ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, November 28, 2013

ಪ್ರೀತಿಯ ಸಾಗರವಿದು ನನ್ನ ಹೃದಯ.... ನದಿಯಾಗಿ ನೀ ಬಂದು ಸೇರೆಯಾ....


ನಿನ್ನ  ಇರುವಿಕೆಯನ್ನು, ನಿನ್ನ ಪ್ರೀತಿಯನ್ನು, ನಿನ್ನ ನೆನಪನ್ನು ಅಲ್ಲಗಳೆದು ಬದುಕಿಬಿಡಬೇಕೆಂದುಕೊಂಡು ಏನೇನೆಲ್ಲ ಪ್ರಯತ್ನ ಮಾಡಿಬಿಟ್ಟೆ.. ಈವತ್ತಿಗೂ ಈ ಒಂದು ವಿಷಯದಲ್ಲಿ ನನಗೆ ಸೋಲೇ....

ಸೋತು ಸೋತು ಸಾಕಾಗಿ ಹೋಗಿದೆ ನನಗೆ.ಹಾಗಾದರೆ ನಿನ್ನನ್ನು ಒಪ್ಪಿಕೊಂಡು ನಿನ್ನೆಡೆಗೆ ಪ್ರೀತಿ ಬೆಳೆಸಿಕೊಳ್ಳಲಾ.... ಅಸಲು ನನ್ನಲ್ಲಿ ನಿನ್ನ ಮೇಲೆ ಸಾಗರದಷ್ಟು ಪ್ರೀತಿಯಿದೆ. ಆದರೆ ಹುಡುಗೀ ನೀನು ನಿನ್ನ ಹೃದಯವನ್ನು ಕಲ್ಲಾಗಿಸಿಕೊಂಡು ಕುಳಿತಿದ್ದೀಯಲ್ಲೇ.....

ನನ್ನ ಹಾಡಿಗೆ ಹೂವು ಅರಳುತ್ತದೆ.. ಆದರೆ ನೀನು ಆಲಿಸುವುದೇ ಇಲ್ಲಾ.... ನನ್ನ ಸ್ಪರ್ಶಕ್ಕೆ ಹಿಮ ಕರಗೀತು.... ಕರಗಿದ ಹಿಮ ಪ್ರೀತಿಯಾಗಿ ಹರಿದೀತು... ನೀನು ಕರಗುವುದಿಲ್ಲ.... ನನ್ನ ಪ್ರೀತಿಗೆ ಸಾಗರ  ಉಕ್ಕುತ್ತದೆ.. ಆದರೆ ನೀನೆಂಬ ಪ್ರೀತಿಯ ಮಂಜು ಕರಗುವುದೇ ಇಲ್ಲ..... ಎಂದಿಗೂ ಯಾವುದಕ್ಕೂ ಕರಗದ ಶಿಲಾಬಾಲಿಕೆ ನೀನು... ಗೊತ್ತಿದೆ ನನಗೆ ಅದು... ಆದರೂ ನಿನಗಾಗಿಯೇ ನನ್ನ ಪದೇ ಪದೇ ಪ್ರಯತ್ನಗಳು....

ಮೊದಲೆಲ್ಲಾ ಎಷ್ಟು ಚನ್ನಾಗಿತ್ತು... ಬೆಳ್ಳಂಬೆಳಗ್ಗೆ ಸೂರ್ಯನ ಜೊತೆ ನೀನೂ ಎದ್ದೇಳುತ್ತಿದ್ದೆ... ಹಾಗೇ ನಾನೂ.....  ಅಂಗಳದಲ್ಲಿನ ನಿನ್ನ ರಂಗವಲ್ಲಿಗೆ ಇಲ್ಲಿ ನನ್ನ ಮನಸ್ಸು ಬಣ್ಣ ತುಂಬುತ್ತಿತ್ತು. ನಿನ್ನನ್ನು ದೂರ ನಿಂತು ನೋಡುತ್ತಿದ್ದೆ. ಮಂತ್ರ ಗೊತ್ತಿಲ್ಲದ ಹುಡುಗ ಭಗವಂತನನ್ನು ನೋಡುವಂತೆ.  ನಾನು ನೋಡುತ್ತಿದ್ದುದು ನಿನಗೂ ಗೊತ್ತಾಗುತ್ತಿತ್ತು ಮತ್ತು ನೀನೂ ಗೊತ್ತಾಗದವಳಂತಿರುತ್ತಿದ್ದೆ.  ಮತ್ತೆ ನಿನಗೆ ಗೊತ್ತಾದರೂ ನೀನು ಗೊತ್ತಾಗದವಳಂತಿರುತ್ತೀಯೆಂಬುದು ನನಗೂ  ಗೊತ್ತಾಗುತ್ತಿತ್ತು. ಒಂದು ಎಡೆಬಿಡದ ದಿನಚರಿ ನನ್ನೊಳಗೆ ನಿನ್ನೊಳಗೆ ಗಡಿಯಾರದ ಮುಳ್ಳಿನ ಜೊತೆ ಜೊತೆಗೇ ತಿರುಗುತ್ತಿರುವಂತಿತ್ತು. ಇಲ್ಲಿಯವರೆಗೆ ಎಲ್ಲವೂ ಚಂದವೇ.... ಮೊತ್ತ ಮೊದಲ ಸಲ ನಿನ್ನೆದುರಿಗೆ ನಿಂತು "ಹಾಯ್" ಅನ್ನುವವರೆಗೆ...

ನೀವು ಹುಡುಗಿಯರನ್ನು ಹುಡುಗ ಮೊತ್ತ ಮೊದಲ ಬಾರಿಗೆ ಕೈ ಹಿಡಿದಾಗ... ಮೊಟ್ಟ ಮೊದಲ ಬಾರಿಗೆ ತುಟಿಗೆ ತುಟಿ ಅಂಟಿಸಿದಾಗ ಹೇಗೆ ಕಂಪಿಸುತ್ತೀರೋ,.. ನನ್ನಂತಹ ತೀರಾ ಸೆಂಟಿಮೆಂಟಲ್ ಯಡವಟ್ಟುಗಳಿಗೆ ಮೊಟ್ಟ ಮೊದಲ ಬಾರಿಗೆ ಹುಡುಗಿಯರೆದುರು ನಿಂತು ನಿನ್ನ ಹೃದಯದಲ್ಲೊಂದಿಷ್ಟು ಜಾಗ ನನಗಾಗಿ ಕೊಡ್ತೀಯಾ ಅಂತ ಕೇಳುವಾಗ ಅಂಥದ್ದೇ ಕಂಪನ ಕಾಡುತ್ತದೆ ಗೊತ್ತಾ?

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದು ಸಾರಿ ಕೇಳೆಯಾ ಈ ಸ್ವರ.
ಮನಸಲ್ಲಿ ಚೂರು ಜಾಗ ಬೇಕಿದೆ...
ಕೇಳಲಿ ಹೇಗೆ ತಿಳಿಯದಾಗಿದೆ..

ಅದರಲ್ಲೂ ನಾನು ಕೇಳಿದ್ದು ಕಲ್ಲು ಗೊಂಬೆಯಂತಹ ನಿನ್ನೆದುರು.... ಹೇಗೆ ದಿಟ್ಟಿಸಿದ್ದೆ ನನ್ನ...  ಮೊತ್ತ ಮೊದಲ ಬಾರಿಗೆ ಬಂಗಾರದ ಹಾರವನ್ನು ಹಾಕಿ ಕನ್ನಡಿಯೆದುರಿಗೆ ಬಾಯಿ ಕಳೆದು ನಿಂತು ದಿಟ್ಟಿಸುವಂತೆ...... ಆವತ್ತು ನೀನು ಉತ್ತರಿಸಲಿಲ್ಲ...ಉತ್ತರಿಸಿದ್ದರೆ ಒಂದು ಅಧ್ಯಾಯ ಪ್ರಾರಂಭವಾಗುವುದರೊಳಗೇ ಮುಗಿದು ಹೋಗಿರುತ್ತಿತ್ತೇನೋ....  ಇಲ್ಲಾ ಹೊಸದಾಗಿ ಪ್ರಾರಂಭವಾಗುವ ಕಥೆಗೆ ಮುನ್ನುಡಿಯಾಗುತ್ತಿತ್ತು.  ನೀನು ಅದ್ಯಾವುದನ್ನೂ ಆಗಗೊಡಲಿಲ್ಲ.  ನಿನ್ನ ಕಣ್ಣಿನಲ್ಲಿ ಅಂದು ನನಗೆ ಅಸಮ್ಮತಿಯೇನೂ ಕಾಣಲಿಲ್ಲ... ಆದರೆ ಮುಂದೆ ನಿನ್ನ ಸಮ್ಮತಿಗಾಗಿ ನಾನು ಮಾಡದ ಕಸರತ್ತುಗಳಿಲ್ಲ....

ನಿನಗೆ ತುಂಬಾ ತೊಂದರೆ ಕೊಡಲು ಮನಸ್ಸಿಲ್ಲದೆಯೂ ಕೂಡಾ ನಿನ್ನೆಲ್ಲ ತಿರುವಿನಲ್ಲಿ ಎದುರಾದೆ....  ಕಾಲೇಜಿನ ಗೇಟಿನ ಬಳಿ... ಬಸ್ ಸ್ಟ್ಯಾಂಡಿನ ಬೆಂಚುಗಳ ಪಕ್ಕ ಬಳೆಯಂಗಡಿಯ ಸಾಲುಗಳಲ್ಲಿ, ಸಂಗೀತ ಶಾಲೆಗೆ ಹೋಗುವ ಮೂರನೇ ತಿರುವಿನಲ್ಲಿ,... ಎಲ್ಲೆಲ್ಲಿ ತಡೆದೆನೋ ನಿನ್ನ...ಎಲ್ಲೆಲ್ಲಿ ಮಾತಿಗೆಳೆದೆನೋ....

ಪ್ರೀತಿಸಿಯಾಯಿತು.... ನೀನು ಒಪ್ಪಿಗೆ ಕೊಡದೇ ಇದ್ದರೂ ಮತ್ತೆ ಮತ್ತೆ ನಿನ್ನ ನೆರಳಿನಂತೆ ಅಲೆದದ್ದಾಯಿತು.... ಸೋತು ಹೋದೆನೇನೋ ನಾನು ಎಂದು ಅಂದುಕೊಂಡು ಕುಳಿತರೆ ನಿನ್ನ ಚಿತ್ರವೃ ಕಣ್ಮುಂದೆ ಬಂದಂತಾಗಿ ಯೋಚನೆಯಾಗಿಬಿಡ್ತೀನಿ.... ನಾನೆಂಬ ನಾನೇ ಇಲ್ಲದೇ ಹೋಗಿದ್ದರೆ ನಿನ್ನ ಶೃಂಗಾರಕ್ಕೇನು ಬೆಲೆ ಹುಡುಗೀ.... ನನ್ನನ್ನ ನೀನು ಒಪ್ಪಿಕೊಳ್ಳಲಿಲ್ಲ ನಿಜ...ಆದರೆ ಹೊಸ ಚೂಡಿದಾರ ಹಾಕಿ ಯಾರಿಗೆ ಕಾಣಿಸುತ್ತಿದ್ದಿಯೋ ಇಲ್ಲವೋ.....  ಟೆರೇಸಿನಿಂದ ಇಣುಕಿ ಇಣುಕಿ ನನ್ನ ಮನೆಯ ಕಿಟಕಿಯ ಕಡೆ ನೋಡುತ್ತಿದ್ದೆಯಲ್ಲಾ... ಒಮ್ಮೆ ನಾನು ನಿನ್ನ ಜಡೆಯನ್ನು ಮೆಚ್ಚಿಕೊಂಡು ಜಡೆಯೆಂದರೆ ಹೀಗಿರಬೇಕು ಎಂದು  ನಿನ್ನ ಗೆಳತಿಯರಿಗೆ ಹೇಳಿದಾಗಿನಿಂದ ಜಡೆಯ ಮೇಲೆ ನಿನ್ನ ಮುತುವರ್ಜಿ ಹೆಚ್ಚಾಗಿದ್ದನ್ನು  ನಾನು ಗಮನಿಸಲಿಲ್ಲವೆಂದುಕೊಂಡೆಯಾ..... ನಿನ್ನಲ್ಲೇನೇ ಬದಲಾವಣೆಯಾದರೂ ನನಗೆ ದರ್ಶಿತವಾಗುತ್ತಿತ್ತು ಅಂತಾದರೆ ನಾನೇ ಇಲ್ಲದೇ ನಿನ್ನ ಸಿಂಗಾರಕ್ಕೆಲ್ಲಿ ಅರ್ಥ ಬಂದೀತು ಹುಡುಗೀ.... ನಿನ್ನ ಸೊಗಸೆಲ್ಲ ನನಗೇ ಎಂದು ನಾನು ಹೇಗೆ ಹೇಳಿಕೊಳ್ಳದಿರಲಿ....

ಹೊಸ ಲಂಗ ದಾವಣಿಯಲ್ಲಿನ ನಿನ್ನ ಸೌಂದರ್ಯ ಮೆಚ್ಚುವಾಗ ನಾನಿದ್ದೆ ಬಂಗಾರದ ಹೊಸಬಳೆಯನ್ನು ಗಂಗಣಿಸುತ್ತಾ ನೀನು ಗೇಟಿನಿಂದ ಹೊರಬೀಳುವಾಗ ಮೆಚ್ಚಿಕೊಳ್ಳಲಿಕ್ಕೆ ನಾನಿದ್ದೆ..... ಸಂಗೀತ ಕ್ಲಾಸಿನಲ್ಲಿನ ನಿನ್ನ ಸನ್ಮಾನವನ್ನು ಅಭಿನಂದಿಸಲಿಕ್ಕೆ ನಾನಿದ್ದೆ....  ಮನೆಯಲ್ಲಿ ಯಾರಿಗೂ ನೆನಪಿಲ್ಲದ ನಿನ್ನ ಬರ್ತಡೇಯನ್ನು ನೆನಪಿರಿಸಿಕೊಂಡು ಹಾರೈಸೋಕೆ ನಾನಿದ್ದೆ.... ನಿನ್ನ ಎಲ್ಲ ದಿನಚರಿಗಳಲ್ಲೊಂದಾಗಿ ಇದ್ದ ನಾನು....  ನಾಳೆ ನೀನು ನನ್ನನ್ನು ಬಿಟ್ಟು ಯಾರದೋ ತಾಳಿಗೆ ಕೊರಳೊಡ್ಡಿದರೆ ನಿನ್ನೆಲ್ಲ ಇರುವಿಕೆಗಳ ಜೊತೆ ನಾನು ನೆನಪಾಗುವುದಿಲ್ಲವೇ ಹುಡುಗೀ........

ನಿನ್ನ ಮನಸ್ಸನ್ನೇ ಕೇಳಿಕೋ ಹುಡುಗೀ. ಯಾವ ಸೋಗನ್ನು ಹಾಕಿ ನೀ ನಡೆದರೂ ನನ್ನೆಡೆಗೆ ಒಂದು ಪೂರ್ಣವಿರಾಮ ಹಾಕಿ ನಡೆಯಲಾಗಲಿಲ್ಲ ನಿನಗೆ.... ಇನ್ನು ಮುಂದೆಯೂ ಇದು ಆಗುವ ಹಾಗಿಲ್ಲ....


ಪ್ರೀತಿಯ ಸಾಗರವಿದು ನನ್ನ ಹೃದಯ....
ನದಿಯಾಗಿ ನೀ ಬಂದು ಸೇರೆಯಾ....

---------------- ರಾಘವ್ ಲಾಲಗುಳಿ.