ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, May 30, 2011

ನಿನ್ನ ಪ್ರೇಮದ ಪರಿಯ...ನಾನರಿಯೆ ಕನಕಾಂಗಿ

ನಿನ್ನ ಪ್ರೇಮದ ಪರಿಯ...
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.........


ಹಾಡುತ್ತಿದ್ದರೆ ಯಾವುದೋ ಕಳೆದುಹೋದ ಸ್ವಪ್ನ ಕೈಗೆಟುಕಿದಂತೆ. ಎಂದೂ ಈ ಹಾಡು ಕೇಳದೇ ಇದ್ದವರೆಲ್ಲ ಬಂದು ಬೆನ್ನು ತಟ್ಟಿದಂತೆ.... ನನ್ನ ಹೃದಯ ಯಾಕೆ ಹಾಡುಗಳಿಗಾಗಿ ಇಷ್ಟು ತುಡಿಯುತ್ತದೋ.... ಬೇಕಿದ್ದರೆ ನಾನಿಲ್ಲದೇ ಇರುವಾಗ ನಾನು ಕಳೆದು ಹೋದ ಮನೆಯಲ್ಲೊಮ್ಮೆ ಹುಡುಕಿ ನೋಡಿ... ಚಂದವಾಗಿ ಹರವಿಟ್ಟ ಸೀರೆಯ ನೆರಿಗೆಯಲ್ಲೋ...... ಗ್ಲಾಸಿನ ಟಬ್ ನೊಳಗಿಟ್ಟ ಕಿವಿಯ ಓಲೆಯಲ್ಲೋ....ನನ್ನ ಫೋಟೋದ ಪಕ್ಕದಲ್ಲೇ ಯಾವತ್ತೂ ಇರುವ ಗೆಜ್ಜೆಯ ದನಿಯಲ್ಲೋ... ಬೀರುವಿನಲ್ಲಿಟ್ಟ ಕೈ ಬಳೆಯ ಸದ್ದಿನಲ್ಲೋ.... ಎಲ್ಲಾದರೊಂದು ಕಡೆ ಹಾಡುಗಳ ಮರ್ಮರ ಧ್ವನಿಸುತ್ತಿರುತ್ತದೆ. ಯಾಕೆಂದರೆ ಅವುಗಳೆಲ್ಲವುಗಳಲ್ಲಿ ನೀನು ನೆಲೆಸಿರ್ತೀಯ ಮತ್ತೆ ನಿನಗೆ ಹಾಡುವುದೆಂದರೆ ಇಷ್ಟ.... ನನಗೆ ಹಾಡುಗಳೆಂದರೆ ಇಷ್ಟ....


ನಿನಗೆ ನಾನಿಷ್ಟವಾದದ್ದು ಯಾವ ಕಾರಣಕ್ಕೆ ಹುಡುಗೀ.... ನಾನಾಗೇ ನಿನ್ನ ಕಡೆಗೆ ಮನಸ್ಸು ಜಾರಿಸಿಕೊಂಡವನಲ್ಲ....ನನ್ನ ಆಮಂತ್ರಣವಿಲ್ಲದೇ ನನ್ನ ಒಪ್ಪಿಗೆಯಿಲ್ಲದೇ..... ನನ್ನ ಒಂದೇ ಒಂದು ಮಾತು ಕೇಳದೇ ಹೃದಯದೊಳಗೆ ಲಗ್ಗೆ ಇಟ್ಟು ಇದು ತನಗೇ ಸೇರಿದ್ದು ಅಂತ ಘೋಷಿಸಿಬಿಟ್ಟೆಯಲ್ಲಾ.... ಕೋಪ ಬರದೇ ಇರುತ್ತದೆಯೇ..? ಆದರೆ ಬರಲೇ ಇಲ್ಲಾ... ಬರಬೇಕೆಂದಿದ್ದ ಕೋಪಗಳೆಲ್ಲಾ ನಿನ್ನ ಅಲೆ ಅಲೆಯ ನಗುವಿನ ಬಲೆಗೆ ಸಿಕ್ಕಿ ಉಸಿರುಗಟ್ಟಿ ತಣ್ಣಗಾಗಿ ಬಿಟ್ಟವಲ್ಲಾ... ನಿನಗೆ ಅದು ಮೊದಲೇ ಗೊತ್ತಿತ್ತಾ...

ನನಗೆ ಅರಿವಿಲ್ಲದೆಯೇ ನನ್ನ ಬದುಕ ದಾರಿಯಲ್ಲಿ ನಿಂತು lift ಕೇಳಿದವಳು ನೀನು.. ನನ್ನ ಬದುಕ ಜೊತೆ ಜೊತೆಗೇ ಎಷ್ಟು ದೂರ ಬಂದೆ.. ನಿನ್ನ ನೋಡಿದಾಗಲೆಲ್ಲ ಉಕ್ಕಿದ ಹಾಡುಗಳು ಅವು ನೂರು ನೂರು ಸಾಲುಗಳಾಗಿವೆ.... ಈ ಸಾಲುಗಳಿಗೆಲ್ಲ ಸಂಗೀತವಾದವಳು ನೀನು... ನನ್ನ ಮನಸ್ಸಿನಲ್ಲಿ ಹಾಗೇ ಸುಮ್ಮನೆ ಹುಟ್ಟಿದ ಪ್ರಶ್ನೆಗಳಿಗೆಲ್ಲ ಮಾತಿಲ್ಲದೇ ಮಾರುದ್ದದ ಉತ್ತರವಾದವಳು ನೀನು.... ಎಷ್ಟೊಂದು ಬದಲಾಯಿಸಿಬಿಟ್ಟೆ ನೀ ನನ್ನ... ನೀ ನನ್ನ ಬದುಕ ಜೊತೆ ಬರುವ ಮೊದಲು ನನ್ನ ಹೃದಯದ ಸಂತೆಯಲ್ಲಿ ಮಾರಿಗೊಂದರಂತೆ ಬೇಸರದ ಅಂಗಡಿಗಳಿದ್ದವು... ನೀನು ಬಂದ ಮೇಲೆ ಬೇಸರವೆನ್ನುವುದು ಎಷ್ಟು ತುಟ್ಟಿಯಾಗಿಬಿಡ್ತು ಗೊತ್ತಾ. thanks ಕಣೇ ಒಲವೇ....

ಆದರೆ ಹುಡುಗೀ... ನೀ ಅಷ್ಟೆಲ್ಲ ಪ್ರೀತಿ ನೀಡಬೇಕಿತ್ತಾ... ನೀನು ನನ್ನ ಬದುಕಿನಲ್ಲಿ ಸ್ವಲ್ಪವೇ ಸ್ವಲ್ಪ lift ಕೇಳಿದವಳು ಮಾತ್ರ.. ಶಾಶ್ವತವಾಗಿ ಇರುವವಳಲ್ಲ ಎಂದು ಹೇಳಿದ್ದರ ಅರ್ಥ ನನಗಾಗುವಷ್ಟರಲ್ಲಿ ಕಾಲವೇ ಮಿಂಚಿ ಹೋಗಿತ್ತಲ್ಲೇ.......

ಅದೊಂದು ದಿನ ನೀನು "ನನ್ನ ಹೃದಯ ಬಡಿತ ಜೋರಾಗಿಬಿಟ್ಟಿದೆ ಅಂದೆಯಲ್ಲಾ"... ಹುಚ್ಚ ಕಣೇ ನಾನು... ನನ್ನ ಮೇಲೆ ನಿನಗೆ ಒಲವು ಶುರುವಾಗಿಬಿಟ್ಟಿದೆ ಅಂದುಕೊಂಡೆ..... ನಂಗ್ಯಾಕೇ ಗೊತ್ತಾಗಿಲ್ಲ ಆವಾಗ ದೀಪ ಆರುವ ಮೊದಲು ದೊಡ್ಡದಾಗಿ ಉರಿಯುತ್ತದೆ ಅಂತಾ.... ನನ್ನ ಬಿಟ್ಟು ಹೋಗಲು ನೀನು ಬೇರೆ ದಾರಿ ಹುಕುತ್ತಿರುವ ಸಂಚಿನ ಸುಳಿವೇ ನೀಡಲಿಲ್ಲವಲ್ಲೇ....

ನನ್ನ ಬೇಸರವೇ ದೊಡ್ಡದೆಂದುಕೊಂಡಿದ್ದ ನನ್ನಲ್ಲಿ ಸಂತಸದ ದೀಪ ಹಚ್ಚಿದ ನಿನಗೆ ನಿನ್ನದು ಸದ್ಯವೇ ಆರುವ ಬದುಕೆಂದು ತಿಳಿದಿತ್ತಾ...... ತಿಳಿದೂ ತಿಳಿದೂ ಅಷ್ಟೊಂದು ಸಂತಸದ ಮೂಟೆಯನ್ನು ಹೊತ್ತು ನನ್ನ ಜೊತೆಗೊಂದು lift ಕೇಳಿದ್ದೆಯಾ?.....
ಎಷ್ಟು ಶಾಂತ, ಪ್ರಶಾಂತ ಮೌನ ಮುಗ್ಧ ಸುಂದರ ಹುಡುಗಿ ನೀನು... ಎಷ್ಟೊಂದು ಭಾವನೆಗಳನ್ನು ಹೃದಯದಲ್ಲಿ ತುಂಬಿಕೊಂಡಿದ್ದೆಯೋ ಏನೋ... ಏನೇನನ್ನೂ ಹೇಳಿಕೊಂಡಿಲ್ಲವಲ್ಲೇ..... ಆದರೆ ನನಗೆ ಮಾತ್ರ ನಿನ್ನಲ್ಲಿದ್ದ ಸಂತಸವನ್ನೆಲ್ಲ ನೀಡಿಬಿಟ್ಟೆ...

ಕಣ್ಣು ಮುಚ್ಚಿದರೆ ಅದೇ ಬೇಸರದ ಬೇಡವಾದ ಚಿತ್ರಗಳೇ ಕಣ್ಣೆದುರಿಗೆ ಬಂದು ಕಾಡುತ್ತವೆ ಎಂದಾಗ...ಇನ್ನು ಮುಂದೆ Dream Boy ಕಣ್ಮೇಲೆ ನೀನು ಬಂದು ಕಾಡಿದರೆ ನನ್ನಾಣೆ ಎಂದು ಕೊಟ್ಟ ಹೂ ಮುತ್ತು ಇನ್ನೂ ಕಣ್ರೆಪ್ಪೆಯಲ್ಲೇ ಬೆಚ್ಚಗೆ ಮುದುರಿಕೊಂಡಿದೆ... ಆವತ್ತಿನಿಂದ ಈವತ್ತಿನ ವೆರೆಗೆ ನಾನು ಕೆಟ್ಟ ಕನಸು ಕಂಡಿಲ್ಲ ಕಣೇ........

ನನಗೆ ಕರ್ಕಶ ಕೇಳದಿರಲೆಂದು ಬಲಗಾಲಿನ ಗೆಜ್ಜೆ ಕೊಟ್ಟೆ.. ಅದರ ಘಲ್ ಘಲ್ ಸದ್ದು ಕೊಟ್ಟೆ.... ಕೈ ಬಳೆಯ ಇಂಪು ಕೊಟ್ಟೆ...... ನಾನು ಯಾವಾಗಲೂ ಇಷ್ಟ ಪಡುತ್ತಿದ್ದ ಕಿವಿಯ ಓಲೆ ಕೊಟ್ಟೆ..... ಹೃದಯಕ್ಕೆ ಬೋರಾಗದಿರಲೆಂದು ಸಂಗೀತದ ಕಾರಂಜಿ ಕೊಟ್ಟೆ..... ನನ್ನ ಸಂತೋಷಕ್ಕೆನೇನು ಬೇಕೋ ಅವೆಲ್ಲವನ್ನೂ ಕೊಟ್ಟು ಇದರಲ್ಲೆಲ್ಲಾ ನಾನೇ ಇದ್ದೇನೆ ಎಂದು ಮುಷ್ಟಿಯಲ್ಲಿರಿಸಿ ಮುಚ್ಚಿದ ಕಣ್ಣುಗಳ ಹಿಂದೆ ಮತ್ತದೇ ಸುಂದರ ಕನಸುಗಳನ್ನಿರಿಸಿ ಹೋದವಳು ನೀನು.....

ಸಣ್ಣ ಮಕ್ಕಳಿಗೆ ಆಟಾಟಿಕೆ ಕೊಡೋ ಥರಾ ನನಗೆ ಕೈ ಬಳೆಯ ಸದ್ದು, ಕಾಲ್ಗೆಜ್ಜೆ ಇಂಪು, ಕಿವಿಯೋಲೆಯ ಜೋಕಾಲಿ ನೆನಪು, ಮತ್ತೆ ಮತ್ತೆ ಜೋಡಿ ಕಣ್ಗಳ ಹಿಂದೆ ನೆನಪಾಗುವ ಕಣ್ರೆಪ್ಪೆ ಮೇಲಿನ ಮುತ್ತಿನ ಮೃದುವನ್ನು ಕೊಟ್ಟು ಜೀವಮಾನ ಪೂರ್ತಿ ಅದರ ಜೊತೆಗೇ ಆಡಿಕೋ ಎಂದು ಹೇಳಿ ನನ್ನನ್ನು ಒಂಟಿಯಾಗಿ ಕಾಯಲು ಕೂರಿಸಿ ಬಿಟ್ಟು ನೀನೆಲ್ಲಿ ಹೋದೆ ಗೆಳತಿ......
ನನ್ನ ಸಹನೆಯ ಪರೀಕ್ಷೆಯಾ......
ನೀನಿದ್ದರೆ ಮಾತ್ರ ಈ ಚೈತನ್ಯ ನಳನಳಿಸೋದು....
ನಾನಿನ್ನೂ ಕಾಯುತ್ತಲೇ ಇದ್ದೇನೆ..... ಜೀವಕ್ಕೆ ಕೊನೆಯುಸಿರಿರೋ ವರೆಗೂ.....
ತಿರುಗಿ ಬರಲು ಮಾತ್ರ ಮರೆಯದಿರು.....