ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, February 14, 2013

ಹುಚ್ಚು ಜಗಳದ ಹಿಂದೆ ಅದೆಷ್ಟು ಒಲವು...?

 
 ಅವರಿಬ್ಬರು ಶುದ್ಧ ಏಕನಕ್ಷತ್ರಿಕರು... ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದೇ ಇಲ್ಲಾ...... ಹಾವು ಮುಂಗುಸಿಯ ಹಾಗೆ ಸದಾ ಗುರ್ರ್ ಅಂತಿರುತ್ತವೆ. ಪ್ರತೀ ಬಾರಿಯ ಭೇಟಿಯಲ್ಲೂ ಅದೇನೋ ಸಿಟ್ಟು, ಪರಪರ ಜಗಳ,ಇವನಿಗೆ ಅವಳ ಜಡೆ ಎಳೆಯಬೇಕೆನಿಸುತ್ತದೆ.. ಅವಳಿಗೆ ಇವನ ತಲೆಗೆ ನೋವಾಗುವಂತೆ ಜೋರಾಗಿ ಮೊಟಕಬೇಕೆನಿಸುತ್ತದೆ. ದಾರಿಯುದ್ದಕ್ಕೂ ಯದ್ವಾ ತದ್ವಾ  ಕಿತ್ತಾಡುತ್ತಾ ಬೈದಾಡುತ್ತಾ ಹೋಗುತ್ತಿರುತ್ತಾರೆ. "ಒಳ್ಳೆ ಕೋತಿಗಳ ಥರಾ ಜಗಳಾ ಆಡ್ತಾವೆ... ಪಾಪಿಗ:ಳು ಎಷ್ಟು ಚಂದಗೆ ಕಚ್ಚಾಡ್ತವೆ"  ಅಂತ ಕಂಡೋರು ಕಂಡಾಪಟ್ಟೆ ಆಡ್ಕೋಳ್ತಾರೆ. ಅವರು ಪರಸ್ಪರ ಜಿದ್ದಿಗೆ ಬಿದ್ದು ಹೀಗೆ ಹರ್ಟ ಮಾಡಿಕೊಳ್ಳೋದು  ತುಂಬಾ ಮುದ್ದು ಮುದ್ದು....

      ಇವರಿಬ್ಬರನ್ನು ನೋಡೋದೂ ಒಂದೇ ಮಹಾಭಾರತ ಯುದ್ಧ ನೋಡೋದೂ ಒಂದೇ ಅಂತ  ಎಲ್ಲರೂ ನಿಡುಸುಯ್ಯೋ ಹೊತ್ತಿಗೆ...  ಅದೋ... ಅಲ್ಲೆರಡು ಜೀವಗಳು ಇಳಿಸಂಜೆಯ ಮಬ್ಬು ತುಂಬಿದ ರಸ್ತೆಯುದ್ದಕ್ಕೂ ಹೂವರಳಿದಂತೆ ಪಿಸುಗುಟ್ಟುತ್ತಾ ಬೆರಳಿಗೆ ಬೆರಳು ಹೊಸೆದುಕೊಂಡು ಜಗತ್ತೇ ಖುಷಿಯಾಗುವ ರೀತಿ ನಡೆಯುತ್ತಿರುತ್ತಾರೆ. ಮಾಯದ ಮಳೆ ಜಡಿದು, ನೀಲಾಕಾಶದಲ್ಲಿ ಬೆಳ್ಳಿಯ ಅಂಚು ನಿಚ್ಚಳವಾದಂತಹ ಭಾವನೆ ಹುಟ್ಟಿಸುತ್ತಾರೆ. ಮುಂಜಾವಿನ ಹಸಿರು ಹುಲ್ಲ ನಡುವಿನ ಇಬ್ಬನಿಯಲ್ಲಿ  ಪಾರಿಜಾತದ ಹೂವು ಅರಳುವಂತೆ... ಸಂಜೆ ಅವರಿಬ್ಬರು..

       ಕರಕರ ರೇಗುವ ಬದಲಾಗಿ ಅವರ ಕಣ್ಣುಗಳು ಅಪ್ಪಟ ಹೂಕುಂಡ. ಬಿಡುವು ಸೆಡವು ವೇದನೆ ಅಸಮಾಧಾನಗಳೆಲ್ಲ  ಮಂಗಮಾಯವಾಗಿ ಅವರ ನಡುವೆ ಅಚ್ಚಚ್ಚು ಬೆಲ್ಲದಂತಹ ಸಿಹಿಮಾತು, ಹೃದಯಾಂತರಾಳದಲ್ಲಿ ಕರಡು ಕಟ್ಟಿದ್ದ ಪರ್ವತದಂತಹ ಆವೇದನೆ ಕಿಡಿ ರೋಷಗಳೆಲ್ಲಾ  ಸ್ನೇಹಪೂರಿತವಾದ ಸಾಂತ್ವನದಿಂದ ಕರಗಿ ಮಾತಿನ ರೂಪದಲ್ಲಿ ಹರಿಯಲಾರಂಭಿಸಿದ ಶುಭ  ಸಂಜೆ  ಅವರಿಬ್ಬರು ಪಕ್ಕಾ ಪ್ರೇಮಿಗಳು. ಇವರಿಬ್ಬರನ್ನು ಪ್ರತೀ ದಿನ ನೋಡುತ್ತಿದ್ದವರಿಗೆ ಪ್ರಪಂಚದ ಒಂಭತ್ತನೇ ಅದ್ಭುತದಂತಹ ಆಶ್ಚರ್ಯ ಕೊಟ್ಟುಬಿಟ್ಟಿರುತ್ತಾರೆ.

      ಹೌದು ಪ್ರೀತಿ ಬಲಗಾಲಿಟ್ಟು ಹೃದಯದ ಹೊಸ್ತಿಲು ತುಳಿಯೋದೇ ಹಾಗೆ...  ಒಂದು ಅಗೋಚರ ಕನಸಿನ ಹಿಮಬಿಂದು ಮನಸಿಗೆ ಬಂದು ಹೃದಯವನ್ನೆಲ್ಲಾ ತಂಪು ತಂಪಾಗಿಸಿದಂತೆ... ಜನಿಸುವಾಗ ಕಿರುಚುತ್ತಲೇ ಪುಟ್ಟದಾಗಿ ಕಣ್ಣು ಬಿಡುವ ಮುಗ್ಧ ಮಗುವಿನಂತೆ...  ಮೊದಲಿನಿಂದ ಇವರನ್ನು ನೋಡುತ್ತಾ ಬಂದವರೆಲ್ಲಾ ಹಿಮಾಲಯದಂತಹ ಪ್ರಶ್ನೆಯನ್ನು ಪಕ್ಕದಲ್ಲಿಟ್ಟುಕೊಂಡು " ಹುಚ್ಚು ಜಗಳದಲ್ಲಿ ಇಷ್ಟೊಂದು ಒಲವಿರುತ್ತದಾ...? " ಎಂದು ಅಂದುಕೊಂಡರೆ ಅವರಿಬ್ಬರು ಮಾತ್ರ  ಅರ್ಥವಾಗದ ಶುದ್ಧ ಮಲ್ಲಿಗೆಯ ತಂಪು ನಗೆ..

     ಅವರಿಬ್ಬರು ತುಂಬಾ ಅಂದರೆ ತುಂಬಾ ಕಿತ್ತಾಡ್ತಾರೆ... ತಿಂಗಳಿನ ಮೂವತ್ತು ದಿನಗಳಲ್ಲಿ ಕಳೆದ ಿಪ್ಪತ್ತೊಂಭತ್ತು ದಿನವೂ ಕಿತ್ತಾಡಿರ್ತಾರೆ.. ಆದರೆ ಕೊನೆಯ ಮೂವತ್ತನೆಯ ದಿನ ಆತ ಕಾಣಿಸಿಕೊಳ್ಳೋದೇ ಇಲ್ಲಾ...  ಕಾಲೇಜಿಗೆ ಬರೋಲ್ಲಾ, ರಸ್ತೆಯಲ್ಲಿ ಸಿಗೋಲ್ಲಾ, ತನ್ನ ಮನೆ ಬೀದಿಯಲ್ಲಿ ಸುಳಿಯೋಕೆ ಚಾನ್ಸೇ ಇಲ್ಲಾ... ಆವತ್ತಿಡೀ ದಿನ ಅವಳು ತುಂಬಾ ಟೆಂಶನ್ ಅನುಭವಿಸುತ್ತಾಳೆ. ತಲೆಯಲ್ಲಿ ಪಾಠ ನಿಲ್ಲೋಲ್ಲಾ... ಕೇಳೋಕೆ ತಾಳ್ಮೆ ಇರೋಲ್ಲಾ...  ಡೆಸ್ಕ್ ಮುರಿದುಬಿಡಬೇಕೆನಿಸುತ್ತದೆ. ಇವೆಲ್ಲವುಗಳ ನಡುವೆ ಮೊದಲ ಬಾರಿಗೆ ಅಂದುಕೊಳ್ಳುತ್ತಾಳೆ..... ಅವನೆಂದರೆ ತನಗಷ್ಟು ಇಷ್ಟಾನಾ....

      ಅವನಿಗೂ ಕೂಡಾ ಅವಳ ಜೊತೆ ಜಗಳ ಕಾಯದೇ ಇದ್ರೆ ತಿಂದ ಅನ್ನ ಜೀರ್ಣವಾಗೋಲ್ಲಾ... ಅವಳಿಗೆ ಸರಿಯಾಗಿ ಡಿಚ್ಚಿ ಕೊಡಬೇಕು ಅಂತ ಅವಳ ಬಗ್ಗೆ ಏನೇನೋ ಡಿಟೇಲ್ಸ್ ಕಲೆಕ್ಟ್ ಮಾಡಿರ್ತಾನೆ..  ವೀಕನೆಸ್ ಪಾಯಿಂಟ್ ಹಿಡಿದುಕೊಂಡು ಬಂದಿರ್ತಾನೆ... ಆದರೆ ಅವಳೇ ಇಲ್ಲಾ... ಆವತ್ತಿಡೀ ದಿನ ಅವಳು ಸಿಗೋದೇ ಇಲ್ಲಾ.... ಅವನ ತಲೆ ಕೆಟ್ಟು ಹೋಗಿರುತ್ತದೆ. ನಿಂತರೆ ನಿಂತ ಹಾಗಿಲ್ಲ... ಕುಳಿತರೆ ಕೂರೋಕಾಗಲ್ಲ... ಫುಲ್ ಬ್ಲ್ಯಾಂಕ್ ಆಗಿಬಿಟ್ಟಿರ್ತಾನೆ... ಅವಳಿಲ್ಲಾಂದ್ರೆ ನಾನ್ಯಾಕೆ ಇಷ್ಟು ಡಿಪ್ರೆಸ್ ಆಗ್ತೀನಿ.. ಇದು ಪ್ರೀತಿಯಾ...? ಅಂತ ಮೊದಲ ಬಾರಿಗೆ ಅವನು ಕೇಳಿಕೊಳ್ತಾನೆ... 

       ಅಸಲಿಗೆ ಇಂತಹ ಅನುಪಸ್ಥಿತಿಯ ಸಮಯದಲ್ಲೇ ತಾವು ಕಚ್ಚಾಡುತ್ತಿರುವ ಕಾರಣ ಅನಾವರಣಗೊಳ್ಳುವುದು. ಅವಳಿಂದ ಬೈಸಿಕೊಳ್ಳದೇ.. ಗೇಲಿ ಮಾಡಿಸಿಕೊಳ್ಳದೇ, ಕೆನ್ನೆ ತಿವಿಸಿಕೊಳ್ಳದೇ  ಮನಸ್ಸು ಯಾಂತ್ರಿಕ ಅನ್ನಿಸಿದಾಗಲೇ ಹೃದಯ ಸದ್ದಿಲ್ಲದೇ ಸಾಥ್ ನೀಡುತ್ತದೆ. ಸಿನಿಮಾದಲ್ಲಿನ ಜಗಳಗಂಟ ಪ್ರೇಮಿಗಳು ನಮಗೆ ಇಷ್ಟವಾಗೋದೇ ಕಾರಣಕ್ಕೆ.. ಅವನಿಗೆ ಮುಗ್ಧ ಕೊಂಕು ಮಾತುಗಳನ್ನು ಸಹಿಸುವುದರಲ್ಲೇನೋ ಆನಂದವಿದೆ.

       ಇಂತಹ ಅನುಪಸ್ಥಿತಿಯ ನಂತರದ ಮೊದಲ ಭೇಟಿಯಲ್ಲಿ ಅವನು ಕಿತ್ತಾಡಬೇಕೆಂದುಕೊಂಡರೂ  ಮನಸ್ಸು ಎಚ್ಚರಿಸುತ್ತದೆ... 'ಕೈ ತಪ್ಪಿ ಹೋದಾನು/ಹೋದಾಳು' ಅಂತ. ಅವನಿಗೆ ಗೊತ್ತಿಲ್ಲದಂತೆಯೇ ಮಾತು ಮೃದುವಾಗಿ ಬಿಟ್ಟಿರುತ್ತದೆ.  ಮಲ್ಲಿಗೆಯಷ್ಟು ಮೃದುವಾಗಿ ಹಾಯ್ ಅಂದ್ಕೋತಾನೆ ನಸು ನಗುತ್ತಾ.... "ಯಾಕೋ ಜಗಳ ಕಾಯಲ್ವೇನೋ " ಅಂತ ಅವಳೆಂದರೆ... "ಏನೇ  ಹುಡುಗಿ ಸಾಪ್ಟ್ ಆಗ್ಬಿಟ್ಟಿದೀಯಾ" ಅಂತ ಅವನಂತಾನೆ. ಅವರಿಬ್ಬರು ಶುದ್ಧ ಪ್ರೆಂಡ್ಸ್ ಗಳಾಗಿ... ಅಪ್ಪಟ ಪ್ರೇಮಿಗಳಾಗಿ ಬದಲಾಗೋದೇ ಆವಾಗ. ಪ್ರೀತಿಯಾಗಿ ಬದಲಾಗುವಾಗಿನ ಸಂಘರ್ಷ ಯಾವಾಗಲೂ ಹಿತವಾದ ನೋವುಗಳನ್ನು ನೀಡುತ್ತಿರುತ್ತದೆ. ಅದೊಂದು ನೋವೇ ಅಥವಾ ಸುಖವೇ ಎಂದು  ಪಕ್ಕಾ ಆಗಿ ಗುರುತಾಗದಷ್ಟು ಅಮೂರ್ತ ಭಾವದ ಹಳವಂಡ. ಪ್ರೇಮದ ತಿರುಗುಣಿಗೆ ಬಿದ್ದವನ ಆತ್ಮದ  ಮಧುರ ಆರ್ತನಾದವದು. ಇದನ್ನು ನಿಲ್ಲಿಸಬೇಕೇ ಮುಂದುವರೆಸಬೇಕೆ ಎಂದು  ಸುಸೂತ್ರ ತೋರದ ಗೊಂದಲ. ಪ್ರೀತಿಯ ಸಂಬಂಧದಲ್ಲಿ ಹೃದಯದ ಪಿಸುಮಾತೇ ಸಂವಿಧಾನ.  ಯೋಚಿಸಬೇಡಿ... ಇಂತಹ  ಅಚ್ಚ ಬಿಳುಪಿನ ಮುದ್ದು ಮುದ್ದಾದ ಪ್ರೀತಿಯ ಪಾರಿವಾಳ ಬಂದು ನಿಮ್ಮೆದೆಯ ಮೇಲೆ ರೆಕ್ಕೆ ಬಡಿಯುತ್ತಿದ್ದಾಗಲೇ ಅರಿತುಕೊಳ್ಳಿ. ಹಾರಿ ಹೋಗುವ ಮೊದಲೇ ಎದೆಗವಚಿಕೊಳ್ಳಿ..

                                                                                                         --ರಾಘವ್  ಲಾಲಗುಳಿ



ವಿ.ಸೂ. - ಈ ಬರಹ ಅಕ್ಟೋಬರ್ 2009 ರ ಮಾನಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.