ನನ್ನವಳು ನನಗೆ
ಕೊಟ್ಟು ಕೊಂಡಿದ್ದೊಂದೇ ಪ್ರೀತಿ ಹಾಡು |
ಭಾವನೆಗಳೊಂದಾಗಿ
ಬದುಕೆಲ್ಲಾ ಚೆಂದಾಗಿ
ಹೆಣೆದು ಕಟ್ಟಿರುವುದೇ ಒಲುಮೆ ಗೂಡು ||
ಅವಳಿಟ್ಟ ಆ ಹೆಜ್ಜೆ
ಘಲ್ಲೆನುವ ಕಾಲ್ಗೆಜ್ಜೆ
ಹೃದಯ ಬಾಗಿಲ ಬಳಿಯೇ ಸದ್ದು ಮಾಡಿ |
ಅವಳ ಆ ಕಣ್ಣೋಟ
ಕನ್ಸನ್ನೆಯೇ ಪಾಠ
ಹೇಗೆ ತಿದ್ದಿದಳೆನ್ನ ಮುದ್ದು ಮಾಡಿ ||
ಅವಳ ಹಣೆ ಬಿಂದಿಯೋ
ಬಿಗಿದ ತೋಳ್ಬಂದಿಯೋ
ಎಲ್ಲಿ ತಾ ಮೈಮುರಿದು ಕೂತಿಹುದು ಅಂದ |
ಆ ಸೀರೆಯಾ ನೆರಿಗೆ
ಹಾಕುವಾಗಲೇ ಮರೆಗೆ
ಹೋಗುತಲಿ ತೋರುವಾ ಹುಸಿಮುನಿಸೇ ಚಂದ ||
ನನ್ನನ್ನೇ ನನ್ನಲ್ಲಿ
ಬಿಡಿ ಬಿಡಿಸಿ ತೋರಿಸುವ
ನನ್ನ ಮನಸು ಇಲ್ಲಿ ಬಿಂಬವಾಗಿಹುದು|
ಕೈಸೊಡರು ಅವಳಾಗಿ
ಬಂದ ದಿನ ನೆನಪಾಗಿ
ಮನದಿ ಮಾಸದ ನೆನಪು ಚಂದವಾಗಿಹುದು ||
["ಪಂಜು"ವಿನ ಪುಟಗಳಲ್ಲಿ ನೋಡಬೇಕೆನಿಸಿದರೆ ಈ ಲಿಂಕ್ ಬಳಸಿ http://www.panjumagazine.com/?p=3282 ]