ಗೆಳೆಯಾ ನೀನಂದ ಮಾತು ಈಗ ನೆನಪಾಗುತ್ತಿದೆ. ಪ್ರೀತಿ ಮಾಡುವಾಗ ಎಲ್ಲರೂ ಕೂಡಾ ತಮ್ಮದು ನಿಷ್ಕಲ್ಮಷ ಪ್ರೀತಿ ಅಂತಲೇ ಅಂದುಕೊಂಡಿರುತ್ತಾರೆ.... ಆದರೆ ಪ್ರೀತಿ ಹಳಸುವುದೆಲ್ಲಿ ಅಂತಲೇ ಗೊತ್ತಾಗುವುದಿಲ್ಲ. ನೀನೊಂದು ದಿನ ಬೇಸರದಲ್ಲಿ ಅಂದಿದ್ದೆಯಲ್ಲಾ.... ಒಂದು ವರ್ಷದ ಹಿಂದಿನ ಯಾವ feeling ಕೂಡಾ ಈಗ ನನ್ನಲ್ಲಿ ಬರ್ತಾ ಇಲ್ಲಾ ಅಂತಾ.... ಮೊದಲೆಲ್ಲಾ ಈ love ಅಂದರೆ ಎಷ್ಟು craze ಇತ್ತು ಆದರೆ ಈಗ ಅದಸೆಲ್ಲಾ ಡೊಂಬರಾಟ ಅನ್ನಿಸ್ತಾ ಇದೆ ಅಂತಾ.... ಯಾಕೆ ಹೀಗೆ ಅಂತಾ ನನ್ನಲ್ಲೂ ಉತ್ತರ ಇರಲಿಲ್ಲ... ಯಾಕೆಂದರೆ ಒಬ್ಬರನ್ನು ಅಲ್ಲಾ ಎಲ್ಲರನ್ನೂ ಪ್ರೀತಿಸಿದವ ನಾನು... ನನ್ನ ಹ್ರದಯದಲ್ಲಿ ಪ್ರೀತಿಗೆ ನಾನು ನನ್ನದೇ ಆದ ಕೊಟೇಶನ್ನುಗಳನ್ನು ಡೆಫಿನೇಶನ್ನುಗಳನ್ನು ಕೊಟ್ಟುಕೊಂಡವನು ನಾನು..
ಆಕಾಶದ ಯಾವುದೋ ಕರಿಮುಗಿಲ ಒಡಲಲ್ಲಿರೋ ಮಳೆ ಹನಿ, ಇನ್ನು ನಾನು ತಡೆದುಕೊಳ್ಳಲಾರೆ ಪ್ರಾಣ ಹೋದರೂ ಚಿಂತೆಯಿಲ್ಲ ಎಂಬಂತೆ ಹಾರಿ ಭುಮಿಯ ಮೇಲೆ ಬಿದ್ದು ಖುಷಿಯಿಂದ ಭೂಮಿಯ ಮೇಲೆ ಹರಿಯುತ್ತದಲ್ಲಾ.... ಅದು ಪ್ರೀತಿ......
ಯಾವುದೋ ವಸಂತದಲ್ಲಿ ಮಾವು ತನ್ನ ಒಡಲಲ್ಲಿ ಕೋಗಿಲೆ ಒಂದು ಗೂಡು ಕಟ್ಟಿ ಮರಿ ಇಟ್ಟು ತನ್ನ ಚಿಗುರುಗಳನ್ನು ತಿಂದು ಖುಷಿಯಿಂದ ಹಾಡಿ... ಯಾವಾಗಲೋ ಹಾರಿ ಹೋದರೂ, ಮತ್ತೆ ಅದು ಬಂದೀತೆಂಬ ಭಾವದಿಂದ ಪ್ರತೀ ವಸಂತದಲ್ಲೂ ಚಿಗುರು ಬಿಟ್ಟು ಎದುರು ನೋಡುತ್ತದಲ್ಲಾ..... ಅದು ಪ್ರೀತಿ ಎಂದರೆ...
ಯಾರದೋ ಮದುವೆಯಲ್ಲಿ ಕೊಟ್ಟ ಸಿಹಿಯನ್ನು ಮುಷ್ಟಿಯಲ್ಲಿ ಹಿಡಿದು ಮನೆಗೆ ತಂದು ಮನೆಯೆದುರಿನ ಜಾಜಿಯ ಗಿಡಕ್ಕೆ ಬರುವ ಪುಟ್ಟ ಗುಬ್ಬಿಯ ಮರಿಗೆ ಕೊಟ್ಟು ಆನಂದದಿಂದ ಕೇಕೆ ಹಾಕುತ್ತದಲ್ಲಾ ಆ ಮುಗ್ಧ ಮಗು.... ಅದು ಪ್ರೀತಿ ಎಂದರೆ......
ತನ್ನ ನೋಡಲಿಕ್ಕೆಂದೇ ಸೂರ್ಯ ಪ್ರತಿದಿನ ಉದಯಿಸುತ್ತಾನೆಂದು, ಸೂರ್ಯಕಾಂತಿ ಬೆಳಗಿನಿಂದ ಅವನೆಡೆಗೆ ಮುಖಮಾಡಿ, ಅವನು ಯಾವ ಕಡೆಗೆ ಹೋದರೂ ಅವನನ್ನು ಮಾತ್ರ ನೋಡಿ, ಸಂಜೆ ಅವನು ಮುಳುಗಿದ ಮೇಲೆ ಅವನನ್ನು ನೋಡುವ ಈ ಕಣ್ಣು ಮತ್ಯಾರನ್ನೂ ನೋಡದಿರಲೀ ಅಂತಾ ತಲೆತಗ್ಗಿಸಿ ಮರುದಿನ ಬೆಳಗಿನ ವರೆಗೆ ತಲೆತಗ್ಗಿಸಿ ಮುಖ ಮುಚ್ಚಿ ನಿಂತುಬಿಡುತ್ತದಲ್ಲಾ ... ಅದು ಪ್ರೀತಿ ಎಂದರೆ....
ಬೆಳ್ಳಂಬೆಳಿಗ್ಗೆಯೇ ಬರುವ ದುಂಬಿಗೋಸ್ಕರ ಮಲ್ಲಿಗೆಯು ನಾಚಿಕೆಯಿಂದ ಅಷ್ಟ ಅಷ್ಟಷ್ಟಾಗಿ ಅರಳಿ ಮಕರಂದ ನೀಡಿ ಅದೇ ನೆನಪಲ್ಲಿ ದಿನಪೂರ್ತಿ ನಿಂತು ಸಂಜೆಯಾಗುತ್ತಲೇ ಬಾಡಿ ಪರಿಶುಧ್ಧ ಪತಿವ್ರತೆಯಾಗಿ ತನ್ನ ಪ್ರಾಣ ಬಿಡುತ್ತದಲ್ಲಾ..... ಅದು ಪ್ರೀತಿ ಎಂದರೆ.....
ಹೀಗೇ ಏನೇನೋ ಮಧುರವಾಗಿ ಕಲ್ಪಿಸಿಕೊಂಡಿದ್ದೇನೆ.... ಯಾವುದರಲ್ಲೂ ಕೂಡಾ ನಾನು ಪ್ರೀತಿ ಹಳಸುವುದನ್ನು ಕಲ್ಪಿಸಿಕೊಂಡೇ ಇಲ್ಲಾ.... ಅದಕ್ಕೇ ಅಂದು ನಿನಗೆ ಉತ್ತರ ಹೇಳುವುದು ಕಷ್ಟವಾಯಿತೇನೋ.....
ಆವತ್ತು ನೀನೊಂದು ಮಾತಂದೆ ನೆನಪಿದೆಯಾ? " ಈ ಪ್ರೀತಿಗೂ ಒಂದು ಕಾರಣವಿತ್ತು" ಅಂತಾ.. ಅಸಲಿಗೆ ಈ ಮಾತೇ ನನ್ನಲ್ಲಿ ನಾನು ಕಲ್ಪಿಸಿಕೊಂಡ ಪ್ರೀತಿ ಎನ್ನುವ ಭಾವನೆಗೆ ಅಸಂಬದ್ಧ.... ಯಾಕೆಂದರೆ ಯಾವುದೋ ಒಂದು ಕಾರಣದಿಂದ ಬರುವ ಪ್ರೀತಿಯನ್ನು ನಾನು ಅಷ್ಟಾಗಿ ನಂಬುವುದಿಲ್ಲ..... ಯಾಕೋ ನಾನು ಹಾಗೇ... ಕಲ್ಪಿಸಿಕೊಂಡಿದ್ದೇನೆ... ಕಾರಣದಿಂದ ಬರುವ ಪ್ರೀತಿ "ಆ ಕಾರಣ" ಎನ್ನುವುದು ಇಲ್ಲವಾದ ಮೇಲೆ ನಮ್ಮನ್ನು ತೊರೆದು ದೂರಾಗಿಬಿಡಬಹುದು... ದ್ವೇಷಕ್ಕಾದರೆ ಅದು ಒಂದು ಕಾರಣವಿಟ್ಟುಕೊಂಡಿರುತ್ತೆ.... ಆದರೆ ಪ್ರೀತಿಗೆ ನಮಗೆ ಕಾರಣವ್ಯಾಕೆ ಬೇಕು..? ಪ್ರೀತಿ ಎಂದರೆ ಅದು ಗಂಗೆಯಿದ್ದಂತೆ.. ತನ್ನಿಂತಾನೆ ಅದು ನೀರಾಗಿ, ಝರಿಯಾಗಿ,ನದಿಯಾಗಿ ಹರಿಯಬೇಕು. ಗಂಗೆಯ ಹರಿವಿಗೆ ಕಾರಣ ನೀಡಲಾದೀತೇ? ಅಕಾರಣವಾಗಿ ಹುಟ್ಟಿದ ಪ್ರೀತಿಗೆ ಪ್ರಬಲತೆ ಹೆಚ್ಚು. ಅದು ಹ್ರದಯದಲ್ಲಿ ತನ್ನಿಂತಾನೇ ಹುಟ್ಟಬೇಕು.
ನನ್ನಲ್ಲಿನ ಯಾವ ಪ್ರೀತಿಗೂ ಕಾರಣವಿರಲಿಲ್ಲ.ಕಾರಣಾನ ನಾನು ಹುಡುಕಲೂ ಇಲ್ಲ. ಅದಕ್ಕೇ ಇರಬೇಕು ಪ್ರೀತಿಗೂ ಒಂದು ಕಾರಣವಿತ್ತು ಅಂತ ನಾನು ಕೇಳಿದಾಗಲೆಲ್ಲಾ ತಳಮಳವಾಗ್ತೇನೆ.....
ಪ್ರೀತಿಸಿ.... ಎಲ್ಲವನ್ನೂ ಪ್ರೀತಿಸಿ..... ಎಲ್ಲರನ್ನೂ ಪ್ರೀತಿಸಿ....
ಆದರೆ ಏನನ್ನೂ ನಿರೀಕ್ಷಿಸಬೇಡಿ......
ನಿಜ ಪ್ರೀತಿಗೆ ಕಾರಣ ಬೇಕಿಲ್ಲ. ಅ-ನಿರೀಕ್ಷಿತ ಪ್ರೀತಿ ಹಳಸಲು ಸಾಧ್ಯವಿಲ್ಲ. ದಕ್ಕೆ ಪ್ರೀತಿಗೆ ಸಂಬಂಧಗಳ ಚೌಕಟ್ಟು ಇರಬಾರದು. ಸಂಬಂಧ ಕಾರ್ಯಕಾರಣಗಳ ಚೌಕಟ್ಟಿಗೆ ಒಳಪಟ್ಟಿರುತ್ತದೆ.
ReplyDelete