ್ರಷ್ಟಿಯಲ್ಲಿ ನೋಡೋ ಮನಸು ನಿಂಗ್ಯಾಕೆ ಭೂಮೀ......

ಮತ್ತೊಬ್ಬ ಮನುಷ್ಯನ ಮೇಲೆ ಅಪನಂಬಿಕೆಯಿಂದ ಗೆದ್ದ ಗೆಲುವಿಗಿಂತ.... ನಂಬಿಕೆಯಿಂದ ಬಂದ ಸೊಲೇ ಹೆಚ್ಚು ಸಂತ್ರಪ್ತಿ ನೀಡುತ್ತದೆ ಎಂದು ಅಂದುಕೊಂಡವ ನಾನು...ನನ್ನ ಮೇಲೆ ನಿನಗೆ ಇಷ್ಟೊಂದು ಅಪನಂಬಿಕೆಯಿರುವಾಗ ನಾನು ಒಳ್ಳೆಯವನೆಂದು ಹೇಳಿಕೊಂಡರೆ ಅದು ನನ್ನ ಹುಚ್ಚುತನವಾಗುತ್ತೆ ನಂಗೊತ್ತು.... ಆ ಪ್ರಯತ್ನ ನಾನು ಮಾಡಲ್ಲಾ........

ನನಗೆ ಇದುವರೆಗೂ ಯಾರೂ ಹೀಗಂದಿಲ್ಲಾ.... ನನ್ನ ಬಗ್ಗೆ ಬೆರೆಯವರು ಈ ರೀತಿ ಯೋಚ್ನೆ ಮಾಡ್ಬಹುದೆನ್ನೊ ಕಲ್ಪನೆಯೇ ನನಗೆ ಹೊಸದು.... ನಿನು ಹಿಗಂದೆ ಅಂತಾ ಬೇರೆ ಯಾರಿಗೂ ಗೊತ್ತಿಲ್ಲಾ ನಿಜ.. ಆದರೆ ಇದು ನನ್ನೊಳಗೇ ನನಗೊಂದು ಅಪಮಾನ ಅನಿಸ್ತಿದೆ... ಅಪಮಾನ ಸಹಿಸಿಕೊಳ್ಳೋದು ಕಷ್ಟವಲ್ಲಾ ಭೂಮೀ...... ಆದರೆ ಅದನ್ನ ಸಹಿಸಿಕೊಳ್ಳೋದು ಅನ್ಯಾಯ......
ಬಿಡು ಅದು ನನ್ನ ಪಾಡು...

 ಬದುಕು ಏನೇನೆಲ್ಲವನ್ನೂ ನೀಡುತ್ತದೆ... ಕೆಲವೊಮ್ಮೆ ಅನಿಸಿದ್ದು ಕೈಗೂಡುತ್ತದೆ ಅನ್ನುವಾಗ ಕೊಟ್ಟಿದ್ದೆಲ್ಲವನ್ನೂ ಕಿತ್ತುಕೊಂಡು ಬಿಡುತ್ತದೆ.... ನನ್ನ ಪಾಲು ಇಷ್ಟೇ ಇತ್ತು ಅನಿಸುತ್ತದೆ.ಎಲ್ಲರಿಗೂ ಎಲ್ಲವೂ ಸಿಗದು......
ಆಕಾಶ ಸಿಕ್ಕರೆ ಭೂಮಿ ಸಿಗದು.......

ಕಣ್ಣು ಹೋದಾಗಲೂ ವ್ಯಕ್ತಿ ಸಾಯಲಿಲ್ಲ... ಕಿವಿ ಹೋದಾಗಲೂ ಸಾಯಲಿಲ್ಲ.... ಆದರೆ ಮೂಲ ಪ್ರಾಣ ಹೊರಟು ನಿಂತಾಗ  ಕಣ್ಣು ಕಿವಿ ಮೂಗು ಎಲ್ಲವೂ ಸಾಯಲಿಕ್ಕೆ ಸಿದ್ದತೆ ಮಾಡಿಕೊಂಡವಂತೆ....

ಹೂಂ.... ನೀನೂ ಹೊರಟು ನಿಂತಿದ್ದೀಯಾ.....
ಸ್ನೇಹದಾ ಸಹವಾಸಕೆಸಕೆ ವಿದಾಯ ಹಾಡಿ...

ಕೆಟ್ಟವರ ಸಾಲಲ್ಲಿ ನನಗೊಂದು ಜಾಗ ನೀಡಿ......

ಹೋಗುವುದಾದರೆ ಹೋಗಿ ಬಿಡು...
ಬದುಕು ಮಧುರವಾಗಿರಲಿ...
                              --- ಫಕ್ರೂದ್ದೀನ್...

                                                 **************************


                               ಕಾಲ ಬದಲಾದಂತೆ ಮನಸ್ಥಿತಿಯೂ ಬದಲಾಗುತ್ತವೆ....  ನೋಡಿ ಆವತ್ತು ಏನೇನೋ ಜಗಳವಾಡಿಕೊಂಡು ಹೋದವರೇ ಈವತ್ತು ನನ್ನ ಅಕ್ಕ ಪಕ್ಕದಲ್ಲಿ ಕುಳಿತು ಹಾಸ್ಯ ಮಾಡುತ್ತಾ... ಬರೆಯಲೇಬೇಕೆಂದು  ಬರೆಸುತ್ತಿದ್ದಾರೆ ಇದನ್ನೆಲ್ಲವನ್ನೂ ಮತ್ತೊಮ್ಮೆ....  ಆಶ್ಚರ್ಯ ಅಂದ್ರೆ ಎರಡೂವರೆ ವರುಷದ ಹಿಂದೆ ಬರೆದ ಪತ್ರಕ್ಕೆ ಇನ್ನೂ ಕೂಡಾ ಒಂದು ಮಡಿಕೆಯೂ ಬಿದ್ದಿಲ್ಲ...
ಆಗಾಗ ನೋಡಿ feel  ಆಗಲು... ನೆನೆಸಿ ಅದ್ದಿ ನಗಲು  ಬೇಕಂತೆ ಅದು... ಈಗಲೂ ಜಗಳ ಕಾಯುತ್ತಾರೆ ಪ್ರೀತಿಯಿಂದ... 
ಏ ಫಕ್ರೂದ್ದೀನ್ !! ಉಲ್ಟಾ ಪಲ್ಟಾ ಅಂದ್ರೆ ಮತ್ತೆ ಹೊರಟುಬಿಡ್ತೀನಿ ಅಂತ ಅವಳು....
ಹೋಗು ನೋಡೋಣ ಇಂಥಾದ್ದೇ ಇನ್ನೊಂದು ಪತ್ರ ಬರೆಸ್ತೀನಿ ಅಂತ ಇವನು..
ಫನ್ನಿ ಫೆಲೋಸ್...
ನೋಡಿ ಖುಷಿಯಾಯ್ತು....

ಮೊದಲು ಅಚ್ಛ ಸ್ನೇಹದ ತುಂಬಾ ಪ್ರೀತಿಯಿತ್ತು.....
ಈಗ ತುಂಬು ಪ್ರೀತಿಯಲ್ಲಿ ಅಚ್ಛ ಸ್ನೇಹವಿದೆ...
ಅದೆಲ್ಲಕ್ಕಿಂತಲೂ ಹೆಚ್ಚಾಗಿ ತೀರಾ ತೀರಾ ಸಹಜತೆಯಿದೆ..
ಸಹಜತೆ ತುಂಬಾ ಖುಷಿ ಕೊಡುತ್ತೆ ಮನಸ್ಸಿಗೆ...

ಅಂದ ಹಾಗೆ ಹೇಳಲು ಮರೆತೆ..
ಇವರರಿಬ್ಬರೂ ನನಗೆ ಅರೆ ಖಾಸಗೀ ಸ್ನೇಹಿತರು. ಮತ್ತೆ.....
ಇದೇ ಬರುವ ಡಿಸೆಂಬರಿನ ಛಳಿಯಲ್ಲಿ ಇವರ ಮದುವೆ.....

***********************ರಾಘವ್.

Monday, July 22, 2013

ಅವಳ ನೆನಪಾಗಿ....


ನಾನು ನನ್ನವಳಿಗೆ
ನನ್ನವಳು ನನಗೆ
ಕೊಟ್ಟು ಕೊಂಡಿದ್ದೊಂದೇ ಪ್ರೀತಿ ಹಾಡು |
ಭಾವನೆಗಳೊಂದಾಗಿ
ಬದುಕೆಲ್ಲಾ ಚೆಂದಾಗಿ
ಹೆಣೆದು ಕಟ್ಟಿರುವುದೇ ಒಲುಮೆ ಗೂಡು ||

ಅವಳಿಟ್ಟ ಆ ಹೆಜ್ಜೆ
ಘಲ್ಲೆನುವ ಕಾಲ್ಗೆಜ್ಜೆ
ಹೃದಯ ಬಾಗಿಲ ಬಳಿಯೇ ಸದ್ದು ಮಾಡಿ |
ಅವಳ ಆ ಕಣ್ಣೋಟ
ಕನ್ಸನ್ನೆಯೇ ಪಾಠ
ಹೇಗೆ ತಿದ್ದಿದಳೆನ್ನ ಮುದ್ದು ಮಾಡಿ ||

ಅವಳ ಹಣೆ ಬಿಂದಿಯೋ
ಬಿಗಿದ ತೋಳ್ಬಂದಿಯೋ
ಎಲ್ಲಿ ತಾ ಮೈಮುರಿದು ಕೂತಿಹುದು ಅಂದ |
ಆ ಸೀರೆಯಾ ನೆರಿಗೆ
ಹಾಕುವಾಗಲೇ ಮರೆಗೆ
ಹೋಗುತಲಿ ತೋರುವಾ ಹುಸಿಮುನಿಸೇ ಚಂದ ||

ನನ್ನನ್ನೇ ನನ್ನಲ್ಲಿ
ಬಿಡಿ ಬಿಡಿಸಿ ತೋರಿಸುವ
ನನ್ನ ಮನಸು ಇಲ್ಲಿ ಬಿಂಬವಾಗಿಹುದು|
ಕೈಸೊಡರು ಅವಳಾಗಿ
ಬಂದ ದಿನ ನೆನಪಾಗಿ
ಮನದಿ ಮಾಸದ ನೆನಪು ಚಂದವಾಗಿಹುದು ||

                                    - ರಾಘವ್ ಲಾಲಗುಳಿ

["ಪಂಜು"ವಿನ ಪುಟಗಳಲ್ಲಿ ನೋಡಬೇಕೆನಿಸಿದರೆ ಈ ಲಿಂಕ್ ಬಳಸಿ http://www.panjumagazine.com/?p=3282 ]

Tuesday, June 11, 2013

ಮಾತು-ಮೌನ..


ಮೌನ ಬದುಕಿಗೆ ಅರ್ಥ
ಮೌನ ಮಾತಿಗೆ ವ್ಯರ್ಥ
ಭಾವ ಭಾವದ ತುಣುಕು
ಮೃದು ಮೌನದಲಿ ಹುಡುಕು ||

ಮೌನ ಸಾಗರವಹುದು
ಮಾತೊಂದು ಕೆರೆ ಹುಚ್ಛ
ಮೌನ ಸಂವೇದನೆಗೆ
ಮೌನದರ್ಥವೇ ಸ್ವಚ್ಛ ||

ಕಳೆದದ್ದು ಮಾತು
ಹುಡುಕಿದ್ದು ಮೌನ
ಮೌನ ಪ್ರಖರತೆ ಮುಂದೆ
ಮಾತೊಂದು ಗೌಣ ||

ಮಾತು ತಾರಿಕೆಯಾಯ್ತು
ಮೌನ ತಾ ಚಂದ್ರಮನು
ಮೌನ ಹಗಲೂ ಇರುಳು
ಮಾತು ಬೆಳಕಿಗೆ ಮರುಳು||

ಮಾತು ಮಾಣಿಕ ನಿಜ
ಮಾತೆಲ್ಲ ಮಾಣಿಕವಲ್ಲ
ಮೌನದಲಿ ವಿರಸವಿಲ್ಲ
ಮಾತಿನಲಿ ಉಂಟಲ್ಲ.||

(ಮಾತು ತಾರಿಕೆಯಾಯ್ತು, ಮೌನ ತಾ ಚಂದ್ರಮನು ಇಲ್ಲಿ ಮಾತನ್ನು ನಕ್ಷತ್ರಕ್ಕೂ ಮೌನವನ್ನು ಚಂದ್ರನಿಗೂ ಹೋಲಿಸಿ, ಮೌನ ಹಗಲೂ ಇರುಳು ಅಂದರೆ ರಾತ್ರಿ ಕಳೆದು ಬೆಳಕಾದ ಮೇಲೂ ಚಂದ್ರ ಬಾನಿನಲ್ಲಿ ಕಾಣಿತ್ತಾನೆ ಆದರೆ ನಕ್ಷತ್ರಗಳು ಹಾಗಲ್ಲ ॒ಬೆಳಕಾಗುತ್ತಿದ್ದ ಹಾಗೆ ಜಾರಿ ಮಾಯವಾಗಿ ಬಿಡುತ್ತವಲ್ಲಾ ॒ಹಾಗೇ ಮೌನ ಯಾವಾಗಲೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಿಡುತ್ತೆ ಅಂತ ಹೇಳೋ ಪ್ರಯತ್ನ ಅಷ್ಟೇ)

10.06.2013ರಂದು “ಪಂಜು” ವಿನಲ್ಲಿ ಪ್ರಕಟಿಸಲ್ಪಟ್ಟಿದೆಪಂಜುವಿನ ಪುಟಗಳಲ್ಲಿ ಓದಲು  ಲಿಂಕ್ ಬಳಸಿ  

Saturday, May 11, 2013

ಅವಳ ಕಂಬನಿ........ಅವಳ ಕಂಬನಿ ಮಾತಾಗಿದೆ
ಹಲವು ವರ್ಷಗಳ ನೊಂದ-
ಬೆಂದ ಜೀವಕ್ಕೆ ಕನ್ನಡಿಯಾಗಿದೆ
ಕಂಡ ನೆನಪಿಲ್ಲ ಬದುಕಿನಾ ಚಂದ||

ಅವಳ ಕಂಬನಿ ದುರಂತಗಳಿಗೆ ಸಾಕ್ಷಿಯಾಗಿದೆ
ಅದಕ್ಕೆ ಅದರದೇ ಆದ ನೋವಿದೆ
ಪನ್ನೀರ ಬಟ್ಟಲಲಿ ಮುಖ ನೋಡಿಕೊಂಡ
ಚಂದದ ಮುಖ ನೆನಪಿನಿಂದ ಮಾಸುತ್ತಿದೆ||

ಅವಳ ಕಣ್ಣಿರು ಮಾಸುತ್ತಿರುವ ನೆನಪಾಗಿದೆ
ಪುಟ್ಟ ಲಂಗದಲ್ಲಿ ಜಿಗಿವ ನೆನಪು ಮಸುಕಾಗಿದೆ
ಜೋಡು ಜಡೆಯ ಹೆಣೆವ ಕೈ ನಡುಗುತ್ತಿದೆ
ಜೀವದಲ್ಲಿ ತ್ರಾಣವಿಲ್ಲದೇ ನೆನಪುಗಳೂ ಹೆಪ್ಪುಗಟ್ಟುತ್ತಿವೆ||

ಅವಳ ಕಣ್ಣಿರು ಅವಳು ಬದುಕಿದ್ದಕ್ಕೆ ಸಾಕ್ಷಿಯಾಗಿ ನಿಂತಿದೆ
ಕಟ್ಟಿಟ್ಟ ವಿಪರ್ಯಾಸಗಳ ಮೊಟ್ಟೆ ನಾರುತ್ತಿದೆ
ಬದುಕಿನುದ್ದಕ್ಕೂ ವಿಪರ್ಯಾಸಗಳೇ ತುಂಬಿ ಸೋರುತ್ತಿದೆ...
ಪರಿಸ್ಥಿತಿಗಳು ಚೂರಾದ ಬದುಕನ್ನು ಸಾರುತ್ತಿವೆ ||.

ಅವಳ ಕಣ್ಣಿರೇ ಅಕ್ಷಯದ ಕುರುಹಾಗಿ
ಕಹಿನೆನಪೇ ಗರ್ಭದಲಿ ಮನೆಕಟ್ಟಿದೆ
ಬದುಕೆಲ್ಲ ಹಣ್ಣಾಗಿ ಕನಸುಗಳು ಹುಣ್ಣಾಗಿ 
ನೆನಪುಗಳು ಧಾಳಿಯಲಿ ನೆಲಕಚ್ಚಿವೆ ||

ಅವಳ ಕಣ್ಣಿರು ಮತ್ತೆ ಮತ್ತೆ ನೆನಪಾಗುತ್ತಿದೆ
ಒಂದು ಹನಿ ಕಣ್ಣೀರು ಸಾವಿರದ ದುಃಖ
ಪಾಪ ಹಣ್ಣೆಲೆ ಅಳಲ ಕೇಳುವವರಿಲ್ಲ..
ಅವಳಾಸ್ತಿ "ಕಣ್ಣ ಹನಿ" ಕೊಳ್ಳುವವರಿಲ್ಲ..||

                                                      ------- ರಾಘವ್ ಲಾಲಗುಳಿ
Thursday, February 14, 2013

ಹುಚ್ಚು ಜಗಳದ ಹಿಂದೆ ಅದೆಷ್ಟು ಒಲವು...?

 
 ಅವರಿಬ್ಬರು ಶುದ್ಧ ಏಕನಕ್ಷತ್ರಿಕರು... ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದೇ ಇಲ್ಲಾ...... ಹಾವು ಮುಂಗುಸಿಯ ಹಾಗೆ ಸದಾ ಗುರ್ರ್ ಅಂತಿರುತ್ತವೆ. ಪ್ರತೀ ಬಾರಿಯ ಭೇಟಿಯಲ್ಲೂ ಅದೇನೋ ಸಿಟ್ಟು, ಪರಪರ ಜಗಳ,ಇವನಿಗೆ ಅವಳ ಜಡೆ ಎಳೆಯಬೇಕೆನಿಸುತ್ತದೆ.. ಅವಳಿಗೆ ಇವನ ತಲೆಗೆ ನೋವಾಗುವಂತೆ ಜೋರಾಗಿ ಮೊಟಕಬೇಕೆನಿಸುತ್ತದೆ. ದಾರಿಯುದ್ದಕ್ಕೂ ಯದ್ವಾ ತದ್ವಾ  ಕಿತ್ತಾಡುತ್ತಾ ಬೈದಾಡುತ್ತಾ ಹೋಗುತ್ತಿರುತ್ತಾರೆ. "ಒಳ್ಳೆ ಕೋತಿಗಳ ಥರಾ ಜಗಳಾ ಆಡ್ತಾವೆ... ಪಾಪಿಗ:ಳು ಎಷ್ಟು ಚಂದಗೆ ಕಚ್ಚಾಡ್ತವೆ"  ಅಂತ ಕಂಡೋರು ಕಂಡಾಪಟ್ಟೆ ಆಡ್ಕೋಳ್ತಾರೆ. ಅವರು ಪರಸ್ಪರ ಜಿದ್ದಿಗೆ ಬಿದ್ದು ಹೀಗೆ ಹರ್ಟ ಮಾಡಿಕೊಳ್ಳೋದು  ತುಂಬಾ ಮುದ್ದು ಮುದ್ದು....

      ಇವರಿಬ್ಬರನ್ನು ನೋಡೋದೂ ಒಂದೇ ಮಹಾಭಾರತ ಯುದ್ಧ ನೋಡೋದೂ ಒಂದೇ ಅಂತ  ಎಲ್ಲರೂ ನಿಡುಸುಯ್ಯೋ ಹೊತ್ತಿಗೆ...  ಅದೋ... ಅಲ್ಲೆರಡು ಜೀವಗಳು ಇಳಿಸಂಜೆಯ ಮಬ್ಬು ತುಂಬಿದ ರಸ್ತೆಯುದ್ದಕ್ಕೂ ಹೂವರಳಿದಂತೆ ಪಿಸುಗುಟ್ಟುತ್ತಾ ಬೆರಳಿಗೆ ಬೆರಳು ಹೊಸೆದುಕೊಂಡು ಜಗತ್ತೇ ಖುಷಿಯಾಗುವ ರೀತಿ ನಡೆಯುತ್ತಿರುತ್ತಾರೆ. ಮಾಯದ ಮಳೆ ಜಡಿದು, ನೀಲಾಕಾಶದಲ್ಲಿ ಬೆಳ್ಳಿಯ ಅಂಚು ನಿಚ್ಚಳವಾದಂತಹ ಭಾವನೆ ಹುಟ್ಟಿಸುತ್ತಾರೆ. ಮುಂಜಾವಿನ ಹಸಿರು ಹುಲ್ಲ ನಡುವಿನ ಇಬ್ಬನಿಯಲ್ಲಿ  ಪಾರಿಜಾತದ ಹೂವು ಅರಳುವಂತೆ... ಸಂಜೆ ಅವರಿಬ್ಬರು..

       ಕರಕರ ರೇಗುವ ಬದಲಾಗಿ ಅವರ ಕಣ್ಣುಗಳು ಅಪ್ಪಟ ಹೂಕುಂಡ. ಬಿಡುವು ಸೆಡವು ವೇದನೆ ಅಸಮಾಧಾನಗಳೆಲ್ಲ  ಮಂಗಮಾಯವಾಗಿ ಅವರ ನಡುವೆ ಅಚ್ಚಚ್ಚು ಬೆಲ್ಲದಂತಹ ಸಿಹಿಮಾತು, ಹೃದಯಾಂತರಾಳದಲ್ಲಿ ಕರಡು ಕಟ್ಟಿದ್ದ ಪರ್ವತದಂತಹ ಆವೇದನೆ ಕಿಡಿ ರೋಷಗಳೆಲ್ಲಾ  ಸ್ನೇಹಪೂರಿತವಾದ ಸಾಂತ್ವನದಿಂದ ಕರಗಿ ಮಾತಿನ ರೂಪದಲ್ಲಿ ಹರಿಯಲಾರಂಭಿಸಿದ ಶುಭ  ಸಂಜೆ  ಅವರಿಬ್ಬರು ಪಕ್ಕಾ ಪ್ರೇಮಿಗಳು. ಇವರಿಬ್ಬರನ್ನು ಪ್ರತೀ ದಿನ ನೋಡುತ್ತಿದ್ದವರಿಗೆ ಪ್ರಪಂಚದ ಒಂಭತ್ತನೇ ಅದ್ಭುತದಂತಹ ಆಶ್ಚರ್ಯ ಕೊಟ್ಟುಬಿಟ್ಟಿರುತ್ತಾರೆ.

      ಹೌದು ಪ್ರೀತಿ ಬಲಗಾಲಿಟ್ಟು ಹೃದಯದ ಹೊಸ್ತಿಲು ತುಳಿಯೋದೇ ಹಾಗೆ...  ಒಂದು ಅಗೋಚರ ಕನಸಿನ ಹಿಮಬಿಂದು ಮನಸಿಗೆ ಬಂದು ಹೃದಯವನ್ನೆಲ್ಲಾ ತಂಪು ತಂಪಾಗಿಸಿದಂತೆ... ಜನಿಸುವಾಗ ಕಿರುಚುತ್ತಲೇ ಪುಟ್ಟದಾಗಿ ಕಣ್ಣು ಬಿಡುವ ಮುಗ್ಧ ಮಗುವಿನಂತೆ...  ಮೊದಲಿನಿಂದ ಇವರನ್ನು ನೋಡುತ್ತಾ ಬಂದವರೆಲ್ಲಾ ಹಿಮಾಲಯದಂತಹ ಪ್ರಶ್ನೆಯನ್ನು ಪಕ್ಕದಲ್ಲಿಟ್ಟುಕೊಂಡು " ಹುಚ್ಚು ಜಗಳದಲ್ಲಿ ಇಷ್ಟೊಂದು ಒಲವಿರುತ್ತದಾ...? " ಎಂದು ಅಂದುಕೊಂಡರೆ ಅವರಿಬ್ಬರು ಮಾತ್ರ  ಅರ್ಥವಾಗದ ಶುದ್ಧ ಮಲ್ಲಿಗೆಯ ತಂಪು ನಗೆ..

     ಅವರಿಬ್ಬರು ತುಂಬಾ ಅಂದರೆ ತುಂಬಾ ಕಿತ್ತಾಡ್ತಾರೆ... ತಿಂಗಳಿನ ಮೂವತ್ತು ದಿನಗಳಲ್ಲಿ ಕಳೆದ ಿಪ್ಪತ್ತೊಂಭತ್ತು ದಿನವೂ ಕಿತ್ತಾಡಿರ್ತಾರೆ.. ಆದರೆ ಕೊನೆಯ ಮೂವತ್ತನೆಯ ದಿನ ಆತ ಕಾಣಿಸಿಕೊಳ್ಳೋದೇ ಇಲ್ಲಾ...  ಕಾಲೇಜಿಗೆ ಬರೋಲ್ಲಾ, ರಸ್ತೆಯಲ್ಲಿ ಸಿಗೋಲ್ಲಾ, ತನ್ನ ಮನೆ ಬೀದಿಯಲ್ಲಿ ಸುಳಿಯೋಕೆ ಚಾನ್ಸೇ ಇಲ್ಲಾ... ಆವತ್ತಿಡೀ ದಿನ ಅವಳು ತುಂಬಾ ಟೆಂಶನ್ ಅನುಭವಿಸುತ್ತಾಳೆ. ತಲೆಯಲ್ಲಿ ಪಾಠ ನಿಲ್ಲೋಲ್ಲಾ... ಕೇಳೋಕೆ ತಾಳ್ಮೆ ಇರೋಲ್ಲಾ...  ಡೆಸ್ಕ್ ಮುರಿದುಬಿಡಬೇಕೆನಿಸುತ್ತದೆ. ಇವೆಲ್ಲವುಗಳ ನಡುವೆ ಮೊದಲ ಬಾರಿಗೆ ಅಂದುಕೊಳ್ಳುತ್ತಾಳೆ..... ಅವನೆಂದರೆ ತನಗಷ್ಟು ಇಷ್ಟಾನಾ....

      ಅವನಿಗೂ ಕೂಡಾ ಅವಳ ಜೊತೆ ಜಗಳ ಕಾಯದೇ ಇದ್ರೆ ತಿಂದ ಅನ್ನ ಜೀರ್ಣವಾಗೋಲ್ಲಾ... ಅವಳಿಗೆ ಸರಿಯಾಗಿ ಡಿಚ್ಚಿ ಕೊಡಬೇಕು ಅಂತ ಅವಳ ಬಗ್ಗೆ ಏನೇನೋ ಡಿಟೇಲ್ಸ್ ಕಲೆಕ್ಟ್ ಮಾಡಿರ್ತಾನೆ..  ವೀಕನೆಸ್ ಪಾಯಿಂಟ್ ಹಿಡಿದುಕೊಂಡು ಬಂದಿರ್ತಾನೆ... ಆದರೆ ಅವಳೇ ಇಲ್ಲಾ... ಆವತ್ತಿಡೀ ದಿನ ಅವಳು ಸಿಗೋದೇ ಇಲ್ಲಾ.... ಅವನ ತಲೆ ಕೆಟ್ಟು ಹೋಗಿರುತ್ತದೆ. ನಿಂತರೆ ನಿಂತ ಹಾಗಿಲ್ಲ... ಕುಳಿತರೆ ಕೂರೋಕಾಗಲ್ಲ... ಫುಲ್ ಬ್ಲ್ಯಾಂಕ್ ಆಗಿಬಿಟ್ಟಿರ್ತಾನೆ... ಅವಳಿಲ್ಲಾಂದ್ರೆ ನಾನ್ಯಾಕೆ ಇಷ್ಟು ಡಿಪ್ರೆಸ್ ಆಗ್ತೀನಿ.. ಇದು ಪ್ರೀತಿಯಾ...? ಅಂತ ಮೊದಲ ಬಾರಿಗೆ ಅವನು ಕೇಳಿಕೊಳ್ತಾನೆ... 

       ಅಸಲಿಗೆ ಇಂತಹ ಅನುಪಸ್ಥಿತಿಯ ಸಮಯದಲ್ಲೇ ತಾವು ಕಚ್ಚಾಡುತ್ತಿರುವ ಕಾರಣ ಅನಾವರಣಗೊಳ್ಳುವುದು. ಅವಳಿಂದ ಬೈಸಿಕೊಳ್ಳದೇ.. ಗೇಲಿ ಮಾಡಿಸಿಕೊಳ್ಳದೇ, ಕೆನ್ನೆ ತಿವಿಸಿಕೊಳ್ಳದೇ  ಮನಸ್ಸು ಯಾಂತ್ರಿಕ ಅನ್ನಿಸಿದಾಗಲೇ ಹೃದಯ ಸದ್ದಿಲ್ಲದೇ ಸಾಥ್ ನೀಡುತ್ತದೆ. ಸಿನಿಮಾದಲ್ಲಿನ ಜಗಳಗಂಟ ಪ್ರೇಮಿಗಳು ನಮಗೆ ಇಷ್ಟವಾಗೋದೇ ಕಾರಣಕ್ಕೆ.. ಅವನಿಗೆ ಮುಗ್ಧ ಕೊಂಕು ಮಾತುಗಳನ್ನು ಸಹಿಸುವುದರಲ್ಲೇನೋ ಆನಂದವಿದೆ.

       ಇಂತಹ ಅನುಪಸ್ಥಿತಿಯ ನಂತರದ ಮೊದಲ ಭೇಟಿಯಲ್ಲಿ ಅವನು ಕಿತ್ತಾಡಬೇಕೆಂದುಕೊಂಡರೂ  ಮನಸ್ಸು ಎಚ್ಚರಿಸುತ್ತದೆ... 'ಕೈ ತಪ್ಪಿ ಹೋದಾನು/ಹೋದಾಳು' ಅಂತ. ಅವನಿಗೆ ಗೊತ್ತಿಲ್ಲದಂತೆಯೇ ಮಾತು ಮೃದುವಾಗಿ ಬಿಟ್ಟಿರುತ್ತದೆ.  ಮಲ್ಲಿಗೆಯಷ್ಟು ಮೃದುವಾಗಿ ಹಾಯ್ ಅಂದ್ಕೋತಾನೆ ನಸು ನಗುತ್ತಾ.... "ಯಾಕೋ ಜಗಳ ಕಾಯಲ್ವೇನೋ " ಅಂತ ಅವಳೆಂದರೆ... "ಏನೇ  ಹುಡುಗಿ ಸಾಪ್ಟ್ ಆಗ್ಬಿಟ್ಟಿದೀಯಾ" ಅಂತ ಅವನಂತಾನೆ. ಅವರಿಬ್ಬರು ಶುದ್ಧ ಪ್ರೆಂಡ್ಸ್ ಗಳಾಗಿ... ಅಪ್ಪಟ ಪ್ರೇಮಿಗಳಾಗಿ ಬದಲಾಗೋದೇ ಆವಾಗ. ಪ್ರೀತಿಯಾಗಿ ಬದಲಾಗುವಾಗಿನ ಸಂಘರ್ಷ ಯಾವಾಗಲೂ ಹಿತವಾದ ನೋವುಗಳನ್ನು ನೀಡುತ್ತಿರುತ್ತದೆ. ಅದೊಂದು ನೋವೇ ಅಥವಾ ಸುಖವೇ ಎಂದು  ಪಕ್ಕಾ ಆಗಿ ಗುರುತಾಗದಷ್ಟು ಅಮೂರ್ತ ಭಾವದ ಹಳವಂಡ. ಪ್ರೇಮದ ತಿರುಗುಣಿಗೆ ಬಿದ್ದವನ ಆತ್ಮದ  ಮಧುರ ಆರ್ತನಾದವದು. ಇದನ್ನು ನಿಲ್ಲಿಸಬೇಕೇ ಮುಂದುವರೆಸಬೇಕೆ ಎಂದು  ಸುಸೂತ್ರ ತೋರದ ಗೊಂದಲ. ಪ್ರೀತಿಯ ಸಂಬಂಧದಲ್ಲಿ ಹೃದಯದ ಪಿಸುಮಾತೇ ಸಂವಿಧಾನ.  ಯೋಚಿಸಬೇಡಿ... ಇಂತಹ  ಅಚ್ಚ ಬಿಳುಪಿನ ಮುದ್ದು ಮುದ್ದಾದ ಪ್ರೀತಿಯ ಪಾರಿವಾಳ ಬಂದು ನಿಮ್ಮೆದೆಯ ಮೇಲೆ ರೆಕ್ಕೆ ಬಡಿಯುತ್ತಿದ್ದಾಗಲೇ ಅರಿತುಕೊಳ್ಳಿ. ಹಾರಿ ಹೋಗುವ ಮೊದಲೇ ಎದೆಗವಚಿಕೊಳ್ಳಿ..

                                                                                                         --ರಾಘವ್  ಲಾಲಗುಳಿವಿ.ಸೂ. - ಈ ಬರಹ ಅಕ್ಟೋಬರ್ 2009 ರ ಮಾನಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

Tuesday, January 1, 2013

ಬಾ ಸುಧೆಯೆ ಬೊಗಸೆಯಲಿ ಪ್ರೀತಿಯಿರಿಸಿ....

  
 ಪ್ರೀತಿಯಲಿ ನಾ ಬರೆದ ನೂರಾರು ಪತ್ರಗಳು
ಹಾಳೆಯಲಿ ಮಂಕಾಗಿ ಮೂಲೆ ಸೇರಿವೆ ನೋಡು
ನೀನಿರದ ಜೀವ ನಾ ಬರೆದ ಹಾಡು
ಪ್ರೀತಿ ಸಿಕ್ಕದ ಬರಡು ಬಂಜರಿನ ಗೂಡು||

ಸಹ್ಯವಾಗದೇ ನಿನಗೆ ನನ್ನ ಹೃದಯದ ಕೇಕೆ
ಕಾಡಿ ಬೇಡಿದೆ ನಿನ್ನ ಬರಲಿಲ್ಲವೇಕೆ?
ನೆಪಮಾತ್ರಕೆ ಜೀವ ಬದುಕಿದರೆ ಸಾಕೇ?
ಅತೃಪ್ತ ಬದುಕಿನಡಿ ಮರುಗಬೇಕೆ? ||

ನನ್ನೊಳಗಿನಾ ನನ್ನ ಹೃದಯದಲಿ ಇಂದೇಕೋ
ನಿನ್ನದೇ ನೆನಪಲ್ಲಿ ಮೌನ ಶೋಕ
ಮುಸ್ಸಂಜೆ ಬಾನಲ್ಲಿ ಮಧುಗಂಗೆ ತಟದಲ್ಲಿ
ನೀನಿಲ್ಲದೇ ಮನವು ಮತ್ತೆ ಮೂಕ ||

ನನ್ನಾಣೆ ನಾ ಕಾಯ್ವೆ ನೀ ಬರುವ ದಾರಿಯನು
ಹೃದಯ ಬಾಗಿಲ ಬಳಿಯೆ ದೀಪ ಉರಿಸಿ
ಕ್ಷಣಕ್ಷಣಕೂ ಜೀವ ನಿನಗಾಗಿ ಕಾಯುತಿದೆ
ಬಾ ಸುಧೆಯೆ ಬೊಗಸೆಯಲಿ ಪ್ರೀತಿಯಿರಿಸಿ||

........................................ರಾಘವ್  ಲಾಲಗುಳಿ