ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, December 27, 2013

ನಮ್ಮ ಕೆಲಸವನ್ನು ನಮ್ಮ ಮನಸ್ಸೆಷ್ಟು ಸಮರ್ಥಿಸುತ್ತೆ..


ಆತ್ಮಾಪಮ್ಯೇನ ಸರ್ವತ್ರ ಸಮರ ಪಶ್ಯತಿಯೋರ್ಜುನ  |
ಸುಖಂ ವಾ ಯದಿ ವಾ ದುಃಖಂ ಸಯೋಗೀ ಪರಮೋ ಮತಃ ||

ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ  ಬೇರೆಯವರನ್ನೂ ಸಹ ಹಾಗೆಯೇ ಪ್ರೀತಿಸು..

ಇದು ಸಾಧ್ಯವಾದರೆ ನಮ್ಮ ಮನಸ್ಸೆಷ್ಟೋ ಶಾಂತವಾಗಿರಬಹುದು... ನಾನೂ ಇದನ್ನು ಪ್ರಯತ್ನಿಸಿದ್ದೇನೆ..... ಸಾಧ್ಯವಾದಾಗಲೆಲ್ಲ ಪ್ರಯತ್ನಿಸುವ ಮನಸ್ಸು ಮಾಡುತ್ತೇನೆ...... ಆದರೆ ಗೆದ್ದಿದ್ದೆಷ್ಟು ಬಾರಿ...???
ನೂರಕ್ಕೆ ಮೂರು ಬಾರಿ ಮಾತ್ರ.....
ವಿಷಯವನ್ನು ನಾವು ಅರಿಯುವುದು ಬೇರೆ.... ಅರಿತಂತೆ ನಡೆಯುವುದು ಬೇರೆ.... ನಮ್ಮ ಪ್ರೀತಿಸಿಕೊಂಡಷ್ಟು ನಾವು ಇತರರನ್ನೂ ಪ್ರೀತಿಸಿದರೆ ಮನಸ್ಸು ಹರ್ಷಿಸುತ್ತದೆ.... ನನಗೂ ಗೊತ್ತಿದೆ... ಆದರೆ ಆಗ್ತಾ ಇಲ್ವೇ...

ತಪ್ಪು ನಮ್ಮದಲ್ಲವೆಂದು ತಿಳಿದರೂ ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗಿ ಬರುತ್ತದೆ. ಇಲ್ಲಾ ತಪ್ಪು ನಮ್ಮದೇ ಆಗಿದ್ದರೆ ನಿರ್ಭಯವಾಗಿ ಒಪ್ಪಿಕೊಳ್ಳಬೇಕಲ್ಲಾ... ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುವುದರಿಂದ ಎದುರು ವ್ಯಕ್ತಿಗಳು ಎರಡು ಮೆಟ್ಟಿಲು ಇಳಿದು ಬರುತ್ತಾರೆ. ಗೊತ್ತಿದೆ ನಮಗೆ.. ಆದರೆ ನಾವೆಷ್ಟು ಬಾರಿ ಒಪ್ಪಿಕೊಳ್ತೀವಿ....? ನಮಗೆ ವಾದವೇ ವೇದ....... ವಾದದಲ್ಲಿ ಗೆದ್ದರೂ ಇನ್ಯಾವುದರಲ್ಲೋ ಸೋತಿರುತ್ತೇವೆ...

ವಾದಿಸಬಾರದು. ವಾದಿಸಿದರೆ ವಾದದಲ್ಲಿ ಗೆಲ್ಲುತ್ತೀವೇನೋ.. ಆದರೆ ಎದುರು ವ್ಯಕ್ತಿಯ ಅಭಿಪ್ರಾಯವನ್ನು  ಬದಲಾಯಿಸೇವಾ?.. ನಾವು ಹೆಚ್ಚು ವಾದಿಸಿದಂತೆಲ್ಲಾ ಎದುರು ವ್ಯಕ್ತಿಯು ಸೋತು ಹೋಗುತ್ತಿದ್ದಾನೆ ಎಂದಾಯಿತು. ಒಮ್ಮೆ ನಮ್ಮನ್ನು ಆ ಪರಿಸ್ಥಿತಿಯಲ್ಲಿ ಊಹಿಸಿಕೊಂಡರೆ.....  ವಾದದಲ್ಲಿ ಸಂಪೂರ್ಣ ಸೋತು ಹೋದೆ... ಆಗ ನಮ್ಮ ಪರಿಸ್ಥಿತಿ ಏನು? ಎದುರು ವ್ಯಕ್ತಿಯ ಗೆಲೆವು ಒಪ್ಪಿಕೊಳ್ತೀವಾ...?
ನಾನೂ ವಾದಿಸುತ್ತೇನೆ.... ನೂರಕ್ಕೈವತ್ತು  ಬಾರಿ...  ನಲವತ್ತು ಬಾರಿ ನನ್ನದು ಸರಿ ಇದ್ದಾಗ... ಹತ್ತು ಬಾರಿ ಹಾಗೇ...

ಯಂಡಮೂರಿಯವರ ಒಂದು ಮಾತು ಆಗಾಗ ನೆನಪಾಗುತ್ತೆ.... " ನಾವು ಬಹಳ ಸಾರಿ ಒಂದು ಸ್ಪರ್ಶವನ್ನು, ಒಂದು ನಗುವನ್ನು, ದಯೆಯಿಂದ ಹೇಳುವ  ಒಂದು ಪದವನ್ನು, ಕೇಳುವ ಒಂದು ಕಿವಿಯನ್ನು, ಕೊಡಬಹುದಾದ ಒಂದು ಪುಟ್ಟ ಅಪ್ಯಾಯತೆಯನ್ನೂ ಸಹ ಅವುಗಳ ಬೆಲೆ ತಿಳಿಯದೇ ನಿರ್ಲಕ್ಷ್ಯ ಮಾಡುತ್ತಿರುತ್ತೇವೆ.... ಅದನ್ನು ತಿಳಿದುಕೊಂಡರೆ ದೇವರಾಗುತ್ತೇವೆ.."
    ಎಷ್ಟು ನಿಜ ಅಲ್ವಾ...? ಎಲ್ಲ ಸಣ್ಣ ಸಣ್ಣ ವಿಷಯಗಳು... ನಮ್ಮ ಬಿಗುಮಾನವನ್ನು ಬಿಟ್ಟು ಮಾಡುವಂತಹ ಸಣ್ಣ ಸಣ್ಣ ನಮ್ಮ ವರ್ತನೆಗಳು... ನಾವು ಕಳೆದುಕೊಳ್ಳುವಂಥದ್ದೇನೂ ಇರುವುದಿಲ್ಲ....  ಯಾರೋ ಏನೋ ಅಂದಾಗ ತಿರುಗಿ ಬೀಳುವ ಬದಲು ಒಂದು ಮುಗುಳುನಗು...  ವಾದಿಸುವವರೆದುರಿಗೆ ಪ್ರತಿ ವಾದದ ಬದಲು  ಮೌನ..... ಯಾರದೋ ನೆರವಿಗೆ ಹಣ ಕೊಡಲಾಗದಿದ್ದರೂ  ಸಹಾಯ ಬೇಕಿದ್ರೆ ಖಂಡಿತಾ ಕೇಳಿ ಅನ್ನೋವಷ್ಟು ಸಹಜ ಸೌಜನ್ಯ......ಇದರಲ್ಲೆಲ್ಲಾ ಏನಿದೆ ನಾವು ಕಳೆದುಕೊಳ್ಳುವಂಥಾದ್ದು....... ಆದರೆ ನಾವೆಷ್ಟು ಸಾರಿ ಹೀಗಿದ್ದೀವಿ.......

ವ್ಯಕ್ತಿತ್ವ ಎನ್ನುವುದು ದೊಡ್ಡ ಪದ. ಕೇವಲ ನಮ್ಮ ಮಾನಸಿಕ ಸ್ಥಿತಿ ಲಯಗಳಲ್ಲದೇ, ನಾವು ಬೆಳೆದು ಬಂದ ರೀತಿ, ನಂಬಿರುವ ಸಿದ್ದಾಂತಗಳು, ಮಾಡುತ್ತಿರುವ ಕೆಲಸ, ಅದರಲ್ಲಿನ ದಕ್ಷತೆ, ಮಾತನಾಡುವ ರೀತಿ  ಪ್ರತಿಯೊಂದು ಕೃತ್ಯಕ್ಕೂ ಸ್ಪಂದಿಸುವ ಗುಣ, ಮಾನಸಿಕ ದೃಢತೆ, ಹವ್ಯಾಸ ಅಭ್ಯಾಸಗಳು, ನಮ್ಮನ್ನು ನಾವೇ ಪ್ರೊಜೆಕ್ಟ್ ಮಾಡಿಕೊಳ್ಳುವ ರೀತಿ ಹೀಗೆ ಪ್ರತಿಯೊಂದು ಅಣುವಿನಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
                 ನಮ್ಮ ನಡೆ ನುಡಿ.. ಮಾಡುವ ಕೆಲಸ ಕಾರ್ಯಗಳು ಪ್ರತಿಕ್ರಿಯೆಗಳು- ಎಲ್ಲವೂ ನಮ್ಮ ಬಗ್ಗೆ ಹೇಳುತ್ತವೆ. ಈ ಗ್ರಹಿಕೆ ಸದಾ ಇತರರಿಗೆ ನಮ್ಮ ಬಗ್ಗೆ ಇರುತ್ತದೆ ಎಂಬ ಸೂಕ್ಷ್ಮ ವಿಷಯ ನಮಗೆ ತಿಳಿದಿದ್ದರೆ ಸಾಕು. ಚಿಕ್ಕ ವಿಷಯಗಳಲ್ಲಿಯೂ ನಮ್ಮ ನಂಬಿಕೆ-ನಿಶ್ಚಯಗಳು ಅಳುಕದೇ ನಮ್ಮ ತತ್ವಗಳಿಗೆ ಅಂಟಿಕೊಳ್ಳುವ ರೀತಿ, ಜೀವನ ಮೌಲ್ಯಗಳನ್ನು ನಾವು ಆಧರಿಸುವ ರೀತಿ- ಇವುಗಳಿಂದಲೇ ಇತರರು ನಮ್ಮನ್ನು ಅಂಕಿತ ರೂಪದಿಂದ ಅಂಗೀಕರಿಸುತ್ತಾರೆ. ಈ ಅನನ್ಯತೆ ಕೊಡುವ ಮನ್ನಣೆ ಗೌರವಾರ್ಹವಾದುದು. ಚಿರಕಾಲ ಬಾಳುವಂಥದ್ದು. 
   ಆದ್ದರಿಂದ ಅತೀ ಚಿಕ್ಕ  ವಿಷಯದಲ್ಲೂ ನಮ್ಮ ಮೆದುಳು ಮತ್ತು ಕೈ  ಕ್ರಿಯೆಗೆ ಮುಂದಾಗುವ ಮುನ್ನ ನಮ್ಮ ವ್ಯಕ್ತಿತ್ವ ನಮ್ಮ ಮುಂದೆ ಬಂದು ನಿಲ್ಲುವಂತಾಗಬೇಕು. ನಂತರ ಮುನ್ನಡೆಯುವ ಬಗೆ ಚನ್ನ.
                        ನಾವು ಬದುಕಿದ ರೀತಿ, ನಾವು ಮಾಡಿದ ಕೆಲಸ ಕೊನೇ ಪಕ್ಷ ನಮ್ಮ ಮನಸ್ಸಿಗೆ ಖುಷಿ ಕೊಡುವಂತಿರಬೇಕು..  ನಮ್ಮ ಲಾಭಕ್ಕಾಗಿ ನಾವು ಮಾಡುವ ಕೆಲಸಕ್ಕಿಂತ ಏನೂ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ಕೆಲಸ ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತದೆ. ಆದರೆ ಅ ಖುಷಿಯನ್ನು ನಮ್ಮದನ್ನಾಗಿ ಮಾಡಿಕೊಳ್ಳುವ ಮನಸ್ಸು ನಮಗಿರಬೇಕಷ್ಟೇ...

ಕಾಯೇನ ಮನಸಾ ಬುದ್ಧ್ಯಾ ಕೈವಲೈರಿಂದ್ರಿಯೈರಪಿ|
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮ ಶುದ್ಧಯೇ...||
     
                             ....................................................... ರಾಘವ್ ಲಾಲಗುಳಿ.

20 comments:

  1. ರಾಘೂ -
    ಯಾಕೋ ತುಂಬಾನೇ ಇಷ್ಟ ಆತು ಕಣೋ...
    ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ "ಬೇರೆಯವರನ್ನೂ ಸಹ" ಹಾಗೆಯೇ ಪ್ರೀತಿಸು... ಈ ಮಾತಿಗೆ ಬಂದರೆ ನನ್ನ ಗೆಲುವು ಬರೀ ಶೂನ್ಯ... :(
    ಹುಟ್ಟಿನಿಂದ ಬಂದಿಲ್ಲದಿದ್ದರೂ ಪ್ರಜ್ಞಾಪೂರ್ವಕವಾಗಿಯಾದರೂ ಒಂದಷ್ಟು ಪ್ರೀತಿಸುವುದ ತಿಳಿಯಬೇಕಿದೆ - ಕಲಿಯಬೇಕಿದೆ...
    ನಮ್ಮ ಪ್ರೀತಿಯ ಬರಹಗಾರ ಯಂಡಮೂರಿಯನ್ನೂ ನೆನೆದುಬಿಟ್ಟಿದೀಯಾ...
    ಚಂದದ ಬರಹ...

    ReplyDelete
    Replies
    1. ಯಂಡಮೂರಿಯನ್ನು ನೆನೆದು ಬಿಟ್ಟದ್ದಲ್ಲಾ ಪೂರ್ತಿ ನೆನೆಸಿಬಿಟ್ಟಿದ್ದೀನಿ....

      ಶೂನ್ಯದಿಂದ ಶುರುವಾದರೆ ಸಿಕ್ಕ ಗೆಲುವೆಲ್ಲವೂ ಕೂಡಾ ನಮಗೆ + ಆಗ್ತಾನೇ ಹೋಗುತ್ವೆ...
      ಹೆಚ್ಚು ಅಂಕ ಪಡೆದವರಿಗೆ ಕಡಿಮೆಯಾಗುವ ಭಯ ಇರುತ್ತೆ....
      ಆದರೆ ಶೂನ್ಯದಿಂದ ಶುರುವಾದಾಗ ಆ ಭಯವೇ ಇಲ್ಲಾ...
      ನೀ ಹೇಳಿದ ಮಾತಿಗಷ್ಟೇ ಸೀಮಿತ ಈ ನನ್ನ ಮಾತು....

      ಬರ್ತಾ ಇರಿ ದೊರೆಗಳೇ....

      Delete
  2. ಪುಟ್ಟ ಬರಹದಲ್ಲಿ ದೊಡ್ಡ ತತ್ವವನ್ನು ಸರಳವಾಗಿ ಹೇಳಿದ್ದೀ.. ನಿಜವೇ.. ನಿರೀಕ್ಷೆಯಿಲ್ಲದೇ ಪ್ರೀತಿಸುವುದ ಕಲಿತರೆ ನೋವೇ ಇರುವುದಿಲ್ಲ. ನಮ್ಮ ಮನಸ್ಸನ್ನು ಗೆಲ್ಲುವ ಪರಿ ಕಂಡುಕೊಂಡರೆ ಬದುಕಿಗೆ ಸೋಲೇ ಇರುವುದಿಲ್ಲ! ತುಂಬ ಒಳ್ಳೆಯ ಬರಹ.

    ReplyDelete
    Replies
    1. ನಿಜವಾದ ಮಾತು...
      ಎಲ್ಲ ತರಹದ ಸತ್ವ ನಮ್ಮೆಲ್ಲರಲ್ಲಿಯೂ ಇದೆ...
      ನಾವದನ್ನು ಗಮನಿಸಿಕೊಳ್ಳಬೇಕಷ್ಟೇ....

      ಧನ್ಯವಾದ ಅಕ್ಕಾ.........

      Delete
  3. ನಿಜ ರಾಘು ತುಂಬಾ ಮಚ್ಯುವರ್ಡ ಬರಹ. ಜೀವನದಲ್ಲಿ ಚಿಕ್ಕ ಚಿಕ್ಕ ಅಂಶಗಳೂ ಸಹ ವಕ್ತಿತ್ವ ಮತ್ತು ಬದುಕಿನ ದಿಕ್ಕನ್ನು ಬದಲಿಸುವ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಆದರೆ ಎಷ್ಟೋ ಬಾರಿ ನಾವು ಅವಕ್ಕೆಲ್ಲಾ ಪ್ರಾಮುಖ್ಯತೆಯನ್ನೆ ಕೊಡುವುದಿಲ್ಲ. ಅಥವಾ ಕೊಡುವ ಸಹನೆಯೇ ನಮಗಿರುವುದಿಲ್ಲ. ಖಂಡಿತ ಏನನ್ನೂ ನಿರೀಕ್ಷಿಸದ ಪ್ರೀತಿ, ಮತ್ತು ಕೆಲಸ, ಅಂದ್ರೆ ನಿಷ್ಕಾಮ ಕರ್ತವ್ಯ ಪಾಲನೆ ಅಷ್ಟು ಸುಲಭವಾಗಿ ಸಿದ್ಧಿಸುವಂತದ್ದಲ್ಲ. ಎಷ್ಟೋ ಬಾರಿ ನಮ್ಮ ಅಂತಹ ಸಾಧಕರಿರುತ್ತಾರೆ ನಾವು ಗಮನಿಸಿರುವುದೇ ಇಲ್ಲ.

    ReplyDelete
    Replies
    1. ನಾವು ಏನೋ ದೊಡ್ಡ ದೊಡ್ಡ ಸಂಗತಿಗಳನ್ನೆಲ್ಲಾ ಪಾಲಿಸಬೇಕಂತಿಲ್ಲ.....
      ಇವೆಲ್ಲಾ ಅತೀ ಚಿಕ್ಕ ಪುಟ್ಟ ವಿಷಯಗಳು....
      ಯಾರೂ ಮಾಡಬಹುದಾದಂತಹ ತೀರಾ ಸಹಜ ವರ್ತನೆ.......

      ವಿನಾಯಕಣ್ಣಾ ಧನ್ಯವಾದ......

      Delete
  4. ಸೂಪರ್ ರಾಘಣ್ಣ..
    ಆದ್ರೆ ನಮ್ಮ ತಪ್ಪಿಲ್ಲದಿದ್ದರೂ ಕ್ಷಮೆ ಕೇಳೋದ್ರಲ್ಲಿ ತಪ್ಪಿಲ್ಲ ಅನ್ನೋ ಭಾವ ನನಗೆ ಮೂಡಿದ್ದು ಇತ್ತೀಚೆಗಷ್ಟೇ. ವಾದದಲ್ಲಿ ಗೆದ್ದು ಸ್ನೇಹವನ್ನು ಕಳೆದುಕೊಳ್ಳೋದಕ್ಕಿಂತ ಒಂದು ನಗು , ಸ್ನೇಹಿತರನ್ನು ಉಳಿಸುಕೊಳ್ಳುವಿಕೆಯ ಭಾಗವಾದ ಸೋಲೊಪ್ಪಿಕೊಳ್ಳುವಿಕೆಯೇ ಮೇಲು ಅಂತಂದುಕತ್ತಿ. ಆದ್ರೂ ನೂರರಲ್ಲಿ ಆತ್ಮಸಂತೋಷ ಕೊಟ್ಟಂತ ಈ ತರದ ಗೆಲುವುಗಳು ಒಂದಕಿಯಲ್ಲಿ ಇರಬಹುದೇನೋ ಅಷ್ಟೇ :-(

    ವ್ಯಕ್ತಿತ್ವದ ಬಗ್ಗೆಯೂ ಚೆನ್ನಾಗಿ ಬರದ್ದಿ. ಇಂಗ್ಲೀಷಲ್ಲಿ ಒಂದು ಮಾತಿದ್ದು . Personality is not the one which you show when eveybody sees. It is one which you will be when no boday sees ಅಂತ. ಯಂಡಮೂರಿಯವರನ್ನು ನೆನೆದು ನಮ್ಮನ್ನೂ ಭಾವಪ್ರವಾಹದಲ್ಲಿ ತೋಯಿಸಿಬಿಟ್ಟಿದ್ದೀರ :-) ಮುಂಬರೋ ವರ್ಷದಲ್ಲಾದರೂ ಆತ್ಮಸಂತೋಷ ಕೊಡುವಂತಹ ಕೆಲಸಗಳಲ್ಲಿ ಹೆಚ್ಚೆಚ್ಚು ತೊಡಗಬೇಕು ಅನ್ನೋ ಭಾವದಲ್ಲಿ..

    -ಪ್ರಶಸ್ತಿ

    ReplyDelete
    Replies
    1. ಪ್ರಶಸ್ತಿ...... ಕೆಲವು ತಪ್ಪುಗಳನ್ನು ಒಪ್ಪಿಕೊಳ್ಳೊದರಲ್ಲಿ ನಮಗೆ ಏನೂ ಹಾನಿಯಿಲ್ಲದಿದ್ದರೆ... ಬದಲಾಗಿ ಸಂತೋಷ ಸಿಗುತ್ತೆಂದಾದರೆ ಒಪ್ಪಿಕೋಡರೇನು..? ಅಲ್ವೇ.....

      ಈ ಕುರಿತು ಪ್ರಯತ್ನ ಮಾಡುವೆಯೆಂದೆಯಲ್ಲಾ.... ಮತ್ತೇನು ಬೇಕು ಬರಹಕ್ಕೆ........ ಸಾಕಷ್ಟಾಯಿತು.....

      Delete
  5. ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ ಬೇರೆಯವರನ್ನೂ ಸಹ ಹಾಗೆಯೇ ಪ್ರೀತಿಸು..

    ತುಂಬಾ ಇಷ್ಟವಾದ ಸಾಲು....

    ಸಖತ್ ಇಷ್ಟ ಆಯ್ತು ಬರಹ....

    ReplyDelete
    Replies
    1. ಅಕ್ಕಾ ಇದು ಭಗವದ್ಗೀತೆಯಲ್ಲಿನ ಒಂದೇ ಒಂದು
      ಚಿಕ್ಕ ವಾಕ್ಯವಷ್ಟೇ.... ಇಡೀ ಭಗವದ್ಗೀತೆ ಓದಿದರೆ ಇಂತಹ
      ಸಾಲುಗಳ ಸಾಮ್ರಾಜ್ಯವೇ ಸಿಗುತ್ತೆ..... ವಾಕ್ಯರಚನೆ ಒಬ್ಬೊಬ್ಬರದು ಒಂದೊಂದು ತರಹ ಅಷ್ಟೇ.....

      ನಿಮ್ಮ ಪ್ರತಿಕ್ರಿಯೆಗಳು ಮತ್ತು ಈ ಇಷ್ಟಗಳೇ
      ನಮ್ಮನ್ನು ಬರೆಸುತ್ತವೆ.... ಧನ್ಯವಾದ.....

      Delete
  6. ನಿಮ್ಮ ಯೋಚನಾ ಲಹರಿ ಮೆಚ್ಚುವಂತದ್ದು..ಆದರೆ ನಮ್ಮ ತಪ್ಪಿಲ್ಲದೆ ಕ್ಷಮೆ ಕೇಳೋದು ಬಿಡಿ ತಪ್ಪಿದ್ದೂ ಕ್ಷಮೆ ಕೇಳದ ಜನರೇ ಜಾಸ್ತಿ ಆಗಿದ್ದಾರಲ್ಲ ಇದೆ ವಿಪರ್ಯಾಸ..ಇಂತವರ ನಡುವೆ ಹೀಗೊಂದು ಯೋಚನೆ ತುಂಬಾ ಚಂದ..ಒಳ್ಳೆದಾಗಲಿ...:)

    ReplyDelete
    Replies
    1. ನಾವರಿತದ್ದನ್ನು... ನಮ್ಮರಿವಿಗೆ ಬಂದಿದ್ದನ್ನು ಅದು
      ಸಕಾರಾತ್ಮಕವಾಗಿದ್ದರೆ ಹೇಳಿಬಿಡಬೇಕು.... ಅದನ್ನೇ ನಿಮ್ಮ ಮುಂದಿಟ್ಟಿದ್ದು....

      ಇದೇ ಯೋಚನೆ ಒಂದು ಹತ್ತಾಗಿ ಹತ್ತು ನೂರಾದರೆಷ್ಟು ಚನ್ನ ಅಲ್ವಾ...???
      ಮೊದಲ ಬಾರಿಗೆ ನನ್ನ ಬ್ಲಾಗಿನಂಗಳಕ್ಕೆ ಬಂದಿದ್ದೀರಿ... ಸ್ವಾಗತ ನಿಮಗೆ....

      Delete
  7. ವ್ಯಕ್ತಿತ್ವವೆಂದರೆ ಪೂರ್ಣತೆಯಲ್ಲ, ಪೂರ್ಣತೆಯಡೆಗಿನ ಪಯಣ... ಚಿಕ್ಕ ಪುಟ್ಟ ಕ್ಷಣಗಳಿಗೂ/ ವಿಷಯಗಳಿಗೂ ಸ್ಪಂದನೆ ಸಾಧ್ಯವಾದರೆ ಬದುಕು ಚೆನ್ನ... ಗೆಲುವಿನ ಹಪಹಪಿಕೆಗಿಂತ ಬದುಕುವ, ಖುಷಿಯಾಗುವ, ಬೆಳೆವ ಬೆಳೆಸುವ ಸುಖ ನಮ್ಮದಾಗಲಿ...

    ತುಂಬಾ ಇಷ್ಟ ಆತು ಬರಹ...

    ReplyDelete
    Replies
    1. ಅಲ್ವಾ ಮತ್ತೆ..... ಸ್ಪಂದಿಸುವ ರೀತಿ ನಮ್ಮ ಭಾವ.....
      ಿವುಗಳಲ್ಲಿಯೇ ಬದುಕುವ ರೀತಿ ಅಂತರ್ಗತವಾಗಿರುತ್ತೆ.....

      ತಮ್ಮಯ್ಯಾ....... ಬರ್ತಾ ಇರು...

      Delete
  8. ಗೊತ್ತಿರುವ ವಿಚಾರಗಳೆ .ಅದಕ್ಕೆ ಬರವಣಿಗೆ ಶೈಲಿಗೆ ಹಚ್ಚಿರುವುದು ಕುಶಿಕೊಟ್ಟಿತು

    ReplyDelete
  9. ಸ್ವಾಗತ ಅಕ್ಷಯ್.....
    ನನ್ನ ಬ್ಲಾಗಿಗೆ ನಿಮ್ಮದು ಮೊದಲ ಪಾದಾರ್ಪಣೆ ಅಂದ್ಕೋತೀನಿ....

    ಅಕ್ಷಯ್... ನಮಗೆ ಗೊತ್ತಿರುವ ವಿಚಾರಗಳನ್ನೇ ನಾವು ಅಲಕ್ಷ್ಯ ಮಾಡೋದು...
    ಆವಾಗಾವಾಗ ನೆನಪು ಮಾಡಿಕೊಳ್ಳೊಕೋಸ್ಕರ ಈ ಪರಿ....

    ಧನ್ಯವಾದ... ಬರ್ತಾ ಇರಿ.....

    ReplyDelete
  10. ವ್ಯಕ್ತಿತ್ವದ ಅಂತರಂಗದ ಶುದ್ಧಿ ಬಗೆಗಿನ ಲೇಖನ ತುಂಬ ಹಿಡಿಸ್ತು. ಇತರರು ವಾದಕ್ಕೆ ಬಿದ್ದಾಗ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಚೆನ್ನಾಗಿ ವಿವರಿಸಿದ್ದೀರಿ. ನಿಜ ಸ್ವಾರ್ಥವಿಲ್ಲದೆ ಮಾಡಿದ ಕೆಲಸಗಳೇ ನಮಗೆ ಹೆಚ್ಚು ಸಂತಸ ನೀಡುವುದು.

    ReplyDelete
  11. ಪ್ರದೀಪ್....
    ವಾದಕ್ಕೆ ಪ್ರತಿವಾದ ನಮ್ಮದು ಇದ್ದೇ ಇರುತ್ತೆ.....
    ನಾವೇನಕ್ಕೆ ಕಮ್ಮೀ ಅನ್ನೋ ಥರಾ.... ಆದರೆ ಆ ವಾದದಲ್ಲಿ ಮೌನವಾಗಿರೋ ಕಲೆ
    ಬರೋದು ಕಷ್ಟ..... ಕೊನೇ ಪಕ್ಷ ನಮ್ಮ ಮನಸ್ಸಿನಲ್ಲಾದರೂ ಈ ವಿಚಾರವಿದ್ದರೆ
    ಇದನ್ನು ಹಂತ ಹಂತವಾಗಿಯಾದರೂ ಕಡಿಮೆ ಮಾಡಿಕೊಳ್ಳಬಹುದಲ್ವಾ....
    ಅದಕ್ಕೇ ಈ ಬರಹ...

    ಓದಿ ಮೆಚ್ಚಿದ್ದೀರಾ.... ಧನ್ಯವಾದ....

    ReplyDelete
  12. ಉತ್ತಮ ವಿಚಾರ ಅಷ್ಟೇ ಸರಳವಾದ ಬರಹ...

    ReplyDelete