ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, December 27, 2013

ನಮ್ಮ ಕೆಲಸವನ್ನು ನಮ್ಮ ಮನಸ್ಸೆಷ್ಟು ಸಮರ್ಥಿಸುತ್ತೆ..


ಆತ್ಮಾಪಮ್ಯೇನ ಸರ್ವತ್ರ ಸಮರ ಪಶ್ಯತಿಯೋರ್ಜುನ  |
ಸುಖಂ ವಾ ಯದಿ ವಾ ದುಃಖಂ ಸಯೋಗೀ ಪರಮೋ ಮತಃ ||

ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ  ಬೇರೆಯವರನ್ನೂ ಸಹ ಹಾಗೆಯೇ ಪ್ರೀತಿಸು..

ಇದು ಸಾಧ್ಯವಾದರೆ ನಮ್ಮ ಮನಸ್ಸೆಷ್ಟೋ ಶಾಂತವಾಗಿರಬಹುದು... ನಾನೂ ಇದನ್ನು ಪ್ರಯತ್ನಿಸಿದ್ದೇನೆ..... ಸಾಧ್ಯವಾದಾಗಲೆಲ್ಲ ಪ್ರಯತ್ನಿಸುವ ಮನಸ್ಸು ಮಾಡುತ್ತೇನೆ...... ಆದರೆ ಗೆದ್ದಿದ್ದೆಷ್ಟು ಬಾರಿ...???
ನೂರಕ್ಕೆ ಮೂರು ಬಾರಿ ಮಾತ್ರ.....
ವಿಷಯವನ್ನು ನಾವು ಅರಿಯುವುದು ಬೇರೆ.... ಅರಿತಂತೆ ನಡೆಯುವುದು ಬೇರೆ.... ನಮ್ಮ ಪ್ರೀತಿಸಿಕೊಂಡಷ್ಟು ನಾವು ಇತರರನ್ನೂ ಪ್ರೀತಿಸಿದರೆ ಮನಸ್ಸು ಹರ್ಷಿಸುತ್ತದೆ.... ನನಗೂ ಗೊತ್ತಿದೆ... ಆದರೆ ಆಗ್ತಾ ಇಲ್ವೇ...

ತಪ್ಪು ನಮ್ಮದಲ್ಲವೆಂದು ತಿಳಿದರೂ ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗಿ ಬರುತ್ತದೆ. ಇಲ್ಲಾ ತಪ್ಪು ನಮ್ಮದೇ ಆಗಿದ್ದರೆ ನಿರ್ಭಯವಾಗಿ ಒಪ್ಪಿಕೊಳ್ಳಬೇಕಲ್ಲಾ... ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುವುದರಿಂದ ಎದುರು ವ್ಯಕ್ತಿಗಳು ಎರಡು ಮೆಟ್ಟಿಲು ಇಳಿದು ಬರುತ್ತಾರೆ. ಗೊತ್ತಿದೆ ನಮಗೆ.. ಆದರೆ ನಾವೆಷ್ಟು ಬಾರಿ ಒಪ್ಪಿಕೊಳ್ತೀವಿ....? ನಮಗೆ ವಾದವೇ ವೇದ....... ವಾದದಲ್ಲಿ ಗೆದ್ದರೂ ಇನ್ಯಾವುದರಲ್ಲೋ ಸೋತಿರುತ್ತೇವೆ...

ವಾದಿಸಬಾರದು. ವಾದಿಸಿದರೆ ವಾದದಲ್ಲಿ ಗೆಲ್ಲುತ್ತೀವೇನೋ.. ಆದರೆ ಎದುರು ವ್ಯಕ್ತಿಯ ಅಭಿಪ್ರಾಯವನ್ನು  ಬದಲಾಯಿಸೇವಾ?.. ನಾವು ಹೆಚ್ಚು ವಾದಿಸಿದಂತೆಲ್ಲಾ ಎದುರು ವ್ಯಕ್ತಿಯು ಸೋತು ಹೋಗುತ್ತಿದ್ದಾನೆ ಎಂದಾಯಿತು. ಒಮ್ಮೆ ನಮ್ಮನ್ನು ಆ ಪರಿಸ್ಥಿತಿಯಲ್ಲಿ ಊಹಿಸಿಕೊಂಡರೆ.....  ವಾದದಲ್ಲಿ ಸಂಪೂರ್ಣ ಸೋತು ಹೋದೆ... ಆಗ ನಮ್ಮ ಪರಿಸ್ಥಿತಿ ಏನು? ಎದುರು ವ್ಯಕ್ತಿಯ ಗೆಲೆವು ಒಪ್ಪಿಕೊಳ್ತೀವಾ...?
ನಾನೂ ವಾದಿಸುತ್ತೇನೆ.... ನೂರಕ್ಕೈವತ್ತು  ಬಾರಿ...  ನಲವತ್ತು ಬಾರಿ ನನ್ನದು ಸರಿ ಇದ್ದಾಗ... ಹತ್ತು ಬಾರಿ ಹಾಗೇ...

ಯಂಡಮೂರಿಯವರ ಒಂದು ಮಾತು ಆಗಾಗ ನೆನಪಾಗುತ್ತೆ.... " ನಾವು ಬಹಳ ಸಾರಿ ಒಂದು ಸ್ಪರ್ಶವನ್ನು, ಒಂದು ನಗುವನ್ನು, ದಯೆಯಿಂದ ಹೇಳುವ  ಒಂದು ಪದವನ್ನು, ಕೇಳುವ ಒಂದು ಕಿವಿಯನ್ನು, ಕೊಡಬಹುದಾದ ಒಂದು ಪುಟ್ಟ ಅಪ್ಯಾಯತೆಯನ್ನೂ ಸಹ ಅವುಗಳ ಬೆಲೆ ತಿಳಿಯದೇ ನಿರ್ಲಕ್ಷ್ಯ ಮಾಡುತ್ತಿರುತ್ತೇವೆ.... ಅದನ್ನು ತಿಳಿದುಕೊಂಡರೆ ದೇವರಾಗುತ್ತೇವೆ.."
    ಎಷ್ಟು ನಿಜ ಅಲ್ವಾ...? ಎಲ್ಲ ಸಣ್ಣ ಸಣ್ಣ ವಿಷಯಗಳು... ನಮ್ಮ ಬಿಗುಮಾನವನ್ನು ಬಿಟ್ಟು ಮಾಡುವಂತಹ ಸಣ್ಣ ಸಣ್ಣ ನಮ್ಮ ವರ್ತನೆಗಳು... ನಾವು ಕಳೆದುಕೊಳ್ಳುವಂಥದ್ದೇನೂ ಇರುವುದಿಲ್ಲ....  ಯಾರೋ ಏನೋ ಅಂದಾಗ ತಿರುಗಿ ಬೀಳುವ ಬದಲು ಒಂದು ಮುಗುಳುನಗು...  ವಾದಿಸುವವರೆದುರಿಗೆ ಪ್ರತಿ ವಾದದ ಬದಲು  ಮೌನ..... ಯಾರದೋ ನೆರವಿಗೆ ಹಣ ಕೊಡಲಾಗದಿದ್ದರೂ  ಸಹಾಯ ಬೇಕಿದ್ರೆ ಖಂಡಿತಾ ಕೇಳಿ ಅನ್ನೋವಷ್ಟು ಸಹಜ ಸೌಜನ್ಯ......ಇದರಲ್ಲೆಲ್ಲಾ ಏನಿದೆ ನಾವು ಕಳೆದುಕೊಳ್ಳುವಂಥಾದ್ದು....... ಆದರೆ ನಾವೆಷ್ಟು ಸಾರಿ ಹೀಗಿದ್ದೀವಿ.......

ವ್ಯಕ್ತಿತ್ವ ಎನ್ನುವುದು ದೊಡ್ಡ ಪದ. ಕೇವಲ ನಮ್ಮ ಮಾನಸಿಕ ಸ್ಥಿತಿ ಲಯಗಳಲ್ಲದೇ, ನಾವು ಬೆಳೆದು ಬಂದ ರೀತಿ, ನಂಬಿರುವ ಸಿದ್ದಾಂತಗಳು, ಮಾಡುತ್ತಿರುವ ಕೆಲಸ, ಅದರಲ್ಲಿನ ದಕ್ಷತೆ, ಮಾತನಾಡುವ ರೀತಿ  ಪ್ರತಿಯೊಂದು ಕೃತ್ಯಕ್ಕೂ ಸ್ಪಂದಿಸುವ ಗುಣ, ಮಾನಸಿಕ ದೃಢತೆ, ಹವ್ಯಾಸ ಅಭ್ಯಾಸಗಳು, ನಮ್ಮನ್ನು ನಾವೇ ಪ್ರೊಜೆಕ್ಟ್ ಮಾಡಿಕೊಳ್ಳುವ ರೀತಿ ಹೀಗೆ ಪ್ರತಿಯೊಂದು ಅಣುವಿನಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
                 ನಮ್ಮ ನಡೆ ನುಡಿ.. ಮಾಡುವ ಕೆಲಸ ಕಾರ್ಯಗಳು ಪ್ರತಿಕ್ರಿಯೆಗಳು- ಎಲ್ಲವೂ ನಮ್ಮ ಬಗ್ಗೆ ಹೇಳುತ್ತವೆ. ಈ ಗ್ರಹಿಕೆ ಸದಾ ಇತರರಿಗೆ ನಮ್ಮ ಬಗ್ಗೆ ಇರುತ್ತದೆ ಎಂಬ ಸೂಕ್ಷ್ಮ ವಿಷಯ ನಮಗೆ ತಿಳಿದಿದ್ದರೆ ಸಾಕು. ಚಿಕ್ಕ ವಿಷಯಗಳಲ್ಲಿಯೂ ನಮ್ಮ ನಂಬಿಕೆ-ನಿಶ್ಚಯಗಳು ಅಳುಕದೇ ನಮ್ಮ ತತ್ವಗಳಿಗೆ ಅಂಟಿಕೊಳ್ಳುವ ರೀತಿ, ಜೀವನ ಮೌಲ್ಯಗಳನ್ನು ನಾವು ಆಧರಿಸುವ ರೀತಿ- ಇವುಗಳಿಂದಲೇ ಇತರರು ನಮ್ಮನ್ನು ಅಂಕಿತ ರೂಪದಿಂದ ಅಂಗೀಕರಿಸುತ್ತಾರೆ. ಈ ಅನನ್ಯತೆ ಕೊಡುವ ಮನ್ನಣೆ ಗೌರವಾರ್ಹವಾದುದು. ಚಿರಕಾಲ ಬಾಳುವಂಥದ್ದು. 
   ಆದ್ದರಿಂದ ಅತೀ ಚಿಕ್ಕ  ವಿಷಯದಲ್ಲೂ ನಮ್ಮ ಮೆದುಳು ಮತ್ತು ಕೈ  ಕ್ರಿಯೆಗೆ ಮುಂದಾಗುವ ಮುನ್ನ ನಮ್ಮ ವ್ಯಕ್ತಿತ್ವ ನಮ್ಮ ಮುಂದೆ ಬಂದು ನಿಲ್ಲುವಂತಾಗಬೇಕು. ನಂತರ ಮುನ್ನಡೆಯುವ ಬಗೆ ಚನ್ನ.
                        ನಾವು ಬದುಕಿದ ರೀತಿ, ನಾವು ಮಾಡಿದ ಕೆಲಸ ಕೊನೇ ಪಕ್ಷ ನಮ್ಮ ಮನಸ್ಸಿಗೆ ಖುಷಿ ಕೊಡುವಂತಿರಬೇಕು..  ನಮ್ಮ ಲಾಭಕ್ಕಾಗಿ ನಾವು ಮಾಡುವ ಕೆಲಸಕ್ಕಿಂತ ಏನೂ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ಕೆಲಸ ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತದೆ. ಆದರೆ ಅ ಖುಷಿಯನ್ನು ನಮ್ಮದನ್ನಾಗಿ ಮಾಡಿಕೊಳ್ಳುವ ಮನಸ್ಸು ನಮಗಿರಬೇಕಷ್ಟೇ...

ಕಾಯೇನ ಮನಸಾ ಬುದ್ಧ್ಯಾ ಕೈವಲೈರಿಂದ್ರಿಯೈರಪಿ|
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮ ಶುದ್ಧಯೇ...||
     
                             ....................................................... ರಾಘವ್ ಲಾಲಗುಳಿ.