ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, July 4, 2012

ಬರುವ ನಾಳೆಗಾಗಿ ಕಳೆದುಹೋದ ಸುಂದರ ನಿನ್ನೆಗಳು.....

ಪುರಾಣಮಿತ್ಯೇವ ನ ಸಾಧು ಸರ್ವಂ
ನಚಾಪಿ ಕಾವ್ಯಂ ನವಮಿತ್ಯವದ್ಯಂ ||

ಸಂಸ್ಕೃತದಲ್ಲೊಂದು ಸುಭಾಷಿತ ಇರುವುದು ಹೀಗೆ.  ಇದರರ್ಥ ಪುರಾಣ ಕಾಲದಿಂದ ಅಂದರೆ ಹಳೆಯ ಕಾಲದಿಂದ ಬಂದಿರುವಂತಾದ್ದೆಲ್ಲಾ ಸತ್ಯ ಅಲ್ಲಾ. ಪ್ರತಿಯೊಂದು ವಿಷಯವೂ ಕೂಡಾ ಸಾಧುಭಾವದಿಂದ ಕೂಡಿರುವುದಿಲ್ಲಾ ಹಾಗೆಯೇ ಹೊಸದಾಗಿ ರೂಪುಗೊಂಡಿರೋದು ಕೂಡಾ ಎಲ್ಲಾ ಕೆಟ್ಟದ್ದಲ್ಲಾ.. ಅನುಸರಿಸಲೇ ಬಾರದು ಎಂಬಂಥಾದ್ದಲ್ಲಾ.

    ಆದರೆ ಇಲ್ಲಿ ನಾನೊಂದು ತಲೆಬರಹ ಕೊಟ್ಟಿದ್ದೇನೆ ನೋಡಿ... ಇದು ಮಾತ್ರ ಹಿಂದಿನಿಂದ ಇಂದಿನವರೆಗೂ ಅಪ್ರಸ್ತುತವಾಗಿ ನಡೆದುಕೊಂಡು ಬಂದಿದೆ ಅನ್ಸುತ್ತೆ. ಈ ವಿಷಯವೇ ಪೂರ್ತಿ ಲೋಪದಿಂದ ಕೂಡಿದ್ದು ಅಂತಲ್ಲಾ.ಆದರೆ "ಬರುವ ನಾಳೆಗಾಗಿ ಕಳೆದು ಹೋದ ಸುಂದರ ನಿನ್ನೆಗಳು." ಈ ಒಂದು ವಾಕ್ಯದಲ್ಲಿ ಎಷ್ಟೊಂದು ವಿಷಾದ,ಎಷ್ಟು ಬೇಸರ ಆತ್ಮಕ್ಕರಿಯದ ಒಂದು ಸಂಕಟ ಇದೆಯಲ್ಲಾ...?  ಇದರಲ್ಲೇನು ಸಂಕಟ ಎನ್ನುವುದರ ನಡುವೆ .... ನಮಗೆ ಕಾಣದೇ ನಮ್ಮ ಜೀವನದೊಂದಿಗೇ ಬೆರೆತು ಹೋಗಿರುವ ..ಎಣಿಕೆಗೂ ಸಿಗದಂಥ ಎಷ್ಟು "ಇಂದು" ಗಳ ಯಾತನೆಯಿದೆ.... ನಾವೆಂದೂ ಕೂಡಾ ನಿನ್ನೆ ಇಂದು ನಾಳೆಗಳನ್ನು ವಿಶ್ಲೇಷಿಸಿಲ್ಲ. ವಿಶ್ಲೇಷಿಸಿದರೆ ಅರಿಯಬಹುದಿತ್ತೇನೋ........
      ಕಳೆದು ಹೋದ ನಿನ್ನೆಗಳನ್ನು ಒಂದು ಬಾರಿ ವಿಶ್ಲೇಷಿಸಿ ನೋಡಿ.. ಯಾವ ನಿನ್ನೆಗಳಲ್ಲಿ ನಾವು ಸುಖಿಸುದ್ದುಂಟು.. ಯಾವ ನಿನ್ನೆಯು ನಮ್ಮ ಸಂತೋಷದ ಅಂಕೆಯಲ್ಲಿ ಬಂದದ್ದುಂಟು.. ಬೆರಳೆಣಿಕೆಯಷ್ಟಾದರೂ ನಿನ್ನೆಗಳು ನಮ್ಮ ಸಂತೋಷದಲ್ಲಿ ಪಾಲ್ಗೊಂಡಿದ್ದಾವಾ? ಇಷ್ಟೆಲ್ಲಾ ನಿನ್ನೆಗಳು ನಮ್ಮ ಕೈತಪ್ಪಿ ಹೋದ ಕಾರಣ .... ಬರುವ ನಾಳೆಯೇ ತಾನೇ?

    ಇನ್ನು "ಇಂದು"ಗಳ ವಿಚಾರಕ್ಕೆ ಬಂದರೆ ಮತ್ತೊಂದ್ಸಾರಿ ಇಂದುಗಳದ್ದೂ ಅದೇ ಚರಿತ್ರೆ.. ಯಾವ ಇಂದುಗಳಲ್ಲಿಯೂ ಸಂತೋಷವಾಗಿರಲು ನಮಗೆ ಸಾಧ್ಯವಾಗಿಲ್ಲ.... ಕಾರಣ once again  ಬರುವ ನಾಳೆ.

ಇಂದಿನಲ್ಲಿ ನಾವು ಸುಖ ಕಂಡರೆ ನಮ್ಮ ಮುಂಬರುವ ನಿನ್ನೆಗಳು ಸಂತೋಷವಾಗಿಯೇ ಇರುತ್ತಿದ್ದವು.
ಆದರೆ ಎಂದೂ ಕಂಡರಿಯದ ನಾಳೆಗಾಗಿ, ಬರುತ್ತೋ ಇಲ್ಲವೋ ಗೊತ್ತಿಲ್ಲದ ನಾಳೆಗಾಗಿ ನಮ್ಮ "ಇಂದು" ಗಳು ನಾಶವಾದವು. ನಿನ್ನೆಗಳು ಬರಡಾದವು.
ಕಂಡರಿಯದ ನಾಳೆಗಾಗಿ ಇಂದುಗಳೆಲ್ಲವೂ ಅಜ್ಞಾತ ಸಮರದಲ್ಲಿ ಧೂಳೀಪಟವಾಗಿ ಹೋದವು.

ಯಾವ ನಾಳೆಗೆ ಯಾವ ಬಾಳಿಗೆ
ಇಂದು ದಿನವಿಡೀ ಯಾತನೆ?
ಎಂದು ಎಂದೆಂದೂ ಬರದ ನಾಳೆಗೆ
ಯಾಕೆ ಇಂದಿಡೀ ಚಿಂತನೆ?...

ನಾಳೆಗಾಗಿ ಬಾಳುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಸುಂದರ ನಿನ್ನೆಯನ್ನು ಕಳೆದುಕೊಂಡೇ ಇರುತ್ತಾನೆ. ಇಲ್ಲದ ನಾಳಿನ ಧ್ಯೇಯಕ್ಕೆ ತನ್ನ ಜೀವನವನ್ನು ಬಲಿಕೊಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ತನ್ನ ಸಾವಿನ ಕ್ಷಣದಲ್ಲಿ ತಾನು ಜೀವಿಸುವ ಅವಕಾಶವನ್ನು ಕಳೆದುಕೊಂಡೆ ಅಂದುಕೊಳ್ಳುತ್ತಾನೆ. ನಾವ್ತಾನೇ ಏನು ಮಾಡಿದೆವು? ನಮ್ಮ ಜೀವನ ಪದ್ಧತಿಯೇ ಅದಾಗಿರುವಾಗ...

"ಯಾವಾಗಲೂ ತ್ಯಾಗ ಮಾಡಿ ಜೀವಿಸದಿರಿ, ಆನಂದಿಸದಿರಿ, ಇಂದನ್ನು ನಾಳೆಗಾಗಿ ಬಲಿಕೊಡಿ" ಆ ನಾಳೆ ಎಂದಿಗೂ ಬರುವುದಿಲ್ಲ., ಅದು ಯಾವಾಗಲೂ "ಈ ದಿನ" ಆಗಿಯೇ ಬರುವುದು. ಪ್ರತಿಯೊಂದು ಈ ದಿನವನ್ನು - ಯಾವದು ಬಾರದೋ, ಬರಲು ಸಾಧ್ಯವೇ ಇಲ್ಲವೋ ಆ ನಾಳೆಗಾಗಿ ಬಲಿಕೊಡಬೇಕು. ಹಿಂದಿನಿಂದ ಬಂದಿದ್ದು ಇದು.

ಒಂದು ಉದಾಹರಣೆ ನೋಡಿ-

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಷ್ಟು ಜನ ತಮ್ಮ ಿಂದನ್ನು ಬಲಿಕೊಟ್ಟು  ನಾಳೆ ಸುಂದರವಾಗಿರಲೆಂದು ಹೋರಾಟ ಮಾಡಿದರು. ಆದರೆ  ಆಸುಂದರ ನಾಳೆ ಇಂದಾದರೂ ಬಂದಿದೆಯೇ? ಖಂಡಿತಾ ಇಲ್ಲಾ. ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಇಲ್ಲ. ದೇಶ ಹೇಗಿದೆಯೋ ಹಾಗೆಯೇ ಇದೆ. ಆದರೆ ಧಣಿಗಳು ಮಾತ್ರ ಬದಲಾಗಿದ್ದಾರೆ ಅಷ್ಟೇ... ಬ್ರೀಟೀಷರಿಂದ ಇಂದಿನ ರಾಜಕಾರಣಿಗಳು. ಆಸ್ವಾತಂತ್ರ್ಯ ವೀರರೆಲ್ಲಾ ಯಾವ ಸುಂದರ ನಾಳೆಗಾಗಿ ಇಂದು ನಿನ್ನೆಗಳನ್ನು ಬಲಿಕೊಟ್ಟು ಪ್ರಾಣ ತ್ಯಾಗ ಮಾಡಿದರು...????

So Sacrifice is immoral.




ಆದ್ದರಿಂದ ನಾವು ಭವಿಷ್ಯಕ್ಕಾಗಿ ಏನನ್ನು ಮಾಡುವುದರಲ್ಲಿಯೂ ಅರ್ಥವಿಲ್ಲ. ನಾವು ನಮ್ಮ ವರ್ತಮಾನವನ್ನು ಎಷ್ಟು ಸಂಪೂರ್ಣವಾಗಿ, ಎಷ್ಟು ತೀವೃತೆಯಿಂದ ಬಾಳಲು ಸಾಧ್ಯವೋ ಅಷ್ಟು ಬಾಳಬೇಕು. ಏಕೆಂದರೆ ಒಂದಂತೂ ನಿಶ್ಚಿತ. ಭವಿಷ್ಯ ಈ ಕ್ಷಣದಿಂದ ಹುಟ್ಟುವುದು. ಭವಿಷ್ಯ ಎಲ್ಲಿಂದಲೋ ಬರುವುದಲ್ಲ. ಅದು ಈ ಕ್ಷಣವನ್ನು ಹಿಂಬಾಲಿಸುತ್ತದೆ. ಹಾಗೆಯೇ ನಿನ್ನೆಯೂ ಕೂಡಾ... ಈ ಕ್ಷಣ ಸಮೃದ್ಧವಾಗಿದ್ದರೆ ಮುಂದಿನ ಕ್ಷಣ ಇನ್ನಷ್ಟು ಸಮೃದ್ಧವಾಗಬಲ್ಲದು. ಆದ್ದರಿಂದ ಇಂದನ್ನು ತ್ಯಾಗ ಮಾಡದೇ ಜೀವಿಸೋಣ. ತ್ಯಾಗ ಮಾಡಿ ಜೀವಿಸುವುದನ್ನು ಪ್ರಯತ್ನಿಸಿ ನೋಡಿ ಆಗಿದೆ. ಆದ್ದರಿಂದ ತ್ಯಾಗ ಮಾಡದೇ ಈ ಕ್ಷಣವನ್ನು ದಿನವನ್ನು ಆನಂದವಾಗಿ ಜೀವಿಸಿ ನೋಡೋಣ  ಇನ್ನು ಮುಂದಾದರೂ......

ನಮ್ಮ ನಾಳೆ ಎಲ್ಲಿಂದ ಹುಟ್ಟುವುದು...? ಅದು ಇಂದಿನ ಗರ್ಭದಲ್ಲಿ ಅಡಗಿದೆ.  ವರ್ತಮಾನದ ಒಂದೇ ಒಂದು ಘಳಿಗೆಯನ್ನೂ ಸಹ ಯಾವುದೇ ಧ್ಯೇಯಕ್ಕಾಗಿ ಬಲಿಕೊಡದೇ  ಜೀವಿಸುವುದರಿಂದ ಮಾನವನ ಕಲ್ಪನೆಯನ್ನು ಯಾವುದೆಲ್ಲ ಧ್ಯೇಯಗಳು ಕಾಡುತ್ತಿವೆಯೋ ಅವೆಲ್ಲದರ ಪೂರೈಕೆಯಾಗುವುದು ಎಂದು ನಾನು ಗ್ಯಾರಂಟಿ ಕೊಡಬಲ್ಲೆ. ತ್ಯಾಗದಿಂದ ಅಲ್ಲ.. ಬದಲಾಗಿ ಎಷ್ಟು ಆಳವಾಗಿ ಎಷ್ಟು ಸಂಪೂರ್ಣವಾಗಿ ಜೀವಿಸಲು ಸಾಧ್ಯವೋ ಅಷ್ಟು ಜೀವಿಸುವುದರ ಮೂಲಕ.

  ಹಾಗೇ ಕೆಲವೊಂದು ತ್ಯಾಗ ಸಾವ  ನಂತರದ ದಿನಗಳಿಗಾಗಿ.....  ನಮ್ಮ ಕೈಲಿರುವ ಬದುಕನ್ನು ಬಿಟ್ಟು ನಾವು ಕಂಡರಿಯದ  ಸಾವನಂತರ ಬದುಕು ಸುಖಕರವಾಗಿರಲೆಂದು ಉತ್ಕ್ರಷ್ಟವಾಗಬಲ್ಲಂತಹ ಇಡೀ ಈ ಜನ್ಮವನ್ನೇ ಬರಡಾಗಿಸಿಬಿಡುತ್ತೇವೆ. ಯಾವ ಸಂಭ್ರಮಕ್ಕೆ...?

    ಈ ಭೂಮಿಯ ಮೇಲಿರುವ ಜನರೆಲ್ಲಾ ಇಂದು ಆನಂದದಿಂದ ಹಾಡುತ್ತಾ ನಲಿಯುತ್ತಾ ಜೀವನದ ಸೌಂದರ್ಯವನ್ನು ಕೊಂಡಾಡುತ್ತಾ ಈ ಅಸ್ಥಿತ್ವಕ್ಕೆ ಧನ್ಯತೆ ತೋರುತ್ತಾ ಬಾಳಿದರೆ ನಾಳೆ ಅದಕ್ಕಿಂತ ಬೇರೆ ಆಗಿರುವುದೇನು? ಅದು ನಿಶ್ಚಿತವಾಗಿ ಹೆಚ್ಚು ಉತ್ತಮವಾಗಿರುವುದು.

   ಇಂದಿನ ಸ್ವಾತಂತ್ರ್ಯವನ್ನು ನಾವು ಸಂಪೂರ್ಣವಾಗಿ ಅನುಭವಿಸಬೇಕು. ಧ್ಯೇಯಗಳು ಭವಿಷ್ಯದಲ್ಲಿ ಎಲ್ಲೋ ಕಾದು ಕುಳಿತಿಲ್ಲ. ನಾವು ಅದನ್ನು ಪ್ರತೀ ದಿನ, ಪ್ರತೀ ಘಳಿಗೆ ಸೃಷ್ಟಿಸುತ್ತಿರಬೇಕು. ಸ್ವಾತಂತ್ರ್ಯವನ್ನು "ಸಂಪೂರ್ಣ ಇಂದನ್ನು"  ಎಲ್ಲೋ ಹೋಗಿ ಕೊಂಡು ತರುವಂತದ್ದಲ್ಲ. ಅದು ಒಂದು ಅನುಭವ.

 (ಇದು ನಾಲ್ಕು ವರ್ಷದ ಹಿಂದೆ ಒಬ್ಬಂಟಿ ಕುಳಿತಾಗ ನನ್ನ ಮನದಲ್ಲಿ ಮತ್ತೆ ಮತ್ತೆ ಸುಳಿದಾಡಿ ಹೋದ ವಿಷಯ. ಎಲ್ಲವೂ ಸತ್ಯವೇ ಆಗಿರಬೇಕೆಂದಿಲ್ಲ..ಆ ಕ್ಷಣದ ಅನಿಸಿಕೆ.... ಆದರೆ ತರ್ಕಕ್ಕೆ ಬದ್ಧವಾಗಿರುವಂತಹ ವಿಷಯವಂತೂ ಹೌದು. ಇದು ಎಷ್ಟು ಸರಿ? ಅಭಿಪ್ರಾಯ ತಿಳ್ಸಿ..)