ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, August 1, 2011

ನೀನೆನ್ನ ಜೀವಜಲ........


ನಿನ್ನೊಲುಮೆ ಹೇಗಿದೆಯೋ  ಹಾಗೇ ನನ್ನ ಮನಸ್ಸೂ ಕೂಡಾ ಇರಲಿ ಎಂದು ಬೇಡಿಕೊಳ್ಳುವಂತಹ ಪುಟ್ಟ ನಿಸ್ವಾರ್ಥ ಸ್ವಾರ್ಥಿ ನಾನು...

ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ನಿಂತು ಕೈ ಮುಗಿಯುವಾಗ ಆ ದೇವರ  ಶಿರದಿಂದ ಒಂದು ಹೂವಿನ ಎಸಳು ಬಿದ್ದರೂ ಸಾಕು.. ಅದು ದೇವರು ನೀ ನನಗೆ ಸಿಗುವಂತೆ ಕೊಟ್ಟ ಪ್ರಸಾದ ಎಂದು ಜತನದಿಂದ ಎತ್ತಿಟ್ಟುಕೊಳ್ಳುವಂತಹ ಮುಗ್ಧ ನಾನು.....

ನೀನು ಹಾಡುವಾಗ ನಾನು ನುಡಿಸಬೇಕೆಂಬಾಸೆ.. ನಮ್ಮಿಬ್ಬರ ನಡುವೆ ಹಾಡು ಝರಿಯಾಗಿ ಹರಿದು ಪುಟಿದು ಚಿಮ್ಮುವ ಕಾರಂಜಿಯನ್ನ ನಿನಗೆ ಕಣ್ತುಂಬ ತೋರಿಸುವಾಸೆ.. ಆಗ ನಿನ್ನ ಕಣ್ಣಲ್ಲಿ ಚಿಮ್ಮುತ್ತದಲ್ಲಾ ಆ ಸಂತಸದ ಕಾರಂಜಿಯನ್ನು ನೋಡಿ ನಲಿಯುವಾಸೆ ನನಗೆ...

ಕೈ ಕೈ ಹಿಡಿದು ಹಸಿರು ಗುಡ್ಡದ ಮೇಲೆ ಸುತ್ತುತ್ತಾ ಮನಸ್ಸಿನ ಭಾವನೆಗಳನ್ನೆಲ್ಲಾ ನಮ್ಮ ಮಧ್ಯೆ ಹರವಿಕೊಂಡು ಮಾತಾಡುತ್ತಾ ಮಾತಾಡುತ್ತಾ Û ಮಾತಿನಲ್ಲೇ ಕಳೆದು ಹೋಗುವಾಸೆ...

ಹೀಗೆ ನೀನು ದಿನವೆಲ್ಲ  ನಾನು ಸುತ್ತಿಸಿದ ಆಶ್ಚರ್ಯದ ಸಂತೆಯನ್ನು ಸುತ್ತಿ ಸುತ್ತಿ ಸುಸ್ತಾಗಿ ಬಂದು ಸುಸ್ತಾಯಿತೆಂದು ಮಲಗುತ್ತೀಯಲ್ಲಾ.. ಆಗ ಮೆಲುದನಿಯಲ್ಲಿ ಜೋಗುಳವನ್ನು ಹಾಡಿ  ಮಲಗಿಸುವಾಸೆ.. ಆ ಸುಖ ನಿದ್ದೆಯ ಕನಸಿನಲ್ಲೆಲ್ಲಾ ನಾನೇ ಓಡಾಡಬೇಕೆಂಬ ಸ್ವಾರ್ಥ ಕೂಡಾ.

ಸಮುದ್ರದ ದಂಡೆಯ ಮೇಲೆ ಆಕಾಶಕ್ಕೆ ಮುಖ ಮಾಡಿ ಮಲಗಿ ಹೊಂಚು ಹಾಕಿ ನಾವು ನಮ್ಮ ನಮ್ಮಲ್ಲೇ ಕಸಿದುಕೊಂಡ ಸ್ನೇಹದ ಪರಮಾಪ್ತತೆಯ ಕಳ್ಳತನವನ್ನು ಮತ್ತೆ ಮತ್ತೆ ಹೇಳಿಕೊಂಡು ನಗುವಾಸೆ.......

ಚಳಿಗಾಲದ  ಮಧ್ಯರಾತ್ರಿಯ ದಟ್ಟ ಚಳಿಯಲ್ಲಿ  ನಿನಗೊಂದು Ice-cream ತಿನ್ನಿಸಿ  ನೀನು ಚಳಿಯಿಂದ ನಡುಗುತ್ತಿದ್ದಾಗ ಗಟ್ಟಿಯಾಗಿ ನಿನ್ನ ಬೆಚ್ಚಗೆ ತಬ್ಬಿಕೊಳ್ಳಬೇಕಿದೆ ನನಗೆ....

ಇದೆಂತಹ ಆಸೆ ನಿನ್ನದು ಅನ್ನಬೇಡ.... ನನ್ನ ಬೆನ್ನ ಮೇಲೆ ಹತ್ತಿ ಕುಳಿತು ಹತ್ತು ಡಿಪ್ಸ್ ಹೊಡೆಸಬೇಕೆಂಬ ನಿನ್ನ ಆಸೆಗಿಂತ ಇದೇನು ದೊಡ್ಡದಲ್ಲ ....

ನೀನು ನನ್ನ ಕನವರಿಸಿದಾಗಲೆಲ್ಲಾ ಬಣ್ಣದ ದುಂಬಿಯಾಗಿ ಬಂದು ನೆನಪುಗಳ ಮೂಟೆ ಬೆನ್ನ ಮೇಲೆ ಹೊತ್ತು ತಂದು ನಿನ್ನ ಕಣ್ಣ ಕೊನೆಯಂಚಿನಲ್ಲಿ ನನ್ನ ಪ್ರತೀ ನೆನಪನ್ನೂ ಕೂಡಾ ನಿನ್ನ ಕನಸಿನ ಜೀವಂತಿಕೆಯನ್ನಾಗಿಸಬೇಕೆಂಬಾಸೆ......

ನಿನಗೆ ನಾನೇನೇನು ಆಗಬಲ್ಲೆನೋ ಅದೆಲ್ಲವೂ ನಾನಾಗುವೆ.... ಆಸೆ ಇದೆ ನನಗೆ...
ನೀನು ನನಗೇನೂ ಆಗಬೇಕೆಂಬುದಿಲ್ಲ.....
ನೀನು ನನ್ನೆದೆಯ ಜೀವ ಜಲ... ಅಷ್ಟು ಸಾಕು ನನಗೆ...

ನನ್ನವಳು ನೀ ನನ್ನಾಕೆ
ಹರಿಯುವ ನದಿಯಲ್ಲಾ....
ಸರಿವ ಸರಿತೆಯಲ್ಲಾ....
ನೀನೊಂದು ಪುಟ್ಟ ಕೊಳ...
ನನ್ನ ಬಾಳಿನ ಜೀವ ಜಲ....

********************ರಾಘವ್.
(ಫೋಟೋ ನೀಡಿದವರು.... ಸೌಮ್ಯಾ ಭಾಗ್ವತ್)