ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, March 24, 2014

ಖುಷಿಯ ಕಂಪಿನೊಂದಿಗಿಷ್ಟು.....


ಬದುಕು ಕಾಣಿಸಿಕೊಟ್ಟ ನೂರು ಕನಸುಗಳಿಗೆ ಒಂದೊಂದಾಗಿ ಒಬ್ಬೊಬ್ಬರು ಒಂದೊಂದು ರೀತಿ ಜೀವ ತುಂಬಿದ ಜೀವ ಧಾತುಗಳು ನೀವು. ನಿಮ್ಮ ಪ್ರೀತಿಗೆ ನಾನು ಏನು ಹೇಳಲಿ....? ಆಪೇಕ್ಷೆಯಿಂದ ಬಂದದ್ದಲ್ಲ...ಎಣಿಸಿರಲೂ ಇಲ್ಲ...
ಯಾವ ಗೊತ್ತಿಲ್ಲದ ರಾತ್ರಿಯಲ್ಲಿ ಹೊಸ ಜೀವ ತುಂಬುವ ಕನಸುಗಳು ಜೀವ ತಾಳಲು ಶುರುವಿಟ್ಟವೋ...... ಬದುಕೇ ಬದಲಾಯಿತು ನೋಡಿ.....

ಅಂದುಕೊಂಡಿದ್ದೆಲ್ಲ ಆಗುತ್ತದೆ ಎಂದು ನಂಬಿಕೆಯಿಲ್ಲ.... ಅಂದುಕೊಂಡಿದ್ದು ಆಗಲೇಬೇಕೆಂಬ ಹಂಬಲವೂ ಇಲ್ಲದೇ ಬದುಕಿಬಿಡುತ್ತಿದ್ದ ಜೀವ ಇದಾಗುತ್ತಿತ್ತೋ ಏನೋ.... ಎಲ್ಲೆಲ್ಲೋ ಏನೇನೋ ಕುತೂಹಲಗಳೇನೋ ತುಂಬಾ ಇತ್ತು..... ಯಾರ್ಯಾರೋ ಬಂದರು.. ಪ್ರೀತಿಸಿಕೊಂಡರು... ನಗಿಸಿಕೊಂಡರು....   ಆತ್ಮೀಯರಾಗಿ ಹೃದಯದೊಳಗೆ ಇಂಚಿಂಚೇ ಜಾಗ ಹೂಡಿಬಿಟ್ಟರು...
ನನ್ನ ಹೃದಯದೊಳಗೆ ಇಷ್ಟೊಂದು ಜಾಗವಿದೆ ಎಂದು ಅಂದುಕೊಂಡಿರಲೇ ಇಲ್ಲ.. ಸ್ನೇಹಿತರೆಲ್ಲಾ ಒಬ್ಬಬ್ಬರಾಗಿ ಬಂದಿ ಪ್ರೀತಿ ಹರಿಸಿ ಹೃದಯದಲ್ಲಿ ಪ್ರತಿಷ್ಟಾಪಿಸುವವರೆಗೂ...

ಎಡೆಬಿಡದ ಶೆಡ್ಯೂಲ್ ಗಳು. ಏನೇನೋ ಆಗಿಬರದ ಜಂಜಾಟಗಳು, ತಲೆಯೊಳಗೊಂದಿಷ್ಟು ನಿಲ್ಲದ ಹನುಮಂತನಂತಹ ಜಂಪಿಂಗ್ ಲೆಕ್ಕಾಚಾರಗಳು, ಟೋಟಲೀ ಬ್ಯೂಸೀ ಲೈಪ್ ಗೆ ಸಿಕ್ಕಿ ಎಂದಿನಂತಿರದ ದೋಣಿ ಮುಗುಚಿ, ಮುಗುಚಿದ ದೋಣಿಯ ಕೆಳಗೆ ಬಿದ್ದಿದ್ದೇನೆ. ಬಿದ್ದವನು ಅಲ್ಲೇ ತಲೆಮರೆಸಿಕೊಂಡಿದ್ದೆನೇನೋ.. ಅಷ್ಟರಲ್ಲಿ ನಿಮ್ಮಂಥವರು ಬಂದು ಮುಗುಚಿದ ದೋಣಿ ಎತ್ತಿ ಏಯ್ಕಳ್ಳಾ ಇಲ್ಲಿದ್ದೀಯಾ...  ಬ್ಲಾಗ್ ಕಡೆ ಬರದೇ ಇಲ್ಲಿ ತಲೆಮರೆಸಿಕೊಂಡಿದ್ದೀಯಾ ಎಂದು ಮೂಗುತೂರಿಸಿಬಿಡುತ್ತೀರಿ.... ಯಪ್ಪಾ ಯಾರ್ ಬಿಟ್ರೂ ನೀವ್ ಬಿಡಲ್ಲಾ ಕಣ್ರೀ... s ssSo sweet of U…

ಪ್ರೀತಿಸಿಕೊಂಡವರು ಸ್ನೇಹಿಸಿಕೊಂಡವರೆಲ್ಲಾ ಹೃದಯ ಕಳ್ಳುವ ಹುನ್ನಾರದಲ್ಲಿದ್ದಾಗಲೇ ಮೊದಲ ಮಾತು ನನ್ನ ಮನದಂಗಳಕ್ಕೆ ಮೊದಲ ಅಡಿಯಿಟ್ಟಿದ್ದು...... ಮತ್ತು ಕುವೆಂಪುರವರರ ಸಾಲುಗಳನ್ನು ನೆನಪಿಸಿಕೊಂಡು ಮುಗುಳ್ನಕ್ಕಿದ್ದು.....
" ಚೋರರು ಹೃದಯದೊಳಗಿರುವರು ಮೌನವೇ ಬಲು ಜೋಕೆ..."

ಮತ್ತೆ ತುಂಬಾ ಪ್ರೀತಿಸಿಕೊಂಡ ಅವಳು.....

ಅಯ್ಯೋ ಹಾಳಾದ ನೆನಪುಗಳೇ......

ಅವಳ ಬಿಸಿಯುಸಿರು ಇನ್ನೂ ಎದೆಗೆ ತಾಕಿಕೊಂಡಂತೆಯೇ ಇದೆ.. ಡಿವಿಜಿ ಯವರ  ಸಾಲು  ನೆನಪಾಗಿಸುವಂತೆ.....
"ಎದೆಯ ಗೂಡಿನೊಳಗೇನೋ ಗಲಭೆಯಾಗಿಹುದು...."

ಹಿಂದೆಂದೋ ನೆನಪುಗಳ ಮೂಟೆಯನ್ನು ಕಟ್ಟಿಕೊಂಡು ಹೋಗುವಾಗ ಅಂದುಕೊಂಡಿದ್ದೆ... ಇವಳ ನೆನಪೊಂದನ್ನು ಇಳಿಸಿ ಬಿಟ್ಟು ಹೋಗಿಬಿಡೋಣವೆಂದು.... ಕೇಳುವಳೇ ಇವಳು....
ಇಲ್ಲಾ.... ನಿನ್ನ ನೆನಪುಗಳ ಮೂಟೆಯನ್ನೂ ನಾನೇ ಹೊತ್ತು ತರುತ್ತೇನೆ.. ನೀನು ಹೋಗ್ತಾ ಇರು... ನಾನು ಬರ್ತಾ ಇರ್ತೇನೆ  ನಿನ್ನ ನೆನಪುಗಳ ಜೊತೆ ಎಂದು ಬೆನ್ನು ಬೀಳಬೇಕೇ? ಇರಲಿ ಎಂದು ಕರೆದುಕೊಂಡೇ ಬರುತ್ತಿದ್ದೇನೆ.. ಅದೇ ಕಾರಣಕ್ಕೆ.. ನೆನಪುಗಳು ಎಂದಾಕ್ಷಣ ಅವಳೂ ಬಿಡದೇ ಎದುರು ನಿಲ್ಲೋದು.....

   ಏನೋ ಆಗಬೇಕಿದ್ದ ಬದುಕು ಏನಾಗಿಹೋಯಿತು..... ಕೆಲವೊಬ್ಬರು ಮಾಡಿಕೊಂಡ  ಅಪಾರ್ಥ, ಇನ್ನೂ ಎಷ್ಟೋ ಜನರ ಪ್ರೋತ್ಸಾಹ....ಇಲ್ಲದ ಕಾರಣಕ್ಕಾಗಿ ಹೊಂಚು ಹಾಕಿ ತರಿಸಿಕೊಂಡ  ದುಃಖದ ತುಂಡು... ಎಷ್ಟೋ ಸಲ ತಾನಾಗಿ ಎರಗಿ ಬಂದ ಗೆಲುವು...  ಇನ್ನೆಷ್ಟೋ ಸಲ ಗೊತ್ತಿದ್ದೂ ತಪ್ಪಿಸಿಕೊಳ್ಳಲಾಗದ ಸೋಲು... ಬೆನ್ನು ತಟ್ಟುವವರಾಚೆಯಿಂದ ಕೆನ್ನೆಗಪ್ಪಳಿಸುವವರು.... ಕೆನ್ನೆಗಪ್ಪಳಿಸುವವರ ನಡುವೆಯೇ ಪ್ರೀತಿ ಹರಿಸುವವರು.... ಕಾಡಿಸಿ ಪ್ರೀತಿಸುವವರು... ಪ್ರೀತಿಸಿಕೊಂಡು ಕಾಡುವವರು.... ಒಂದು ಹನ್ನೊಂದಾಗಲೀ ಇನ್ನೊಂದಾಗಲೀ ಕೊಡಚಾದ್ರಿ ಅಲ್ಲಾ ಅದರ ಅಪ್ಪನನ್ನು ಏರೋಣ ಅನ್ನೋ ಸ್ನೇಹಿತರ ಗುಂಪು.... ಹಿಗ್ಗಾ ಮಗ್ಗಾ ಬೈಸಿಕೊಂಡ ದಿನಗಳು.... ಮತ್ತೆಲ್ಲೋ ಕ್ಯಾರೇ ಅನ್ನದ ಕ್ಯಾರೆಕ್ಟರ್..

ಛೇ....!! ಇಷ್ಟೆಲ್ಲಾ ಯದ್ವಾ ತದ್ವಾಗಳ ನಡುವೆಯೇ ನನ್ನ ಬದುಕಿಗೆ ನೂರಕ್ಕೆ ತೊಂಭತ್ತರಷ್ಟು ಅಂಕ ನೀಡಿ ನೀನು ಸುಖವಾಗಿದ್ದೀಯಾ ಅಂತ ನನ್ನ ಬದುಕಿಗೆ ಕೊಟ್ಟ ಸರ್ಟೀಫಿಕೇಟಿಗೆ ನೀವೆಲ್ಲಾಸ್ನೇಹಿತರು ಬಂಧು ಬಳಗವೆಲ್ಲಾ ಸೇರಿ ಲ್ಯಾಮಿನೇಶನ್ ಮಾಡಿಬಿಟ್ಟರಲ್ಲಾ.... s ಸಿಕ್ಕವರೆಲ್ಲಾ "ಏಯ್.. ನಿಂಗೇನು.... ನೀ ಆರಾಮಿದ್ದೀಯಾ...." ಅಂತಾರೆ... ನಾನೇ ಯೋಚನೆಗೆ ಬೀಳೋ ಹಾಗಾಗಿದೆ.... ನಾನಷ್ಟು ಆರಾಮಾಗಿದೀನಾ ಅಂತಾ...... ಫುಲ್ ಹವಾ.....

ಯಪ್ಪಾ...!!   ನೀವೆಲ್ಲಾ ಸೇರಿ ನೀಡಿದ   ಸರ್ಟೀಫಿಕೇಟನ್ನು ಝರಾಕ್ಸ್ ಮಾಡಿಕೊಳ್ಳೋ ಹಂಗಿಲ್ಲ....
ನಿಯಮ ಇದು....

ಕಳೆದು ಹೋಗದಿರಲಿ ಅದು.......

ಇಂದಿಗೆ ವರ್ಷ ನಾಲ್ಕಾಯಿತು ನನ್ನ ಬ್ಲಾಗಿಗೆ.....  ಇಷ್ಟೆಲ್ಲಾ ಸ್ನೇಹಿತರು ಜೊತೆಗೂಡುತ್ತಾರೆಂದು ಕಲ್ಪನೆಯೂ ಇಲ್ಲದೇ ಕಾಲಿಟ್ಟವ ನಾನು ಲೋಕಕ್ಕೆ.... ನಿಮ್ಮ ಪ್ರೀತಿಗೆ... ಸ್ನೇಹಕ್ಕೆ.... ಆದರಗಳಿಗೆ ಏನೆನ್ನಲಿ ನಾನು..... ಎಷ್ಟೋ ಬಾರಿ ಅಂದುಕೊಂಡಿದ್ದೇನೆ ಆಕಸ್ಮಿಕ ಪರಿಚಯಗಳೆಲ್ಲಾ ತೀರಾ ಅನ್ನಿಸುವಷ್ಟು ಆತ್ಮೀಯವಾಗಿಬಿಡುತ್ತಿವೆಯಲ್ಲಾ ಅಂತ.... ಬಳಗ ದೊಡ್ಡದಾಗುತ್ತಿದೆ.... ನೆನೆ ನೆನೆದಂತೆಲ್ಲಾ ಖುಷಿಯ ಕಂಪು.... ಸ್ನೇಹಿಗಳೇ ಹೀಗೇ ನೀವು ಸದಾ ಖುಷಿಯಿಂದ ಕಾಲೆಳೆಯುತ್ತಾ.... ತಮಾಶೆಯಿಂದ ತರಲೆ ಮಾಡ್ತಾ.... ಜಗಳಾ ಮಾಡ್ತಾ ಪ್ರೀತಿ ನೀಡ್ತಾ.. ಓಡಾಡಿಕೊಂಡಿದ್ರೆ ನನ್ನ ಖುಷಿಗೆ ಮತ್ತೇನು ಬೇಕ್ ಹೇಳಿ...

ನಿಮ್ಮೆಲ್ಲರ ಪ್ರೀತಿಗೆ ಮತ್ತೊಮ್ಮೆ ಶುಕ್ರಿಯಾ.....
              - ರಾಘವ್ ಲಾಲಗುಳಿ