ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, November 28, 2013

ಪ್ರೀತಿಯ ಸಾಗರವಿದು ನನ್ನ ಹೃದಯ.... ನದಿಯಾಗಿ ನೀ ಬಂದು ಸೇರೆಯಾ....


ನಿನ್ನ  ಇರುವಿಕೆಯನ್ನು, ನಿನ್ನ ಪ್ರೀತಿಯನ್ನು, ನಿನ್ನ ನೆನಪನ್ನು ಅಲ್ಲಗಳೆದು ಬದುಕಿಬಿಡಬೇಕೆಂದುಕೊಂಡು ಏನೇನೆಲ್ಲ ಪ್ರಯತ್ನ ಮಾಡಿಬಿಟ್ಟೆ.. ಈವತ್ತಿಗೂ ಈ ಒಂದು ವಿಷಯದಲ್ಲಿ ನನಗೆ ಸೋಲೇ....

ಸೋತು ಸೋತು ಸಾಕಾಗಿ ಹೋಗಿದೆ ನನಗೆ.ಹಾಗಾದರೆ ನಿನ್ನನ್ನು ಒಪ್ಪಿಕೊಂಡು ನಿನ್ನೆಡೆಗೆ ಪ್ರೀತಿ ಬೆಳೆಸಿಕೊಳ್ಳಲಾ.... ಅಸಲು ನನ್ನಲ್ಲಿ ನಿನ್ನ ಮೇಲೆ ಸಾಗರದಷ್ಟು ಪ್ರೀತಿಯಿದೆ. ಆದರೆ ಹುಡುಗೀ ನೀನು ನಿನ್ನ ಹೃದಯವನ್ನು ಕಲ್ಲಾಗಿಸಿಕೊಂಡು ಕುಳಿತಿದ್ದೀಯಲ್ಲೇ.....

ನನ್ನ ಹಾಡಿಗೆ ಹೂವು ಅರಳುತ್ತದೆ.. ಆದರೆ ನೀನು ಆಲಿಸುವುದೇ ಇಲ್ಲಾ.... ನನ್ನ ಸ್ಪರ್ಶಕ್ಕೆ ಹಿಮ ಕರಗೀತು.... ಕರಗಿದ ಹಿಮ ಪ್ರೀತಿಯಾಗಿ ಹರಿದೀತು... ನೀನು ಕರಗುವುದಿಲ್ಲ.... ನನ್ನ ಪ್ರೀತಿಗೆ ಸಾಗರ  ಉಕ್ಕುತ್ತದೆ.. ಆದರೆ ನೀನೆಂಬ ಪ್ರೀತಿಯ ಮಂಜು ಕರಗುವುದೇ ಇಲ್ಲ..... ಎಂದಿಗೂ ಯಾವುದಕ್ಕೂ ಕರಗದ ಶಿಲಾಬಾಲಿಕೆ ನೀನು... ಗೊತ್ತಿದೆ ನನಗೆ ಅದು... ಆದರೂ ನಿನಗಾಗಿಯೇ ನನ್ನ ಪದೇ ಪದೇ ಪ್ರಯತ್ನಗಳು....

ಮೊದಲೆಲ್ಲಾ ಎಷ್ಟು ಚನ್ನಾಗಿತ್ತು... ಬೆಳ್ಳಂಬೆಳಗ್ಗೆ ಸೂರ್ಯನ ಜೊತೆ ನೀನೂ ಎದ್ದೇಳುತ್ತಿದ್ದೆ... ಹಾಗೇ ನಾನೂ.....  ಅಂಗಳದಲ್ಲಿನ ನಿನ್ನ ರಂಗವಲ್ಲಿಗೆ ಇಲ್ಲಿ ನನ್ನ ಮನಸ್ಸು ಬಣ್ಣ ತುಂಬುತ್ತಿತ್ತು. ನಿನ್ನನ್ನು ದೂರ ನಿಂತು ನೋಡುತ್ತಿದ್ದೆ. ಮಂತ್ರ ಗೊತ್ತಿಲ್ಲದ ಹುಡುಗ ಭಗವಂತನನ್ನು ನೋಡುವಂತೆ.  ನಾನು ನೋಡುತ್ತಿದ್ದುದು ನಿನಗೂ ಗೊತ್ತಾಗುತ್ತಿತ್ತು ಮತ್ತು ನೀನೂ ಗೊತ್ತಾಗದವಳಂತಿರುತ್ತಿದ್ದೆ.  ಮತ್ತೆ ನಿನಗೆ ಗೊತ್ತಾದರೂ ನೀನು ಗೊತ್ತಾಗದವಳಂತಿರುತ್ತೀಯೆಂಬುದು ನನಗೂ  ಗೊತ್ತಾಗುತ್ತಿತ್ತು. ಒಂದು ಎಡೆಬಿಡದ ದಿನಚರಿ ನನ್ನೊಳಗೆ ನಿನ್ನೊಳಗೆ ಗಡಿಯಾರದ ಮುಳ್ಳಿನ ಜೊತೆ ಜೊತೆಗೇ ತಿರುಗುತ್ತಿರುವಂತಿತ್ತು. ಇಲ್ಲಿಯವರೆಗೆ ಎಲ್ಲವೂ ಚಂದವೇ.... ಮೊತ್ತ ಮೊದಲ ಸಲ ನಿನ್ನೆದುರಿಗೆ ನಿಂತು "ಹಾಯ್" ಅನ್ನುವವರೆಗೆ...

ನೀವು ಹುಡುಗಿಯರನ್ನು ಹುಡುಗ ಮೊತ್ತ ಮೊದಲ ಬಾರಿಗೆ ಕೈ ಹಿಡಿದಾಗ... ಮೊಟ್ಟ ಮೊದಲ ಬಾರಿಗೆ ತುಟಿಗೆ ತುಟಿ ಅಂಟಿಸಿದಾಗ ಹೇಗೆ ಕಂಪಿಸುತ್ತೀರೋ,.. ನನ್ನಂತಹ ತೀರಾ ಸೆಂಟಿಮೆಂಟಲ್ ಯಡವಟ್ಟುಗಳಿಗೆ ಮೊಟ್ಟ ಮೊದಲ ಬಾರಿಗೆ ಹುಡುಗಿಯರೆದುರು ನಿಂತು ನಿನ್ನ ಹೃದಯದಲ್ಲೊಂದಿಷ್ಟು ಜಾಗ ನನಗಾಗಿ ಕೊಡ್ತೀಯಾ ಅಂತ ಕೇಳುವಾಗ ಅಂಥದ್ದೇ ಕಂಪನ ಕಾಡುತ್ತದೆ ಗೊತ್ತಾ?

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದು ಸಾರಿ ಕೇಳೆಯಾ ಈ ಸ್ವರ.
ಮನಸಲ್ಲಿ ಚೂರು ಜಾಗ ಬೇಕಿದೆ...
ಕೇಳಲಿ ಹೇಗೆ ತಿಳಿಯದಾಗಿದೆ..

ಅದರಲ್ಲೂ ನಾನು ಕೇಳಿದ್ದು ಕಲ್ಲು ಗೊಂಬೆಯಂತಹ ನಿನ್ನೆದುರು.... ಹೇಗೆ ದಿಟ್ಟಿಸಿದ್ದೆ ನನ್ನ...  ಮೊತ್ತ ಮೊದಲ ಬಾರಿಗೆ ಬಂಗಾರದ ಹಾರವನ್ನು ಹಾಕಿ ಕನ್ನಡಿಯೆದುರಿಗೆ ಬಾಯಿ ಕಳೆದು ನಿಂತು ದಿಟ್ಟಿಸುವಂತೆ...... ಆವತ್ತು ನೀನು ಉತ್ತರಿಸಲಿಲ್ಲ...ಉತ್ತರಿಸಿದ್ದರೆ ಒಂದು ಅಧ್ಯಾಯ ಪ್ರಾರಂಭವಾಗುವುದರೊಳಗೇ ಮುಗಿದು ಹೋಗಿರುತ್ತಿತ್ತೇನೋ....  ಇಲ್ಲಾ ಹೊಸದಾಗಿ ಪ್ರಾರಂಭವಾಗುವ ಕಥೆಗೆ ಮುನ್ನುಡಿಯಾಗುತ್ತಿತ್ತು.  ನೀನು ಅದ್ಯಾವುದನ್ನೂ ಆಗಗೊಡಲಿಲ್ಲ.  ನಿನ್ನ ಕಣ್ಣಿನಲ್ಲಿ ಅಂದು ನನಗೆ ಅಸಮ್ಮತಿಯೇನೂ ಕಾಣಲಿಲ್ಲ... ಆದರೆ ಮುಂದೆ ನಿನ್ನ ಸಮ್ಮತಿಗಾಗಿ ನಾನು ಮಾಡದ ಕಸರತ್ತುಗಳಿಲ್ಲ....

ನಿನಗೆ ತುಂಬಾ ತೊಂದರೆ ಕೊಡಲು ಮನಸ್ಸಿಲ್ಲದೆಯೂ ಕೂಡಾ ನಿನ್ನೆಲ್ಲ ತಿರುವಿನಲ್ಲಿ ಎದುರಾದೆ....  ಕಾಲೇಜಿನ ಗೇಟಿನ ಬಳಿ... ಬಸ್ ಸ್ಟ್ಯಾಂಡಿನ ಬೆಂಚುಗಳ ಪಕ್ಕ ಬಳೆಯಂಗಡಿಯ ಸಾಲುಗಳಲ್ಲಿ, ಸಂಗೀತ ಶಾಲೆಗೆ ಹೋಗುವ ಮೂರನೇ ತಿರುವಿನಲ್ಲಿ,... ಎಲ್ಲೆಲ್ಲಿ ತಡೆದೆನೋ ನಿನ್ನ...ಎಲ್ಲೆಲ್ಲಿ ಮಾತಿಗೆಳೆದೆನೋ....

ಪ್ರೀತಿಸಿಯಾಯಿತು.... ನೀನು ಒಪ್ಪಿಗೆ ಕೊಡದೇ ಇದ್ದರೂ ಮತ್ತೆ ಮತ್ತೆ ನಿನ್ನ ನೆರಳಿನಂತೆ ಅಲೆದದ್ದಾಯಿತು.... ಸೋತು ಹೋದೆನೇನೋ ನಾನು ಎಂದು ಅಂದುಕೊಂಡು ಕುಳಿತರೆ ನಿನ್ನ ಚಿತ್ರವೃ ಕಣ್ಮುಂದೆ ಬಂದಂತಾಗಿ ಯೋಚನೆಯಾಗಿಬಿಡ್ತೀನಿ.... ನಾನೆಂಬ ನಾನೇ ಇಲ್ಲದೇ ಹೋಗಿದ್ದರೆ ನಿನ್ನ ಶೃಂಗಾರಕ್ಕೇನು ಬೆಲೆ ಹುಡುಗೀ.... ನನ್ನನ್ನ ನೀನು ಒಪ್ಪಿಕೊಳ್ಳಲಿಲ್ಲ ನಿಜ...ಆದರೆ ಹೊಸ ಚೂಡಿದಾರ ಹಾಕಿ ಯಾರಿಗೆ ಕಾಣಿಸುತ್ತಿದ್ದಿಯೋ ಇಲ್ಲವೋ.....  ಟೆರೇಸಿನಿಂದ ಇಣುಕಿ ಇಣುಕಿ ನನ್ನ ಮನೆಯ ಕಿಟಕಿಯ ಕಡೆ ನೋಡುತ್ತಿದ್ದೆಯಲ್ಲಾ... ಒಮ್ಮೆ ನಾನು ನಿನ್ನ ಜಡೆಯನ್ನು ಮೆಚ್ಚಿಕೊಂಡು ಜಡೆಯೆಂದರೆ ಹೀಗಿರಬೇಕು ಎಂದು  ನಿನ್ನ ಗೆಳತಿಯರಿಗೆ ಹೇಳಿದಾಗಿನಿಂದ ಜಡೆಯ ಮೇಲೆ ನಿನ್ನ ಮುತುವರ್ಜಿ ಹೆಚ್ಚಾಗಿದ್ದನ್ನು  ನಾನು ಗಮನಿಸಲಿಲ್ಲವೆಂದುಕೊಂಡೆಯಾ..... ನಿನ್ನಲ್ಲೇನೇ ಬದಲಾವಣೆಯಾದರೂ ನನಗೆ ದರ್ಶಿತವಾಗುತ್ತಿತ್ತು ಅಂತಾದರೆ ನಾನೇ ಇಲ್ಲದೇ ನಿನ್ನ ಸಿಂಗಾರಕ್ಕೆಲ್ಲಿ ಅರ್ಥ ಬಂದೀತು ಹುಡುಗೀ.... ನಿನ್ನ ಸೊಗಸೆಲ್ಲ ನನಗೇ ಎಂದು ನಾನು ಹೇಗೆ ಹೇಳಿಕೊಳ್ಳದಿರಲಿ....

ಹೊಸ ಲಂಗ ದಾವಣಿಯಲ್ಲಿನ ನಿನ್ನ ಸೌಂದರ್ಯ ಮೆಚ್ಚುವಾಗ ನಾನಿದ್ದೆ ಬಂಗಾರದ ಹೊಸಬಳೆಯನ್ನು ಗಂಗಣಿಸುತ್ತಾ ನೀನು ಗೇಟಿನಿಂದ ಹೊರಬೀಳುವಾಗ ಮೆಚ್ಚಿಕೊಳ್ಳಲಿಕ್ಕೆ ನಾನಿದ್ದೆ..... ಸಂಗೀತ ಕ್ಲಾಸಿನಲ್ಲಿನ ನಿನ್ನ ಸನ್ಮಾನವನ್ನು ಅಭಿನಂದಿಸಲಿಕ್ಕೆ ನಾನಿದ್ದೆ....  ಮನೆಯಲ್ಲಿ ಯಾರಿಗೂ ನೆನಪಿಲ್ಲದ ನಿನ್ನ ಬರ್ತಡೇಯನ್ನು ನೆನಪಿರಿಸಿಕೊಂಡು ಹಾರೈಸೋಕೆ ನಾನಿದ್ದೆ.... ನಿನ್ನ ಎಲ್ಲ ದಿನಚರಿಗಳಲ್ಲೊಂದಾಗಿ ಇದ್ದ ನಾನು....  ನಾಳೆ ನೀನು ನನ್ನನ್ನು ಬಿಟ್ಟು ಯಾರದೋ ತಾಳಿಗೆ ಕೊರಳೊಡ್ಡಿದರೆ ನಿನ್ನೆಲ್ಲ ಇರುವಿಕೆಗಳ ಜೊತೆ ನಾನು ನೆನಪಾಗುವುದಿಲ್ಲವೇ ಹುಡುಗೀ........

ನಿನ್ನ ಮನಸ್ಸನ್ನೇ ಕೇಳಿಕೋ ಹುಡುಗೀ. ಯಾವ ಸೋಗನ್ನು ಹಾಕಿ ನೀ ನಡೆದರೂ ನನ್ನೆಡೆಗೆ ಒಂದು ಪೂರ್ಣವಿರಾಮ ಹಾಕಿ ನಡೆಯಲಾಗಲಿಲ್ಲ ನಿನಗೆ.... ಇನ್ನು ಮುಂದೆಯೂ ಇದು ಆಗುವ ಹಾಗಿಲ್ಲ....


ಪ್ರೀತಿಯ ಸಾಗರವಿದು ನನ್ನ ಹೃದಯ....
ನದಿಯಾಗಿ ನೀ ಬಂದು ಸೇರೆಯಾ....

---------------- ರಾಘವ್ ಲಾಲಗುಳಿ.

18 comments:

 1. ರಾಘವಾ -
  ಅದು ಹಾಗೇ ಅಲ್ಲವಾ... ಒಮ್ಮೆ ಪ್ರೇಮ ಭಾವ ಒಳಹೊಕ್ಕರೆ ಮುಗಿಯಿತು... ಅವಳು ಅವಳಿಗಾಗಿ ಮಾಡಿಕೊಂಡ ಶೃಂಗಾರವೆಲ್ಲಾ ನನಗಾಗೇ ಮಾಡಿಕೊಂಡದ್ದೆನ್ನಿಸಿ ರೋಮಾಂಚನ... ಸುಮ್ಮನೆ ನಕ್ಕ ಪರಿಚಯದ ನಗು ಕೂಡ ಅವಳ ಪ್ರೇಮದ ಕಾಣಿಕೆ ಅನ್ನಿಸಿಬಿಡುತ್ತಲ್ವಾ... ಆಕೆ ನಿರಾಕರಣೆಯನ್ನು ಸ್ಪಷ್ಟವಾಗಿ ಹೇಳಿದೇ; ಅಂದರೆ ನನ್ನದು ಪ್ರೇಮವಲ್ಲ - ನಿನ್ನೆಡೆಗಿನ ನನ್ನ ಇಷ್ಟ, ತುಡಿತಗಳೆಲ್ಲ ಪ್ರೇಮದ್ದಲ್ಲ ಅಂತ ನಿಷ್ಟುರವೆನಿಸುವ ಸ್ಪಷ್ಟತೆಯಿಂದ ಹೇಳದೇ ಪ್ರೇಮವಿಲ್ಲದಿರುವುದಕ್ಕೆ ಅಕಾರಣ ಅನ್ನಿಸುವಂತೆ ಕಾರಣಗಳ ನೀಡಿ ಮತ್ತೆ ನಕ್ಕಳು ಅಂತಾದರಂತೂ ಮುಗಿದೇ ಹೋಯಿತು – ಹುಡುಗರ ಪಾಡು ನೋಡಬೇಕು... ಎಂತೆಂಥ ಕಸರತ್ತುಗಳೋ ಒಲಿಸಿಕೊಳ್ಳಲು... ಎಷ್ಟೋ ಸಲ ನಮಗೇ ಸಿಲ್ಲಿ ಅನ್ನಿಸಿದರೂ ಒಳ ಹೊಕ್ಕ ಪ್ರೇಮದ ಭೂತ ಹೆಂಗೆಲ್ಲ ಆಡಿಸಿಬಿಡುತ್ತೆ ಅಲ್ವಾ... :)
  "ನಾಳೆ ನೀನು ನನ್ನನ್ನು ಬಿಟ್ಟು ಯಾರದೋ ತಾಳಿಗೆ ಕೊರಳೊಡ್ಡಿದರೆ ನಿನ್ನೆಲ್ಲ ಇರುವಿಕೆಗಳ ಜೊತೆ ನಾನು ನೆನಪಾಗುವುದಿಲ್ಲವೇ ಹುಡುಗೀ..." ಹಾಗಂತ ಕೇಳಿದೆ... ಬೇಡ ಅಂದ ಮೇಲೂ ನೀ ಅವಳಿಗೆ ನೆನಪಾಗ್ತಾ ಇದೀಯಾ ಅನ್ನೋದಕ್ಕೆ ಅವಳಿಂದಲೇ ಸಾಕ್ಷಿ ಸಿಕ್ಕುಬಿಟ್ಟರೆ ನಿನ್ನ ಚಡಪಡಿಕೆ ಇನ್ನಷ್ಟು ಹೆಚ್ಚಾಗಲ್ವಾ ದೊರೆ... ಅವಳಿಗೆ ನದಿಯಾಗಿ ಬಂದು ನಿನ್ನ ಹೃದಯ ಸಾಗರ ಸೇರೋ ಮನಸು ನಿಜಕ್ಕೂ ಇಲ್ಲದಿದ್ದಲ್ಲಿ ನಿನ್ನ ಪಾಲಿಗೆ ಅವಳು ಪೂರ್ತಿ ಮೌನಿಯಾಗುವುದೇ ಸೂಕ್ತವೇನೋ ಅಲ್ಲವಾ... ಇಲ್ಲದಿದ್ದರೆ ಎಲ್ಲ ಚಡಪಡಿಕೆಗಳ ಬಿಟ್ಟು ನೀನೂ ಸುಮ್ಮನೆ ಅವಳ ಪಕ್ಕ ಅವಳಿಗರಿವಿರದಂತೆ ನದಿಯಾಗಿ ಹರಿಯಬೇಕು... ಎರಡೂ ಸುಲಭವಲ್ಲ... ಯಾಕೋ ಈ ಪ್ರೇಮ ಅನ್ನೋ ವಿಷಯವೇ ಕಷ್ಟ ಕಷ್ಟ... :)
  ಕಮೆಂಟು ಬರಹದಷ್ಟೇ ಉದ್ದವಾಯ್ತಾ ಪ್ರಭೋ... ಆದ್ರೂ ಇಷ್ಟೆಲ್ಲ ಹೇಳಬೇಕೆನ್ನಿಸಿಬಿಡ್ತು ಯಾಕೋ... ಚಂದ ಬರದ್ದೆ ಹೇಳಿ ಮತ್ತೆ ಹೇಳುದು ಬ್ಯಾಡ್ದನ ಅಲ್ದಾ... :)

  ReplyDelete
 2. ನೀ ಹೇಳಿದ್ದು ಸತ್ಯ... ಪ್ರೇಮವೆಂದರೇನೇ ಹಾಗೆ... ಅವಳ ಒಂದು ಸಣ್ಣ ನೋಟವನ್ನೂ ಕೂಡಾ ಪ್ರೇಮದ ಒಂಕಾರ ಎಂದುಕೊಂಡುಬಿಡುತ್ತೇವೆ.... ಎಷ್ಟೋ ಬಾರಿ ನೋಡಿದ್ದೇನೆ... ಇಷ್ಟ ಒಂದು ಕಡೆ.... ಕೊರಳೊಡ್ಡುವದೊಬ್ಬನಿಗೆ.. ಅವಳಿಗೆ ಇಷ್ಟವೇ ಇಲ್ಲದಿದ್ದರೆ ಸರಿ.... ಇಷ್ಟವಿದ್ದೂ ಮೌನಿಯಾದಾಳೇನೋ ಅಂತ....ಏನೇ ಆದರೂ ನಮ್ಮ ಪ್ರೀತಿಯನ್ನು ನಾವು ಹೇಳಿಕೊಳ್ಳಬೇಕು ತಾನೆ.....??? ಇದೂ ಒಂದು ಕಸರತ್ತೇ...

  ಕಾಮೆಂಟ್ ಎಷ್ಟೂ ದೊಡ್ಡದಿರಬಹುದು... ಅದಕ್ಕೆ ಲಿಮಿಟ್ ಇಲ್ಲಾ ದೊರೆ... ವಿಷಯವನ್ನ ಅಂದುಕೊಂಡಂತೆ ಪ್ರಸ್ಥಾಪಿಸುವುದು ಮುಖ್ಯ... ಖುಷಿಯಾಯ್ತು....

  ReplyDelete
 3. Raghav jee.., baraha nidhaanavaagi aavarisuttaa hoguttade...koneyallondishtu kaaduttade... baaLaa annuvashtu ishtavaytu...

  ReplyDelete
  Replies
  1. ಸುಷ್ಮಾ.... ಬರಹದ ಬಗ್ಗೆ ಹೇಳಿದ್ದು ದೊಡ್ಡ ಮಾತು....
   ಆದರೆ ಈ ಪ್ರೀತಿ ಅನ್ನುವುದೇ ಹೀಗೆ ನೋಡು...
   ಮೈ ಕೊಡವಿಕೊಂಡಷ್ಟು ಆವರಿಸುತ್ತಲೇ ಹೋಗುತ್ತದೆ....
   ನಂಗೂ ಖುಷಿಯಾಯ್ತು....

   Delete
 4. ರಾಘವಣ್ಣಾ ...
  ಮೊದಲರ್ಧ ಪ್ರೀತಿಯ ತೋರೋ ಭಾವಗಳ ಓದಿ ಭಾವಗಳೇ ಇಲ್ಲದ ಹುಡುಗಿಗೆ ಆ ಹುಡುಗ ಹೇಳಿಕೊಂಡ ಪ್ರೀತಿಯ ಭಾವಗಳಂತನಿಸಿ ಕ್ಷಣವೊಂದಕ್ಕೆ ಕಂಗಾಲಾದೆ ನಾ!!
  ಆಮೇಲರ್ಧದ ಭಾವಗಳಲ್ಲಿ ಅವಳ ಪ್ರತಿ ನಡವಳಿಕೆಯಲ್ಲೂ ಪ್ರೀತಿಯ ಭಾವವ ಮಾತ್ರ ಅರ್ಥೈಸಿಕೊಂಡ ಹುಡುಗನ ಭಾವಕ್ಕೆ ಮನ ಮೂಕವಾಯ್ತು.
  ಹೌದಲ್ವಾ ...ಬಹುಶಃ ಪೂರ್ತಿಯಾಗಿ ನಿರಾಕರಿಸಲಾರದ ,ಒಪ್ಪಿಕೊಳ್ಳೋಕೂ ಆಗದ ಪ್ರೇಮವಿರದ ಪ್ರೀತಿಯ ಭಾವದ ಈ ದ್ವಂದ್ವ ಎಲ್ಲರ ಬದುಕಲ್ಲೂ ನಡೆದಿರುತ್ತೆ ಅನಿಸಿತ್ತು.
  ಸ್ಪೆಶಲ್ಲಿ ನನ್ನ ಬದುಕಲ್ಲಿ ನಿನ್ನೆ ಮೊನ್ನೆ ನಡೆದಿದೆಯೇನೋ ಇದೇ ತರಹದ ಭಾವ ಅನಿಸಿಬಿಡ್ತು ಇದ ಓದಿ.
  ಅಂತರಂಗದ ಪ್ರತಿನಿಧಿಯಾಗಿ ಬರೆದಂತನಿಸಿದ ಈ ಭಾವಕ್ಕೆ ಏನೆನ್ನಲಿ ನಾ?
  ಚಂದದ ಭಾವ ...ಅಷ್ಟೇ ಚಂದದ ಪದಗಳಲ್ಲಿ ಹಿಡಿದಿಟ್ಟಿರೋ ನಿಮಗೊಂದು ನಮನ

  ReplyDelete
  Replies
  1. ಪ್ರೀತಿಯ ಭಾವದ ದ್ವಂದ್ವ ಎಲ್ಲರ ಬದುಕಲ್ಲೂ ಬರಬಹುದು...
   ಈ ದ್ವಂದ್ವತೆಯನ್ನು ಬಿಡಿಸೋಕೆ, ನಮ್ಮದು ಶುದ್ಧ ಪ್ರೀತಿ ಅಂತ
   ಬಿಂಬಿಸೋಕೆ ಎಷ್ಟೋ ಪ್ರಯತ್ನಗಳು ನಡೆಯುತ್ತವೆ...

   ಎಷ್ಟೋ ಸಲ ಭಾವಗಳ ಬಿಂಬವಾಗಿಯೇ ಪ್ರತಿಬಿಂಬವಾಗೋ ನಿನೇ ಇಷ್ಟು ಹೇಳಿದಮೇಲೆ ನಾನೇನನ್ನಲಿ ಹೇಳು.... ನಿನ್ನ ಬದುಕಿಗೂ ಹತ್ತಿರವೆನಿಸಿಬಿಡ್ತು ಅಂದೆಯಲ್ಲ....

   ಏನಾದರೂ ಹೇಳಲಿಕ್ಕೆ ನಿರುಪಾಯಿ ನೀನೋ ನಾನೋ ತಿಳಿಯುತ್ತಿಲ್ಲ....


   Delete
 5. ಸಖತ್ತಾಗಿದೆ .... ಚಂದದ ಸಾಲುಗಳಲ್ಲಿ ಭಾವನೆಗಳನ್ನು ಕಟ್ಟಿಕೊಟ್ಟಿದ್ದೀರಿ....

  ReplyDelete
  Replies
  1. ನಿಮ್ಮ ಪ್ರೋತ್ಸಾಹ ಆಶೀರ್ವಾದ ಎರಡೂ ಬೇಕು....

   ಧನ್ಯವಾದ ಅಕ್ಕಾ......

   Delete
 6. ಎಲ್ಲಿದ್ರೂ ಓಡಿ ಬರ್ತಾಳೆ ಅವಳು ನಿನ್ನ ಬರಹ ಓದಿದ್ರೆ! :) ಚಂದ ಬರದ್ದೆ ರಾಘವ್

  ReplyDelete
 7. ಮಾನಸ ಸರೋವರದಲ್ಲೆಲ್ಲೋ ನಿಮ್ಮ ಭೆಟ್ಟಿಯಾದ ನೆನಪು....
  ನಿಜವಾಗಿಯೂ ಹೆಸರು ಗೊತ್ತಿಲ್ಲೆ....

  ಸ್ಟಾರ್ಟಿಂಗಲ್ಲೇ ಬರದ್ದೆ ನೋಡು..... ನನ್ನ ಹಾಡಿಗೆ ಹೂವು ಅರಳುತ್ತದೆ... ಆದರೆ ನೀನು ಆಲಿಸುವುದೇ ಇಲ್ಲಾ ಅಂತ.... ಹಂಗೇ ಆದ್ರೆ....????? ಓದಿದರೆ ಬರ್ತಿದ್ದಳೋ ಏನೋ.... ಓದೋಕೆ ಒಲ್ಲೆ ಅಂದ್ರೆ..... ಹ್ಹ ಹ್ಹ ......

  ಪ್ರತಿಕ್ರಿಯೆಗೆ ಧನ್ಯವಾದ....

  ReplyDelete
 8. ರಾಘವಣ್ಣಾ,

  ಇತ್ತೀಚೆಗೆ ಓದಿದ ಬರಹಗಳಲ್ಲೇ ಅತಿ ಖುಷಿ ಆದ ಬರಹ. ತುಂಬ ಎಂದರೆ ತುಂಬ ಇಷ್ತ ಆಯ್ತು.

  ಆಪ್ತ ಎನ್ನಿಸಿದ ಹುಡುಗ, ಟಿಪಿಕಲ್ ಎನ್ನಿಸಿದ ಹುಡುಗಿಯಿಬ್ಬರ ಮಧ್ಯದ ಒಂದು ಚಿಕ್ಕ ಕಥೆಯನ್ನು ಎಷ್ಟು ಚೆನ್ನಾಗಿ ಕಟ್ಟಿಕೊಟ್ಟುಬಿಟ್ಟೆ ಮಾರಾಯ ನೀನು. ಹುಚ್ಚು ಪ್ರೀತಿಯಲ್ಲಿರುವ ಹುಡುಗನ ಕಣ್ಣಿಂದ ನೋಡಿದ ಭಾವಗಳೂ ಚಂದ ಬರಹದಷ್ಟೆಯೇ. ಎಲ್ಲರಿಗೂ ಒಂದಲ್ಲ ಒಂದು ಬಾರಿ ಅನ್ನಿಸಿಯೇ ಇರುವ ಅನಿಸಲೇ ಬೇಕಾದ ಭಾವಗಳು ಅವು. :) ತುಂಬಾ ಎಂದರೆ ತುಂಬಾ ಇಷ್ಟ ಆಯ್ತು.

  ಬರೀತಿರಿ.

  ReplyDelete
 9. ತುಂಬಾ ಪ್ರೀತಿಸಿಕೊಂಡ ಹುಡುಗನೊಬ್ಬನ ಭಾವ...
  ಮತ್ತು ಪ್ರೀತಿಯನ್ನು ಉಳಿಸಿಕೊಳ್ಳಲು ಅವನ ಪ್ರಯತ್ನ.... ಹೀಗೇ ಏನೇನೋ ಸೇರಿ
  ಹೀಗಾಯಿತು ನೋಡು......

  ಅಷ್ಟೆಲ್ಲಾ ಇಷ್ಟವಾಯಿತು ಅಂದೆಯಲ್ಲಾ...... ಖುಷಿಯಾಯ್ತು.....
  ಹೀಗೇ ಬರ್ತಾ ಇರಬೇಕು.....

  ReplyDelete
 10. ರಾಘವ್ ,

  ಕಲ್ಲಾದ ಹುಡುಗಿಯ ಮುಂದೆ ಕನಸು ನನಸು ವಾಸ್ತವಗಳ ಕನವರಿಕೆ ಚಂದ ..
  ನಾನೆಂಬ ನಾನೇ ಇಲ್ಲದೇ ಹೋಗಿದ್ದರೆ ನಿನ್ನ ಶೃಂಗಾರಕ್ಕೇನು ಬೆಲೆ ಹುಡುಗೀ....
  ಅದ್ಭುತ .. :)

  ಕಲ್ಲು ಕರಗುವುದು ಖಂಡಿತ ...

  ReplyDelete
 11. ನನಗೂ ಈ ಸಾಲು ಓದಿದಾಗ ಖುಷಿ ಕೊಟ್ಟಿತ್ತು......
  ಮತ್ತೆ ಮತ್ತೆ ಓದುವಂತೆ......

  ಮೆಚ್ಚುಗೆಗೆ ಧನ್ಯವಾದ.....

  ReplyDelete
 12. ವಾಹ್! ರಾಘಣ್ಣ...
  ಪ್ರತೀ ಇರುವಿಕೆಯನ್ನೂ ಅವಳಲ್ಲೇ ಕಾಣುವ ಆ ಪ್ರೀತಿ ಅದ್ಭುತ, . .ಎಲ್ಲಗಳ ನಡುವೆಯೂ ಮೆಚ್ಚುವ ಅರ್ಥ ಮಾಡಿಕೊಳ್ಳುವ ಪ್ರೀತಿ ಬಲು ಸೊಗಸು.. ಅವಳ ಬದುಕಿಗೆ ಬೇಕಾದ ನೆನಪಿನ ದೊಡ್ಡ ರಾಶೀಯೇ ಆಗಿಬಿಟ್ಟೆಯೇನೋ ಎಂಬಂತಿದೆ ..

  ReplyDelete
  Replies
  1. ಪದ್ಮಾ.... ಒಂದು ವಿಷಯ ಗೊತ್ತಾ.....
   ಎನೇ ವಿಪರ್ಯಾಸಗಳಿದ್ದರೂ ಕುಡಾ..... ಪ್ರೀತಿಯಲ್ಲಿ ಮಾತ್ರ
   ಅದು ತೀರಾ ಸಹಜವೆಂಬಂತಿರುತ್ತೆ... ಕೆಲವು ಅಸಹಜತೆಗಳೂ ಕೂಡಾ ಪ್ರೀತಿಯಲ್ಲಿ ತೀರಾ ಸಹಜವಾಗಿರುತ್ತೆ....

   ಓದಿ ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ಯವಾದ ಡಿಂ..........

   Delete
 13. ® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete
  Replies
  1. ಧನ್ಯವಾಯಿತು ದೊರೆ...................

   Delete