ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, November 15, 2012

ಏನು ಹೇಳುವೆ ಮಗನೆ..... ಕಲಿಗಾಲ ತಾನೇ?.......


ಬದುಕು ಮಾಯೆ ಎಂದವರೆಲ್ಲ,
ಕಾವಿ ತೊಟ್ಟು
ಗಡ್ಡ ಬಿಟ್ಟು
ಕೈ ಎತ್ತಿದವರೆಲ್ಲ,
ಮೀಡಿಯಾದ ಕೈಗೆ ಸಿಕ್ಕಿ
ನಂದುವ ದೀಪದಂತೆ
ಜೋರಾಗಿ ಉರಿವಂತೆ
ಸುದ್ದಿಯಾಗಿ ಮಾಯವಾದರು.

ಆದಿಯ ಅರಿವು ಇಲ್ಲದೇ
ಅಂತ್ಯ ತನ್ನಿಷ್ಟದಂತೆಯೇ ಎಂದು
ಕಾದಿ ತೊಟ್ಟು
ಲಜ್ಜೆ ಬಿಟ್ಟು
ಗದ್ದುಗೆ ಏರಿ ಕುಂತ ಕಮಂಗಿಗಳೆಲ್ಲಾ
ಅವರವರದೇ ಗಾಳದಲ್ಲಿ ಸಿಕ್ಕಿ
ಜೈಲ ಕೋಣೆಯಲ್ಲಿ ವಿಲಿವಿಲಿಯಾಗಿ
ಗೋಡೆಗೆ ಬೆನ್ನ ಚಾಚಿದರು.

ಪ್ರೀತಿ ಮಾತಾಡಲು ಟೈಮೇ ಇಲ್ಲದೇ
ಪ್ರೀತಿ ಜಾಗದಲ್ಲಿ ಹಣ ಇಟ್ಟು
ಕರಿ ಕೋಟು ತೊಟ್ಟು
ಏಸಿಯಲ್ಲಿ ಕುಳಿತೂ
ಬೆವರು ಒರೆಸುತ್ತಾ ಹೊರಟ
ಪಕ್ಕಾ ಬಿಸಿನೆಸ್ ಮಂದಿ

ಒಂದು ರಾತ್ರಿಯೂ ನಿದ್ರೆಯಿಲ್ಲದೇ
ಹೊರಳಾಡಿ ಹೊರಳಾಡಿ
ಗುಂಡಿ ಸೇರಿದರು.

Friday, August 17, 2012

ಪ್ರೇಮ ಸಮರ...











ನೀನು ರಾಣಿ.....

ಹೃದಯ ಸಾಮ್ರಾಜ್ಯವೆಲ್ಲಾ ನಿನ್ನದೇ......

ಕೈಯಲ್ಲಿ ಏನೂ ಅಸ್ತ್ರವಿಲ್ಲದೇ

ಕಣ್ಣಲ್ಲೇ ಮಾಯಾ ಯುದ್ಧ ಸಾರುತ್ತೀಯಾ....

ನಿನ್ನ ಕಣ್ಣ ಕಾಮನೆಗಳ ಅಸ್ತ್ರಕ್ಕೆ

ದಿನಕ್ಕೊಂದು ರೂಪ....

ಮಡಿಯಲ್ಲೇ ಏಕೆ ಮಡಿಯಬೇಕು?

ಯುದ್ಧ ಮಾಡಿ ಮಡಿಲಲ್ಲಿ ಮಣಿಯುವ 

ಅವಕಾಶವಿರುವಾಗ...?

ಕರೆ ಇರುವುದು ಹೋರಾಟಕ್ಕೆ.....

ಹೋರಾಟದಲ್ಲಿ ನಿನ್ನನ್ನು ಮಣಿಸಬಹುದು....

ಆದರೆ ಹೃದಯ ಸಾಮ್ರಾಜ್ಯದಲ್ಲಿ ನಾವಿಬ್ಬರೇ ಇರುವಾಗ....

ನಿನ್ನನ್ನು ಮಣಿಸಿ ನಾನೊಬ್ಬನೇ ಹೇಗೆ ಬೀಗಲಿ....

ಮತ್ತೆ ಮತ್ತೆ ನಡೆಯುವ ಈ ಯುದ್ಧ

ಮತ್ತೆ ಸಮಬಲ.....(ಡ್ರಾ..)

.................................ರಾಘವ್ ಲಾಲಗುಳಿ.

Wednesday, July 4, 2012

ಬರುವ ನಾಳೆಗಾಗಿ ಕಳೆದುಹೋದ ಸುಂದರ ನಿನ್ನೆಗಳು.....

ಪುರಾಣಮಿತ್ಯೇವ ನ ಸಾಧು ಸರ್ವಂ
ನಚಾಪಿ ಕಾವ್ಯಂ ನವಮಿತ್ಯವದ್ಯಂ ||

ಸಂಸ್ಕೃತದಲ್ಲೊಂದು ಸುಭಾಷಿತ ಇರುವುದು ಹೀಗೆ.  ಇದರರ್ಥ ಪುರಾಣ ಕಾಲದಿಂದ ಅಂದರೆ ಹಳೆಯ ಕಾಲದಿಂದ ಬಂದಿರುವಂತಾದ್ದೆಲ್ಲಾ ಸತ್ಯ ಅಲ್ಲಾ. ಪ್ರತಿಯೊಂದು ವಿಷಯವೂ ಕೂಡಾ ಸಾಧುಭಾವದಿಂದ ಕೂಡಿರುವುದಿಲ್ಲಾ ಹಾಗೆಯೇ ಹೊಸದಾಗಿ ರೂಪುಗೊಂಡಿರೋದು ಕೂಡಾ ಎಲ್ಲಾ ಕೆಟ್ಟದ್ದಲ್ಲಾ.. ಅನುಸರಿಸಲೇ ಬಾರದು ಎಂಬಂಥಾದ್ದಲ್ಲಾ.

    ಆದರೆ ಇಲ್ಲಿ ನಾನೊಂದು ತಲೆಬರಹ ಕೊಟ್ಟಿದ್ದೇನೆ ನೋಡಿ... ಇದು ಮಾತ್ರ ಹಿಂದಿನಿಂದ ಇಂದಿನವರೆಗೂ ಅಪ್ರಸ್ತುತವಾಗಿ ನಡೆದುಕೊಂಡು ಬಂದಿದೆ ಅನ್ಸುತ್ತೆ. ಈ ವಿಷಯವೇ ಪೂರ್ತಿ ಲೋಪದಿಂದ ಕೂಡಿದ್ದು ಅಂತಲ್ಲಾ.ಆದರೆ "ಬರುವ ನಾಳೆಗಾಗಿ ಕಳೆದು ಹೋದ ಸುಂದರ ನಿನ್ನೆಗಳು." ಈ ಒಂದು ವಾಕ್ಯದಲ್ಲಿ ಎಷ್ಟೊಂದು ವಿಷಾದ,ಎಷ್ಟು ಬೇಸರ ಆತ್ಮಕ್ಕರಿಯದ ಒಂದು ಸಂಕಟ ಇದೆಯಲ್ಲಾ...?  ಇದರಲ್ಲೇನು ಸಂಕಟ ಎನ್ನುವುದರ ನಡುವೆ .... ನಮಗೆ ಕಾಣದೇ ನಮ್ಮ ಜೀವನದೊಂದಿಗೇ ಬೆರೆತು ಹೋಗಿರುವ ..ಎಣಿಕೆಗೂ ಸಿಗದಂಥ ಎಷ್ಟು "ಇಂದು" ಗಳ ಯಾತನೆಯಿದೆ.... ನಾವೆಂದೂ ಕೂಡಾ ನಿನ್ನೆ ಇಂದು ನಾಳೆಗಳನ್ನು ವಿಶ್ಲೇಷಿಸಿಲ್ಲ. ವಿಶ್ಲೇಷಿಸಿದರೆ ಅರಿಯಬಹುದಿತ್ತೇನೋ........
      ಕಳೆದು ಹೋದ ನಿನ್ನೆಗಳನ್ನು ಒಂದು ಬಾರಿ ವಿಶ್ಲೇಷಿಸಿ ನೋಡಿ.. ಯಾವ ನಿನ್ನೆಗಳಲ್ಲಿ ನಾವು ಸುಖಿಸುದ್ದುಂಟು.. ಯಾವ ನಿನ್ನೆಯು ನಮ್ಮ ಸಂತೋಷದ ಅಂಕೆಯಲ್ಲಿ ಬಂದದ್ದುಂಟು.. ಬೆರಳೆಣಿಕೆಯಷ್ಟಾದರೂ ನಿನ್ನೆಗಳು ನಮ್ಮ ಸಂತೋಷದಲ್ಲಿ ಪಾಲ್ಗೊಂಡಿದ್ದಾವಾ? ಇಷ್ಟೆಲ್ಲಾ ನಿನ್ನೆಗಳು ನಮ್ಮ ಕೈತಪ್ಪಿ ಹೋದ ಕಾರಣ .... ಬರುವ ನಾಳೆಯೇ ತಾನೇ?

    ಇನ್ನು "ಇಂದು"ಗಳ ವಿಚಾರಕ್ಕೆ ಬಂದರೆ ಮತ್ತೊಂದ್ಸಾರಿ ಇಂದುಗಳದ್ದೂ ಅದೇ ಚರಿತ್ರೆ.. ಯಾವ ಇಂದುಗಳಲ್ಲಿಯೂ ಸಂತೋಷವಾಗಿರಲು ನಮಗೆ ಸಾಧ್ಯವಾಗಿಲ್ಲ.... ಕಾರಣ once again  ಬರುವ ನಾಳೆ.

ಇಂದಿನಲ್ಲಿ ನಾವು ಸುಖ ಕಂಡರೆ ನಮ್ಮ ಮುಂಬರುವ ನಿನ್ನೆಗಳು ಸಂತೋಷವಾಗಿಯೇ ಇರುತ್ತಿದ್ದವು.
ಆದರೆ ಎಂದೂ ಕಂಡರಿಯದ ನಾಳೆಗಾಗಿ, ಬರುತ್ತೋ ಇಲ್ಲವೋ ಗೊತ್ತಿಲ್ಲದ ನಾಳೆಗಾಗಿ ನಮ್ಮ "ಇಂದು" ಗಳು ನಾಶವಾದವು. ನಿನ್ನೆಗಳು ಬರಡಾದವು.
ಕಂಡರಿಯದ ನಾಳೆಗಾಗಿ ಇಂದುಗಳೆಲ್ಲವೂ ಅಜ್ಞಾತ ಸಮರದಲ್ಲಿ ಧೂಳೀಪಟವಾಗಿ ಹೋದವು.

ಯಾವ ನಾಳೆಗೆ ಯಾವ ಬಾಳಿಗೆ
ಇಂದು ದಿನವಿಡೀ ಯಾತನೆ?
ಎಂದು ಎಂದೆಂದೂ ಬರದ ನಾಳೆಗೆ
ಯಾಕೆ ಇಂದಿಡೀ ಚಿಂತನೆ?...

ನಾಳೆಗಾಗಿ ಬಾಳುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಸುಂದರ ನಿನ್ನೆಯನ್ನು ಕಳೆದುಕೊಂಡೇ ಇರುತ್ತಾನೆ. ಇಲ್ಲದ ನಾಳಿನ ಧ್ಯೇಯಕ್ಕೆ ತನ್ನ ಜೀವನವನ್ನು ಬಲಿಕೊಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ತನ್ನ ಸಾವಿನ ಕ್ಷಣದಲ್ಲಿ ತಾನು ಜೀವಿಸುವ ಅವಕಾಶವನ್ನು ಕಳೆದುಕೊಂಡೆ ಅಂದುಕೊಳ್ಳುತ್ತಾನೆ. ನಾವ್ತಾನೇ ಏನು ಮಾಡಿದೆವು? ನಮ್ಮ ಜೀವನ ಪದ್ಧತಿಯೇ ಅದಾಗಿರುವಾಗ...

"ಯಾವಾಗಲೂ ತ್ಯಾಗ ಮಾಡಿ ಜೀವಿಸದಿರಿ, ಆನಂದಿಸದಿರಿ, ಇಂದನ್ನು ನಾಳೆಗಾಗಿ ಬಲಿಕೊಡಿ" ಆ ನಾಳೆ ಎಂದಿಗೂ ಬರುವುದಿಲ್ಲ., ಅದು ಯಾವಾಗಲೂ "ಈ ದಿನ" ಆಗಿಯೇ ಬರುವುದು. ಪ್ರತಿಯೊಂದು ಈ ದಿನವನ್ನು - ಯಾವದು ಬಾರದೋ, ಬರಲು ಸಾಧ್ಯವೇ ಇಲ್ಲವೋ ಆ ನಾಳೆಗಾಗಿ ಬಲಿಕೊಡಬೇಕು. ಹಿಂದಿನಿಂದ ಬಂದಿದ್ದು ಇದು.

ಒಂದು ಉದಾಹರಣೆ ನೋಡಿ-

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಷ್ಟು ಜನ ತಮ್ಮ ಿಂದನ್ನು ಬಲಿಕೊಟ್ಟು  ನಾಳೆ ಸುಂದರವಾಗಿರಲೆಂದು ಹೋರಾಟ ಮಾಡಿದರು. ಆದರೆ  ಆಸುಂದರ ನಾಳೆ ಇಂದಾದರೂ ಬಂದಿದೆಯೇ? ಖಂಡಿತಾ ಇಲ್ಲಾ. ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಇಲ್ಲ. ದೇಶ ಹೇಗಿದೆಯೋ ಹಾಗೆಯೇ ಇದೆ. ಆದರೆ ಧಣಿಗಳು ಮಾತ್ರ ಬದಲಾಗಿದ್ದಾರೆ ಅಷ್ಟೇ... ಬ್ರೀಟೀಷರಿಂದ ಇಂದಿನ ರಾಜಕಾರಣಿಗಳು. ಆಸ್ವಾತಂತ್ರ್ಯ ವೀರರೆಲ್ಲಾ ಯಾವ ಸುಂದರ ನಾಳೆಗಾಗಿ ಇಂದು ನಿನ್ನೆಗಳನ್ನು ಬಲಿಕೊಟ್ಟು ಪ್ರಾಣ ತ್ಯಾಗ ಮಾಡಿದರು...????

So Sacrifice is immoral.




ಆದ್ದರಿಂದ ನಾವು ಭವಿಷ್ಯಕ್ಕಾಗಿ ಏನನ್ನು ಮಾಡುವುದರಲ್ಲಿಯೂ ಅರ್ಥವಿಲ್ಲ. ನಾವು ನಮ್ಮ ವರ್ತಮಾನವನ್ನು ಎಷ್ಟು ಸಂಪೂರ್ಣವಾಗಿ, ಎಷ್ಟು ತೀವೃತೆಯಿಂದ ಬಾಳಲು ಸಾಧ್ಯವೋ ಅಷ್ಟು ಬಾಳಬೇಕು. ಏಕೆಂದರೆ ಒಂದಂತೂ ನಿಶ್ಚಿತ. ಭವಿಷ್ಯ ಈ ಕ್ಷಣದಿಂದ ಹುಟ್ಟುವುದು. ಭವಿಷ್ಯ ಎಲ್ಲಿಂದಲೋ ಬರುವುದಲ್ಲ. ಅದು ಈ ಕ್ಷಣವನ್ನು ಹಿಂಬಾಲಿಸುತ್ತದೆ. ಹಾಗೆಯೇ ನಿನ್ನೆಯೂ ಕೂಡಾ... ಈ ಕ್ಷಣ ಸಮೃದ್ಧವಾಗಿದ್ದರೆ ಮುಂದಿನ ಕ್ಷಣ ಇನ್ನಷ್ಟು ಸಮೃದ್ಧವಾಗಬಲ್ಲದು. ಆದ್ದರಿಂದ ಇಂದನ್ನು ತ್ಯಾಗ ಮಾಡದೇ ಜೀವಿಸೋಣ. ತ್ಯಾಗ ಮಾಡಿ ಜೀವಿಸುವುದನ್ನು ಪ್ರಯತ್ನಿಸಿ ನೋಡಿ ಆಗಿದೆ. ಆದ್ದರಿಂದ ತ್ಯಾಗ ಮಾಡದೇ ಈ ಕ್ಷಣವನ್ನು ದಿನವನ್ನು ಆನಂದವಾಗಿ ಜೀವಿಸಿ ನೋಡೋಣ  ಇನ್ನು ಮುಂದಾದರೂ......

ನಮ್ಮ ನಾಳೆ ಎಲ್ಲಿಂದ ಹುಟ್ಟುವುದು...? ಅದು ಇಂದಿನ ಗರ್ಭದಲ್ಲಿ ಅಡಗಿದೆ.  ವರ್ತಮಾನದ ಒಂದೇ ಒಂದು ಘಳಿಗೆಯನ್ನೂ ಸಹ ಯಾವುದೇ ಧ್ಯೇಯಕ್ಕಾಗಿ ಬಲಿಕೊಡದೇ  ಜೀವಿಸುವುದರಿಂದ ಮಾನವನ ಕಲ್ಪನೆಯನ್ನು ಯಾವುದೆಲ್ಲ ಧ್ಯೇಯಗಳು ಕಾಡುತ್ತಿವೆಯೋ ಅವೆಲ್ಲದರ ಪೂರೈಕೆಯಾಗುವುದು ಎಂದು ನಾನು ಗ್ಯಾರಂಟಿ ಕೊಡಬಲ್ಲೆ. ತ್ಯಾಗದಿಂದ ಅಲ್ಲ.. ಬದಲಾಗಿ ಎಷ್ಟು ಆಳವಾಗಿ ಎಷ್ಟು ಸಂಪೂರ್ಣವಾಗಿ ಜೀವಿಸಲು ಸಾಧ್ಯವೋ ಅಷ್ಟು ಜೀವಿಸುವುದರ ಮೂಲಕ.

  ಹಾಗೇ ಕೆಲವೊಂದು ತ್ಯಾಗ ಸಾವ  ನಂತರದ ದಿನಗಳಿಗಾಗಿ.....  ನಮ್ಮ ಕೈಲಿರುವ ಬದುಕನ್ನು ಬಿಟ್ಟು ನಾವು ಕಂಡರಿಯದ  ಸಾವನಂತರ ಬದುಕು ಸುಖಕರವಾಗಿರಲೆಂದು ಉತ್ಕ್ರಷ್ಟವಾಗಬಲ್ಲಂತಹ ಇಡೀ ಈ ಜನ್ಮವನ್ನೇ ಬರಡಾಗಿಸಿಬಿಡುತ್ತೇವೆ. ಯಾವ ಸಂಭ್ರಮಕ್ಕೆ...?

    ಈ ಭೂಮಿಯ ಮೇಲಿರುವ ಜನರೆಲ್ಲಾ ಇಂದು ಆನಂದದಿಂದ ಹಾಡುತ್ತಾ ನಲಿಯುತ್ತಾ ಜೀವನದ ಸೌಂದರ್ಯವನ್ನು ಕೊಂಡಾಡುತ್ತಾ ಈ ಅಸ್ಥಿತ್ವಕ್ಕೆ ಧನ್ಯತೆ ತೋರುತ್ತಾ ಬಾಳಿದರೆ ನಾಳೆ ಅದಕ್ಕಿಂತ ಬೇರೆ ಆಗಿರುವುದೇನು? ಅದು ನಿಶ್ಚಿತವಾಗಿ ಹೆಚ್ಚು ಉತ್ತಮವಾಗಿರುವುದು.

   ಇಂದಿನ ಸ್ವಾತಂತ್ರ್ಯವನ್ನು ನಾವು ಸಂಪೂರ್ಣವಾಗಿ ಅನುಭವಿಸಬೇಕು. ಧ್ಯೇಯಗಳು ಭವಿಷ್ಯದಲ್ಲಿ ಎಲ್ಲೋ ಕಾದು ಕುಳಿತಿಲ್ಲ. ನಾವು ಅದನ್ನು ಪ್ರತೀ ದಿನ, ಪ್ರತೀ ಘಳಿಗೆ ಸೃಷ್ಟಿಸುತ್ತಿರಬೇಕು. ಸ್ವಾತಂತ್ರ್ಯವನ್ನು "ಸಂಪೂರ್ಣ ಇಂದನ್ನು"  ಎಲ್ಲೋ ಹೋಗಿ ಕೊಂಡು ತರುವಂತದ್ದಲ್ಲ. ಅದು ಒಂದು ಅನುಭವ.

 (ಇದು ನಾಲ್ಕು ವರ್ಷದ ಹಿಂದೆ ಒಬ್ಬಂಟಿ ಕುಳಿತಾಗ ನನ್ನ ಮನದಲ್ಲಿ ಮತ್ತೆ ಮತ್ತೆ ಸುಳಿದಾಡಿ ಹೋದ ವಿಷಯ. ಎಲ್ಲವೂ ಸತ್ಯವೇ ಆಗಿರಬೇಕೆಂದಿಲ್ಲ..ಆ ಕ್ಷಣದ ಅನಿಸಿಕೆ.... ಆದರೆ ತರ್ಕಕ್ಕೆ ಬದ್ಧವಾಗಿರುವಂತಹ ವಿಷಯವಂತೂ ಹೌದು. ಇದು ಎಷ್ಟು ಸರಿ? ಅಭಿಪ್ರಾಯ ತಿಳ್ಸಿ..)

  

  

Friday, June 22, 2012

ಅಂದು ಕೈ ಜಾರಿದ ಪಾರಿಜಾತ ನೀನು.......

       ಏನೂ ಗೊತ್ತಗ್ತಾ ಇಲ್ಲಾ.... ಏನೂಂದ್ರೆ ಏನೂ ಗೊತ್ತಾಗ್ತಾ ಇಲ್ಲಾ.... ನನ್ನ ಕೊನೆಯ exam ನಲ್ಲಾದ್ರೂ ಇಷ್ಟು ಚಂದ ಮಾಡಿ ಪೇಪರ್ ಹಾಗೂ ಪೆನ್ನನ್ನು ರೆಡಿ ಮಾಡಿಕೊಂಡು ಬಂದು ಬರೆಯಲು ಕುಂತಿಲ್ಲಾ.... ಅಂಥಾದ್ದರಲ್ಲಿ ನಿನಗಾಗಿ.........


ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹೃದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ ||


   






You are lucky ಕಣೇ... ಹಂಗಂತ ನೀನು ತಿಳ್ಕೊಂಡ್ರೆ I am very lucky.  ನಿಂಗೊತ್ತಾ B.Com ಗೆ ಅಂತಾ college ಗೆ ನೀನು enter  ಆದ ದಿನ ....ಆವತ್ತು ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ... ಸುಮಾದು. She is real beauty  ಅಂತ... ಅದೆಷ್ಟು ಹುಡುಗರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ..... ನೀನೇನೂ  ನನ್ನನ್ನೇ ಅಂತಾ ನೋಡಿಲ್ಲ.. ಸಹಜವಾಗಿಯೇ ನೋಡಿದರೂ ನನ್ ಮನ್ಸು ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲಾ... ಇನ್ನೂ ನನಗರ್ಥವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ.... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು  ಕುಳಿತು ಬಿಟ್ಟೆಯಾ ಅಂತ...?

     ಮೊದಲ ದಿನದಿಂದ್ಲೇ ನಿನ್ನನ್ನು ನೋಡ್ತಿದೀನಿ ಕಣೆ... ಗುಂಪಿನಲ್ಲಿ ಗೋವಿಂದ ಆಗ್ಬೇಕು ಅಂದ್ಕೋತೀಯಾ....  ಆದರೆ ಕೋಹಿನೂರ್ ವಜ್ರದಂತಹ .. ಹೊಳೆವ ಕಳ್ಳಿ ನೀನು.... ಹೃದಯ ಕದ್ದು ತನಗೆ ಗೊತ್ತೇ ಇಲ್ಲಾ ಅನ್ನೋ ಥರಾ ಹೋಗ್ತಿರ್ತೀಯಾ.. ನನ್ನ ಕಣ್ಣನ್ನು ಮಾತ್ರ ತಪ್ಪಿಸಿಕೊಂಡು ಹೋಗಲಿಕ್ಕೆ ಆಗ್ಲೇ ಇಲ್ವಲ್ಲೇ .....

      ನೀನು ಎದುರಾದಾಗಲೆಲ್ಲಾ ಕಳ್ಳಿ ನೀನು ಹೃದಯ ಕದ್ದಿದೀಯಾ ಅನ್ಬೇಕು ಅಂದ್ಕೋತೀನಿ.... ಇನ್ನೂವರೆಗೂ ಆಗ್ಲೇ ಇಲ್ಲಾ.... ನನ್ನ ಹೃದಯವನ್ನು ನನಗೆ ಮರಳಿ ಕೊಡ್ತೀಯೇನೋ ಅಂತ ಕಾಯ್ತಾ ಇದೀನಿ...  ಕೊಟ್ಟಿಲ್ಲಾ ನೀನು.. ಕೊಡೋಲ್ಲಾ ನೀನು ಪಾಪಿ... ಕೊನೇ ಪಕ್ಷ ಮರಳಿ ಕೊಡೋದಿಕ್ಕಾ  ಹುಡುಗಾ ನಾನು ಕದ್ದುದ್ದು  ಅಂತಾದ್ರೂ ಒಂದ್ಮಾತು ಹೇಳ್ಬಹುದಿತ್ತಲ್ಲಾ.... ಯಾಕೆ ಕಾಡಿಸ್ತೀಯಾ.....

     ಆವತ್ತೊಂದು ದಿನ ಆ ಪುಡಿ ಬಣ್ಣದ ಪುಟ್ಟ ಚುಡಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ನಡೆದು ಬಂದು ಅದೆಷ್ಟು ಮಧು ಮಧುರವಾಗಿ ದಿಟ್ಟಿಸಿದ್ದೆ..  ಆಚೂಡಿಯ ಹೊಳೆವ ಝರಿಯಂಚು ನಿನ್ನ ಗೆಜ್ಜೆಗೆ ಸಿಕ್ಕಿ ನೀ ಎಡವಿದಂತಾದಾಗ.. ನನಗೇ ಗೊತ್ತಿಲ್ಲದಂತೆ ಎರಡೆಜ್ಜೆ ಮುಂದೆ ಬಂದು  "ಏ" ಅಂದಿದ್ದೆ... ನೆನಪಿದೆಯಲ್ವಾ.....? ಅದನ್ನು ಎಷ್ಟು ಚುರುಕಾಗಿ ಗಮನಿಸಿ ಮುಗುಳು ನಕ್ಕಿದ್ದೆಯಲ್ಲಾ... ನನ್ನೆದೆಯನ್ನು ನಗಾರಿ ಮಾಡಿಸಿ....ಪಾಪಿ ಯಾಕೇ ಗೊತ್ತಾಗಿಲ್ಲಾ ನಿನಗೆ ಇದು ಪ್ರೀತಿ ಅಂತಾ.......

 ಹೀಗೇ ದಿನಂಪ್ರತಿ ಏನೇನೋ ತೊಳಲಾಟಗಳ ನಡುವೆಯಲ್ಲೆಲ್ಲೋ ಅಂದ್ಕೊಂಡ್ಬಿಟ್ಟಿದ್ದೀನಿ ಇದು ಪ್ರೀತಿ ಅಂತಾ....

       ಧೈರ್ಯ ಮಾಡಿ ಚಂದ ಚಂದಾಗಿ ಒಂದು ಪ್ರೇಮ ಪತ್ರ ಬರೆದು ಬಿಟ್ಟೆನಲ್ಲಾ... ಎಷ್ಟು ಕಸರತ್ತಿನಿಂದ.... ಬೆಳೆಗೆರೆ ಸಾಹಿತ್ಯ ಶೈಲಿ... ಭೈರಪ್ಪನ ತುಂಟು ಕಲ್ಪನೆ.... ಕೆ.ಎಸ್.ನ ಪ್ರೇಮ ಕಾವ್ಯಧಾರೆ.... ಎಲ್ಲಾ ಸೇರಿಸಿ ನಿನಗಾಗಿ ಒಂದು ಪ್ರೇಮ ಲಕೋಟೆ  ಸಿದ್ದಪಡಿಸಿಬಿಟ್ಟೆನಲ್ಲಾ... ತಾಜಮಹಲಿನಷ್ಟು ಪ್ರೀತಿಯಿಂದ.....

        ಬೆಚ್ಚಗೆ ಪ್ರೀತಿಯಿಂದ ಲಕೋಟೆಯೊಳಗೆ ಮಡಿಸಿಟ್ಟ ಆ ಪತ್ರಾನಾ ನಿನ್ನ ಮಡಿಲಿಗೆ ಹಾಕಬೇಕಂತ ಾವತ್ತು exam ನ ಕೊನೇ ದಿನ ಎಷ್ಟೊತ್ತಿನಿಂದ ಕಾದು ಕುಳಿತಿದ್ದೆ ಗೊತ್ತಾ... ಕೊನೆಗೂ ನೀ ಒಬ್ಳೇ ಬಂದುಬಿಟ್ಟೆ... ನಿನಗೆ ಕೊಡಬೇಕಂತ ಅಂದುಕೊಳ್ಳುವಷ್ಟರಲ್ಲೇ ಧೈರ್ಯ ಉಡುಗಿ... ಕೈ ನಡುಗಿ....ಮಾತು ತೊದಲಿ Best  of luck ಅಂತ ಮಾತ್ರ ಅಂದು ಬಂದುಬಿಟ್ನಲ್ಲಾ...

ಅಂದು ಕೈ ಜಾರಿದವಳು ನೀನು ಇನ್ನೂ ಸಿಕ್ಕೇ ಇಲ್ವಲ್ಲೇ..... 
ನನ್ನ ಮನದ ಜಾತ್ರೆಯಲ್ಲಿ ಸುಳಿದ ಜಾಜಿ ಕಣೇ ನೀನು... ಒಂದು ಬಾರಿ ಬಂದು ಬಿಡು ಗೆಳತಿ....
ಓಲೆ ಕೈಲಿಡಿದು ಕಾಯುತ್ತಿದ್ದೇನೆ....
ಹೃದಯ ತುಂಬೆಲ್ಲಾ ಕನಸ ಹೊತ್ತು......
............................. ನಾನು ನಿನ್ನವನು.

-ರಾಘವ್ ಲಾಲಗುಳಿ.









Tuesday, May 29, 2012

ಪ್ರೀತಿಗೆ ಕಾರಣವೇನಿತ್ತೇ........














ಏನಿತ್ತೇ ಹುಡುಗಿ ಏನಿತ್ತೇ?
ಪ್ರೀತಿಗೆ ಕಾರಣವೇನಿತ್ತೇ...

ಭಾವವಿತ್ತೇ.. ಪ್ರಭಾವವಿತ್ತೇ...
ನಿನ್ನ ಕಂಡ ಕ್ಷಣ ಏನಿತ್ತೇ.......
ಮಧುವಿತ್ತೇ ಮಧುರತೆಯಿತ್ತೇ...
ಪ್ರೀತಿಯಲಿ ತೇಯ್ದ ಶ್ರೀಗಂಧವಿತ್ತೇ...||


ಅಂದ ನೋಡಿದೆನಾ ನಾ
ಚಂದ ನೋಡಿದೆನಾ...
ಪ್ರೀತಿ ಅಂಕುರಿಸಲು ನಿನ್ನ ಕಾಡಿದೆನಾ...
ಅರಿತು ಪ್ರೀತಿಸಲಿಲ್ಲ
ಮರೆತು ಹೋಗಲೂ ಇಲ್ಲ..
ಪ್ರೀತಿಗೆ ಕಾರಣ ಏನಿತ್ತೇ.....||


ಕಾರಣವಿಲ್ಲದೇ ಮನಸಲಿ ಕುಳಿತ
ಬಾವನೆಯೊಳಗಡೆ ಏನಿತ್ತೇ....
ಹೃದಯವು ಪಲ್ಲವಿಸಿದ ಆ ಕ್ಷಣಕೆ
ಕಾರಣ ಹುಡುಕುವ ಅರಿವಿತ್ತೇ....||


ಒಲವಿತ್ತೇ ಹುಡುಗಿ ಛಲವಿತ್ತೇ
ಪ್ರೀತಿಯ ಬಾಚುವ ಹಂಬಲವಿತ್ತೇ
ಕಾರಣವಿಲ್ಲದೇ ಪ್ರೀತಿಗೆ ಬೀಳಲು
ಅಮೃತ ಗಂಗೆಯ ಸೆಳವಿತ್ತೇ....||


ಏನಿತ್ತೇ ಹುಡುಗಿ ಏನಿತ್ತೇ?
ಪ್ರೀತಿಗೆ ಕಾರಣವೇನಿತ್ತೇ...

Thursday, April 5, 2012

ನನಗೆ ಪ್ರಿಯವಾಗಿ ಕಾಡಿದ್ದು....

5 ವರ್ಷದ ಒಂದು ಪುಟ್ಟ ಹುಡುಗಿ 7 ವರ್ಷದ ಅದರ ಅಣ್ಣನಿಗೆ ಕೇಳುತ್ತೆ.....
what is love? ಪ್ರೀತಿ ಅಂದರೇನು?


ಅದಕ್ಕವ್ನು ಹೇಳ್ತಾನೆ....


ನೀನು ನನ್ನ bag ನಿಂದ ಪ್ರತಿದಿನ ಚೊಕೋಲೇಟ್ ಕದಿತೀಯಾ ಅಂತ ಗೊತ್ತಿದ್ದೂ
ಮಾರನೇ ದಿನ ನಾನು ಅದೇ ಜಾಗದಲ್ಲಿ ಚೊಕೋಲೇಟ್ ಇಡ್ತೀನಲ್ಲಾ... ಅದು...


ಒಂಥರಾ ಚಂದ ಅನ್ಸ್ತು.....


ಪ್ರೀತಿಗೆ ನೂರಾರು ವ್ಯಾಖ್ಯೆಗಳು...
ಒಬ್ಬೊಬ್ಬರು ವ್ಯಾಖ್ಯಾನಿಸೋದು ಒಂದೊಂಥರಾ.....


ನಂಗಿಷ್ಟ ಆಯ್ತು......
ನಿಮ್ಮುಂದಿಡೋಣಾ ಅಂತಾ.....

.......................................raghav

(ನಾಗ್ರಾಜನ ಮೆಸೇಜು)

Wednesday, March 28, 2012

ಜೀವನದ ಕೊನೆವರೆಗೂ ಅನುಭವಕ್ಕೆ ಏನಾದರೊಂದು ಉಳಿಸಿಕೊಂಡಿರಿ.....

           ಮಗು ಹುಟ್ಟುವಾಗ ಏನಂದರೆ ಏನೂ ಅರಿಯದ ಶುದ್ಧ ಜೀವಂತ ಗೊಂಬೆ. ಹಸಿವಾಗುತ್ತದೆ.... ತೀಡುತ್ತದೆ.... ಹೊಟ್ಟೆ ತುಂಬಿದಾಗ ಕಣ್ಣು ಪಿಳಿ ಪಿಳಿಸುತ್ತದೆ. ಇಲ್ಲಾ ನಿದ್ರಿಸುತ್ತದೆ. ಇಷ್ಟೇ...  ಸ್ವಲ್ಪ ದೊಡ್ಡದಾಗುತ್ತಾ ಬಂದಂತೆ ನೋಡಿ, ಮಗುವಿನ ಮನಸ್ಸು ಕುತೂಹಲಗಳ ಕಣಜ. ಅದಕ್ಕೆ ಕಂಡದ್ದರ ಮೇಲೆಲ್ಲಾ ವಿಪರೀತ ಆಸಕ್ತಿ. ಏಕೆ ಈ ಆಸಕ್ತಿ..?  ಏಕೆಂದರೆ ಅದಕ್ಕೆ ಇಲ್ಲಿಯವರೆಗಿನ ಅದರ ಪ್ರಪಂಚದಲ್ಲಿ ಏನೂ ಗೊತ್ತಿರೋದೇ ಇಲ್ಲಾ... ಆಡೋ ಚಂಡಿರಲಿ .... ಬರೆಯೋ ಪೆನ್ನಿರಲಿ.....  ವಾಚು, ಕಸ, ಕಡ್ಡಿ, ಗೊಂಬೆ, ಕಾರು, ಪುಸ್ತಕ...ಎಲ್ಲವೂ ಅದರ ಕಣ್ಣಿಗೆ ಹೊಚ್ಚ ಹೊಸದು.... ಅದರ ಪ್ರಪಂಚದಲ್ಲಿ ಆಗ ತಾನೇ ಕಾಣಿಸಿಕೊಂಡ ಅದ್ಭುತಗಳವು. ಅವುಗಳ ಬಗ್ಗೆ ಏನೂ ಗೊತ್ತಿರೋದಿಲ್ಲ.ಆದ್ದರಿಂದ ಈ ಆಸಕ್ತಿ... ಅದೇ ಸ್ವಲ್ಪ ಬೆಳೆಯುತ್ತಾ ಹೋದ ಮೇಲೆ  ಅದೆಲ್ಲಾ ನಿತ್ಯ ದರ್ಶಿತ.... ಕೈಯಲ್ಲೇ ಇರುತ್ತೆ.... ಆಸಕ್ತಿ ಕಡಿಮೆಯಾಗುತ್ತೆ.......
yes... ವಿಷ್ಯ ಇರೋದು ಇಲ್ಲಿ.....
ನಾನು ಹೇಳಲು ಹೊರಟಿರೋದೂ ಇದನ್ನೇ....


ಜೀವನದ ಕೊನೆವರೆಗೂ ಅನುಭವಕ್ಕೆ ಏನಾದರೊಂದು ಉಳಿಸಿಕೊಂಡಿರಿ.....


ಕಾಲಮಾನದ ಅಳತೆಯಲ್ಲಿ ಅಜ್ಜನ ತಲೆ ಮೊಮ್ಮಗನ ತಲೆ... ಇಬ್ಬರನ್ನೂ ಇಟ್ಟು ನೋಡಿ.... ಮೊಮ್ಮಗ ಬುದ್ಧಿವಂತ.... ಅಜ್ಜ ಚುರುಕು.... ( ಮೊಮ್ಮಗನಷ್ಟು ವಿಷ್ಯ ಗೊತ್ತಿಲ್ಲದಿರ್ಬಹುದು)
ಅಜ್ಜ ಇನ್ನೂ ಪುಟಿಯೋ ಪಿಂಗ್ ಪಾಂಗ್ ಬಾಲ್....
ಮೊಮ್ಮಗ ಏನೋ ಒಂಥರಾ ರುಟೀನ್ ಬಾಯ್....
ಅಜ್ಜನಿಗೆ touch screen ಮೊಬೈಲ್ ಅಂದ್ರೆ ತುಂಬಾ ಕುತೂಹಲ...ಆಸಕ್ತಿ.
ಮೊಮ್ಮಗನಿಗೆ ಅದೊಂದು ವಿಷ್ಯಾನೇ ಅಲ್ಲಾ.....
ಬದಲಾಗಿಬಿಟ್ಟಿದೆ ಕಾಲ........ಏಕಿದು ಹೀಗೆ?
ಹೂಂ.... because ಅಜ್ಜನ ಕಾಲದಲ್ಲಿ ಒಂದು  ಮೋಟರ್ಬೈಕ್ ಬಂದ್ರೆ ರಸ್ತೆಯ ಆಚೆ ಈಚೆ  ಜನ ನಿಂತು ನೋಡಿ
"ಇದು ಮೋಟರ್ ಸೈಕಲ್ ಅಂತೆ.. ಪೇಡಲ್ ತುಳೀದೇನೇ ಮುಂದೆ ಹೋಗುತ್ತಂತೆ ಅಂತಾ ಮಾತಾಡ್ತಿದ್ರಂತೆ..
ಅಜ್ಜ ಚಿಕ್ಕವನಿರೋವಾಗ ಆಡಿದ್ದು ಕಬ್ಬಡ್ಡಿ  ಗಿಲ್ಲಿ ಮಣ್ಣು ಕಲ್ಲುಗಳಾಟ..... ಕುಂಟಾಟ...
ಆವಾಗ ಟಿ.ವಿ.ಗೊತ್ತಿಲ್ಲಾ ಮೊಬೈಲ್ ಗೊತ್ತಿಲ್ಲಾ ಕಂಪ್ಯೂಟರ್ ಕಾಲಾನೇ ಅಲ್ಲಾ...


ಮೊಮ್ಮಗನ ಕಾಲ ಹಾಗಲ್ಲಾ....
ಭೂಮಿಗೆ ಬರ್ತಾ ಬರ್ತಾನೇ ಕಿವಿಗೆ ಸಿಡಿ ನಲ್ಲಿ song ಕೇಳ್ತಿರುತ್ತೆ....
ಕಣ್ ಬಿಡೋವಷ್ಟರಲ್ಲಿ ಟಿವಿ ಕಾಣುತ್ತೆ.....
ಆಟ ಆಡೋವಷ್ಟಾಗೋದ್ರೊಳ್ಗೆ  vedio game  ಸಿಗುತ್ತೆ...
abcd ಕಲಿಯೋಕೂ ಮುನ್ನ ಕೈಯಲ್ಲಿ ಮೊಬೈಲ್ ಇರುತ್ತೆ......
ಕಾಲೇಜಿಗೆ ಬರೋ ಹೊತ್ತಿಗೆ ಅಪ್ಪ ಮಾಡಿಟ್ಟಿರೋ ದುಡ್ಡು.... ಬೈಕು ಕಾರುಗಳಿರುತ್ವೆ....
ಹದಿನೆಂಟಕ್ಕೆಲ್ಲಾ ಚಾಟಿಂಗು ಡೇಟಿಂಗು........
ನನ್ ಮಗಾ ಇಪ್ಪತ್ತೆರಡಕ್ಕೆಲ್ಲಾ ಫುಲ್ ಲೈಫ್ ಕವರ್ ಮಾಡ್ಬಿಟ್ಟಿರ್ತಾನೆ.....
ಆಮೇಲೇನಿದೇರಿ ಅನುಭವಿಸೋಕೆ?
ಏನೇ ಮಾಡೋಕೋದ್ರೂ ಬೋರ್ ಹೊಡೆಯೋಕೆ ಶುರುವಾಗ್ಬಿಡುತ್ತೆ.....
ಆಸಕ್ತಿಗಳು ಹಗುಟ್ಟೋದ್ರೊಳ್ಗಡೆ ಕಡಿಮೆಯಾಗಿ ಬಿಡುತ್ವೆ....


friends ಯಾವಾಗಲೂ ಒಂದೇ ಹಳಿಯ ಮೇಲೆ ಹೋಗೋ ರುಟೀನ್ ರೈಲಾಗಿಬಿಡೋದು ಬೇಡಾ.... ಹೊಸತನವಿರಲಿ.... ಸಾವಿರ ವಿಷಯಗಳಿವೆ ಆಸಕ್ತಿ ಬೆಳೆಸಿಕೊಳ್ಳೋಕೆ..... ಗೊತ್ತಿಲ್ಲದೇ ಇರೋದನ್ನ ಬೆರಗುಗಣ್ಣಲ್ಲಿ ನೋಡೋ ಮಗುವಾಗೋಣ.....


once again ಗೆಳೆಯರೇ.......


ಜೀವನದ ಕೊನೆವರೆಗೂ ಅನುಭವಕ್ಕೆ ಏನಾದರೊಂದು ಉಳಿಸಿಕೊಂಡಿರಿ.....


.................................................ರಾಘವ್.