ಅಂದು ನಿನ್ನ ಸುಳಿಯಲ್ಲಿ ಬಿದ್ದಾಗ ನನ್ನೊಳಗೆ ನಾನು ಅಂದುಕೊಂಡಿದ್ದೆ. ಓಹ್...!! ಜಾರಿಬಿದ್ದಿರಬೇಕು, ಅದು ಆಕಸ್ಮಿಕ ಎಂದು. ಹೂಂ.. ಆಮೇಲೆ ತಾನೇ ಗೊತ್ತಾಗಿದ್ದು.. ಆಕಸ್ಮಿಕ ಸುಳಿಯಲ್ಲಿ ಉದ್ದೇಶಪೂವಱಕವಾಗಿಯೇ ಕಾಲು ಜಾರಿಸಿಕೊಂಡಿದ್ದೇನೆ ಅಂತ. ಎಷ್ಟು ಕಾಲ ಆ ಸುಳಿಯಲ್ಲಿ ತಿರುಗಿದ್ದೇನೋ.... ಇನ್ನೂ ಕೂಡಾ.. ಆದರೆ ನಿನ್ನ ಸುಳಿಯಲ್ಲಿ ನಾನು ಬಿದ್ದಿದ್ದೇನೆ ಅಂತ ನಿನಗೆ ಗೊತ್ತಾಗಲು ಮೂರು ವರ್ಷ ಬೇಕಾಯಿತಾ? ಸೆಳೆತದ ಸುಳಿಯಲ್ಲಿ ಬೀಳೋಕೆ ಕಾರಣ ಬೇಕಿಲ್ಲಾ... ಕಾರಣವಿದ್ದೋ ಇಲ್ಲದೆಯೋ.. ಅಕಾರಣವಾಗಿ ಕೂಡಾ ಅದು ತನ್ನೆಡೆಗೆ ಎಳೆದುಕೊಂಡುಬಿಡುತ್ತೆ. ಆದರೆ ಅದರ ಒಲವಲ್ಲಿ ಬೀಳಿಸಿಕೊಳ್ಳೊಕೆ ಅದು ಒಂದು ಕಾರಣ ಹುಡುಕುತ್ತದಂತೆ.... ಆದರೆ ನಮ್ಮೀ ಒಲವಿಗೆ ಕಾರಣವೇನಿತ್ತು ಗೆಳತೀ...?
ಏನೋ ಇದ್ದಿರಬೇಕು... ಅದು ಏನು ಅಂತಾ ನಿನಗೆ ಗೊತ್ತಾಗಿತ್ತಾ? ಒಂದಿಡೀ ವರ್ಷ ನಾನು ನಿನ್ನೆದುರಿಗೇ ಓಡಾಡಿಕೊಂಡಿದ್ದಾಗ ಸಿಗದಿದ್ದ ಕಾರಣ ಅಖಂಡ ಮೂರು ವರ್ಷ ದೂರವಾಗಿದ್ದಾಗೆಲ್ಲಿ ಸಿಕ್ಕಿತು ನಿನಗೆ..? ಆ ಒಂದಿಡೀ ವರುಷ ನನ್ನ ನೋಡಿದ್ದೆಯಲ್ಲಾ... nice guy ಅಂತಷ್ಟೇ ಅನಿಸಿದ್ದಾ ನಿನಗೆ..? ಇಲ್ಲಾ ನನ್ನೆದುರಿಗೆ ಮಾತ್ರ ಹಾಗಂದೆಯೋ... ಹೂಂ.. ನಂಗೊತ್ತು.. ಆ ಒಂದು ವರುಷದ ನಂತರವೇ ನೀನು ಜೀವನದ ಎಷ್ಟೋ ಮುಖಗಳನ್ನ ನೋಡಿದ್ದೀಯಾ... ಎಷ್ಟೋ ಸವಾಲುಗಳಿಗೆ ಉತ್ತರವಾಗಿದ್ದೀಯಾ.... ನುಂಗಲಾರದ ವಾಸ್ತವಿಕತೆಯನ್ನು ಒಪ್ಪಿಕೊಂಡಿದ್ದೀಯಾ ಅಂತ... ಆದರೂ ಮೂರು ವರುಷಗಳ ನಂತರದ ಹರಿವಿಗೆ ಕಾರಣವೇನಿತ್ತು...?
ಮೊದಲ ಮಾತೇ ಫೋನಿನಲ್ಲಿ... ನಾನು ಯಾರಂತ ಗೊತ್ತಿಲ್ಲದೇನೇ ನನ್ನೆಡೆಗೆ ಹರಿದ ಜೀವನದಿ ನೀನು.ನಾನು ನಾನೇ ಅಂತಾ ಗೊತ್ತಾಗುವ ಮೊದಲು ಎಂತಹ ಮಜವಾಗಿತ್ತು ನಮ್ಮ ಮಾತುಗಳು ಅಲ್ವಾ?.. ಕೋಪಗಳು,ಸಿಡುಕುಗಳು,ಹಾಗೇ ಸುಮ್ಮನೆ ಆಡಿದ ಮಾತುಗಳು,ಅನವಶ್ಯಕ ಪ್ರಶ್ನೆಗಳು,ಹುಸಿಮುನಿಸು.... ನಿನಗೆ ಮೊದಲ ಮೆಸೇಜನ್ನಿತ್ತು ಅದಕ್ಕೆ ನಾನು ನೀಡಿದ ಕಾರಣವೇ ಹೊಸದಾಗಿತ್ತು ಅಲ್ವಾ?.. ನಿಂಗೂ ಇಷ್ಟವಾಗಿದ್ದು... ಆಡಿದ ನಾಟಕದ ಗಮ್ಮತ್ತು ಗೊತ್ತಾಗಿದ್ದು ಆವಾಗಲೇ ಇರಬೇಕು..
ನೆನಪಿದೆಯಾ ನೀನೊಂದು ನನಗೆ job offer ನೀಡಿದ್ದು..? ಟೆಲಿಫೋನ್ ಟವರ್ ಮೇಲೆ ಕೂತು ಕಾಗೆ ಓಡಿಸೋದು, monthly 40000/- ರೂಪಾಯಿ salary.. ಅದಕ್ಕೆ ಉತ್ತರವಾಗಿ ನಾನು "ನೀನೂ ಬಂದ್ಬಿಡು share ಮಾಡ್ಕೊಳ್ಳೋಣ ಅದನ್ನ ಟವರ್ ಮೇಲೆ ಯಾರೂ ಇರಲ್ಲಾ ಇಬ್ರೇ ಆರಾಮಾಗಿ ಓಡಿಸಬಹುದು ಅಂದಿದ್ದು... ಹುಸಿಮುನಿಸಿನಿಂದ ನನ್ ಬೈಕೊಂಡಿದ್ದು... ಆವಾಗ್ಲೇ ನಿಂಗೂ ಅರ್ಥ ಆಗಿತ್ತಲ್ವಾ.. ಒಂದು ಮಾತೂ ಕೂಡಾ ಆಡದೇ ಎಷ್ಟು ಸತಾಯಿಸಿಬಿಟ್ಟೆ.. ನನ್ನೆಡೆಯ ನಿನ್ನ ಸಮ್ಮತಿಯ ಓಂಕಾರವನ್ನು ಯಾವತ್ತೋ ನಾನರಿತಿದ್ದೆ ಗೆಳತೀ.. ಆದರೇ ಒಂದೇ ಒಂದು ನಿನ್ನ ಮಾತಿಗೋಸ್ಕರ ನಾನು ಎದುರು ನೋಡಿದ್ದು...
ನಿನಗೆ ನನ್ನ ಮನಸ್ಸು ಎಷ್ಟರ್ಥವಾಗಿತ್ತು ಅಂದರೆ ನಾನು ನೇರವಾಗಿ ನಿನಗೆ I LOVE YOU ಅಂತ ಅನ್ನಲು ಧೈರ್ಯ ಬರುವಷ್ಟು... ನಿನಗೂ ಮನಸ್ಸಿತ್ತು....ನನಗಿನ್ನು ಕೇಳಬೇಕಾ...? ನಿನಗಾಗಿಯೇ ತುಡಿದ ಹ್ರದಯ ಇದು... ಆದರೂ ನನ್ನನ್ನು ಇಲ್ಲಿಯೇ ಕಾಯಲು ಬಿಟ್ಟು ನಿನಗಿಷ್ಟವಿಲ್ಲದ ಲೋಕಕ್ಕೆ ಅರಗಿನ ಅರಮನೆಯಾಗಿಬಿಟ್ಟೆಯಲ್ಲೇ..... ಯಾಕಾಗಿತ್ತು ಇದೆಲ್ಲಾ?
ನೀನು ಗೆಜ್ಜೆಯಾದರೆ ನಾನು ದನಿಯಾಗ್ತೀನಿ... ನನ್ನ ಸಾಹಿತ್ಯಕ್ಕೆ ನೀನು ಸಂಗೀತವಾಗ್ತೀಯಾ....
ನೀನು ಹ್ರದಯವಾದರೆ ನಾನು ಜೀವವಾಗ್ತೀನಿ..... ನಾನು ಜೀವವಾದರೆ ನೀನು ಭಾವವಾಗ್ತೀಯಾ....
ನೀನು ಹಣತೆಯಾದರೆ ನಾನು ಅದನ್ನ ಬೆಳಗಿಸೋ ಪ್ರಕಾಶವಾಗ್ತೀನಿ... ನನ್ನ ಬೇಸರಕ್ಕೆ ನೀನು ಸಂತೈಸೋ ಅಮ್ಮನಾಗ್ತೀಯಾ....... ಹೆಜ್ಜೆಗೆ ಹೆಜ್ಜೆಯಾಗಿ.. ಉಸಿರಿಗೆ ಉಸಿರಾಗೋ ನಂಬಿಕೆಯಿತ್ತಲ್ಲವೇ ನಿನಗೆ.. ಆದರೂ ಹೊರಟೇ ಹೋದೆಯಲ್ಲಾ ಕಣ್ಣಿನಲ್ಲಿ ಭಾರವಾದ ಕನಸನಿಟ್ಟು... ನೆನಪುಗಳನ್ನು ಮಾತ್ರ ನನಗೆ ಕೊಟ್ಟು....
ಹೋಗುವ ಕಾರಣವನ್ನಾದರೂ ಹೇಳಬಾರದಿತ್ತೇ....?....ನಿನ್ನ ನಲುಮೆಯ ಲೋಕಕ್ಕೆ ನಾನು ಕಾಲಿಟ್ಟಾಗಿನಿಂದ ನಿನ್ನನ್ನು ಯಾವುದಕ್ಕೂ ಕಾರಣ ಕೇಳಲಿಲ್ಲ..... ಎಲ್ಲವನ್ನೂ ನಿನ್ನ ಕಣ್ಣ ಕೊನೆಯ ಹನಿಯೋ.. ಕಾಡಿಗೆಯ ಕಪ್ಪೋ... ರೆಪ್ಪೆಯ ಹಿಂದೆ ಮೌನವಾಗಿ ಅಡಗಿ ಕುಳಿತಿರುವ ಭಾವಗಳೋ.. ಉತ್ತರ ನೀಡುತ್ತಿದ್ದವು.....ಆದರೆ ಇದೊಂದು ವಿಷಯಕ್ಕೆ ಮಾತ್ರ ನನಗೆ ಕಾರಣವೇ ಗೊತ್ತಾಗಿಲ್ಲವಲ್ಲೇ.....ಆ ನಿನ್ನ ಕಪ್ಪು ಕಪ್ಪನೆಯ ಜೋಡಿ ಕಣ್ಣುಗಳ ಆಳದಲ್ಲೆಲ್ಲಾದರೂ ಭಾವನೆಯ ಅಲೆಗಳು ಸುಳಿದು ಕಾರಣ ನೀಡುತ್ತಾವೆಂದುಕೊಂಡರೆ.... ಆ ಅವಕಾಶವನ್ನೂ ಕೊಡದೇ ಹೊರಟು ಬಿಟ್ಟೆಯಲ್ಲಾ......
ಈಗ ನಿನ್ನನ್ನು ಹುಡುಕೋಕೆ ಅಂಜನವನ್ನೇನೂ ಹಾಕಬೇಕಾಗಿಲ್ಲಾ ಗೆಳತೀ...... ಆದರೆ ಒಲ್ಲದ ಅತಿಥಿಯ ಕೊರಳಿಗೆ ದನಿಯಾಗಿ ಹೋದೆಯಲ್ಲಾ.. ಅದಕ್ಕೆ ಕಾರಣ ಹುಡುಕೋಕೆ ಅಂಜನ ಮುಂದಿಟ್ಟು ಕುಳಿತಿದ್ದೇನೆ. ಬಗ್ಗಿ ನೋಡಿದರೆ ಅಂಜನದ ಪಾತ್ರೆಯ ತುಂಬಾ ನನ್ನ ಮುಖವೇ ತುಂಬಿ ಮತ್ತೆ ಬೇಸರದ ಕುಡಿಕೆಯಾಗಿಬಿಡ್ತೀನಿ... ಅಂಜನದ ಪಾತ್ರೆಯಲ್ಲಿ ಕಾರಣ ಹುಡುಕೋಕೆ ಬಗ್ಗಿದಾಗಲೆಲ್ಲಾ ಹನಿ ಹನಿ ಕಣ್ಣೀರು ಬಿತ್ತಿದೀನಿ... ಬಿತ್ತಿದ ಹನಿಗಳೆಲ್ಲಾ ಬತ್ತಿ ಹೋಗಿದಾವೋ ಏನೋ.. ಕಾರಣ ಸಿಗದೆ... ಇನ್ನೂ ಮರಳಿಲ್ಲ.
ನೆನಪುಗಳ ಜೊತೆಗೂಡಿ...... ಕಾಯುತ್ತಲೇ ಇದ್ದೇನೆ..........
No comments:
Post a Comment